ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ್ಯಂಡ್ರಿಯಾ-ಲೂಸಿ ಚಾಂಪಿಯನ್

Last Updated 3 ಜೂನ್ 2011, 19:30 IST
ಅಕ್ಷರ ಗಾತ್ರ

ಪ್ಯಾರಿಸ್ (ಪಿಟಿಐ): ಎರಡನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗೆಲ್ಲುವ ಮಹತ್ವಾಕಾಂಕ್ಷೆ ಹೊಂದಿದ್ದ ಸಾನಿಯಾ ಮಿರ್ಜಾ ಕನಸು ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಡಬಲ್ಸ್ ಫೈನಲ್‌ನಲ್ಲಿನ ಸೋಲಿನೊಂದಿಗೆ ನುಚ್ಚುನೂರಾಯಿತು.

ರಷ್ಯಾದ ಎಲೆನಾ ವೆಸ್ನಿನಾ ಜೊತೆಗೂಡಿ ಐತಿಹಾಸಿಕ ಸಾಧನೆ ಮಾಡುವ ಉತ್ಸಾಹದೊಂದಿಗೆ ಹೋರಾಟಕ್ಕಿಳಿದ ಭಾರತದ ಆಟಗಾರ್ತಿಗೆ ಯಶಸ್ಸು ಸಿಗಲಿಲ್ಲ. ರೋಲಂಡ್ ಗ್ಯಾರೋಸ್ ಅಂಗಳದಲ್ಲಿ ಶುಕ್ರವಾರ ನಡೆದ ಅಂತಿಮ ಹಣಾಹಣಿಯಲ್ಲಿ ಭಾರತ-ರಷ್ಯಾ ಜೋಡಿಯು 4-6, 3-6ರಲ್ಲಿ ಜೆಕ್ ಗಣರಾಜ್ಯದ ಆ್ಯಂಡ್ರಿಯಾ ಲಾವೊಕೊವಾ ಮತ್ತು ಲೂಸಿ ರಾಡೆಕಾ ಎದುರು ಪರಾಭವಗೊಂಡಿತು.

ಕೇವಲ ಇಪ್ಪತ್ತೊಂದು ನಿಮಿಷಗಳಲ್ಲಿ ಕೊನೆಗೊಂಡ ಈ ಪಂದ್ಯದಲ್ಲಿ ಏಳನೇ ಶ್ರೇಯಾಂಕದ ಸಾನಿಯಾ ಮತ್ತು ವೆಸ್ನಿನಾ ಅವರು ಶ್ರೇಯಾಂಕ ರಹಿತ ಆಟಗಾರ್ತಿಯರಾದ ಆ್ಯಂಡ್ರಿಯಾ ಹಾಗೂ ಲೂಸಿ ಎದುರು ಪ್ರಭಾವಿ ಆಟವಾಡುವಲ್ಲಿ ವಿಫಲರಾದರು. ಇದರಿಂದಾಗಿ ರನ್ನರ್ ಅಪ್ ಸ್ಥಾನಕ್ಕೆ ಸಮಾಧಾನ ಪಡಬೇಕಾಯಿತು.

2009ರಲ್ಲಿ ಮಹೇಶ್ ಭೂಪತಿ ಅವರೊಂದಿಗೆ ಆಡಿ ಆಸ್ಟ್ರೇಲಿಯಾ ಓಪನ್‌ನಲ್ಲಿ ಮಿಶ್ರ ಡಬಲ್ಸ್ ಪ್ರಶಸ್ತಿ ಗೆದ್ದಿದ್ದ ಭಾರತದ ಮಗಳು ಹಾಗೂ ಪಾಕಿಸ್ತಾನದ ಸೊಸೆ ಸಾನಿಯಾ ಮತ್ತೊಂದು ಗ್ರ್ಯಾಂಡ್ ಸ್ಲಾಮ್ ಗರಿಯನ್ನು ತಮ್ಮ ಮುಡಿಗೇರಿಸಿಕೊಳ್ಳಲು ಬಯಸಿದ್ದರು. ಆದರೆ ಅದಕ್ಕೆ ತಕ್ಕ ಆಟವನ್ನು ಮಾತ್ರ ಆಡಲಿಲ್ಲ. ವೆಸ್ನಿನಾ ಜೊತೆಗೆ ನಿರೀಕ್ಷಿತ ಮಟ್ಟದಲ್ಲಿ ಹೊಂದಾಣಿಕೆಯಿಂದ ಆಡುವಲ್ಲಿ ಅವರು ವಿಫಲರಾದರು. ಅದಕ್ಕಿಂತ ಮುಖ್ಯವಾಗಿ ಜೆಕ್ ಜೋಡಿಯು ಚಾಕಚಕ್ಯೆತೆಯಿಂದ ಆಡಿ ಒತ್ತಡ ಹೇರಿದ್ದು. ಅವರ ಚುರುಕಿನ ಆಟದ ಎದುರು ಭಾರತ-ರಷ್ಯಾದ ಟೆನಿಸ್ ತಾರೆಗಳು ಹೊಳಪು ಕಳೆದುಕೊಂಡರು.

ಫೈನಲ್‌ಗೆ ನಡಾಲ್: ಅಗ್ರ ಶ್ರೇಯಾಂಕದ ಆಟಗಾರ ಸ್ಪೇನ್‌ನ ರಫೆಲ್ ನಡಾಲ್ ಅವರು ಯಶಸ್ಸಿನ ಓಟ ಮುಂದುವರಿಸಿ, ಪುರುಷರ ಸಿಂಗಲ್ಸ್‌ನಲ್ಲಿ ಫೈನಲ್ ತಲುಪಿದರು. ಸೆಮಿಫೈನಲ್‌ನಲ್ಲಿ ಅವರಿಗೆ ಇಂಗ್ಲೆಂಡ್‌ನ ಆ್ಯಂಡಿ ಮರ‌್ರೆ ಸವಾಲಾಗಲಿಲ್ಲ.

ತಮ್ಮ ನೈಜ ಆಟದಿಂದ ಪ್ರೇಕ್ಷಕರನ್ನು ರಂಜಿಸಿದ ನಡಾಲ್ 6-4, 7-5, 6-4ರಲ್ಲಿ ಆ್ಯಂಡಿಯನ್ನು ಸೋಲಿಸಿದರು. ಮೂರೂ ಸೆಟ್‌ಗಳಲ್ಲಿ ರಫೆಲ್ ಆಕರ್ಷಕ ಸರ್ವ್ ಹಾಗೂ ಪ್ರಭಾವಿ ರಿಟರ್ನ್‌ಗಳಿಂದ ಗಮನ ಸೆಳೆದರು. ಎರಡನೇ ಸೆಟ್‌ನಲ್ಲಿ ಮರ‌್ರೆ ಸ್ವಲ್ಪ ಚೇತರಿಕೆಯ ಆಟವಾಡಿದರೂ ಪಂದ್ಯಕ್ಕೆ ರೋಚಕ ತಿರುವ ನೀಡಲು ಅವರಿಂದ ಸಾಧ್ಯವಾಗಲಿಲ್ಲ.

ಮಿಶ್ರ ಡಬಲ್ಸ್ ಫೈನಲ್‌ನಲ್ಲಿ ಅಚ್ಚರಿಯ ಫಲಿತಾಂಶಕ್ಕೆ ಕಾರಣರಾದ ಆಸ್ಟ್ರೇಲಿಯಾದ ಕ್ಯಾಸಿ ಡಲ್ಲಾಕ್ಯೂ ಹಾಗೂ ಅಮೆರಿಕಾದ ಸ್ಕಾಟ್ ಲಿಪ್‌ಸ್ಕಿ

ಅವರು ಪ್ರಶಸ್ತಿ ತಮ್ಮದಾಗಿಸಿಕೊಂಡರು. ಕ್ಯಾಸಿ-ಸ್ಕಾಟ್ ಜೋಡಿಯು 7-6 (8-6), 4-6, 10-7ರಲ್ಲಿ ಅಗ್ರ ಶ್ರೇಯಾಂಕದ ಸ್ಲೊವೇನಿಯಾದ ಕ್ಯಾಥರಿನಾ ಸ್ರೆಬೊಟ್ನಿಕ್ ಹಾಗೂ ಸರ್ಬಿಯಾದ ನೆನಾಡ್  ಜಿಮೊಂಜಿಕ್ ಎದುರು ಜಯ ಪಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT