ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹ್ವಾನ ಇಲ್ಲದ ಕಾರಣ ಗೈರು

Last Updated 10 ಮೇ 2012, 5:20 IST
ಅಕ್ಷರ ಗಾತ್ರ

ರಾಮನಗರ: `ಜಿಲ್ಲಾ ಕಂದಾಯ ಭವನದಲ್ಲಿ ಮಂಗಳವಾರ ಸಂಸದ ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನಡೆದ ಲೋಕಸಭಾ ಸದಸ್ಯರ ನಿಧಿ ಬಳಕೆ ಕುರಿತ ಸಭೆಗೆ ಆಹ್ವಾನ ಇಲ್ಲದ ಕಾರಣ, ನಾನು ಭಾಗವಹಿಸಲಿಲ್ಲ~ ಎಂದು ಕನಕಪುರ ಶಾಸಕ ಡಿ.ಕೆ.ಶಿವಕುಮಾರ್ ತಿಳಿಸಿದರು.

ಜಿಲ್ಲೆಯ ನೂತನ ಜಿಲ್ಲಾಧಿಕಾರಿ ಅವರನ್ನು ಭೇಟಿ ಮಾಡಲು ಬುಧವಾರ ಜಿಲ್ಲಾ ಕಂದಾಯ ಭವನಕ್ಕೆ ಬಂದಿದ್ದ ಅವರು ಸುದ್ದಿಗಾರರ ಜತೆ ಮಾತನಾಡಿದರು. `ಸಂಸದರು ತಮಗೆ ಬರುವ ಅನುದಾನ ಬಳಕೆಗೆ ಸಂಬಂಧಿಸಿದಂತೆ ಸಭೆ ನಡೆಸಿದ್ದಾರೆ. ತಮಗೆ ಬೇಕಾದವರಿಗೆ ಮಾತ್ರ ಅನುದಾನ ನೀಡುವ ಅವರು ತಮಗೆ ಬೇಕಾದವರನ್ನು ಮಾತ್ರ ಸಭೆಗೆ ಕರೆದಿದ್ದಾರೆ~ ಎಂದು ತಿಳಿಸಿದರು.

ಸ್ಥಳದಲ್ಲಿಯೇ ಇದ್ದ ಜಿಲ್ಲಾಧಿಕಾರಿ ಶ್ರೀರಾಮರೆಡ್ಡಿ ಪ್ರತಿಕ್ರಿಯಿಸಿ, `ಸಂಸದರ ನೇತೃತ್ವದಲ್ಲಿ ನಡೆದ ಸಭೆಗೆ ಜಿಲ್ಲಾಡಳಿತದಿಂದ ಯಾವ ಶಾಸಕರಿಗೂ ಆಹ್ವಾನ ಹೋಗಿರಲಿಲ್ಲ. ಆ ಸಭೆಗೆ ಬಂದಿದ್ದ ಶಾಸಕರನ್ನು ಸಂಸದರೇ ಆಹ್ವಾನಿಸಿದ್ದರು~ ಎಂದು ಸಮುಜಾಯಿಷಿ ನೀಡಿದರು.

ಕಾರ್ಯಕರ್ತರಿಗೆ ಬಿಟ್ಟ ವಿಷಯ: ಇತ್ತೀಚೆಗೆ ಎಐಸಿಸಿ ಮತ್ತು ಕೆಪಿಸಿಸಿ ವೀಕ್ಷಕರು ಜಿಲ್ಲೆಗೆ ಭೇಟಿ ನೀಡಿ ಮುಂಬರುವ ಚುನಾವಣಾ ಅಭ್ಯರ್ಥಿಗಳ ಆಯ್ಕೆ ಕುರಿತು ಪಕ್ಷದ ಹಿರಿಯ ಮುಖಂಡರು ಮತ್ತು ಕಾರ್ಯಕರ್ತರ ಅಭಿಪ್ರಾಯ ಪಡೆದಿದ್ದಾರೆ. ಮಾಗಡಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕಾರ್ಯಕರ್ತರ ಅಭಿಪ್ರಾಯವೇ ಅಂತಿಮ. ಕಾರ್ಯಕರ್ತರು ಸೂಚಿಸಿದವರೇ ಅಭ್ಯರ್ಥಿಯಾಗುವರು. ಇದರಲ್ಲಿ ಯಾರ ಹಸ್ತಕ್ಷೇಪವೂ ಇರುವುದಿಲ್ಲ ಎಂದು ಡಿಕೆಶಿ ತಿಳಿಸಿದರು.

`ಕಾಂಗ್ರೆಸ್ ವೀಕ್ಷಕರ ಸಭೆ ಮುಕ್ತವಾಗಿ ನಡೆಯಲಿ. ಅಲ್ಲಿ ಯಾರಿಂದಲೂ ಯಾರಿಗೂ ಒತ್ತಡ ಉಂಟಾಗಬಾರದು ಎಂಬ ಉದ್ದೇಶದಿಂದ ನಾನು ಸಭೆಗೆ ಹಾಜರಾಗಲಿಲ್ಲ. ಬದಲಿಗೆ ವೀಕ್ಷಕರನ್ನು ನೇರವಾಗಿ ಭೇಟಿಯಾಗಿ ನನ್ನ ಅಭಿಪ್ರಾಯ ವ್ಯಕ್ತಪಡಿಸಿರುವೆ~ ಎಂದು ಅವರು ಪ್ರತಿಕ್ರಿಯಿಸಿದರು.

ಮಾದರಿ ಪಟ್ಟಣ: ಕೇಂದ್ರ ಸರ್ಕಾರ ಘೋಷಿಸಿರುವ ಟೌನ್‌ಶಿಪ್ ಯೋಜನೆಯನ್ನು ಕನಕಪುರದಲ್ಲಿ ಅನುಷ್ಠಾನಗೊಳಿಸುವ ಮೂಲಕ ಮಾದರಿ ಪಟ್ಟಣವನ್ನಾಗಿ ರೂಪಿಸಲಾಗುವುದು. ಪಟ್ಟಣದ ಎಲ್ಲ ವಾಸಿಗಳಿಗೆ ಕಾವೇರಿ ನೀರಿನ ಸರಬರಾಜು, ಒಳ ಚರಂಡಿ ವ್ಯವಸ್ಥೆ, ಸುಸಜ್ಜಿತ ರಸ್ತೆ, ಘನ ತ್ಯಾಜ್ಯ ನಿರ್ವಹಣೆ ಸೇರಿದಂತೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಲಾಗುವುದು.
 
ಈ ಸಂಬಂಧ ಇತ್ತೀಚೆಗೆ ಸಾರ್ವಜನಿಕರ ಜತೆ ಚರ್ಚಿಸಿ ಅಭಿಪ್ರಾಯ ಸಂಗ್ರಹಿಸಲಾಗಿದೆ. ಇದಕ್ಕೆ ಪೂರಕವಾಗಿ ಶೀಘ್ರದಲ್ಲಿಯೇ ಸಮಗ್ರ ಯೋಜನಾ ವರದಿ ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT