ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ್ಯಂಡಿಗೆ ವಿಂಬಲ್ಡನ್ ಕಿರೀಟ

ಆಲ್ ಇಂಗ್ಲೆಂಡ್ ಟೆನಿಸ್ ಕ್ಲಬ್‌ನಲ್ಲಿ 77 ವರ್ಷಗಳ ಬಳಿಕ ಬ್ರಿಟನ್‌ಗೆ ಪುರುಷರ ಸಿಂಗಲ್ಸ್ ಪ್ರಶಸ್ತಿ
Last Updated 7 ಜುಲೈ 2013, 19:59 IST
ಅಕ್ಷರ ಗಾತ್ರ

ಲಂಡನ್ (ರಾಯಿಟರ್ಸ್/ಪಿಟಿಐ):  ಐತಿಹಾಸಿಕ ಆಲ್ ಇಂಗ್ಲೆಂಡ್ ಟೆನಿಸ್ ಕ್ಲಬ್‌ನಲ್ಲಿ ಭಾನುವಾರ ಬ್ರಿಟನ್ ಪಾಲಿಗೆ ಅವಿಸ್ಮರಣೀಯ ದಿನ. ಏಕೆಂದರೆ ವಿಶ್ವದ ಅಗ್ರ ರಾಂಕ್ನ ಆಟಗಾರ ಸರ್ಬಿಯಾದ ನೊವಾಕ್ ಜೊಕೊವಿಚ್ ಅವರಿಗೆ ಆಘಾತ ನೀಡಿದ ಬ್ರಿಟನ್‌ನ ಆ್ಯಂಡಿ ಮರೆ ವಿಂಬ್ಡಲನ್ ಟೆನಿಸ್ ಟೂರ್ನಿಯ ಪುರುಷರ ವಿಭಾಗದ ಸಿಂಗಲ್ಸ್‌ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ಇಂತಹ ಒಂದು ಖುಷಿಯ ಕ್ಷಣಕ್ಕಾಗಿ ಆತಿಥೇಯ ಟೆನಿಸ್ ಪ್ರೇಮಿಗಳು ಭರ್ತಿ 77 ವರ್ಷ ಕಾಯಬೇಕಾಯಿತು. ಈ ಹಿಂದೆ 1936ರಲ್ಲಿ ಬ್ರಿಟನ್ ಫ್ರೆಡ್ ಪೆರ‌್ರಿ ಕೊನೆಯ ಬಾರಿ ಇಲ್ಲಿ ಪುರುಷರ ಸಿಂಗಲ್ಸ್‌ನಲ್ಲಿ ಚಾಂಪಿಯನ್ ಆಗಿದ್ದರು.
ಸೆಂಟ್ರಲ್ ಕೋರ್ಟ್‌ನಲ್ಲಿ ಭಾನುವಾರ ನಡೆದ ಪುರುಷರ ವಿಭಾಗದ ಫೈನಲ್‌ನಲ್ಲಿ ಮರೆ 6-4, 7-5, 6-4ರಲ್ಲಿ ಜೊಕೊವಿಚ್ ಅವರನ್ನು ಪರಾಭವಗೊಳಿಸಿದರು. ಈ ಮೂಲಕ ಸ್ಮರಣೀಯ ಕ್ಷಣಕ್ಕೆ ಸಾಕ್ಷಿಯಾದರು. ತಕ್ಷಣವೇ ಗ್ಯಾಲರಿಯತ್ತ ಜಿಗಿದು ಕುಟುಂಬದವರ ಮಡಿಲಿಲ್ಲ ಮಗುವಾದರು. ಅಮ್ಮ ಹಾಗೂ ಗೆಳತಿಯಿಂದ ಸಿಹಿ ಮುತ್ತು ಪಡೆದರು. ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕರ ಮುಂದೆ ಭಾವುಕರಾದರು.

`ಇದು ನನ್ನ ಪಾಲಿಗೆ ಶ್ರೇಷ್ಠ ಗೆಲುವು. ಈ ಸಾಧನೆಗಾಗಿ ಬ್ರಿಟನ್‌ನ ಜನರು ತುಂಬಾ ವರ್ಷಗಳಿಂದ ಕಾದಿದ್ದರು' ಎಂದ ಮರೆ ಕಣ್ಣುಗಳಲ್ಲಿ ಜಿನುಗಿದ್ದು ಖುಷಿಯ ಕಣ್ಣೀರು. ಎಲ್ಲಕ್ಕಿಂತ ಮುಖ್ಯವಾಗಿ ಈ ಒಂದು ಕ್ಷಣಕ್ಕಾಗಿ ಇಷ್ಟು ವರ್ಷ ಕಾದಿದ್ದ ತನ್ನೂರಿನ ಅಭಿಮಾನಿಗಳಿಗೆ ಮುದನೀಡಿದ ಸಂತೋಷ.

2012ರಲ್ಲಿ ಕೂಡ ಮರೆ ಇದೇ ಅಂಗಳದಲ್ಲಿ ಫೈನಲ್ ತಲುಪಿದ್ದರು. ಆದರೆ 17 ಬಾರಿಯ ಗ್ರ್ಯಾನ್‌ಸ್ಲಾಮ್ ಚಾಂಪಿಯನ್ ರೋಜರ್ ಫೆಡರರ್ ಎದುರು ಸೋತು ಕಣ್ಣೀರಿಟ್ಟಿದ್ದರು. ಅವರು ಮಾತ್ರವಲ್ಲ; ಗ್ಯಾಲರಿಯಲ್ಲಿದ್ದ ಅದೆಷ್ಟೊ ಅಭಿಮಾನಿಗಳು ದುಃಖದಿಂದ ಕಣ್ಣೀರಿಟ್ಟಿದ್ದರು. ಆದರೆ ಈ ಬಾರಿ ಅವರು ಅಂತಹ ಆಘಾತಕ್ಕೆ ಆಸ್ಪದ ನೀಡಲಿಲ್ಲ. ಆರು ಬಾರಿಯ ಗ್ರ್ಯಾನ್‌ಸ್ಲಾಮ್ ಚಾಂಪಿಯನ್ ಜೊಕೊವಿಚ್‌ಗೆ ಬಲವಾದ ಪೆಟ್ಟು ನೀಡಿದರು. ಮರೆ ಇಲ್ಲಿ 2012ರ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದುಕೊಟ್ಟಿದ್ದರು. 

ಈ ಪೈಪೋಟಿ ಮೂರು ಗಂಟೆ ಒಂಬತ್ತು ನಿಮಿಷ ನಡೆಯಿತು. 9 ಏಸ್‌ಗಳನ್ನು ಸಿಡಿಸಿದ ಮರೆ ಸರ್ಬಿಯಾದ ಆಟಗಾರನ ಮೇಲೆ ಒತ್ತಡ ಹೇರಿದರು. ನೊವಾಕ್ ನಾಲ್ಕು ಬಾರಿ ಡಬಲ್ ಫಾಲ್ಟ್ಸ್ ಹಾಗೂ 40 ಬಾರಿ ಸ್ವಯಂಕೃತ ತಪ್ಪು ಎಸಗಿದ್ದು ಮುಳುವಾಯಿತು.

ಮೊದಲ ಗೇಮ್ ಭರ್ತಿ ಒಂದು ಗಂಟೆ ನಡೆಯಿತು. ಈ ಗೇಮ್‌ನಲ್ಲಿ ಎರಡು ಬಾರಿ ಜೊಕೊವಿಚ್ ಅವರ ಸರ್ವ್ ಮುರಿದ 26 ವರ್ಷ ವಯಸ್ಸಿನ ಮರೆ ಮುನ್ನಡೆದರು. ಆದರೆ ಎರಡನೇ ಸೆಟ್‌ನಲ್ಲಿ ನೊವಾಕ್ ತಿರುಗೇಟು ನೀಡುವ ಸೂಚನೆ ನೀಡಿದ್ದರು. ನಾಲ್ಕನೇ ಗೇಮ್‌ನಲ್ಲಿ ಸರ್ವ್ ಬ್ರೇಕ್ ಮಾಡಿದ ಅವರು 4-1ರಲ್ಲಿ ಮುನ್ನಡೆದರು. ಆನಂತರ ಎರಡು ಬಾರಿ ಜೊಕೊವಿಚ್ ಅವರ ಸರ್ವ್ ಮುರಿದ ಆತಿಥೇಯ ಆಟಗಾರ ಈ ಸೆಟ್‌ಅನ್ನು 7-5ರಲ್ಲಿ ತಮ್ಮದಾಗಿಸಿಕೊಂಡರು.

ಮೂರನೇ ಸೆಟ್‌ನಲ್ಲಿ ಮೊದಲ ಗೇಮ್ ಬ್ರೇಕ್ ಮಾಡಿದ ಎರಡನೇ ರಾಂಕ್ನ ಮರೆ 2-0 ರಲ್ಲಿ ಮುನ್ನಡೆದರು. ಆದರೆ ನೊವಾಕ್ ನಾಲ್ಕನೇ ಹಾಗೂ ಆರನೇ ಗೇಮ್‌ನಲ್ಲಿ ಮರೆ ಅವರ ಸರ್ವ್ ಬ್ರೇಕ್ ಮಾಡಿದರು. ಏಳನೇ ಹಾಗೂ ಒಂಬತ್ತನೇ ಗೇಮ್‌ನಲ್ಲಿ ಮರೆ ತಿರುಗೇಟು ನೀಡಿದರು. ಹತ್ತನೇ ಗೇಮ್‌ನಲ್ಲಿ ತಮ್ಮ ಸರ್ವ್ ಉಳಿಸಿಕೊಂಡ ಅವರು ಚಾಂಪಿಯನ್ ಆದರು. ಈ ಗೇಮ್ ಭಾರಿ ಪೈಪೋಟಿಗೆ ಕಾರಣವಾಯಿತು. ನಿರೀಕ್ಷಿಸಿದ್ದಕ್ಕಿಂತ ಸುಲಭವಾಗಿ ಗೆಲುವು ಒಲಿಯಿತು.

`ಇದು ನನ್ನ ಜೀವನದ ಕಠಿಣ ಕ್ಷಣವಾಗಿತ್ತು. ಆದರೆ ಅಂತ್ಯದಲ್ಲಿ ಅತ್ಯುತ್ತಮ ಸಾಧನೆ ಮೂಡಿಬಂತು. ಈ ಒಂದು ಕ್ಷಣಕ್ಕಾಗಿ ಬ್ರಿಟನ್ ಜನರು ಎಷ್ಟೊಂದು ಕಾದಿದ್ದರು ಎಂಬುದು ನನಗೆ ಗೊತ್ತು. ಈಗ ಅವರೆಲ್ಲಾ ಖುಷಿಪಟ್ಟಿರಬಹುದು' ಎಂದು ಮರೆ ಪಂದ್ಯದ ಬಳಿಕ ಪ್ರತಿಕ್ರಿಯಿಸಿದರು.

`ಮರೆ, ನಿಮಗೆ ನನ್ನ ಅಭಿನಂದನೆಗಳು. ಈ ಪ್ರಶಸ್ತಿಗೆ ನೀವು ಖಂಡಿತ ಅರ್ಹರು. ಉತ್ತಮ ಪ್ರದರ್ಶನದ ಮೂಲಕ ಈ ಪ್ರಶಸ್ತಿ ಜಯಿಸಿದ್ದೀರಿ' ಎಂದು ನೊವಾಕ್ ನುಡಿದರು. ಈ ಪಂದ್ಯ ವೀಕ್ಷಿಸಲು ಕ್ರೀಡಾಂಗಣದ ಗ್ಯಾಲರಿಯಲ್ಲಿ 15 ಸಾವಿರ ಪ್ರೇಕ್ಷಕರಿದ್ದರು. ಟಿಕೆಟ್‌ಗಾಗಿ ಭಾರಿ ಬೇಡಿಕೆ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT