ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾರದಲ್ಲಿ ಬ್ರಾಹ್ಮಣ, ಬದುಕಿನಲ್ಲಿ ದಲಿತ

Last Updated 10 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಜಾತಿ ವಿಚಾರವು ಈಗ ರೂಢಿಗತ ಆಚರಣೆಯಾಗಿ ಉಳಿದಿಲ್ಲವೆಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ಜಾತಿ ಮೀಸಲಾತಿಯು ಈಗ ವಿದ್ಯಾರ್ಥಿಗಳಿಗೆ ಒಂದು ಅಥವಾ ಎರಡು ಅಂಕಗಳಲ್ಲಿ ತಪ್ಪಬಹುದಾದ ವಿದ್ಯಾಭ್ಯಾಸದ ಅವಕಾಶಗಳ ಸೀಟುಗಳ ಲೆಕ್ಕಾಚಾರ.

ಹಾಗಾಗಿ ಜಾತಿ ಮೀಸಲಾತಿಯಲ್ಲಿ ನಾನು ಮುಂದೆ ಬರೆದಿರುವ ವಿಚಾರಗಳನ್ನು ವಿಮರ್ಶೆಗೆ ಒಳಪಡಿಸಲು ಯೋಗ್ಯವಿರಬಹುದು. ನಾನು ವಾಸಿಸುತ್ತಿರುವ ಪರಿಸರದಲ್ಲಿ ಹಾಗೂ ನಾವು ಬೆಳೆದು ಬಂದ ರೀತಿಯಲ್ಲಿ, ನನ್ನ ಮಗನ ವಿದ್ಯಾಭ್ಯಾಸದ ಸಂದರ್ಭದಲ್ಲಿ ನಮಗೆ ಜಾತಿ ಮನುಷ್ಯರ ನಡುವೆ ತೊಂದರೆ ಎನಿಸುವ ಬದಲು ವ್ಯವಸ್ಥೆಯಿಂದಾದ ತೊಂದರೆ ಎಂದು ಅನುಭವಕ್ಕೆ ಬಂದಿದೆ.

ಮಹಾರಾಷ್ಟ್ರದ ಛತ್ರಪತಿ ಶಿವಾಜಿ ಮಹಾರಾಜರ ಸೈನ್ಯದಲ್ಲಿದ್ದ ನಮ್ಮ ವಂಶಸ್ಥರು ಮಾಲೂರು ಕೋಟೆ ವಶಪಡಿಸಿಕೊಂಡ ನಂತರದ ವಿದ್ಯಮಾನದಲ್ಲಿ ಹೈದರಾಲಿ ಸೈನ್ಯದ ಜೊತೆಯಲ್ಲಿ ಬಂದು ಮೈಸೂರು ಜಿಲ್ಲೆ, ಗರ್ಗೇಶ್ವರಿಯಲ್ಲಿ ಇರಬೇಕಾಯಿತು.  ಅದರ ಕುರುಹಾಗಿ ನಮ್ಮ ಬಳಿ ಈಗ ಉಳಿದಿರುವುದು ಒಂದು ಪುರಾತನವಾದ ಕತ್ತಿ, ಮತ್ತು ರಕ್ತಗತವಾಗಿ ಬಂದ ಧೈರ‌್ಯ. ಆದರೆ ಈಗ ನಾವು ಕ್ಷತ್ರಿಯರಲ್ಲ.

ನಂತರದ ದಿನಗಳಲ್ಲಿ ಬದಲಾದ ಪರಿಸ್ಥಿತಿಯಲ್ಲಿ ಅಲ್ಲೆೀ ಸಮೀಪದ ಹಳ್ಳಿಯಲ್ಲಿ ಗದ್ದೆ, ಹೊಲಗಳನ್ನು ತೆಗೆದುಕೊಂಡು ಮೂರು ತಲೆಮಾರುಗಳಿಂದ ವಾಸವಾಗಿದ್ದು ರೈತಾಪಿ ಕೆಲಸಗಳನ್ನೇ ಮಾಡಿಕೊಂಡು ಅದರಿಂದಲೇ ಜೀವನ ನಿರ್ವಹಣೆ ಮಾಡುತ್ತಿದ್ದೇವೆ. ನಾವು ಮೂರು ತಲೆಮಾರುಗಳಿಂದಲೂ ಹಳ್ಳಿಯಲ್ಲೆೀ ವಾಸವಾಗಿದ್ದರೂ, ಅದೇ ಹೊಲಗದ್ದೆಗಳಲ್ಲಿ ದುಡಿದರೂ, ಸರ್ಕಾರದಿಂದ ಬರುವ ಯಾವುದೇ ವಿಶೇಷ ಸವಲತ್ತುಗಳಿಗೂ ನಾವು ಅರ್ಹರಲ್ಲ.

ನಮ್ಮ ತಂದೆ ಮತ್ತು ಅವರ ಒಡಹುಟ್ಟಿದವರು, ನಾನು ನನ್ನ ಒಡಹುಟ್ಟಿದವರೆಲ್ಲರೂ ಕಾಲಕಾಲಕ್ಕೆ ಶಾಲಾ, ಕಾಲೇಜು ವಿದ್ಯಾಭ್ಯಾಸಕ್ಕೆ ಸಾಕಷ್ಟು ತೊಂದರೆ ಅನುಭವಿಸಬೇಕಾಯಿತು. ಈಗ ನನ್ನ ಮಗನ ಕಾಲದಲ್ಲಿ ಸಾರಿಗೆ ಸಂಪರ್ಕ ಸರಾಗವಾಗಿದ್ದರಿಂದ ಹಳ್ಳಿಯಿಂದಲೇ ಶಾಲಾ, ಕಾಲೇಜಿಗೆ ಹೋಗಿಬಂದರೂ ಸಮಯದ ಹೊಂದಾಣಿಕೆಯಾಗದೆ ಬಸ್ಸು ಹಿಡಿದು ಮನೆಗೆ ಬರುವುದೇ ಪ್ರಯಾಸವಾಗಿ, ಅವನು ಶಾಲಾ ಕಾಲೇಜುದಿನಗಳಲ್ಲಿ ಯಾವುದೇ ಟ್ಯೂಷನ್‌ಗೆ ಹೋಗಲಾಗಲಿಲ್ಲ.

ಅವನಿಗೆ ಯಾವುದೇ ವಿಶೇಷವಾದ ಮೀಸಲಾತಿ ಸೌಲಭ್ಯಗಳಿಲ್ಲದೆ ದೂರದ ಊರಿನಲ್ಲಿ ತಾಂತ್ರಿಕ ಶಿಕ್ಷಣಕ್ಕೆ ಸೇರಬೇಕಾಯಿತು. ಅವನಿಗಿಂತ ಕಡಿಮೆ ಅಂಕಗಳಿಸಿದ ಅವನ ಸ್ನೇಹಿತರಿಗೂ ಮೈಸೂರಿನ ಕಾಲೇಜುಗಳಲ್ಲಿ ಪ್ರವೇಶ ದೊರಕಿದೆ.  ಹಾಗಾಗಿ ಕೃಷಿಕನಾಗಿಯೂ ಮಗನ ಕಾಲೇಜು ಪ್ರವೇಶಕ್ಕೆ ವಿಶೇಷ ಮೀಸಲಾತಿ ಸಿಗಲಿಲ್ಲ.

ನಮ್ಮ ಆಹಾರದ ಪದ್ಧತಿ ಬ್ರಾಹ್ಮಣರಂತಿದ್ದರೂ, ಬ್ರಾಹ್ಮಣರು ಕಲಿಯಬೇಕಾಗಿದ್ದ, ಕಲಿಯಬಹುದಾಗಿದ್ದ ಯಾವ ಪೂಜೆ, ಪುನಸ್ಕಾರಗಳು ವೇದ, ವಿದ್ಯೆಗಳು, ಇತ್ಯಾದಿ ರೂಢಿಗತ ಆಚರಣೆಗಳನ್ನು ನಮಗೆ ಕಲಿಯಲು ಸಾಧ್ಯವಾಗಲಿಲ್ಲ. ನಮಗೆ ಸಂಸ್ಕೃತ ಜ್ಞಾನವೂ ಇಲ್ಲ, ಗುರುಗಳೂ ಇಲ್ಲ, ಹಾಗಾಗಿ ನಾವು ಬ್ರಾಹ್ಮಣರಲ್ಲ.

ನಾವಿಲ್ಲಿಗೆ ಬಂದು ಶತಮಾನಗಳು ಕಳೆದರೂ, ನಮ್ಮ ದೇವರುಗಳು ಮಹಾರಾಷ್ಟ್ರದಲ್ಲಿರುವುದರಿಂದ ನಾವು ನಮ್ಮ ದೇವರ ದರ್ಶನಕ್ಕೆ ಹೋಗುವುದು ಸಾಧ್ಯವಿಲ್ಲ, ಹಾಗಾಗಿ ನಮಗೆ ನಮ್ಮ ದೇವರಿಲ್ಲ.

ಶಿವಾಜಿ ಮಹಾರಾಜರ ಸೈನ್ಯದಲ್ಲಿದ್ದ ನಮ್ಮ ಪೂರ್ವಜರು ಯುದ್ಧದಲ್ಲಿ ಭಾಗವಹಿಸಿದ್ದರಿಂದ ನಾವು ಕ್ಷತ್ರಿಯರೇ? ನಮ್ಮ ಹಳ್ಳಿಯಲ್ಲಿರುವ ಪರಿಶಿಷ್ಟ ಜಾತಿ, ಪಂಗಡಗಳ ಜೊತೆಯಲ್ಲಿ ಕೂಡಿ ಹೊಂದಿಕೊಂಡು ಸಹಬಾಳ್ವೆ ಮಾಡಿಕೊಂಡು ಅವರಂತೆಯೇ ಗದ್ದೆ ಹೊಲದಲ್ಲಿ ದುಡಿದು ಹೆಮ್ಮೆಯಿಂದ ಬದುಕುತ್ತಿರುವ ನಾನು ಯಾರು? ಯಾವ ಪಂಗಡ? ನಾವು ಅನುಸರಿಸುತ್ತಿರುವ ಆಹಾರ ಪದ್ದತಿಯಂತೆ ನಾನು ಬ್ರಾಹ್ಮಣನೇ?   ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ ನಾವು ಯಾವ ಗುಂಪು, ಯಾವ ಪಂಗಡ, ಯಾವ ಜಾತಿಗೆ ಸೇರಬೇಕು?      
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT