ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲಿಷ್ ಬೇಕು, ಮಾಧ್ಯಮ ಏಕೆ?

Last Updated 6 ಜೂನ್ 2011, 19:30 IST
ಅಕ್ಷರ ಗಾತ್ರ

ಆರು ಮತ್ತು ಏಳನೇ ತರಗತಿಯಿಂದ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ನೀಡಲು ಹೋಬಳಿಗೆ ಒಂದರಂತೆ ಸರ್ಕಾರಿ ಶಾಲೆ ಪ್ರಾರಂಭಿಸುವ ಚಿಂತನೆಯ ಹಿಂದೆ ವ್ಯಾವಹಾರಿಕ ಲೆಕ್ಕಾಚಾರವಷ್ಟೇ ಇರುವಂತೆ ತೋರುತ್ತದೆ.

ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯುವುದರಿಂದ ವಂಚಿತರಾಗುತ್ತಿದ್ದಾರೆ ಎಂಬ ಆರೋಪ ನಿವಾರಿಸಿಕೊಳ್ಳುವುದು ಈ ಚಿಂತನೆಗೆ ಕಾರಣ.ಇಂಗ್ಲಿಷ್ ಕಲಿಯದೆ ಭವಿಷ್ಯವೇ ಇಲ್ಲ ಎಂಬ ನಂಬಿಕೆ ಜನಸಾಮಾನ್ಯರಲ್ಲಿಯೂ ಬೇರು ಬಿಡುತ್ತಿರುವುದರ ಪರಿಣಾಮ ಈಗ ಗ್ರಾಮೀಣ ಪ್ರದೇಶಗಳಲ್ಲಿಯೂ ಗೋಚರವಾಗುತ್ತಿದೆ.
 
ವಿದ್ಯಾರ್ಥಿಗಳಿಲ್ಲದೆ ಸರ್ಕಾರಿ ಶಾಲೆಗಳನ್ನು ಮುಚ್ಚಬೇಕಾದ ಪರಿಸ್ಥಿತಿ ಒಂದೆಡೆ ಇದ್ದರೆ ಇಂಗ್ಲಿಷ್ ಮಾಧ್ಯಮದ ಶಾಲೆಗಳನ್ನು ಪೈಪೋಟಿಯಿಂದ ಆರಂಭಿಸುವ ಭರಾಟೆಯೂ ಇನ್ನೊಂದೆಡೆ ಗೋಚರವಾಗುತ್ತಿದೆ.
 
ಇಂಗ್ಲಿಷನ್ನು ಭಾಷೆಯಾಗಿ ಕಲಿಸುವುದಕ್ಕೂ, ಇಂಗ್ಲಿಷ್‌ಅನ್ನು ಶಿಕ್ಷಣ ಮಾಧ್ಯಮವನ್ನಾಗಿ ಬಳಸುವುದಕ್ಕೂ ಇರುವ ವ್ಯತ್ಯಾಸದ ಅರಿವು ಇಲ್ಲದ ಗೊಂದಲ ಪ್ರಾಥಮಿಕ ಶಿಕ್ಷಣದಲ್ಲಿ ಕಂಡು ಬಂದಿದೆ. ಸರ್ಕಾರದ ಅಧಿಕೃತ ಭಾಷಾ ನೀತಿ ಐದನೇ ತರಗತಿಯವರೆಗೆ ಕಡ್ಡಾಯವಾಗಿ ಮಾತೃಭಾಷೆಯಲ್ಲಿ ಶಿಕ್ಷಣ ಎಂಬುದು ಬದಲಾಗಿಲ್ಲ.

ಆದರೂ ಇದನ್ನು ಪ್ರಶ್ನಿಸಿ ಖಾಸಗಿ ಶಾಲೆಗಳು ಎಬ್ಬಿಸಿರುವ ವಿವಾದ ಇನ್ನೂ ಇತ್ಯರ್ಥವಾಗಿಲ್ಲ. ಅದನ್ನು ಇತ್ಯರ್ಥಪಡಿಸುವ ಬದ್ಧತೆಯನ್ನು ರಾಜ್ಯ ಸರ್ಕಾರ ಇದುವರೆಗೂ ಪ್ರದರ್ಶಿಸಿಲ್ಲ. ಇಂಗ್ಲಿಷನ್ನು ಒಂದು ಭಾಷೆಯನ್ನಾಗಿ ಯಾವ ಹಂತದಿಂದ ಕಲಿಸಬೇಕು ಎಂಬುದರ ಬಗ್ಗೆಯೂ ವಿವಾದ ಎದ್ದಿರುವುದು ಮಾತೃಭಾಷಾ ನೀತಿಯ ಅನುಷ್ಠಾನದಲ್ಲಿ ಪ್ರಮುಖ ತೊಡಕಾಗಿ ಉಳಿದಿದೆ.

ಶಿಕ್ಷಣದ ಪ್ರಾರಂಭದ ಹಂತದಲ್ಲಿ ಮಗುವಿಗೆ, ಹುಟ್ಟಿನಿಂದ ಪರಿಚಯವಿದ್ದ ಭಾಷೆಯಲ್ಲಿ ಕಲಿಕೆ ಅದರ ಗ್ರಹಿಕೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂಬುದು ಜಗತ್ತಿನಾದ್ಯಂತ ಶಿಕ್ಷಣ ತಜ್ಞರು ಕಂಡುಕೊಂಡ ಸತ್ಯ. ಶಿಕ್ಷಣ ತಜ್ಞರೆಲ್ಲ ಪ್ರಾರಂಭದ ಕೆಲವು ವರ್ಷ ಮಾತೃಭಾಷೆಯಲ್ಲಿಯೇ ಶಿಕ್ಷಣ ನೀಡುವುದನ್ನು ಪ್ರತಿಪಾದಿಸಿದ್ದಾರೆ.
 
ಈಗಿನ ಉದ್ಯೋಗ ಮಾರುಕಟ್ಟೆಯಲ್ಲಿ ಇಂಗ್ಲಿಷಿನಲ್ಲಿ ಸಂವಹನ ಸಾಮರ್ಥ್ಯ ಅನಿವಾರ‌್ಯವಾಗಿರುವುದರಿಂದ ಇಂಗ್ಲಿಷನ್ನು ಕಡೆಗಣಿಸಲಾಗದು ಎಂಬ ವಾದವೂ ಇದೆ.ಅದನ್ನೂ ತಳ್ಳಿಹಾಕಲು ಸಾಧ್ಯವಿಲ್ಲ. ಆದ್ದರಿಂದ ಇಂಗ್ಲಿಷನ್ನು ಒಂದು ಭಾಷೆಯಾಗಿ ಆರಂಭದ ವರ್ಷಗಳಲ್ಲಿಯೇ ಕಲಿಸುವುದು ವಿವಾದದ ಸಂಗತಿಯಲ್ಲ.
 
ಆದರೆ ಪರಿಸರದಲ್ಲಿ ಬಳಕೆಯಲ್ಲಿಲ್ಲದ ಅಪರಿಚಿತವಾದ ಭಾಷಾ ಮಾಧ್ಯಮದಲ್ಲಿ ಶಿಕ್ಷಣ ನೀಡುವುದು ಗ್ರಾಮೀಣ ವಿದ್ಯಾರ್ಥಿಗಳ ಗ್ರಹಿಕೆಗೆ ಎಷ್ಟರಮಟ್ಟಿಗೆ ಸಿಗಬಲ್ಲದು ಎಂಬುದು ಇನ್ನೂ ಸಾಬೀತಾಗದ ಸಂಗತಿ. ಮಗುವಿನ ಮಾನಸಿಕ ವಿಕಾಸದಲ್ಲಿ ಮಾತೃಭಾಷೆಯಲ್ಲಿನ ಸಂವಹನವೇ ಹೆಚ್ಚು ಸಹಕಾರಿಯಾಗುವುದನ್ನು ಮನಶ್ಶಾಸ್ತ್ರಜ್ಞರು ಕೂಡ ಹೇಳುತ್ತಾರೆ.

ಸಂವಹನ ಸಾಮರ್ಥ್ಯಕ್ಕಿಂತಲೂ ಜ್ಞಾನಾಭಿವೃದ್ಧಿಗೆ ತಕ್ಕ ತಳಹದಿಯನ್ನು ಶಿಕ್ಷಣದ ಆರಂಭಿಕ ಹಂತದಲ್ಲಿ ಮೂಡಿಸುವುದು ಅಗತ್ಯ. ವಿಷಯ ಕಲಿಕೆಯ ಮಾಧ್ಯಮವನ್ನು ಕಡೆಗಣಿಸಿ ಸಂಹವನ ಮಾಧ್ಯಮಕ್ಕೆ ಆದ್ಯತೆ ನೀಡುವುದರ ಪರಿಣಾಮ ಇದು.
 
ಜನ ಇಂಗ್ಲಿಷಿನ ಮೋಹಕ್ಕೆ ಒಳಗಾಗಿ ಮಕ್ಕಳ ಕಲಿಕೆಯ ಸಾಮರ್ಥ್ಯವನ್ನು ನಿರ್ಲಕ್ಷಿಸಿರುವ ಕಾರಣ ಇಂಗ್ಲಿಷ್ ಶಾಲೆಗಳಿಗೆ ಉದ್ಯಮಗಳ ಸ್ವರೂಪ ಬಂದಿದೆ. ಮಾಧ್ಯಮದ ಮೋಹ ಒಳ್ಳೆಯದಲ್ಲ ಎಂಬುದನ್ನು ಜನತೆಯಲ್ಲಿ ಮನದಟ್ಟು ಮಾಡಬೇಕಾದ ಸರ್ಕಾರವೇ ಇದನ್ನೇ ಪೋಷಿಸಲು ಹೊರಟರೆ ಕನ್ನಡ ಪ್ರೌಢಶಿಕ್ಷಣ ಹಂತದಲ್ಲಿಯೇ ಕಲಿಕೆಯ ಮಾಧ್ಯಮವಾಗಿ ಅಪ್ರಸ್ತುತವಾಗುವ ಅಪಾಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT