ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲಿಷ್ ಗೊತ್ತಿಲ್ಲವೆಂದು ನಿರಾಕರಣೆ ಸಲ್ಲ

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬೇಸರದ ನುಡಿ
Last Updated 7 ಜುಲೈ 2013, 20:27 IST
ಅಕ್ಷರ ಗಾತ್ರ

ಬೆಂಗಳೂರು: `ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಗ್ರಾಮೀಣ ವಿದ್ಯಾರ್ಥಿಗಳಿಗೆ ಇಂಗ್ಲಿಷ್‌ನಲ್ಲಿ ಪ್ರಾವೀಣ್ಯ ಇಲ್ಲ ಎಂಬ ಕಾರಣಕ್ಕೆ `ವಿಪ್ರೋ' ಹಾಗೂ `ಇನ್ಫೋಸಿಸ್' ಸಂಸ್ಥೆಗಳಲ್ಲಿ ಕೆಲಸವನ್ನೇ ನೀಡುವುದಿಲ್ಲ' ಎಂದು ವಿರೋಧ ಪಕ್ಷದ ನಾಯಕ ಎಚ್.ಡಿ. ಕುಮಾರ ಸ್ವಾಮಿ ಬೇಸರ ವ್ಯಕ್ತಪಡಿಸಿದರು.

ರಾಜ್ಯ ಒಕ್ಕಲಿಗರ ಒಕ್ಕೂಟ ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ದ್ವಿತೀಯ ಪಿಯುಸಿ ಹಾಗೂ ಎಸ್ಸೆಸೆಲ್ಸಿಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಪುರಸ್ಕಾರ ಪ್ರದಾನ ಮಾಡುವ ಕಾರ್ಯಕ್ರಮದಲ್ಲಿ ಮಾತನಾಡಿ, ಕನ್ನಡಿಗರಿಗೆ ಕೆಲಸಗಳನ್ನು ನೀಡದೆ, ಬೇರೆಯವರಿಗೆ ಉದ್ಯೋಗವನ್ನು ನೀಡುವ ಕಾರಣ ನಗರದಲ್ಲಿ ಕನ್ನಡಿಗರು ಅಲ್ಪಸಂಖ್ಯಾತರಾಗಿದ್ದಾರೆ ಎಂದರು.

`ಕೃಷಿ ಅವಲಂಬಿತ ಕುಟುಂಬಗಳನ್ನು ಅಭಿವೃದ್ಧಿ ಹೆಸರಿನಲ್ಲಿ ಸರ್ಕಾರಗಳು ಬೀದಿಗೆ ತಂದು ನಿಲ್ಲಿಸಿದೆ. ಕೇವಲ ನಗರಗಳ ಅಭಿವೃದ್ಧಿಗಾಗಿ ಭೂಮಿಯನ್ನು ತ್ಯಾಗ ಮಾಡಿರುವ ಕುಟುಂಬದವರ ಭೂಮಿಗಳ ಮೇಲೆ ನಿರ್ಮಿಸಲಾದ ಬೃಹತ್ ಕಟ್ಟಡಗಳಲ್ಲೇ ಅವರು ಕೂಲಿ ಕೆಲಸ ಮಾಡಿ ಜೀವನ ಸಾಗಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಕೃಷಿಕರು ತಮ್ಮ ಮಕ್ಕಳಿಗೆ ಹೇಗೆ ಒಳ್ಳೆಯ ಶಿಕ್ಷಣ ಪಡೆಯಲು ಸಾಧ್ಯ ಹೇಳಿ' ಎಂದು ನೊಂದು ನುಡಿದರು.

ಒಕ್ಕೂಟದ ಮಂಡ್ಯ ಶಾಖೆಯ ಅಧ್ಯಕ್ಷ ಪ್ರೊ.ಬಿ. ಜಯಪ್ರಕಾಶ್ ಗೌಡ ಅವರು ಮಾತನಾಡಿ, ವಿವಿಧ ಪಕ್ಷಗಳಲ್ಲಿರುವ ಎಲ್ಲಾ ಸಮುದಾಯದ ಜನಪ್ರತಿನಿಧಿಗಳು ತಿಂಗಳಿಗೆ ಒಮ್ಮೆ ಒಂದೆಡೆ ಸೇರಿ ಸಮುದಾಯದ ಅಭಿವೃದ್ಧಿಗಾಗಿ ಚಿಂತನೆ ನಡೆಸಬೇಕು ಎಂದರು.

ಶಾಸಕ ಆರ್.ಅಶೋಕ ಮಾತನಾಡಿ, ಒಂದು ಸಮುದಾಯದ ಬೆಳವಣಿಗೆ ಹಾಗೂ ಅಭಿವೃದ್ಧಿಯಲ್ಲಿ ಶಿಕ್ಷಣ ಹಾಗೂ ರಾಜಕೀಯ ಪ್ರಾತಿನಿಧ್ಯ ಪ್ರಮುಖ ಪಾತ್ರವಹಿಸುತ್ತದೆ. ಹೀಗಿರುವಾಗ ಸಮುದಾಯದ ಹಾಗೂ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸುವ ಕಾರ್ಯ ಒಕ್ಕಲಿಗರ ಸಮುದಾಯದಿಂದ ಆಗಬೇಕಿದೆ ಎಂದು ಹೇಳಿದರು.
  
ಒಕ್ಕಲಿಗರ ಸಂಘ ಕೇವಲ ಸಮುದಾಯದ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವುದರ ಜೊತೆಗೆ ಅನಾಥ ಮಕ್ಕಳ ವಿದ್ಯಾಭ್ಯಾಸಕ್ಕೂ ನೆರವು ನೀಡಬೇಕು. ಅದರಲ್ಲೂ ಸ್ಥಿತಿವಂತರು ಬಡ ವಿದ್ಯಾರ್ಥಿಗಳನ್ನು ಗುರುತಿಸಿ, ಅವರ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು ಎಂದರು ಸಲಹೆ ನೀಡಿದರು.

ಸ್ಫಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಂಜಾವಧೂತ ಸ್ವಾಮೀಜಿ ಮಾತನಾಡಿ ಸಮುದಾಯದ ಮಕ್ಕಳು ಕೇವಲ ವೈದ್ಯರು ಹಾಗೂ ಎಂಜಿನಿಯರ್ ಆಗಲು ಬಯಸದೆ ನಾಗರಿಕ ಪರೀಕ್ಷೆಗಳತ್ತ ಗಮನಹರಿಸಬೇಕು. ಐಎಎಸ್, ಐಪಿಎಸ್ ಹಾಗೂ ಐಎಫ್‌ಎಸ್ ಅಧಿಕಾರಿಗಳಾಗುವ ಮೂಲಕ ಬೇರೆಯವರಿಗೆ ಉದ್ಯೋಗ ನೀಡುವ ಸ್ಥಿತಿಗೆ ಬರಬೇಕು ಎಂದು ಕಿವಿಮಾತು ಹೇಳಿದರು. 

ಆದಿಚುಂಚನಗಿರಿ ಮಠದ ಬೆಂಗಳೂರು ಶಾಖಾಮಠದ ಪೀಠಾಧ್ಯಕ್ಷ ಸೌಮ್ಯನಾಥ ಸ್ವಾಮೀಜಿ ಮಾತನಾಡಿ, ಪ್ರಸ್ತುತ ಇರುವ ಸಂಘದ ವಿದ್ಯಾರ್ಥಿ ನಿಲಯಗಳು ಸಾಲದು. ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗಾಗಿ ಕನಿಷ್ಟ ಇನ್ನೂ 20 ವಿದ್ಯಾರ್ಥಿ ನಿಲಯಗಳನ್ನು ಸಂಘ ಪ್ರಾರಂಭಿಸಬೇಕು ಎಂದು ಸಲಹೆ ನೀಡಿದರು.

ದ್ವಿತೀಯ ಪಿಯುಸಿ ಶೇಕಡ 97.50 ಹಾಗೂ ಎಸ್ಸೆಸೆಲ್ಸಿಯಲ್ಲಿ ಶೇಕಡ 99 ರಷ್ಟು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ  2 ಲಕ್ಷ  ರೂಪಾಯಿಯ ಚೆಕ್ ವಿತರಿಸಿ, ಸನ್ಮಾನಿಸಲಾಯಿತು. ಜತೆಗೆ ಇಬ್ಬರು ಅಂಧ ವಿದ್ಯಾರ್ಥಿಗಳಿಗೂ ಪ್ರೋತ್ಸಾಹ ಧನ ನೀಡಿ ಸನ್ಮಾನಿಸಲಾಯಿತು. ಶಾಸಕ ಜಿ.ಟಿ.ದೇವೇಗೌಡ, ವಿಧಾನಪರಿಷತ್ತಿನ ಸಭಾಪತಿ ವಿಮಲಾಗೌಡ ಹಾಗೂ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT