ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾರ ಹಣದುಬ್ಬರ ಮತ್ತೆ ಏರಿಕೆ

Last Updated 25 ಜೂನ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಆಹಾರ ಹಣದುಬ್ಬರವು ಜೂನ್ 11ಕ್ಕೆ ಕೊನೆಗೊಂಡ ವಾರಾಂತ್ಯದಲ್ಲಿ ಎರಡೂವರೆ ತಿಂಗಳ ಹಿಂದಿನ ಮಟ್ಟಕ್ಕೆ ಏರಿಕೆಯಾಗಿದೆ.

 ಸ್ವೀಕಾರಾರ್ಹವಲ್ಲ: ಈ ಬೆಲೆ ಏರಿಕೆಗೆ ಕಡಿವಾಣ ಹಾಕಬೇಕಾಗಿದ್ದು, ಗರಿಷ್ಠ ಮಟ್ಟದ ಆಹಾರ ಹಣದುಬ್ಬರವು ಸ್ವೀಕಾರಾರ್ಹವಲ್ಲ. ಇದನ್ನು ಇಳಿಸುವ ತುರ್ತು ಅಗತ್ಯ ಇದೆ ಎಂದು ಹಣಕಾಸು ಸಚಿವ ಪ್ರಣವ್ ಮುಖರ್ಜಿ ಪ್ರತಿಕ್ರಿಯಿಸಿದ್ದಾರೆ.

ಹಣ್ಣು, ಹಾಲು, ಈರುಳ್ಳಿ ಮತ್ತು ಪ್ರೋಟಿನ್ ಆಧಾರಿತ ಆಹಾರ ಪದಾರ್ಥಗಳು ತುಟ್ಟಿಯಾಗಿರುವುದರಿಂದ  ಆಹಾರ ಪದಾರ್ಥಗಳ ಬೆಲೆ ಏರಿಕೆಯು ಶೇ 9.13ಕ್ಕೆ ಹೆಚ್ಚಳಗೊಂಡಿದೆ. ಸಗಟು ಬೆಲೆ ಸೂಚ್ಯಂಕ ಆಧರಿಸಿದ  ಆಹಾರ ಹಣದುಬ್ಬರವು ಹಿಂದಿನ ವಾರ ಶೇ 8.96ರಷ್ಟಿತ್ತು. 2010ರ ಜೂನ್ ಎರಡನೇ ವಾರದಲ್ಲಿ ಶೇ 23ರಷ್ಟಿತ್ತು.
ಆಹಾರ ಹಣದುಬ್ಬರವು ಈಗ ಒಂದು ವಾರದ ನಂತರ ಶೇ 9ರ ಗಡಿ ದಾಟಿದೆ. ಇದು ಈ ವರ್ಷದ ಮಾರ್ಚ್ 26 ನಂತರದ ಗರಿಷ್ಠ ಮಟ್ಟವಾಗಿದೆ. ಆಗ ಇದು ಶೇ 9.18ರಷ್ಟಿತ್ತು.

ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ, ಹಣ್ಣುಗಳ ಬೆಲೆಗಳು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ 28.66, ಈರುಳ್ಳಿ ಶೇ 11.89, ಮೊಟ್ಟೆ, ಮಾಂಸ - ಮೀನು ಶೇ 10.56 ಮತ್ತು ಹಾಲು ಶೇ 15.30ರಷ್ಟು ತುಟ್ಟಿಯಾಗಿವೆ.

ಬೇಳೆಕಾಳು, ಗೋಧಿ ಮತ್ತು ತರಕಾರಿಗಳು ಅಗ್ಗವಾಗಿವೆ. ಬೇಳೆಕಾಳು ಶೇ 10.34, ಗೋಧಿ ಶೇ 1 ಮತ್ತು ತರಕಾರಿಬೆಲೆಗಳು ಶೇ 9.27ರಷ್ಟು ಕಡಿಮೆಯಾಗಿವೆ.

ಪರಾಮರ್ಶೆಯಲ್ಲಿ ಇರುವ ವಾರದಲ್ಲಿ  ಪ್ರಾಥಮಿಕ ಸರಕುಗಳು ಬೆಲೆ ಏರಿಕೆಯು ಹಿಂದಿನ ವಾರದ ಶೇ 12.86ರಿಂದ ಶೇ 12.62ರಷ್ಟಕ್ಕೆ ಇಳಿಕೆಯಾಗಿದೆ.

ಮುಂಗಾರು ವಾಡಿಕೆಗಿಂತ ಕೆಲ ಮಟ್ಟಿಗೆ ಕಡಿಮೆ ಇರಲಿದೆ ಎಂದು ಹವಾಮಾನ ಇಲಾಖೆ ಅಂದಾಜು ಮಾಡಿರುವಾಗಲೇ ಆಹಾರ ಬೆಲೆ ಏರಿಕೆ ಮತ್ತೆ ಏರಿಕೆ ಹಾದಿಗೆ ಮರಳಿದೆ. ಅವಶ್ಯಕ ಸರಕುಗಳ ಬೆಲೆ ನಿರ್ಧರಿಸುವಲ್ಲಿ ಮುಂಗಾರು ಮಳೆ ಮಹತ್ವದ ಪಾತ್ರ ನಿರ್ವಹಿಸಲಿದೆ. ಮಳೆ ವಾಡಿಕೆಯಂತೆ ಸುರಿಯದಿದ್ದರೆ ಆಹಾರ ದಾನ್ಯಗಳ ಉತ್ಪಾದನೆಯೂ ಕುಸಿಯಬಹುದು ಎಂದು  ಮಾರುಕಟ್ಟೆ ಪರಿಣತರು ಅಭಿಪ್ರಾಯಪಟ್ಟಿದ್ದಾರೆ.
ಕೆಲ ಮಟ್ಟಿಗೆ ಕಡಿಮೆ ಪ್ರಮಾಣದ ಮಳೆ ಸುರಿಯಲಿರುವುದು ಕೃಷಿ ಉತ್ಪಾದನೆ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಗಳು ಇವೆ.

ಈ ವರ್ಷದ ಮಾರ್ಚ್ ತಿಂಗಳಲ್ಲಿ ಕೆಲ ಮಟ್ಟಿಗೆ ಇಳಿಕೆ ದಾಖಲಿಸುವ ಮುನ್ನ, ಹಿಂದಿನ ವರ್ಷದ ಬಹುತೇಕ ಸಮಯದಲ್ಲಿ ಆಹಾರ ಹಣದುಬ್ಬರ ಎರಡಂಕಿಯಷ್ಟಿತ್ತು. ಮೇ ತಿಂಗಳಿನಿಂದೀಚೆಗೆ ಇದು ಮತ್ತೆ ಏರಿಕೆ ಹಾದಿಗೆ ಮರಳಿದೆ.

ಆರ್‌ಬಿಐ ನಿರೀಕ್ಷೆ: ವಾಡಿಕೆಗಿಂತ ಕಡಿಮೆ ಮಳೆಯಾಗುವ ಸಾಧ್ಯತೆಯು ಆಹಾರ ಧಾನ್ಯಗಳ ಉತ್ಪಾದನೆ ಮೇಲೆ ಗಂಭೀರ ಸ್ವರೂಪದ ಪರಿಣಾಮ ಬೀರಲಾರದು. ದೇಶದ ಮಧ್ಯಭಾಗದಲ್ಲಿ ವಾಡಿಕೆಯಷ್ಟು ಮಳೆಯಾಗಲಿದೆ. ಇಲ್ಲಿ ಬೇಳೆಕಾಳು ಮತ್ತು ದವಸ ಧಾನ್ಯಗಳು ಗರಿಷ್ಠ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಈ ಭಾಗದಲ್ಲಿ ವಾಡಿಕೆಯಂತೆ ಮಳೆಯಾದರೆ, ಅದರಿಂದ ಆಹಾರ ಧಾನ್ಯಗಳ ಬೆಲೆಗಳ ಮೇಲೆ  ಯಾವುದೇ ಪ್ರತಿಕೂಲ ಪರಿಣಾಮ ಉಂಟಾಗಲಾರದು ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ನ ಡೆಪ್ಯುಟಿ ಗವರ್ನರ್ ಸುಬಿರ್ ಗೋಕರ್ಣ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT