ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲಿಷ್ ಎಂಬ ಕನ್ನಡದ ಸಂಕೀರ್ಣತೆ

Last Updated 7 ಜನವರಿ 2012, 19:30 IST
ಅಕ್ಷರ ಗಾತ್ರ

ಪ್ರತಿಯೊಂದು ತಲೆಮಾರಿನಲ್ಲಿಯೂ ಕೆಲವು ಸಂಗತಿಗಳು, ಪರಿಕಲ್ಪನೆಗಳು ಗ್ರಹೀತವಾಗಿ ಸ್ವೀಕರಿಸಲ್ಪಡುತ್ತವೆ. ಇದು ನಮ್ಮ ಸಮಾಜದ ಬಗ್ಗೆ ಮಾತ್ರವಲ್ಲ, ಎಲ್ಲ ಸಮಾಜಗಳು, ಎಲ್ಲ ಕಾಲಮಾನಗಳ ಬಗ್ಗೆಯೂ ನಿಜ. ಇಂಗ್ಲಿಷ್ ಭಾಷೆಯ ಸಾಧ್ಯತೆ, ಶಕ್ತಿ, ಮಹತ್ವ ಕುರಿತಂತೆ ಈಗ ನಮ್ಮ ಸಮಾಜದ ಬಹುಪಾಲು ಜನರಿಗಿರುವ ನಂಬಿಕೆ, ಆಸೆ, ಆಕಾಂಕ್ಷೆ ಈ ವರ್ಗಕ್ಕೆ ಸೇರಿದುದು. ಹಿಂದುಳಿದವರಿಗೆ, ದಲಿತರಿಗೆ ಈಗ ಇಂಗ್ಲಿಷ್ ಕೇವಲ ಭಾಷೆಯಲ್ಲ:

ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿ ಪೂಜಿಸಬೇಕಾದ `ಇಂಗ್ಲಿಷ್ ತಾಯಿ~. ಮಧ್ಯಮ ವರ್ಗದವರಿಗೆ, ಪಟ್ಟಣವಾಸಿಗಳಿಗೆ ಜಾಗತೀಕರಣದ ಓಟದಲ್ಲಿ ಮುಂದುವರಿದ ದೇಶಗಳೊಡನೆ ಸ್ಪರ್ಧಿಸಲು ಬೇಕೇಬೇಕಾದ ಒಂದು ಹತಾರ. ಆತ್ಮವಿಶ್ವಾಸ ಪಡೆಯಲು, ಮೇಲುಜಾತಿ - ವರ್ಗದವರೊಡನೆ ಸಮಾನತೆ ಸಾಧಿಸಲು, ಉದ್ಯೋಗಾವಕಾಶ - ಜೀವನಾವಾಕಾಶ ಗ್ಯಾರಂಟಿ ಮಾಡಿಕೊಳ್ಳಲು, ವಿಶ್ವನಾಗರಿಕರಾಗಲು, ಹೊಸ ತಂತ್ರಜ್ಞಾನದ ಲಾಭ ಪಡೆಯಲು ಎಲ್ಲದಕ್ಕೂ ಇಂಗ್ಲಿಷ್ ಕಡ್ಡಾಯವಾದ ರಹದಾರಿ. ಈ ನಂಬಿಕೆಯನ್ನು ವಿರೋಧಿಸುವವರು ಇಲ್ಲವೆಂದಲ್ಲ. ಇದ್ದಾರೆ ಮಾತ್ರವಲ್ಲ. ಇಂಥವರ ವಿಚಾರಗಳು ತಾರ್ಕಿಕವಾಗಿ ಸರಿಯೂ ಇರಬಹುದು. ಆದರೆ ಜಗತ್ತಿನಾದ್ಯಂತ ಈಗ ಇಂಗ್ಲಿಷ್ ಭಾಷೆಯ ಬಗೆಗೆ ಇರುವ ಒಲವು ಮತ್ತು ನಂಬಿಕೆ ಸದ್ಯದ ಭವಿಷ್ಯದಲ್ಲಿ ಯಾವುದೇ ಕಾರಣಕ್ಕೂ ಬದಲಾಗುವುದಿಲ್ಲ ಎಂಬುದನ್ನು ನಾವು ನಮಗೆ ಮನದಟ್ಟು ಮಾಡಿಕೊಂಡೇ ಭಾಷೆ ಮತ್ತು ಉದ್ಯೋಗ, ಭಾಷೆ ಮತ್ತು ಪ್ರಗತಿ, ಭಾಷೆ ಮತ್ತು ಸಮಾನತೆ, ಭಾಷೆ ಮತ್ತು ಸಾಂಸ್ಕೃತಿಕ ಗುರುತು- ಈ ಸಂಬಂಧಗಳನ್ನು ಕುರಿತು ಯೋಚನೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆಯೆಂದು ಭಾಷಾತಜ್ಞರು ಒಲ್ಲದ ಮನಸ್ಸಿನಿಂದ ಒಪ್ಪುತ್ತಾರೆ.

‘Dreams and Realities- Developing Countries and the English Language’ ಎಂಬ ಹೈವೆಲ್ ಕೋಲ್‌ಮನ್ ಸಂಪಾದಿಸಿದ ಬ್ರಿಟಿಷ್ ಕೌನ್ಸಿಲ್‌ನ ಈ ಪುಸ್ತಕದಲ್ಲಿ ಏಷ್ಯಾಖಂಡದ ಆರು ದೇಶಗಳು ಮತ್ತು ಆಫ್ರಿಕಾಖಂಡದ ಒಂಬತ್ತು ದೇಶಗಳಲ್ಲಿ- ಇಂಗ್ಲಿಷ್ ಬಗ್ಗೆ ಇರುವ ಒಲವು ಮತ್ತು ನಂಬಿಕೆ, ಇಂಗ್ಲಿಷನ್ನು ಒಂದು ಭಾಷೆಯಾಗಿ ಮತ್ತು ಶಿಕ್ಷಣ ಮಾಧ್ಯಮವಾಗಿ ಉಪಯೋಗಿಸುವ ಭಾಷೆಯ ಕಲಿಕೆಯಲ್ಲಿ ಉಂಟಾಗುವ ಸಮಸ್ಯೆಗಳು, ಇಂಗ್ಲಿಷ್ ಕಲಿಕೆಗಾಗಿ ಸರ್ಕಾರದ ಮತ್ತು ಸಾಮಾಜಿಕ ಸಂಪನ್ಮೂಲಗಳನ್ನು ಬಳಸುತ್ತಿರುವ ರೀತಿ, ಸ್ಥಳೀಯ ಭಾಷೆ ಮತ್ತು ಸಂಸ್ಕೃತಿಗಳ ಮೇಲೆ ಇಂಗ್ಲಿಷ್ ಬೀರುವ ಪರಿಣಾಮ ಮತ್ತು ಕೊನೆಯದಾಗಿ ಇಂಗ್ಲಿಷ್ ಕಲಿಕೆಯಿಂದಾಗಿ ಜನರು ನಂಬುವ, ಆಸೆಪಡುವ ವ್ಯಕ್ತಿತ್ವ ವಿಕಸನ ಮತ್ತು ಸಮಾಜದ ಪ್ರಗತಿ ಸಾಧ್ಯವಾಗಿದೆಯೇ ಎಂಬ ಪ್ರಶ್ನೆಗಳನ್ನು ಈಗಾಗಲೇ ಈ ದೇಶಗಳಲ್ಲಿ ನಡೆದಿರುವ, ನಡೆಯುತ್ತಿರುವ ಶೈಕ್ಷಣಿಕ ಪ್ರಯೋಗಗಳ ಹಿನ್ನೆಲೆಯಲ್ಲಿ ಪರಿಶೀಲಿಸಲಾಗಿದೆ. ಪರಿಶೀಲನೆಗೆ ಒಳಗಾಗಿರುವ ದೇಶಗಳಲ್ಲಿ ಭಾರತವೂ ಒಂದು. ಪಾಕಿಸ್ತಾನ, ಶ್ರಿಲಂಕಾ, ಬಾಂಗ್ಲಾ, ಇಂಡೋನೇಷ್ಯಾ, ಉಗಾಂಡ, ಕಾಂಗೊ, ಕೀನ್ಯಾ, ಹೀಗೆ ಬೇರೆ ಬೇರೆ ಸಾಂಸ್ಕೃತಿಕ ಹಿನ್ನೆಲೆಯುಳ್ಳ, ಪ್ರಗತಿಯ ಬೇರೆ ಬೇರೆ ಹಂತಗಳಲ್ಲಿರುವ ಹದಿನೈದು ದೇಶಗಳು ಪರಿಶೀಲನೆಯ ವ್ಯಾಪ್ತಿಯಲ್ಲಿರುವುದರಿಂದ ಸಮಸ್ಯೆಯ ವಿಶ್ಲೇಷಣೆ ಮತ್ತು ತಲುಪುವ ತೀರ್ಮಾನಗಳಲ್ಲಿ ಒಂದು ರೀತಿಯ ವಸ್ತುನಿಷ್ಠತೆಯಿದೆ. ಚೀನಾವನ್ನು ಕೂಡ ಇಲ್ಲಿ ಪರಿಶೀಲಿಸಿದ್ದರೂ, ಪುಸ್ತಕದಲ್ಲಿ ಚೀನಾಗೆ ಸಂಬಂಧಪಟ್ಟಂತೆ ಹೆಚ್ಚು ವಿವರಗಳಿಲ್ಲ.

ಈ ವಿಶ್ಲೇಷಣೆ, ತೀರ್ಮಾನಗಳು ಇಂಗ್ಲಿಷ್ ಮಹತ್ವ ಕುರಿತಂತೆ ಸದ್ಯ ನಮ್ಮಲ್ಲಿ ನಡೆಯುತ್ತಿರುವ ವಾಗ್ವಾದಕ್ಕೆ ಹೇಗೆ, ಎಷ್ಟು ಅನ್ವಯವಾಗುತ್ತದೆ ಎನ್ನುವುದನ್ನು ಪರಿಶೀಲಿಸುವುದಕ್ಕೂ ಮುನ್ನ ಕೆಲವು ಪ್ರಾಥಮಿಕ ಸಂಗತಿಗಳನ್ನು ಒಪ್ಪಿಕೊಳ್ಳುವುದು ಒಳ್ಳೆಯದು. ಯಾವುದೇ ಸಮಾಜದಲ್ಲಿ ಒಬ್ಬ ವ್ಯಕ್ತಿಗೆ ಸಿಗುವ ಉದ್ಯೋಗಾವಕಾಶ- ಜೀವನಾವಕಾಶಗಳು ನಿರ್ಧಾರವಾಗುವುದು ಆತನ ವೃತ್ತಿ ಕೌಶಲ್ಯದಿಂದ. ಭಾಷಾ ಕೌಶಲ್ಯವೆಂಬುದು ಈ ವೃತ್ತಿ ಕೌಶಲ್ಯದ ಒಂದು ಸಣ್ಣ ಭಾಗ ಮಾತ್ರ. ದುರದೃಷ್ಟವಶಾತ್ ನಮ್ಮಲ್ಲಿ ಭಾಷಾ ಕೌಶಲ್ಯವನ್ನು ವೃತ್ತಿಕೌಶಲ್ಯವನ್ನಾಗಿಯೂ, ಜ್ಞಾನ ಪ್ರೌಢಿಮೆಯ ಸಂಕೇತವಾಗಿಯೂ ಒಪ್ಪಿಬಿಟ್ಟಿದ್ದೇವೆ. ಈ ಮನೋಭೂಮಿಕೆಯಿಂದ ನಾವು ಹೊರಬರದೆ ಭಾಷೆಯ ಪಾತ್ರ ಮತ್ತು ಸ್ಥಾನಮಾನವನ್ನು ಕುರಿತು ನಡೆಸುವ ಚರ್ಚೆ ಬಹುಪಾಲು ಜನಕ್ಕೆ ಪ್ರಯೋಜನವಾಗುವುದಿಲ್ಲ.

ಆಧುನಿಕತೆ ಮತ್ತು ತಂತ್ರಜ್ಞಾನವನ್ನು ಜಾಗತೀಕರಣದ ದಿನಗಳಿಂದ ಮುಂಚಿನಿಂದಲೂ ನಾವು ಪಶ್ಚಿಮ ಮತ್ತು ಇಂಗ್ಲಿಷ್‌ನೊಡನೆ ಸಮೀಕರಿಸಿಕೊಂಡು ಬಂದಿದ್ದೇವೆ. ಜಪಾನ್, ಕೊರಿಯಾ, ಚೀನಾ- ಹೀಗೆ ಯಾವುದೇ ದೇಶದ ಪ್ರಗತಿಯ ಉದಾಹರಣೆಯನ್ನು ತೆಗೆದುಕೊಂಡರೂ ಈ ದೇಶಗಳ ವಿಕಾಸದಲ್ಲಿ ಇಂಗ್ಲಿಷ್‌ಗೆ ಮಹತ್ವದ ಸ್ಥಾನವೇನೂ ಇಲ್ಲ. ಇಷ್ಟು ಮಾತ್ರವಲ್ಲ, ಇವತ್ತೂ ಕೂಡ ಇಂಗ್ಲಿಷ್ ಶಿಕ್ಷಣದ ಭಾಷೆಯಾಗಿರುವುದು ಯೂರೋಪಿನಂತಹ ಯೂರೋಪಿನಲ್ಲೂ ಕೇವಲ ಇಂಗ್ಲೆಂಡ್, ಮಾಲ್ಟಾ ಮತ್ತು ಐರ್ಲೆಂಡ್‌ನಂತಹ ಮೂರು ದೇಶಗಳಲ್ಲಿ ಮಾತ್ರ. ಇಲ್ಲೂ ಕೂಡ ಸ್ಥಾನೀಯ ಭಾಷೆಗಳಲ್ಲಿ ಇನ್ನೂ ಶಿಕ್ಷಣವನ್ನು ನೀಡಲಾಗುತ್ತಿದೆ.

ವಸಾಹತುಶಾಹಿಯು ನಮ್ಮ ಮನಸ್ಸನ್ನು ಯಾವಾಗಲೂ ಆತಂಕದ ಉದ್ವೇಗದ ಸ್ಥಿತಿಯಲ್ಲಿಡುತ್ತದೆ ಎಂಬುದಕ್ಕೆ ಸಾಕ್ಷಿಯಾಗಿ ನಮ್ಮ ದೇಶದಲ್ಲಿ ಕಳೆದ ಮೂರು ವರ್ಷಗಳಲ್ಲಿ ಮಾಡಿರುವ ಬಹುಪಾಲು ಸಾಮಾಜಿಕ-ರಾಜಕೀಯ ಆಯ್ಕೆಗಳಲ್ಲಿ ಸಮತೋಲನ ಮತ್ತು ದೂರದೃಷ್ಟಿಯ ಕೊರತೆಯನ್ನು ಕಾಣಬಹುದು. ಇಂಗ್ಲಿಷ್ ಭಾಷೆಯ ಪಾತ್ರ ಕುರಿತಂತೆ ಕೂಡ ನಮ್ಮ ಆಯ್ಕೆ ಆತಂಕ, ಆತುರ, ಉದ್ವೇಗದಿಂದ ಕೂಡಿದೆ. ಉದ್ಯೋಗಾವಕಾಶ ಮತ್ತು ಜೀವನಾವಕಾಶಗಳ ಪ್ರಶ್ನೆಗಳಿಗಿಂತಲೂ ಮುಖ್ಯವಾದ ಪ್ರಶ್ನೆಯೆಂದರೆ, ನಾವು ನಮ್ಮ ಸ್ಥಳೀಯ ಸಂಸ್ಕೃತಿ ಮತ್ತು ಚಹರೆ ಕಳೆದುಕೊಂಡು ರೂಪಹೀನ ವಿಶ್ವಸಂಸ್ಕೃತಿಯ ಭಾಗವಾಗಲು ತಯಾರಾಗಿದ್ದೇವೆಯೇ ಎಂಬುದು. ಭಾರತದಲ್ಲಿ ಮಾತ್ರವಲ್ಲ, ಇಲ್ಲಿ ಪರಿಶೀಲಿಸಿರುವ ಬಹುಪಾಲು ದೇಶಗಳಲ್ಲಿ ಇಂಗ್ಲಿಷ್ ಪರವಾದ ಆಯ್ಕೆಯ ಹಿಂದೆ ವಿಚಿತ್ರವಾದ ಆತಂಕ, ಧಾವಂತ, ದೂರದೃಷ್ಟಿಯ ಅಭಾವವಿರುವುದನ್ನು ಗುರುತಿಸಲಾಗಿದೆ. ಇಂಗ್ಲಿಷ್ ಪರವಾದ ಆಯ್ಕೆ ತಾರ್ಕಿಕವಾದದ್ದೋ ಇಲ್ಲ ಸುಪ್ತ ಮತ್ತು ಗೊಂದಲಪೂರಿತ ಮನಸ್ಸಿನ ಆಸೆ-ಆಕಾಂಕ್ಷೆಗಳನ್ನು ಪೂರೈಸುವಂತಹದ್ದೋ ಎಂಬ ಪ್ರಶ್ನೆಯನ್ನು ಎದುರಿಸಿ ಇಲ್ಲಿಯ ಸಂಶೋಧನಾ ಪ್ರಬಂಧಗಳ ನೆಲೆ ಮತ್ತು ತೀರ್ಮಾನಗಳನ್ನು ನಮ್ಮ ವಾಗ್ವಾದಕ್ಕೆ ಹೊಂದಿಕೆಯಾಗುವಂತೆ ಪರಿಶೀಲಿಸಬಹುದು.

ಮೇಲಿನ ಸ್ಪಷ್ಟೀಕರಣಗಳು ಭಾರತದ-ಕರ್ನಾಟಕದ ಪರಿಸ್ಥಿತಿಯನ್ನು ಪರಿಶೀಲಿಸಲು ಮಾತ್ರವಲ್ಲ, ಈ ಸಂಶೋಧನಾ ಪ್ರಬಂಧಗಳಿಗೆ ವಸ್ತುವಾಗಿರುವ ಹದಿನೈದು ದೇಶಗಳು ಮತ್ತು ಇಂಗ್ಲಿಷನ್ನು ವಶಪಡಿಸಿಕೊಳ್ಳಲು, ಒಳಗು ಮಾಡಿಕೊಳ್ಳಲು ಹೆಣಗುತ್ತಿರುವ ಪ್ರಗತಿಯ ಬೇರೆ ಬೇರೆ ಹಂತಗಳಲ್ಲಿರುವ ಇತರ ದೇಶಗಳ ದೃಷ್ಟಿಯಿಂದಲೂ ಮುಖ್ಯವಾದದ್ದು. ಏಕೆಂದರೆ ಈ ಪ್ರಬಂಧಗಳ ಒಟ್ಟು ಧ್ವನಿ ಸೂಚಿಸುವಂತೆ ಯಾವೊಂದು ದೇಶದಲ್ಲೂ ಇಂಗ್ಲಿಷ್ ಕಲಿಕೆ ಬೋಧನೆ ಮತ್ತು ಒಳಗು ಮಾಡಿಕೊಳ್ಳುವಿಕೆಯಲ್ಲಿ ಇದು ಹೀಗೇ, ಇದು ಇಷ್ಟೇ ಎಂದು ಇದಮಿತ್ಥಂ ರೀತಿಯಲ್ಲಿ ಹೇಳುವಂತಹ ಪರಿಸ್ಥಿತಿ ಇಂಗ್ಲಿಷ್ ಪರವಾಗಿಯೂ ಇಲ್ಲ, ವಿರೋಧವಾಗಿಯೂ ಇಲ್ಲ. ಇಂಗ್ಲಿಷ್ ಕಲಿಕೆಯು ತಕ್ಷಣವೇ ಈಡೇರಬೇಕೆಂಬ ಬಯಕೆಯಿಂದಾಗಿ, ಎಲ್ಲ ದೇಶಗಳಲ್ಲೂ ಶೈಕ್ಷಣಿಕವಾಗಿ ಸಾಂಸ್ಕೃತಿಕವಾಗಿ ಒಂದು ರೀತಿಯ ಸಂಕೀರ್ಣ ಸ್ಥಿತಿ ಏರ್ಪಟ್ಟಿದೆ. ಈಗ ಕರ್ನಾಟಕವೂ ಸೇರಿದಂತೆ ಈ ದೇಶಗಳಿಗೆ ತುರ್ತಾಗಿ ಬೇಕಾದದ್ದು ಇಂಗ್ಲಿಷ್ ಪರವಾದ ಇಲ್ಲ ವಿರೋಧವಾದ ನಿಲುವಲ್ಲ. ಇಂತಹ ಸಂಕೀರ್ಣ ಸ್ಥಿತಿಯನ್ನು ನಿರ್ವಹಿಸಿ ಬಹುಜನರ ವಿಕಾಸಕ್ಕೆ ಕಾರಣವಾಗಬಲ್ಲ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ನಾಯಕತ್ವ. ಇಂತಹ ನಾಯಕತ್ವದ ಕೊರತೆಯಿಂದಾಗಿ ಪರಿಸ್ಥಿತಿ ಮತ್ತಷ್ಟು ಸಂಕೀರ್ಣಗೊಳ್ಳುತ್ತಿದೆ. ಈ ಸಂಕೀರ್ಣ ಸ್ಥಿತಿಯ ಕೆಲವು ನೆಲೆಗಳನ್ನು ಇಲ್ಲಿ ಸೂಚಿಸಬಹುದು.

ನಮ್ಮ ಸಮಾಜಕ್ಕೆ ಬೇಕಾದ ಪ್ರಗತಿಯ ಸ್ವರೂಪದ ಬಗ್ಗೆ ಸ್ಪಷ್ಟತೆಯಿಲ್ಲದೆ ಭಾಷಾ ನೀತಿ, ಭಾಷಾ ಪ್ರಯೋಗಗಳನ್ನು ಬದಲಾಯಿಸಲು ಹೋಗಬಾರದು. ಸಮಾಜದ ಒಟ್ಟು ವಿಕಾಸದಲ್ಲಿ ಭಾಷಾ ನೀತಿಗಿಂತಲೂ ಹೆಚ್ಚು ಮುಖ್ಯವಾದದ್ದು ಆರೋಗ್ಯ, ನೈರ್ಮಲ್ಯ ಮತ್ತು ಒಟ್ಟು ಶಿಕ್ಷಣ ವ್ಯವಸ್ಥೆಯ ಸ್ವರೂಪ. ಭಾಷಾ ನೀತಿಯು ಈಗಾಗಲೇ ಸಮಾಜದಲ್ಲಿರುವ ಶ್ರೇಣೀಕರಣ ಮತ್ತು ಕಲಿಕೆಯಲ್ಲಿರುವ ಪಾರಂಪರಿಕ ವೈವಿಧ್ಯಗಳನ್ನು ಗಣನೆಗೆ ತೆಗೆದುಕೊಳ್ಳಲೇಬೇಕು. ಇಂಗ್ಲಿಷ್‌ಗೆ ಸ್ಥಳೀಯ ಭಾಷೆಯೊಡನೆ ಇರುವ ಸಂಬಂಧದ ಸ್ವರೂಪದ ಬಗ್ಗೆಯೂ ಸ್ಪಷ್ಟತೆಯಿರಬೇಕು. ಆಫ್ರಿಕಾ ಖಂಡದಲ್ಲಿನ ಭಾಷಾ ನೀತಿ-ಪ್ರಯೋಗಗಳನ್ನು ಪರಿಶೀಲಿಸಿರುವ ಎಡ್ಡಿ ವಿಲಿಯಮ್ಸರ ಪ್ರಕಾರ ಇಂಗ್ಲಿಷನ್ನು ಒಂದು ಭಾಷೆಯಾಗಿ ಕಲಿಯುವುದೇ ಉಚಿತ, ಶಿಕ್ಷಣ ಮಾಧ್ಯಮವಾಗಿಯಲ್ಲ. ಸ್ಥಳೀಯ ಭಾಷೆಗಳಿಂದ, ಭಾಷೆಗಳ ಮೂಲಕ ಶಿಕ್ಷಣ ಪಡೆದಾಗ ದೊರಕುವ ಅನುಕೂಲಗಳ ಬಗ್ಗೆ ಆಫ್ರಿಕಾದ ರಾಜಕಾರಣಿಗಳು ಗಮನವನ್ನೇ ಹರಿಸಿಲ್ಲ. ಶಿಕ್ಷಣ ಮಾಧ್ಯಮ ಇಂಗಿಷ್‌ನಲ್ಲೇ ಇರಬೇಕೆಂಬ ಸಾರಾಸಗಟು ನಿಲುವು ತೆಗೆದುಕೊಳ್ಳುವುದು ರಾಜಕಾರಣಿಗಳಿಗೆ ಸುಲಭ, ದೇಶದ ಪ್ರಗತಿ ಮತ್ತು ಸ್ಥಿರತೆ ಮೇಲೆ ಇದರಿಂದಾಗುವ ಪರಿಣಾಮದ ಬಗ್ಗೆ ಗಮನವಿಲ್ಲ. ಇಂಗ್ಲಿಷ್ ಕಲಿಕೆಗೆ ಬೇಕಾದ ಸೂಕ್ತ ಸಿದ್ಧತೆ ಕೂಡ ಈ ದೇಶಗಳಲ್ಲಿಲ್ಲ. ಆಫ್ರಿಕಾದ ದೇಶಗಳು ಹಿಂದುಳಿದಿರುವುದು ಸರಿಯಾದ ಶೈಕ್ಷಣಿಕ ನೀತಿಯಿಲ್ಲದೆ ಇರುವುದರಿಂದ. ಸೂಕ್ತ ಭಾಷಾ ನೀತಿ ಪ್ರಯೋಗಗಳು ಇಲ್ಲದಿರುವುದು ಇಂತಹ ಶೈಕ್ಷಣಿಕ ನೀತಿಯ ಒಂದು ಭಾಗವಷ್ಟೇ.

ಬಹುಭಾಷಿಕ ಭಾರತದ ಬಗ್ಗೆ ಇರುವ ರಾಮಾನುಜಂ ಮೇಘನಾಥನ್‌ರ ಪ್ರಬಂಧ ಹೆಚ್ಚು ಕಡಿಮೆ ಇದೇ ತೀರ್ಮಾನಕ್ಕೆ ಬರುತ್ತದೆ. ಒಂದು ಕಾಲಕ್ಕೆ `ಆಂಗ್ರೇಜಿ~ಯಾಗಿದ್ದ ಭಾಷೆ ಈಗ `ಇಂಗ್ಲಿಷ್~ ಆಗಿ ಆತ್ಮೀಯವಾಗಿದೆ. ಇಂಗ್ಲಿಷ್ ಬಗ್ಗೆ ನಮ್ಮಲ್ಲಿರುವ ಆಸೆ ಭಾಷೆಯ ಮೇಲೂ, ಭಾಷೆಯನ್ನು ಕಲಿಸುವವರ ಮೇಲೆಯೂ ಹಾಕಿರುವ ಹೊರೆ ಮಾನಸಿಕವಾಗಿ ಮತ್ತು ಸಂಪನ್ಮೂಲದ ದೃಷ್ಟಿಯಿಂದ ಗುರುತರವಾದದ್ದು. ನಮ್ಮಂತಹ ದೊಡ್ಡ ಮತ್ತು ವೈವಿಧ್ಯಮಯ ದೇಶದಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣವನ್ನು ಕೊಡುವುದಿರಲಿ, ಒಂದು ಭಾಷೆಯನ್ನಾಗಿ ಇಂಗ್ಲಿಷನ್ನು ಕಲಿಸಲು ಕೂಡ ಯೋಜನೆಗಳಿಲ್ಲ, ತಯಾರಿಯಿಲ್ಲ. ಹೀಗಾಗಿ ಸ್ಥಳೀಯ ಭಾಷೆಗಳನ್ನು ಕಲಿಸುತ್ತಿರುವ ಶಾಲೆಗಳಲ್ಲೇ ಇಂಗ್ಲಿಷನ್ನು ಸೂಕ್ತವಾಗಿ ಕಲಿಸಬೇಕೇ ಹೊರತು, ಸರ್ಕಾರವು ಪ್ರತ್ಯೇಕ ಇಂಗ್ಲಿಷ್ ಮಾಧ್ಯಮದ ಶಾಲೆಗಳನ್ನು ತೆರೆದು ಇಲ್ಲಿ ಪ್ರೋತ್ಸಾಹಿಸಿ ಸಂಪನ್ಮೂಲಗಳನ್ನು ಪೋಲು ಮಾಡಬಾರದು. ಇಂಗ್ಲಿಷ್ ಬಗ್ಗೆ ಇರುವ ಗೀಳು ಮತ್ತು ವ್ಯಾಮೋಹದಿಂದಾಗಿ ನಮ್ಮ ದೇಶದಲ್ಲಿ ರಾಷ್ಟ್ರಭಾಷೆಯ ಮಹತ್ವ ಮತ್ತು ಅಗತ್ಯ ಕುರಿತಂತೆ ನಡೆಯುತ್ತಿದ್ದ ಚರ್ಚೆ ಹಿನ್ನೆಲೆಗೆ ಹೋದದ್ದನ್ನು ಮತ್ತು ಇಲ್ಲಿ ಇಂಗ್ಲಿಷ್ ಕಲಿಯುವ ಎಲ್ಲ ಮಕ್ಕಳಿಗೂ ಮನೆಯಲ್ಲಿ ಒಂದೇ ರೀತಿಯ ಪೂರಕ-ಪ್ರೋತ್ಸಾಹಕ ವಾತಾವರಣವಿಲ್ಲದಿರುವುದನ್ನು ನಾವು ಗಮನಿಸಲೇಬೇಕು ಎಂದು ರಾಮಾನುಜನ್ ಸೂಚಿಸುತ್ತಾರೆ.

ವಿದ್ಯಾರ್ಥಿಗಳು-ಪೋಷಕರ ಕನಸು ಮತ್ತು ಶಿಕ್ಷಣತಜ್ಞರ ಒಲವುಗಳ ನಡುವೆ ಇರುವ ಕಂದಕ ಒಂದೇ ರೀತಿಯದಲ್ಲ. ಕೆಮರಾನ್ ದೇಶದ ವಿದ್ಯಾರ್ಥಿಗಳು ಇಂಗ್ಲಿಷ್ ಕಲಿಯಲು ಒಲವು ತೋರುವುದಿಲ್ಲ. ವ್ಯಕ್ತಿತ್ವವಿಕಾಸಕ್ಕೆ ಬೇಕಾದುದೆಲ್ಲ ಫ್ರೆಂಚ್ ಭಾಷೆಯಲ್ಲೇ ದೊರೆಯುತ್ತದೆ ಎಂಬ ಅಭಿಪ್ರಾಯ ಅವರದು. ಸಂಶೋಧಕಿ ಫೊ ಕೂಗೆ ಕೆಮರಾನ್ ದೇಶಕ್ಕೆ ಇಂಗ್ಲಿಷ್ ಕಲಿಯಲು ಸಾಕಷ್ಟು ಕಾರಣಗಳಿವೆ, ಒತ್ತಾಯಗಳಿವೆ ಎನ್ನುತ್ತಾರೆ.

ಆಫ್ರಿಕಾ ಖಂಡದ ದೇಶಗಳು ಇಂಗ್ಲಿಷ್ ಕಲಿಯಲು ತೋರುವ ಉತ್ಸಾಹಕ್ಕೆ ಕಡಿವಾಣ ಹಾಕಿಕೊಳ್ಳುವುದು ಒಳ್ಳೆಯದೆಂದು ಶಿಕ್ಷಣತಜ್ಞರು, ಸಂಶೋಧಕರು ಹೇಳಿದರೆ ಸಮೀಕ್ಷೆಯಲ್ಲಿ ಭಾಗವಹಿಸಿದವರಿಗೆಲ್ಲ ಇಂಗ್ಲಿಷ್ ಕಲಿಯಲು ಇನ್ನಿಲ್ಲದ ಉತ್ಸಾಹ. ಇಂಗ್ಲಿಷ್‌ಗೆ ನೀಡುವ ಪ್ರೋತ್ಸಾಹ ಆಫ್ರಿಕಾಖಂಡ ಮತ್ತು ಭಾರತದಂತಹ ಬಹುಭಾಷಾ ದೇಶಗಳಲ್ಲಿ ಸ್ಥಳಿಯ ಭಾಷೆಗಳ ಪ್ರಗತಿಗೆ ತೊಂದರೆಯಾಗದಂತೆ ಒಟ್ಟು ಭಾಷಿಕ ವಾತಾವರಣದಲ್ಲಿ ಸಮತೋಲನವನ್ನುಳಿಸಬಹುದೇ ಎಂಬುದು ಕುತೂಹಲಕರ. ಇಂಡೋನೇಷ್ಯಾದಲ್ಲಿ ಇಂಗ್ಲಿಷ್ ಕಲಿಕೆಗೆ ಪೂರಕವಾಗಬಲ್ಲ ಶಾಲೆಗಳನ್ನು ಸರ್ಕಾರದ ವಿಶೇಷ ನಿಧಿಯಿಂದ ಸ್ಥಾಪಿಸಲಾಗುತ್ತಿದೆ. ಸರ್ಕಾರದ, ಸಾರ್ವಜನಿಕರ, ಕುಟುಂಬಗಳ ಸಂಪನ್ಮೂಲವನ್ನು ಇಂಗ್ಲಿಷ್ ನಿಧಾನವಾಗಿ ಆದರೆ ಖಚಿತವಾಗಿ ಕಬಳಿಸುತ್ತಾ ಹೋಗಬಹುದು. ಭಾರತದಲ್ಲಿ ಈಗಾಗಲೇ ಪ್ರತಿಯೊಂದು ಕುಟುಂಬವು ಸ್ಥಳೀಯ ಭಾಷೆಯ ಮೇಲೆ ಖರ್ಚು ಮಾಡುವುದಕ್ಕಿಂತ ಇಂಗ್ಲಿಷ್ ಭಾಷೆಯ ಮೇಲೆ ಹೆಚ್ಚು ಖರ್ಚು ಮಾಡುತ್ತಿದೆ. ನಮ್ಮ ಕರ್ನಾಟಕದಲ್ಲೇ ಬಹುತೇಕ ಮೇಲು ಮಧ್ಯಮ ವರ್ಗದ ಕುಟುಂಬಗಳು ಕನ್ನಡ ಪತ್ರಿಕೆಗಳನ್ನು ಕೊಳ್ಳುವುದಿಲ್ಲವಲ್ಲ.

ಇಂಗ್ಲಿಷ್ ಕಲಿಕೆ ಎಲ್ಲರಿಗೂ ಸಮಾನವಾಗಿ ಸುಲಭಸಾಧ್ಯ ಮತ್ತು ತನ್ಮೂಲಕ ಶೈಕ್ಷಣಿಕ ಹಾಗೂ ಸಾಮಾಜಿಕ ಸಮಾನತೆಯನ್ನು ಸಾಧಿಸಿಬಿಡಬಹುದು ಎಂಬುದೊಂದು ನಂಬಿಕೆ ಚಾಲ್ತಿಯಲ್ಲಿದೆ. ಒಂದು ಮಟ್ಟದ ಪ್ರಭುತ್ವ ಬರುವ ತನಕ ಇಂಗ್ಲಿಷ್ ಕಲಿಯುವಷ್ಟು ಕಾಲ ಮಕ್ಕಳು ಶಾಲೆಗಳಲ್ಲಿ ಓದುತ್ತ ಉಳಿಯುವಂತಹ ಸಾಮಾಜಿಕ -ಕೌಟುಂಬಿಕ ವಾತಾವರಣ ಇಲ್ಲದೇ ಹೋದಾಗ ಏನು ಮಾಡಬೇಕು? ಇಂಗ್ಲಿಷನ್ನು ಎಲ್ಲ ಮಕ್ಕಳಿಗೂ ಕಲಿಸಬೇಕು ಎಂದು ಸರ್ಕಾರ ನಿರ್ಧರಿಸುವುದಾದರೆ ಆ ಕಲಿಕೆಗೆ ಸಮಾನಾವಕಾಶ ಇರುವಂತೆ ವಾತಾವರಣ ನಿರ್ಮಿಸಲು ಸರ್ಕಾರಕ್ಕೆ ಸಾಧ್ಯವೇ? ಸರಿಯಾದ ಇಂಗ್ಲಿಷನ್ನು ನಾನಾ ಕಾರಣಗಳಿಗಾಗಿ ಕಲಿಯಲಾಗದವರಿಗೆ ಕೀಳರಿಮೆ ಬರದಂತೆ ನೋಡಿಕೊಳ್ಳುವುದು ಹೇಗೆ?

ಇಂಗ್ಲಿಷ್ ಕಲಿಕೆ ಎಲ್ಲರಿಗೂ ಬೇಕೇ ಬೇಕು ಎಂದು ನಂಬುವ ಇಂಡೋನೇಷ್ಯಾದ ಪ್ರಭುತ್ವ ಒಂದು ಕಡೆ ಪ್ರತ್ಯೇಕ ಇಂಗ್ಲಿಷ್ ಶಾಲೆಗಳಿಗೆ ಸಾರ್ವತ್ರಿಕ ಸಂಪನ್ಮೂಲಗಳನ್ನು ವ್ಯಯ ಮಾಡಿದರೂ ಇಂಡೋನೇಷ್ಯಾದಿಂದ ಹೊರಗಡೆ ಹೋಗಿ ದುಡಿಮೆ ಮಾಡಿ ಸ್ವದೇಶಕ್ಕೆ ಹಣ ಕಳಿಸುವಂತಹ ಕಾರ್ಮಿಕರಿಗೆ ಭಾಷಾ ತರಬೇತಿ ನೀಡಲು ಮುಂದೆ ಬಂದಿಲ್ಲ. ಈ ವರ್ಗದ ಜನ ತಾವು ಕೆಲಸ ಮಾಡುವ ದೇಶಗಳಲ್ಲಿ ಇಂಗ್ಲಿಷ್‌ನ ಕೊರತೆಯಿಂದಾಗಿ ಎಷ್ಟೇ ಸಮಸ್ಯೆಗಳನ್ನು ಎದುರಿಸಿದರೂ ಸರ್ಕಾರದ ಭಾಷಾ ಕಾರ್ಯಕ್ರಮಗಳು ಇದನ್ನು ಗಮನಿಸುವುದಿಲ್ಲ.

ಸ್ವದೇಶದಿಂದ ಉದ್ಯೋಗಕ್ಕೆ ವಲಸೆ ಹೋಗುವವರ ಇಂಗ್ಲಿಷ್ ಬಯಕೆ - ಕಲಿಕೆಗೆ ನಾನಾ ಬಣ್ಣಗಳು. ಪಾಕಿಸ್ತಾನದ ಒಂದು ಭಾಗದಲ್ಲಿ ಹೆಣ್ಣು ಮಕ್ಕಳು ಇಂಗ್ಲಿಷ್ ಕಲಿಯುವುದೇ ಬ್ರಿಟನ್‌ನಲ್ಲಿರುವ ಪಾಕಿಗಳನ್ನು ಗಂಡಂದಿರಾಗಿ ಪಡೆಯಲು. ತಾತ್ಕಾಲಿಕ ಉದ್ಯೋಗ ಮಾಡಿ ಸ್ವದೇಶಕ್ಕೆ ಹಿಂತಿರುಗಬೇಕೆನ್ನುವ ಇಂಡೋನೇಷ್ಯಾದ ಕಾರ್ಮಿಕರಿಗಾಗಲೀ, ಅಮೆರಿಕದಲ್ಲಿ ಹೋಗಿ ನೆಲೆಸಬೇಕೆನ್ನುವ ಆಫ್ರಿಕಾದ ವೈದ್ಯರುಗಳಿಗಾಗಲೀ ಇರುವ ಇಂಗ್ಲಿಷ್ ಬಯಕೆ ಭಿನ್ನ ಸ್ತರದ್ದು.

ಇಂಗ್ಲಿಷ್ ಕಲಿತರೆ, ಕಲಿಸಿಬಿಟ್ಟರೆ ಒಂದೇ ಏಟಿಗೆ ಮತ್ತು ಎಲ್ಲ ಕಾಲಕ್ಕೂ ಕಲಿತವರ ಮತ್ತು ಸಮಾಜದ ಎಲ್ಲ ಸಮಸ್ಯೆಗಳು ಪರಿಹಾರವಾಗುತ್ತವೆ ಎಂಬ ಗ್ರಹಿಕೆಯನ್ನು ಬೇಕುಬೇಕೆಂದೇ ನಿರ್ಮಾಣ ಮಾಡುವುದರ ವಿರುದ್ಧ ಎಚ್ಚರವನ್ನು ಬಾಂಗ್ಲಾದೇಶದಲ್ಲಿ ಪ್ರಯೋಗಿಸುವ `ಉ್ಞಜ್ಝಜಿ ಐ್ಞ ಅ್ಚಠಿಜಿಟ್ಞ~ ಯೋಜನೆಯ ಫಲಾನುಭವವನ್ನು ಹಿನ್ನೆಲೆಯಾಗಿಟ್ಟುಕೊಂಡು ಸೂಚಿಸಲಾಗಿದೆ. ಮಾತೃಭಾಷೆಯಲ್ಲಿ ಕಲಿಯುವುದರಿಂದ ಸಾಮಾಜಿಕ -ವೈಯಕ್ತಿಕ ವಿಕಾಸ ಸಾಧ್ಯವಿಲ್ಲ ಎಂದು ಹೇಳುವುದಕ್ಕೆ ಯಾವ ಸಾಕ್ಷ್ಯಾಧಾರಗಳೂ ಇಲ್ಲ. ಇಂಗ್ಲಿಷ್ ಕಲಿಕೆ ಯಶಸ್ವಿಯಾಗಲು ಬೇಕಾದಂತಹ ಸಾಮಾಜಿಕ-ಶೈಕ್ಷಣಿಕ ವಾತಾವರಣವನ್ನು ಸರ್ಕಾರಕ್ಕೆ ನಿರ್ಮಾಣ ಮಾಡಲು ಸಾಧ್ಯವಾಗುವುದಾದರೆ ಇಂತಹ ವಾತಾವರಣವನ್ನು ಮಾತೃಭಾಷೆಯ ಮೂಲಕ ಪಡೆಯುವ ಶಿಕ್ಷಣದ ಸಂದರ್ಭದಲ್ಲೂ ಏಕೆ ನಿರ್ಮಾಣ ಮಾಡುವುದಿಲ್ಲ? ಹಾಗೆ ಮಾಡಿದ್ದರೆ ಇಂಗ್ಲಿಷ್ ಬಯಕೆ ಇಷ್ಟು ತೀವ್ರವಾಗಿರುತ್ತಿತ್ತೇ? ಬಡವರಿಗೆ, ಹಿಂದುಳಿದವರಿಗೆ ಪ್ರಾಥಮಿಕಾವಸ್ಥೆಯಲ್ಲಿ ಇಂಗ್ಲಿಷ್ ತಡೆಯಲು ಕಷ್ಟವೆಂಬ ಕಾರಣಕ್ಕೇ ಸರ್ಕಾರ ತಾನೇ ಮುಂದೆ ಬಂದು ಇಂಗ್ಲಿಷನ್ನು ಶಿಕ್ಷಣ ಮಾಧ್ಯಮವಾಗಿ ಹೇರಬಾರದೆಂದು ಸಂಶೋಧಕರು ಸೂಚಿಸುತ್ತಾರೆ. ಮಾತೃಭಾಷೆಯಲ್ಲಿ ಶಿಕ್ಷಣವಿಲ್ಲದ ಕಡೆ ಜಗತ್ತಿನಾದ್ಯಂತ ಮಕ್ಕಳು ಬಹುಬೇಗ ಸ್ಕೂಲಿಗೆ ಹೋಗುವುದನ್ನು ನಿಲ್ಲಿಸಿಬಿಡುತ್ತಾರೆ.

ಪಾಕಿಸ್ತಾನದಂತಹ ದೇಶದಲ್ಲಿ ಎಲ್ಲ ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಇಂಗ್ಲಿಷ್ ಪರ ವಾದಿಸುತ್ತವೆ. ಸಾರ್ವಜನಿಕ ಆರೋಗ್ಯ, ವಸತಿ, ಸಾರಿಗೆ- ಇಂತಹ ಸಂಗತಿಗಳ ಬಗ್ಗೆ ಮಾತನಾಡುವುದಿಲ್ಲ.

ಈ ಸಂಶೋಧನಾ ಪ್ರಬಂಧಗಳ ಸಂಗ್ರಹದ ಸಂಪಾದಕರು ದಲಿತವರ್ಗದಲ್ಲಿರುವ ಇಂಗ್ಲಿಷ್ ಬಯಕೆಯ ಬಗ್ಗೆ ಕೂಡ ಪ್ರಸ್ತಾಪಿಸುತ್ತಾರೆ. ಇಂಗ್ಲಿಷ್ ಎಂದರೆ ಸಿಂಹಿಣಿಯ ಹಾಲಿದ್ದಂತೆ. ಈ ಹಾಲು ಕುಡಿದವರೇ ಗರ್ಜಿಸಬಲ್ಲರು. ಇಂಗ್ಲಿಷ್ ಕಲಿತ ದಲಿತರು ಮಲ ಹೊರಬೇಕಾಗಿಲ್ಲ. ಸತ್ತ ಪ್ರಾಣಿಗಳ ಚರ್ಮವನ್ನು ಹದ ಮಾಡಬೇಕಾಗಿಲ್ಲ. ಬದಲಿಗೆ ಉದ್ಯೋಗಪತಿಯಾಗಬಹುದು. ನ್ಯಾಯಾಧೀಶರುಗಳಾಗಬಹುದು. ದಲಿತರ ಈ ರೀತಿಯ ಕನಸು ಸುಂದರವಾದದ್ದು ಎಂದು ಹೇಳುವ ಸಂಪಾದಕ ಹೋವರ್ ಕೊರಮನ್ ಕೆಲವು ಪ್ರಶ್ನೆಗಳನ್ನು ಸೂಚಿಸುತ್ತಾರೆ. ನಾಳೆ ಇಂತಹ ಕೆಲಸಗಳನ್ನು ಇಂಗ್ಲಿಷ್ ಕಲಿಯದವರು ಮಾಡಬೇಕೆ? ಇಲ್ಲಿ ಇಂತಹ ಕೆಲಸಗಳಿಗೆ ಸರಿಯಾದ ಪ್ರತಿಫಲ, ಗೌರವ, ಘನತೆ ಸಿಗುವಂತಹ ಬದಲಾವಣೆಗಳು ಬರಬಹುದೇ? ಇಂತಹ ಬದಲಾವಣೆಗಳು ಬರುವುದು ತಡವಾದರೆ, ತಡವಾದಾಗ ದಲಿತರ ವಿಕಾಸಕ್ಕೆ ಯಾವ ಹೊಸ ತೊಂದರೆಗಳು ಮೂಡಬಹುದು? ದಲಿತರ ಕಷ್ಟಗಳಿಗೆ ಕಾರಣ ಈ ವರ್ಗ ಇಂಗ್ಲಿಷ್ ಕಲಿಯದಿರುವುದು. ಇಲ್ಲಿ ಇಂಗ್ಲಿಷ್ ಕಲಿಯಲು ನಾನಾ ಕಾರಣಗಳಿಗಾಗಿ ಕಷ್ಟವಾಗಿರುವುದಲ್ಲ. ಭಾರತೀಯ ಸಮಾಜವು ನಿರ್ಮಾಣವಾಗಿರುವ ರೀತಿಯಲ್ಲೇ ಇವರ ಕಷ್ಟಗಳ ಸಮಸ್ಯೆಗಳಿಗೆ ಕಾರಣವಿದೆ ಎನ್ನುತ್ತಾರೆ ಸಂಪಾದಕರು.

ಈ ಸಂಶೋಧನಾ ಪ್ರಬಂಧ ಸಂಗ್ರಹದ ಎಲ್ಲ ಮುಖ್ಯ ವಿಚಾರಗಳನ್ನು ಸಂಗ್ರಹಿಸಿ ಹೇಳುವುದು ಕಷ್ಟ. ಬೇರೆ ಬೇರೆ ದೇಶಗಳಲ್ಲಿ ಇಂಗ್ಲಿಷನ್ನು ಕಲಿಸುವ ವಿಧಾನ ಹೇಗಿರಬೇಕು ಎಂಬುದು ಕೂಡ ಒಂದು ದೊಡ್ಡ ಪ್ರಶ್ನೆ. ಈ ಪ್ರಶ್ನೆಗೆ ಉತ್ತರವನ್ನು ಕಂಡುಕೊಂಡಿರುವಂತೆ ಕಾಣುವ ಯಾವುದೇ ನಿರ್ದಿಷ್ಟ ಶಿಕ್ಷಕ ತರಬೇತಿ ಕಾರ್ಯಕ್ರಮಗಳು ಇಲ್ಲ. ಪ್ರಕಟಣೆಗಳೂ ಇಲ್ಲವೆಂಬುದನ್ನು ಗಮನಿಸಬೇಕು.

ಸಂಶೋಧನಾ ಪ್ರಬಂಧಗಳ ಒಟ್ಟು ಧ್ವನಿಯೆಂದರೆ ಇಂಗ್ಲಿಷ್ ಭಾಷೆಯೊಂದನ್ನು ಮಾತ್ರವೇ ವೈಯಕ್ತಿಕ ಸಾಮಾಜಿಕ ವಿಕಾಸದೊಡನೆ ಸಮೀಕರಿಸಿ ಎಲ್ಲ ರೀತಿಯಲ್ಲೂ ಮುನ್ನುಗ್ಗಲು ಬಲವಾದ ಕಾರಣಗಳಿಲ್ಲ. ಇಂಗ್ಲಿಷ್ ಬಗ್ಗೆ ಇರುವ ಉತ್ಸಾಹದಿಂದಾಗಿ ನಾನಾ ದೇಶಗಳ ಶೈಕ್ಷಣಿಕ ಸಾಂಸ್ಕೃತಿಕ ಪರಿಸ್ಥಿತಿಯಲ್ಲಿರುವ ಸಂಕೀರ್ಣತೆಯನ್ನು ಗಣನೆಗೆ ತೆಗೆದುಕೊಳ್ಳದೆ ಹಗಲುಗನಸಿನ ವಾತಾವರಣದಲ್ಲಿ ಕೆಲಸ ಮಾಡುವುದು ತಪ್ಪು. ದುರಂತವೆಂದರೆ ನಮ್ಮ ಸುತ್ತಲೂ ಮೂಡಿರುವ ಸಂಕೀರ್ಣ ಸ್ಥಿತಿಯನ್ನು ನಿರ್ವಹಿಸಬಲ್ಲ ಸಾಂಸ್ಕೃತಿಕ ರಾಜಕೀಯ ನಾಯಕತ್ವವು ಬಹುಪಾಲು ದೇಶಗಳಲಿಲ್ಲ.

ಈ ಸಂಶೋಧನಾ ಪ್ರಬಂಧಗಳಲ್ಲಿ ಒಂದು ರೀತಿಯ ವ್ಯಂಗ್ಯವೂ ಇದೆ. ಯಾವ ಪರಿಸ್ಥಿತಿಯನ್ನು ವಿಶ್ಲೇಷಿಸಲು ಈ ಪ್ರಬಂಧಗಳು ಹೊರಟಿವೆಯೋ, ಅಂತಹ ಪರಿಸ್ಥಿತಿಯ ಚೌಕಟ್ಟಿನಲ್ಲಿ ಈ ಪ್ರಬಂಧಗಳೇ ಸಿಕ್ಕಿಹಾಕಿಕೊಂಡಿವೆ. ಭಾಷೆಯು ಉದ್ಯೋಗಕ್ಕೆ, ಕಲಿಕೆಗೆ ಮಾತ್ರವಲ್ಲ. ಮನುಷ್ಯನ ಸಂವೇದನೆ ಮತ್ತು ಭಾವಜಗತ್ತನ್ನು ನಿರ್ಮಿಸುವಲ್ಲಿ ಭಾಷೆಯ ಪಾತ್ರ ಮಹತ್ವದ್ದು. ಒಮ್ಮಮ್ಮೆ ಒಂದು ಭಾಷೆಯನ್ನು ಯಾವು ಯಾವುದೋ ಕಾರಣಕ್ಕೆ ವಿರೋಧಿಸುವ ನಾವು ಆ ಭಾಷೆಯ ಹಿಂದಿರುವ ಸಂವೇದನೆಯನ್ನು ಒಪ್ಪುತ್ತೇವೆ.

ಇಂಗ್ಲಿಷನ್ನು ಶಾಲಾ ಕಲಿಕೆಯ ಒಂದು ಭಾಷೆಯ ಪ್ರಶ್ನೆಯಾಗಿ ಮಾತ್ರ ನೋಡಿರುವುದರಿಂದ ಇಲ್ಲಿ ಸಂವೇದನೆಯ ಪ್ರಶ್ನೆ ಹಿಂದೆ ಸರಿದಿದೆ. ಇಂಗ್ಲಿಷ್ ಕಲಿತುಕೊಳ್ಳುವಾಗ ನಾವು ಕಲಿತುಕೊಳ್ಳುವುದು ಭಾಷೆಯನ್ನು ಮಾತ್ರ, ಸಂವೇದನೆಯನ್ನಲ್ಲ ಎಂದು ವಾದಿಸುವ ನಮ್ಮ ದೇಶೀವಾದಿಗಳ ತಪ್ಪಿನಂತೆಯೇ ಇದೊಂದು ಕೊರತೆ ಈ ಪ್ರಬಂಧಗಳಲ್ಲಿ.

ನೇರವಾಗಿ ಒತ್ತಾಯ ಮಾಡದಿದ್ದರೂ ಈ ಪ್ರಬಂಧ ಸಂಗ್ರಹ ಇಂಗ್ಲಿಷ್ ಮೂಲಕ ವಿಶ್ವಮಾನವರಾಗಲು ಹೊರಟಿರುವ ಎಲ್ಲ ವಿಕಾಸಶೀಲ ದೇಶಗಳಿಂದಲೂ ಒಂದು ಸ್ಪಷ್ಟವಾದ ಭಾಷಾ ನೀತಿಯನ್ನು ಬೇಡುತ್ತದೆ. ಇಂತಹ ಭಾಷಾ ನೀತಿಯು ಈಗಿರುವಂತೆಯೇ ಮಾತೃಭಾಷೆಯಲ್ಲಿ ಪರಿಣಾಮಕಾರಿ ಶಿಕ್ಷಣವನ್ನು ನೀಡಲು ಪ್ರಯತ್ನ ನಡೆದಿದೆಯೇ ಎಂಬ ಪ್ರಶ್ನೆಯನ್ನು ಎದುರಿಸಲೇಬೇಕು. ಒಟ್ಟು ಶಿಕ್ಷಣ ವಾತಾವರಣದಲ್ಲಿ ಮಾತೃಭಾಷೆಯ ಮತ್ತು ಇಂಗ್ಲಿಷಿನ ಸ್ಥಾನ ಎಷ್ಟಿರಬೇಕು ಎಂಬುದರ ಬಗ್ಗೆ ಸ್ಪಷ್ಟವಾಗಿರಬೇಕು. ಸದ್ಯದ, ದೂರದೃಷ್ಟಿಯಿಲ್ಲದ ಜನಪ್ರಿಯ ಬೇಡಿಕೆಗಳನ್ನು ಎದುರಿಸುವಷ್ಟು ಧೀಮಂತಿಕೆಯನ್ನು ಕೂಡ ಈ ಭಾಷಾ ನೀತಿ ತೋರಿಸಬೇಕು.

ಪ್ರಬಂಧಕಾರರೇ ಹೇಳುವ ಹಾಗೆ ಇಂತಹ ಭಾಷಾ ನೀತಿಯ ನಿರ್ಮಾಣ ಮತ್ತು ಜಾರಿಯಾಗುವಿಕೆ ಸದ್ಯಕ್ಕೆ ಮರೀಚಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT