ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲಿಷ್ ಕಲಿಕೆಗೆ ಸಾಫ್ಟ್ ಮಾರ್ಗ...

Last Updated 30 ಅಕ್ಟೋಬರ್ 2010, 18:30 IST
ಅಕ್ಷರ ಗಾತ್ರ

ಇಂ ಗ್ಲಿಷ್ ಭಾಷೆ ಇಡೀ ವಿಶ್ವವನ್ನೇ ಆಳುತ್ತಿದೆ. ಆಯಾ ದೇಶ, ಪ್ರಾದೇಶಿಕ ಹಿನ್ನೆಲೆಗೆ ಅನುಗುಣವಾಗಿ ಇದರ ಉಚ್ಚಾರಣೆಯಲ್ಲಿ ಕೊಂಚ ವ್ಯತ್ಯಾಸ ಇರಬಹುದು. ಆದರೆ ಇದು ಇಡೀ ಜಗತ್ತನ್ನು ಸಂಪರ್ಕಿಸುವ ಏಕೈಕ ಭಾಷೆ ಎನ್ನುವುದು ನಿರ್ವಿವಾದ.

ಕಾರ್ಪೋರೆಟ್ ಕ್ಷೇತ್ರವೇ ಇರಲಿ, ಔದ್ಯಮಿಕ ವಲಯವೇ ಇರಲಿ, ಎಲ್ಲವೂ ಇಂಟರ್‌ನೆಟ್ ಮೂಲಕ ಕಾರ್ಯನಿರ್ವಹಿಸುವ ಕಾಲಘಟ್ಟವಿದು. ಇಂಗ್ಲಿಷ್ ಭಾಷೆಯಲ್ಲಿ ತಕ್ಕಮಟ್ಟಿಗಾದರೂ ಪ್ರಭುತ್ವ ಹೊಂದಿರದಿದ್ದರೆ ಇಂಟರ್‌ನೆಟ್ ನೆರವಿನಿಂದ ಕೆಲಸ ಮಾಡುವುದು ಸುಲಭವಲ್ಲ.

ಆಲಿಸುವುದು, ಓದುವುದು, ಬರೆಯುವುದು ಮತ್ತು ಮಾತನಾಡುವುದು-ಇದು ಒಂದು ಭಾಷೆಯನ್ನು ಕಲಿಯುವ ಪ್ರಕ್ರಿಯೆ. ಇನ್ನು, ಓದು, ಬರವಣಿಗೆ ಹಾಗೂ ಸಂಭಾಷಣೆಯಲ್ಲಿ ವ್ಯತ್ಯಾಸವಿದೆ. ಓದುವುದು ಸ್ವಯಂ ಕಲಿಕೆಯಿಂದ ಬರುವಂಥದ್ದು. ಬರವಣಿಗೆ ಅಭ್ಯಾಸದಿಂದ ಕರಗತವಾಗುತ್ತದೆ. ಆದರೆ ಮಾತನಾಡುವ ಕಲೆ ಇದೆಯಲ್ಲ; ಅದು ಒಂದು ಭಾಷೆಯ ಮೇಲೆ ಹೊಂದಿರುವ ಪ್ರಭುತ್ವವನ್ನು ಅವಲಂಬಿಸಿರುತ್ತದೆ. ಇದು ಇಂಗ್ಲಿಷ್‌ಗೂ ಅನ್ವಯಿಸುವ ಮಾತು. ವಾಕ್ಚಾತುರ್ಯ ಇರುವ ವ್ಯಕ್ತಿ ಕೇವಲ 30 ಸೆಕೆಂಡುಗಳಲ್ಲಿ ಒಂದು ವಿಷಯವನ್ನು ಇನ್ನೊಬ್ಬರಿಗೆ ಅತ್ಯಂತ ಸ್ಪಷ್ಟವಾಗಿ ವಿವರಿಸಬಲ್ಲ. ( ಇದನ್ನು ಇಂಗ್ಲಿಷ್‌ನಲ್ಲಿ ‘ಎಲಿವೇಟರ್ ಪಿಚ್’ ಎಂದು ಕರೆಯಲಾಗುತ್ತದೆ) ಸಂದರ್ಭ ಹಾಗೂ ಸಮಯವನ್ನು ನೋಡಿಕೊಂಡು ಮಾತನಾಡುವ ಕಲೆ ಎಲ್ಲರಿಗೂ ಸಿದ್ಧಿಸುವುದಿಲ್ಲ.

ನಮ್ಮಲ್ಲಿ ಪ್ರಾಥಮಿಕ ಶಿಕ್ಷಣವು ಮಾತೃಭಾಷೆಯಲ್ಲೇ ಇರಬೇಕು ಎನ್ನುವುದು ಹಲವರ ವಾದ. ಆದರೆ ಇಂಗ್ಲಿಷನ್ನು ಒಂದು ಭಾಷೆಯಾಗಿ ಕಲಿಯುವುದು ಇಂದಿನ ಅನಿವಾರ್ಯ.

ಈ ಅನಿವಾರ್ಯತೆಯೇ ಇದೀಗ ‘ ಇಂಗ್ಲಿಷ್ ಸ್ಪೀಕಿಂಗ್ ಸಾಫ್ಟ್‌ವೇರ್’ಗಳಿಗೆ ಎಲ್ಲಿಲ್ಲದ ಬೇಡಿಕೆ ತಂದುಬಿಟ್ಟಿದೆ. ಈ ಸಾಫ್ಟ್‌ವೇರ್‌ಗಳು ಕಂಪ್ಯೂಟರ್‌ನಲ್ಲಿ ಗ್ರಂಥರೂಪದಲ್ಲಿರುವ ಯಾವುದೇ ವಿಷಯವನ್ನು ವಾಚನ ರೂಪದಲ್ಲಿ ಪ್ರಸ್ತುತಪಡಿಸುತ್ತವೆ.

 ‘ರೀಡ್ ಟು ಮಿ’ ಎನ್ನುವುದು ಕೂಡ ಇಂಥ ಸಾಫ್ಟ್‌ವೇರ್‌ಗಳಲ್ಲಿ ಒಂದು. ವಿಶೇಷವಾಗಿ ಶಾಲಾ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಅಮೆರಿಕ ಮೂಲದ ‘ಇಂಗ್ಲಿಷ್ ಹೆಲ್ಪರ್’ ಎಂಬ ಸಂಸ್ಥೆ ಈ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಿದೆ.

‘ ಇದನ್ನು ಮೂಲತಃ ಭಾರತದಲ್ಲಿ ಅಂಧ ಮಕ್ಕಳಿಗಾಗಿ ತಯಾರಿಸಲಾಗಿತ್ತು. ಆದರೆ ಅಮೆರಿಕದಲ್ಲಿ ಇದಕ್ಕೆ ಎಲ್ಲರಿಂದಲೂ ಉತ್ತಮ ಪ್ರತಿಕ್ರಿಯೆ ಬಂತು. ಹಾಗಾಗಿ ಇದನ್ನು ಇನ್ನಷ್ಟು ಅಭಿವೃದ್ಧಿಪಡಿಸಿ ಎಲ್ಲರೂ ಬಳಸುವಂತೆ ಮಾಡಲಾಗಿದೆ’  ಎನ್ನುತ್ತಾರೆ ಇಂಗ್ಲಿಷ್ ಹೆಲ್ಪರ್ ಬಿಸಿನೆಸ್ ಡೆವೆಲಪ್‌ಮೆಂಟ್ ನಿರ್ದೇಶಕಿ ಗೀತಾ ರಾಮಮೂರ್ತಿ.

‘ಜಾಗತೀಕರಣದ ಮಾಯೆಯಿಂದ ಇಡೀ ವಿಶ್ವವೇ ಹತ್ತಿರವಾಗಿಬಿಟ್ಟಿದೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಂವಹನ ಕಲೆ ಯಾರಿಗೆ ಇದೆಯೋ ಅಂಥವರು ಮುಂದೆ ಬರುತ್ತಾರೆ.  ಹಾಗಾಗಿಯೇ ನಾವು ಇಂಥದ್ದೊಂದು ವಿಶಿಷ್ಟ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಿದ್ದೇವೆ. ಇದು ಕೇವಲ ಶಾಲಾ ಮಕ್ಕಳಿಗೆ ಮಾತ್ರವಲ್ಲ; ಕಾರ್ಪೋರೆಟ್ ಸೇರಿದಂತೆ ಎಲ್ಲಾ ಕ್ಷೇತ್ರಕ್ಕೂ ನೆರವಾಗಲಿದೆ’ ಎನ್ನುವುದು ಗೀತಾ ಪ್ರತಿಪಾದನೆ.

ರೀಡ್ ಟು ಮಿ’  ವಿಶೇಷತೆ...

ವಿಜ್ಞಾನ, ಇತಿಹಾಸ, ಸಮಾಜಶಾಸ್ತ್ರ, ಅರ್ಥಶಾಸ್ತ್ರ-ಹೀಗೆ ಗ್ರಂಥರೂಪದಲ್ಲಿರುವ ಯಾವುದೇ ವಿಷಯವನ್ನು ಕಂಪ್ಯೂಟರ್ ಸ್ಕ್ರೀನ್‌ನಲ್ಲಿ ಈ ಸಾಫ್ಟ್‌ವೇರ್ ಓದುತ್ತಾ ಹೋಗುತ್ತದೆ. ನಿಮ್ಮ ಗ್ರಹಿಕೆಯ ಸಾಮರ್ಥ್ಯಕ್ಕೆ ಅನುಗುಣವಾಗಿ ಓದುವ ವೇಗದ ಮಿತಿಯನ್ನು ನೀವು ನಿಯಂತ್ರಿಸಬಹುದು. ಅಂದರೆ ಒಂದು ನಿಮಿಷದಲ್ಲಿ 80 ಅಥವಾ 100 ಶಬ್ದಗಳನ್ನು ಓದುವಂತೆಯೂ ಮಾಡಬಹುದು. ಶಬ್ದಗಳ ಅರ್ಥ ತಿಳಿದುಕೊಳ್ಳಲು ಇದರಲ್ಲಿ ಪದಕೋಶದ ಸೌಲಭ್ಯ ಕೂಡ ಇದೆ. ಅಲ್ಲದೇ, ಇದರಲ್ಲಿರುವ ನಿರ್ದಿಷ್ಟ  ‘ಟೂಲ್’ ಸಹಾಯದಿಂದ ಉಚ್ಚಾರಣೆ, ಶಬ್ದ ಸಂಯೋಜನೆಯ ವಿವರಗಳನ್ನೆಲ್ಲ ಅರಿತುಕೊಳ್ಳಬಹುದು. ಈ ಸಾಫ್ಟ್‌ವೇರ್‌ನ ಇನ್ನೊಂದು ವಿಶೇಷತೆ ಎಂದರೆ ಇದರಲ್ಲಿ ನಮ್ಮ ಧ್ವನಿಯನ್ನು ‘ರೆಕಾರ್ಡ್’ ಕೂಡ ಮಾಡಬಹುದು. ನಮ್ಮ ಉಚ್ಚಾರಣೆಗೂ, ಇದರಲ್ಲಿರುವ ಎಲೆಕ್ಟ್ರಾನಿಕ್ ದನಿಯ ಉಚ್ಚಾರಣೆಗೂ ಹೋಲಿಕೆ ಮಾಡುತ್ತಾ, ಭಾಷೆಯನ್ನು ಕಲಿಯಬಹುದು.
ಸ್ವಯಂ ಕಲಿಕೆ....

 ಒಂದು ಭಾಷೆಯನ್ನು ಕಲಿಯುವ ಆರಂಭಿಕ ಹಂತವೇ ಆಲಿಸುವಿಕೆ. ಉದಾಹರಣೆಗೆ ಈಗಷ್ಟೇ ತೊದಲು ನುಡಿಯುತ್ತಿರುವ ಮಗುವನ್ನೇ ನೋಡಿ. ಅದು ಮೊದಲು ತನ್ನ ಸುತ್ತಲಿನವರ ಮಾತನ್ನು ಆಲಿಸುತ್ತದೆ. ಅಷ್ಟೇ ಅಲ್ಲ ಅವರು ಏನು ಹೇಳುತ್ತಾರೋ ಅದನ್ನು ಅನುಕರಿಸಲು ಶುರುಮಾಡುತ್ತದೆ. ಇವೆಲ್ಲವೂ ಸ್ವಯಂ ಕಲಿಕೆಯ ವಿವಿಧ ಹಂತಗಳು. ಇಂದು ಇಂಗ್ಲಿಷ್ ಕೋಚಿಂಗ್ ತರಗತಿಗಳಿಗೆ ಲೆಕ್ಕವೇ ಇಲ್ಲ.  ‘15 ದಿನಗಳಲ್ಲಿ, ಒಂದು ತಿಂಗಳಿನಲ್ಲಿ ಇಂಗ್ಲಿಷ್ ಕಲಿಸುತ್ತೇವೆ’ ಎಂಬ ಜಾಹೀರಾತಿಗೇನೂ ಕಡಿಮೆ ಇಲ್ಲ. ಆದರೆ ಅವೆಲ್ಲ ಎಷ್ಟರ ಮಟ್ಟಿಗೆ ಸಾಧ್ಯ ಎನ್ನುವುದನ್ನು ಬಿಡಿಸಿಹೇಳಬೇಕಾಗಿಲ್ಲ. ಭಾಷೆಯ ಮಟ್ಟಿಗೆ ಹೇಳುವುದಾದರೆ ಅದು ಸ್ವಯಂ ಕಲಿಕೆಯಿಂದಲೇ ಕರಗತವಾಗುವಂಥದ್ದು. ‘ರೀಡ್ ಟು ಮಿ’ ಸಾಫ್ಟ್‌ವೇರ್ ಇದಕ್ಕೆ ಪೂರಕ ಎನ್ನಬಹುದೇನೋ. ‘ಇಂದಿನ ಮಕ್ಕಳಿಗೆ ಕಂಪ್ಯೂಟರ್ ಎನ್ನುವುದು ‘ಫನ್ ಟೂಲ್’. ಹಾಗಾಗಿ ಸಾಫ್ಟ್‌ವೇರ್ ಮೂಲಕ ಇಂಗ್ಲಿಷ್ ಕಲಿಯುವುದು ಅವರಿಗೆ ಖುಷಿ ಕೊಡುತ್ತದೆ. ಜತೆಗೆ ಅದರಲ್ಲಿರುವ ವಿವಿಧ ಸಾಧ್ಯತೆಯನ್ನು ಹುಡುಕಾಡುವ ಆಸಕ್ತಿಯನ್ನೂ ಅವರಲ್ಲಿ ಬೆಳೆಸುತ್ತದೆ’ ಎನ್ನುವುದು ಗೀತಾ ರಾಮಮೂರ್ತಿ ಅವರ ಅಭಿಪ್ರಾಯ.

ವಿದ್ಯಾರ್ಥಿಗಳ ಮೇಲೆ ತಂತ್ರಜ್ಞಾನದ ಪ್ರಭಾವ...

ಶಾಲಾ ಮಕ್ಕಳು ತಂತ್ರಜ್ಞಾನಕ್ಕೆ ಯಾವ ರೀತಿಯಲ್ಲಿ ತೆರೆದುಕೊಳ್ಳುತ್ತಿದ್ದಾರೆ ಎನ್ನುವುದನ್ನು ತಿಳಿಯಲು  ‘ಇಂಗ್ಲಿಷ್ ಹೆಲ್ಪರ್’,  ದೆಹಲಿಯ ಮಾನ್ ಪಬ್ಲಿಕ್  ಸ್ಕೂಲ್, ಅರ್ವಾಚಿನ್ ಇಂಟರ್‌ನ್ಯಾಷನ್ ಸ್ಕೂಲ್, ಶಾ ಇಂಟರ್‌ನ್ಯಾಷನಲ್ ಸ್ಕೂಲ್‌ಗಳಿಗೆ  ‘ರೀಡ್ ಟು ಮಿ’ ಸಾಫ್ಟ್‌ವೇರ್ ಪರಿಚಯಿಸಿತು. ಇದಕ್ಕೆ ವಿದ್ಯಾರ್ಥಿಗಳಿಂದ, ಶಿಕ್ಷಕರಿಂದ ಹಾಗೂ ಪೋಷಕರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ.
ಅಂದಹಾಗೆ,

ಇಂಟರ್‌ನೆಟ್ ಮಾದರಿಯಲ್ಲಿಯೇ ಈ ಸಾಫ್ಟ್‌ವೇರ್ ಸೌಲಭ್ಯ ಪಡೆಯಬಹುದಾಗಿದೆ.

ಹೆಚ್ಚಿನ ಮಾಹಿತಿಗೆ www.englishhelper.co.in,

ಸಂಪರ್ಕ ಸಂಖ್ಯೆ (ಟೋಲ್ ಫ್ರೀ)1800-111-956
 
 
    

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT