ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾರ ಹಣದುಬ್ಬರ ಶೇ 17.05ಕ್ಕೆ ಏರಿಕೆ

Last Updated 3 ಫೆಬ್ರುವರಿ 2011, 16:55 IST
ಅಕ್ಷರ ಗಾತ್ರ


ನವದೆಹಲಿ (ಪಿಟಿಐ): ಜನವರಿ 22ಕ್ಕೆ ಕೊನೆಗೊಂಡ ವಾರಾಂತ್ಯದಲ್ಲಿ ಆಹಾರ ಹಣದುಬ್ಬರವು ಶೇ 17.05ರಷ್ಟಕ್ಕೆ ಏರಿಕೆಯಾಗಿದೆ.

ಜನಸಾಮಾನ್ಯರ ಬವಣೆ ಹೆಚ್ಚಿಸುವ ನಿಟ್ಟಿನಲ್ಲಿ ಏರುಗತಿಯಲ್ಲಿಯೇ ಸಾಗಿರುವ ಆಹಾರ ಪದಾರ್ಥಗಳ ಬೆಲೆ ಏರಿಕೆ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ, ಪರಿಸ್ಥಿತಿ ತಹಬಂದಿಗೆ ತರಲು ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ. ಬೆಲೆ ಏರಿಕೆಗೆ ಕಡಿವಾಣ ವಿಧಿಸಲು ಬೇಡಿಕೆ ಮತ್ತು ಪೂರೈಕೆ ಕ್ರಮಗಳನ್ನು ಕೈಗೊಳ್ಳಲಾಗುವುದು  ಎಂದು ಭರವಸೆ ನೀಡಿದ್ದಾರೆ.

ತರಕಾರಿ, ಹಣ್ಣು, ಮೊಟ್ಟೆಗಳ ದುಬಾರಿ ಬೆಲೆಗಳಿಂದಾಗಿ ಆಹಾರ ಹಣದುಬ್ಬರ ಸತತ ಎರಡನೇ ವಾರವೂ ಹೆಚ್ಚಳಗೊಂಡಿದೆ. ಹಿಂದಿನ ವಾರದ ಶೇ 15.57ಕ್ಕಿಂತ ಶೇ 1.48ರಷ್ಟು ಹೆಚ್ಚಳಗೊಂಡಿದೆ. ಒಂದು ವರ್ಷದ ಹಿಂದೆ ಇದು ಶೇ 20.56ರಷ್ಟಿತ್ತು. ಮುಂಬರುವ ದಿನಗಳಲ್ಲಿ ತರಕಾರಿಗಳ ಬೆಲೆಗಳು ಇಳಿಯುವ ಲಕ್ಷಣಗಳಿದ್ದರೂ, ಪ್ರೋಟಿನ್ ಆಧಾರಿತ ಆಹಾರ ಪದಾರ್ಥಗಳಾದ ಹಾಲು, ಮೀನು, ಮೊಟ್ಟೆಗಳ ಬೆಲೆ ಗರಿಷ್ಠ ಮಟ್ಟದಲ್ಲಿಯೇ ಇರುವ ಸಾಧ್ಯತೆಗಳಿವೆ.

ನಾರಿನ ಉತ್ಪನ್ನ, ಹಾಲು, ಮೊಟ್ಟೆ ಮತ್ತು ಮೀನು ಉತ್ಪಾದನೆ ಹೆಚ್ಚಿಸಿ, ಶೈತ್ಯಾಗಾರ  ಮತ್ತು ಸಂಸ್ಕರಣಾ ಸೌಲಭ್ಯಗಳನ್ನು ಹೆಚ್ಚಿಸಬೇಕಾಗಿದೆ ಎಂದು ಕ್ರೈಸಿಲ್‌ನ ಪ್ರಧಾನ ಆರ್ಥಿಕ ತಜ್ಞ ಡಿ. ಕೆ. ಜೋಷಿ ಅಭಿಪ್ರಾಯಪಟ್ಟಿದಾರೆ.

ಈಜಿಪ್ಟ್ ಮತ್ತು ಮಧ್ಯಪ್ರಾಚ್ಯ ದೇಶಗಳಲ್ಲಿನ ರಾಜಕೀಯ ಬಿಕ್ಕಟ್ಟು ಜಾಗತಿಕ ಕಚ್ಚಾ ತೈಲದ ಬೆಲೆ ಏರಿಕೆಗೆ ಕಾರಣವಾಗಿ ಒಟ್ಟಾರೆ ಹಣದುಬ್ಬರವೂ ಏರಿಕೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಡಿಸೆಂಬರ್‌ನಲ್ಲಿ ಈ ಹಣದುಬ್ಬರವು  ಶೇ 7.48ರಿಂದ ಶೇ 8.43ಕ್ಕೆ ಏರಿಕೆಯಾಗಿದೆ.

ಜನವರಿ ತಿಂಗಳಲ್ಲಿ ಪ್ರತಿ ಲೀಟರ್‌ಗೆ ಪೆಟ್ರೋಲ್ ಬೆಲೆಯು ್ಙ 2.50ರಷ್ಟು ಹೆಚ್ಚಳಗೊಂಡಿರುವುದರಿಂದ ಇಂಧನ ಮತ್ತು ವಿದ್ಯುತ್ ವಲಯದ ಹಣದುಬ್ಬರವು ವರ್ಷದಿಂದ ವರ್ಷಕ್ಕೆ ಶೇ 11.61ರಷ್ಟು ಹೆಚ್ಚಳ ದಾಖಲಿಸಿದೆ. ಜನವರಿ ತಿಂಗಳ ಮಧ್ಯ ಭಾಗದಲ್ಲಿ ಈರುಳ್ಳಿ ಬೆಲೆ ಶೇ 130.41ರಷ್ಟು ಏರಿಕೆಯಾಗಿದ್ದರೂ ಇತ್ತೀಚಿನ ದಿನಗಳಲ್ಲಿ ಗಮನಾರ್ಹ ಇಳಿಕೆ ಕಂಡಿದೆ.

ಆಹಾರ ಬೆಲೆ ಏರಿಕೆ ಪರಿಸ್ಥಿತಿಯು ಗರಿಷ್ಠ   ಮಟ್ಟದಲ್ಲಿಯೇ ಮುಂದುವರೆದಿರುವುದು ಕೇಂದ್ರ ಬಜೆಟ್‌ನಲ್ಲಿ ಜನಸಾಮಾನ್ಯರಿಗೆ  ಇನ್ನಷ್ಟು ರಿಯಾಯ್ತಿಗಳನ್ನು ಘೋಷಿಸುವಂತೆ  ಸರ್ಕಾರದ ಮೇಲೆ ಒತ್ತಡ ಹೇರಲಿದೆ ಎಂದು ನಿರೀಕ್ಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT