ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾಹಾ... ಅಕ್ಟೋಬರ್‌ಫೆಸ್ಟ್

Last Updated 7 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ನಿದ್ದೆಗೆ ಜಾರುತ್ತಿದ್ದ ಕಂದನನ್ನು ಎಡಗೈನಿಂದ ಎದೆಗಪ್ಪಿ ಹಿಡಿದ ತಾಯಿಯೊಬ್ಬಳು, ಮತ್ತೊಂದು ಕೈಯಲ್ಲಿ ಕಾಂಟಿನೆಂಟಲ್ ಫುಡ್‌ನ ರುಚಿ ನೋಡುತ್ತಿದ್ದರು. ಗಂಡನೊಂದಿಗೆ ಬಂದಿದ್ದ ಬೆಂಗಳೂರಿನ ಈ ಪುಟ್ಟ ಕುಟುಂಬ ಜರ್ಮನಿಯ ಆಹಾರ ಮೆಲ್ಲಲು ಬಂದಿತ್ತು. ಬೆಳ್ಳುಳ್ಳಿ, ಮೆಣಸು ಹಾಗೂ ಬ್ರೌನ್ ಸಾಸ್ ಹಾಕಿ ಮಾಡಿದ `ಗಾರ್ಲಿಕ್ ರೋಸ್ಟೆಡ್ ಚಿಕನ್~ ಖಾಲಿಯಾಗುತ್ತಿದ್ದಂತೆ ಮತ್ತೊಂದರ ರುಚಿ ನೋಡಲು ಮುಂದಾದರು.

ಐಟಿಸಿ ವಿಂಡ್ಸರ್ ಹೋಟೆಲ್‌ನಲ್ಲಿರುವ `ದಿ ರಾಜ್ ಪೆವಿಲಿಯನ್~ ರೆಸ್ಟೋರೆಂಟ್‌ನಲ್ಲಿ ಅಕ್ಟೋಬರ್ 10ರವರೆಗೆ ಆಯೋಜಿಸಿರುವ `ಅಕ್ಟೋಬರ್‌ಫೆಸ್ಟ್~ನ ಆಹಾರ ಸವಿಯಲು ಜರ್ಮನಿಯವರಷ್ಟೇ ಅಲ್ಲದೇ ಬೆಂಗಳೂರಿನ ಮಂದಿಯೂ ಬರುತ್ತಿದ್ದಾರೆ.

ಪ್ರತಿ ವರ್ಷದಂತೆ ಈ ಬಾರಿಯೂ ಅಕ್ಟೋಬರ್‌ಫೆಸ್ಟ್ ಆಯೋಜಿಸಲಾಗಿದ್ದು, ಜರ್ಮನಿಯ ಅಡುಗೆ ರುಚಿಯನ್ನು ನಗರಿಗರಿಗೆ ಪರಿಚಯಿಸುತ್ತಿದೆ. ಜರ್ಮನಿಯಲ್ಲಿ ಆಲೂಗಡ್ಡೆಯನ್ನು ಹೆಚ್ಚಾಗಿ ಬೆಳೆಯುವುದರಿಂದ ಆಹಾರದಲ್ಲಿ ಭಾಗಶಃ ಅದನ್ನೇ ಉಪಯೋಗಿಸಲಾಗುತ್ತದೆ.

`ಸ್ಟಾರ್ಟರ್‌ನಲ್ಲಿ ಚಿಕನ್ ಫ್ರಾಂಕ್‌ಫರ್ಟ್, ಬಾಕ್ವಾಸ್ಟ್, ಬ್ರಾಟ್ವೆಸ್ಟ್ ಹಾಗೂ ಆಲೂಗಡ್ಡೆ, ಕ್ಯಾರೆಟ್ ಕ್ಯಾಪ್ಸಿಕಂ ಒಳಗೊಂಡ ದನದ ಮಾಂಸ `ಬೀ ಸ್ಟಿಂಗ್ ಕೇಕ್~ ಹಾಗೂ `ಬ್ಲಾಕ್ ಫಾರೆಸ್ಟ್ ಗ್ಯಾಟಿಯಕ್ಸ್~ ತಿನಿಸನ್ನು ಜರ್ಮನ್ನರು ಹೆಚ್ಚು ಇಷ್ಟ ಪಡುತ್ತಾರೆ ಎನ್ನುತ್ತಾರೆ ಬಾಣಸಿಗ ಪ್ರಶಾಂತ್ ಜೋಸೆಫ್.

`ವೋಡ್ಕಾದಲ್ಲಿ ಅದ್ದಿದ ಕೋಳಿ ಕಾಲಿನ ಮಾಂಸಕ್ಕೆ ಬೆಳ್ಳುಳ್ಳಿ, ಮೆಣಸು ಹಾಗೂ ಬ್ರೌನ್ ಸಾಸ್ ಮತ್ತು ಸ್ವಲ್ಪ ಉಪ್ಪು ಹಾಕಿ ಹಬೆಯಲ್ಲಿ ಬೇಯಿಸಲಾಗುತ್ತದೆ. ಅದುವೆ ಗಾರ್ಲಿಕ್ ರೋಸ್ಟೆಡ್ ಚಿಕನ್. ಜೊತೆಗೆ ಕ್ಯಾರೆಟ್, ಟರ್ನಿಪ್‌ಗೆಡ್ಡೆ ಚೂರುಗಳನ್ನು ಅಲಂಕಾರಕ್ಕಾಗಿ ಹಾಕಲಾಗುತ್ತದೆ~ ಎನ್ನುತ್ತಾರೆ  ಜೋಸೆಫ್.

ಅಡುಗೆ ಹಾಗೂ ವೋಡ್ಕಾ ತಯಾರಿಕೆಯಲ್ಲಿ ಆಲೂಗಡ್ಡೆ ಬಳಸಿಕೊಳ್ಳಲಾಗುತ್ತದೆ. ಹೆಚ್ಚು ಮಸಾಲೆ ಇಲ್ಲದ ಆಹಾರವನ್ನು ಜರ್ಮನ್ನರು ಸೇವಿಸುತ್ತಾರೆ. ಹೆಚ್ಚಿದ ಕೆಂಪುಕೋಸನ್ನು ಒಂದು ತಿಂಗಳ ಕಾಲ ಇಟ್ಟುಕೊಳ್ಳುತ್ತಾರೆ. ಪ್ರತಿದಿನ ಅಡುಗೆಯಲ್ಲಿ ಬಳಸಿಕೊಳ್ಳುತ್ತಾರೆ. ಒಣ ದ್ರಾಕ್ಷಿ, ಸೇಬು ಹಾಗೂ ಕೋಸಿನ ಎಸಳಿನಿಂದ ಮಾಡಿದ `ಬ್ರೈಸಡ್ ರೆಡ್ ಕ್ಯಾಬೇಜ್~ ಸಹ ಮೇನ್ ಕೋರ್ಸ್‌ನಲ್ಲಿದೆ.

ಬೇಯಿಸಿದ ಆಲೂಗಡ್ಡೆಯ ಮೆಲ್ಭಾಗದ ಸಿಪ್ಪೆ ತೆಗೆದು ಒಳ ಭಾಗವನ್ನು ಕಿವುಚಿ ಅದರ ಮಧ್ಯೆ ಒಂದಿಷ್ಟು ಬ್ರೆಡ್ ತುಂಡನ್ನು ಇಟ್ಟು ಹಬೆಯಲ್ಲಿ ಬೇಯಿಸಿದ `ಜರ್ಮನ್ ಪಟಾಟೋ ಡಂಪ್ಲಿಂಗ್~ (ಪಡ್ಡಿನ ರುಚಿ ನೆನಪಿಸುತ್ತದೆ) ತಿನಿಸು ಸಹ ಆಹಾರಪ್ರಿಯರು ಇಷ್ಟ ಪಡುತ್ತಾರೆ ಎಂದು ಮಾಹಿತಿ ನೀಡುತ್ತಾರೆ ಜೋಸೆಫ್.

ಮಾತು ಮುಂದುವರೆಸಿದ ಅವರು `ಆಪೆಲ್ ಸ್ಟ್ರಡ್ಲರ್ಸ್~, ಕ್ರೀಂನಂತೆ ಇರುವ `ಸ್ಟ್ರಾಬೆರಿ ಬವೆರಿಯಾ~ ಹಾಗೂ `ಸಾಚರ್ ಟೊರ‌್ಟೆ~ ಹೆಚ್ಚು ರುಚಿಯಾಗಿರುತ್ತದೆ ಎಂದು ಟೇಬಲ್ ಮುಂದಿಟ್ಟರು.

ಊಟಕ್ಕೂ ಮೊದಲು ನೀಡಿದ ಕೋಸು, ಟೊಮೆಟೊ ಹಾಗೂ ಆಲೂಗಡ್ಡೆಯಿಂದ ಮಾಡಿದ `ಜರ್ಮನ್ ಪಟಾಟೋ ಸೂಪ್~ ಇಷ್ಟವಾಗುತ್ತದೆ. ಐದು ದಿನಗಳೂ ಮೆನು ಬದಲಾಗುತ್ತದೆ. ಡಿನ್ನರ್ ಮಾತ್ರವಿದ್ದು, ಸಂಜೆ 7ರಿಂದ ರಾತ್ರಿ 11.30ರವರೆಗೆ ರೆಸ್ಟೋರೆಂಟ್ ತೆರೆದಿರುತ್ತದೆ. ಅನಿಯಮಿತ ಬಿಯರ್‌ನೊಂದಿಗೆ ಒಂದು ಬಫೆಗೆ 1750, ಬಿಯರ್ ರಹಿತ ಬಫೆಗೆ 1500 ರೂಪಾಯಿ ನಿಗದಿ ಮಾಡಲಾಗಿದೆ.

ಅಕ್ಟೋಬರ್ ಫೆಸ್ಟ್ ಇದು 16 ದಿನಗಳ ಹಬ್ಬ. ಜರ್ಮನಿಯ ದಕ್ಷಿಣ ಭಾಗದಲ್ಲಿರುವ ಬವೇರಿಯಾ ಪ್ರಾಂತ್ಯದ ಮ್ಯೂನಿಕ್‌ನಲ್ಲಿ ಈ ಆಚರಣೆ ಹೆಚ್ಚು ಜನಪ್ರಿಯವಾಗಿದೆ. ಜಮರ್ನಿಯ ಪ್ರಸಿದ್ಧ ಆಚರಣೆಗಳಲ್ಲಿ ಇದೂ ಒಂದು. ಈ ಹಬ್ಬವನ್ನು ಜಗತ್ತಿನ ಅನೇಕ ದೇಶಗಳಲ್ಲಿ ಆಚರಿಸಲಾಗುತ್ತದೆ.
 
ಸುಮಾರು ಹತ್ತು ಲಕ್ಷಕ್ಕೂ ಹೆಚ್ಚು ಮಂದಿ ಒಂದೆಡೆ ಸೇರಿ ಖುಷಿಯಿಂದ ಆಚರಿಸುತ್ತಾರೆ. ಬಿಯರ್ ಹೀರುತ್ತಾ ಹಬ್ಬದ ಸಂಭ್ರಮ ಇಮ್ಮಡಿಗೊಳಿಸುತ್ತಾರೆ. ಇನ್ನೂರು ವರ್ಷಗಳಷ್ಟು ಹಿಂದಿನ ಇತಿಹಾಸವಿರುವ ಈ ಆಚರಣೆ ಬವೇರಿಯನ್ ಪ್ರಾಂತ್ಯದ ಸಂಸ್ಕೃತಿಯ ಪ್ರತೀಕವಾಗಿದೆ.

ಸ್ಥಳ: ದಿ ರಾಜ್ ಪೆವಿಲಿಯನ್, ಐಟಿಸಿ ವಿಂಡ್ಸರ್ ಹೋಟೆಲ್, ಗಾಲ್ಫ್ ಕೋರ್ಸ್ ರಸ್ತೆ. ಟೇಬಲ್ ಕಾಯ್ದಿರಿಸಲು: 41401205
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT