ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲಿಷ್ ಶಾಲೆಗಳಿಗೆ ನೆರವಾಗುವ ಉದ್ದೇಶ ಇಲ್ಲ

Last Updated 4 ನವೆಂಬರ್ 2011, 19:30 IST
ಅಕ್ಷರ ಗಾತ್ರ

* ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಲು ಕಾರಣ ಏನು?

- ಈ ವಿಷಯವನ್ನು ಸ್ಥಳೀಯವಾಗಿ ತೆಗೆದುಕೊಂಡು ಒಂದೊಂದು ಶಾಲೆ ಬಗ್ಗೆ ಯೋಚಿಸಿದಾಗ ಮಾತ್ರ ಕಾರಣ ಗೊತ್ತಾಗುತ್ತದೆ. ಜನಸಂಖ್ಯೆಯ ಇಳಿಮುಖ, ಯುವಕರು ನಗರಗಳಿಗೆ ವಲಸೆ ಬರುತ್ತಿರುವುದು, ಇಂಗ್ಲಿಷ್ ಮಾಧ್ಯಮ ಆಕರ್ಷಣೆ ಸೇರಿದಂತೆ ಹಲವು ಕಾರಣಗಳಿವೆ.

ಸರ್ವಶಿಕ್ಷಣ ಅಭಿಯಾನ ಯೋಜನೆ ಜಾರಿಗೆ ಬಂದಾಗ ಒಂದು ಕಿ.ಮೀ. ಅಂತರದಲ್ಲಿ ಶಾಲೆಗಳನ್ನು ಆರಂಭಿಸಲಾಯಿತು. ಆದರೆ ಒಂದರಿಂದ ಐದನೇ ತರಗತಿವರೆಗಿನ ಶಾಲೆಗಳಲ್ಲಿ 2,3, 4 ಮಕ್ಕಳಿದ್ದರೆ, ಒಂದು ತರಗತಿಯಲ್ಲಿ ಮಕ್ಕಳೇ ಇಲ್ಲದಿದ್ದರೆ ಬೋಧನೆಗೆ ತೊಂದರೆಯಾಗುತ್ತದೆ. ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗುವುದಿಲ್ಲ. ಮಕ್ಕಳಲ್ಲಿ ಸ್ಪರ್ಧಾ ಮನೋಭಾವ ಬೆಳೆಯುವುದಿಲ್ಲ.

* ಇಂಗ್ಲಿಷ್ ಶಾಲೆಗಳಿಗೆ ಅನುಕೂಲ ಮಾಡಿಕೊಡುವುದಕ್ಕಾಗಿ ಸರ್ಕಾರಿ ಶಾಲೆಗಳನ್ನು ಮುಚ್ಚಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆಯಲ್ಲ?
- ಇದು ಆಧಾರರಹಿತ, ರಾಜಕೀಯ ಪ್ರೇರಿತ ಆರೋಪ ಅಷ್ಟೇ. ಈಗ ಶಾಲೆಗಳನ್ನು ಮುಚ್ಚುತ್ತಿರುವ ಕಡೆ ಯಾವ ಖಾಸಗಿ ಶಾಲೆಗೆ ಅನುಮತಿ ಕೊಟ್ಟಿದ್ದೇವೆ ಎಂಬುದನ್ನು ತೋರಿಸಲಿ. ವೃಥಾ ಆರೋಪ ಮಾಡುವುದರಲ್ಲಿ ಅರ್ಥವಿಲ್ಲ.

* ಇದರಿಂದಾಗಿ ಗ್ರಾಮೀಣ ಪ್ರದೇಶದ ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗುವುದಿಲ್ಲವೆ?
- ಸಮೀಪದ ಶಾಲೆಗಳಿಗೆ ಹೋಗಿ ಬರಲು ತೊಂದರೆ ಇದ್ದರೆ ಅಂತಹ ಮಕ್ಕಳಿಗೆ ಸಾರಿಗೆ ವೆಚ್ಚ ನೀಡಲಾಗುವುದು. ಆಗ್ರಹಪೂರ್ವಕವಾಗಿ ಶಾಲೆಗಳನ್ನು ಮುಚ್ಚುವುದಿಲ್ಲ. ಎಲ್ಲಾದರೂ ತೊಂದರೆಗಳು ಇದ್ದರೆ ಮಕ್ಕಳ ಸಂಖ್ಯೆ ಕಡಿಮೆ ಇದ್ದರೂ ಶಾಲೆಗಳನ್ನು ಮುಂದುವರಿಸುತ್ತೇವೆ. ಕೇವಲ ದಾಖಲಾತಿಯೇ ಶಿಕ್ಷಣವಲ್ಲ, ಅದಕ್ಕೆ ಹತ್ತಾರು ಮುಖಗಳಿವೆ.
* ಬಹಳಷ್ಟು ಶಿಕ್ಷಣ ಸಂಸ್ಥೆಗಳು ಕನ್ನಡ ಮಾಧ್ಯಮಕ್ಕೆ ಅನುಮತಿ ಪಡೆದು ಇಂಗ್ಲಿಷ್ ಮಾಧ್ಯಮದಲ್ಲಿ ಬೋಧಿಸುತ್ತಿವೆ. ಅಂತಹ ಸಂಸ್ಥೆಗಳ ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಿ?
- ನಮ್ಮ ಕಾಲದಲ್ಲಿ ಆಂಗ್ಲಮಾಧ್ಯಮ ಶಾಲೆಗಳಿಗೆ ಅನುಮತಿ ನೀಡಿಲ್ಲ. ಹಿಂದೆ ಕೊಟ್ಟಿರಬಹುದು. ಸದ್ಯ ಭಾಷಾ ನೀತಿ ವಿಷಯ ಸುಪ್ರೀಂ ಕೋರ್ಟ್‌ನಲ್ಲಿದೆ. ಯಥಾಸ್ಥಿತಿ ಕಾಪಾಡುವಂತೆ ನ್ಯಾಯಾಲಯದ ಆದೇಶ ಇರುವುದರಿಂದ ಯಾವುದೇ ಶಾಲೆಯ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ.

* ಶಿಕ್ಷಕರು, ಕಟ್ಟಡ, ಶೌಚಾಲಯ ಇತ್ಯಾದಿ ಮೂಲಸೌಕರ್ಯಗಳ ಕೊರತೆಯಿಂದಾಗಿ ಮಕ್ಕಳು ಶಾಲೆಗೆ ಹೋಗುತ್ತಿಲ್ಲ ಎಂಬ ಆರೋಪವಿದೆಯಲ್ಲ?
- ಶಾಲೆಗೆ ಅಗತ್ಯವಿರುವ ಕಟ್ಟಡ, ಶಿಕ್ಷಕರು, ಬಿಸಿ ಊಟದ ವ್ಯವಸ್ಥೆ ಸೇರಿದಂತೆ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದೆ. ಒಂದು ವೇಳೆ ಯಾವುದಾದರೂ ಅಂತಹ ಶಾಲೆ ಇದ್ದರೆ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಸರ್ಕಾರ ಸಿದ್ಧವಿದೆ. ಸರ್ಕಾರಿ ಶಾಲೆಗಳಲ್ಲಿ ಸುಧಾರಣೆಯಾಗಿದೆ. ಗುಣಮಟ್ಟದಲ್ಲಿ ನಿರ್ಲಕ್ಷ್ಯ ಆಗಿಲ್ಲ. ಖಾಸಗಿ, ಅನುದಾನಿತ ಶಾಲೆಗಳ ಶಿಕ್ಷಕರಿಗಿಂತ ಸರ್ಕಾರಿ ಶಾಲೆಗಳ ಶಿಕ್ಷಕರು ಹೆಚ್ಚು ಸಮರ್ಥರಿದ್ದಾರೆ.

* ಗ್ರಾಮಾಂತರ ಪ್ರದೇಶದಲ್ಲಿ ಶಾಲೆ ಮುಚ್ಚಿದರೆ ನಗರ ಪ್ರದೇಶಕ್ಕೆ ವರ್ಗಾವಣೆ ಮಾಡಿಸಿಕೊಂಡು ಬರಬಹುದು ಎಂದು ಶಿಕ್ಷಕರೇ ಶಾಲೆ ಮುಚ್ಚಲು ಕುಮ್ಮಕ್ಕು ನೀಡುತ್ತಿದ್ದಾರೆ ಎಂಬುದು ನಿಜವೇ?
- ದಾಖಲಾತಿ, ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳುವಲ್ಲಿ ಶಿಕ್ಷಕರ ಜವಾಬ್ದಾರಿ ಇದೆ. ಮಕ್ಕಳ ಸಂಖ್ಯೆ ಇದ್ದು, ಗುಣಮಟ್ಟ ಇಲ್ಲದಿದ್ದರೆ ಸಂಬಂಧಪಟ್ಟ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಕಾರಣಕ್ಕಾಗಿ ಟೆಂಟ್ ಶಾಲೆ, ಚಿಣ್ಣರ ಅಂಗಳ, ಅಂಗವಿಕಲರ ಶಾಲೆ, ಬಾಲ ಕಾರ್ಮಿಕರಿಗಾಗಿ ಶಾಲೆಗಳನ್ನು ಆರಂಭಿಸಲಾಗಿದೆ.

* ಶಾಲೆ ಮುಚ್ಚಿದ ನಂತರ ಆ ಕಟ್ಟಡಗಳನ್ನು ಏನು ಮಾಡುತ್ತೀರಿ?
- ಆಯಾ ಗ್ರಾಮ ಪಂಚಾಯಿತಿಗಳಿಗೆ ಕಟ್ಟಡಗಳನ್ನು ಕೊಡುತ್ತೇವೆ. ಯಾವ ಉದ್ದೇಶಕ್ಕೆ ಬಳಸಬೇಕು ಎಂಬ ಬಗ್ಗೆ ಅವರೇ ನಿರ್ಣಯ ಮಾಡುತ್ತಾರೆ. ಹತ್ತಿರದ ಶಾಲೆಯೊಂದಿಗೆ ವಿಲೀನಗೊಳಿಸಿದ ಮಾತ್ರಕ್ಕೆ ಶಾಲೆ ಮುಚ್ಚಿಹೋಗುವುದಿಲ್ಲ. ಐದು ವರ್ಷ ಕಾಯುತ್ತೇವೆ. ಮಧ್ಯದಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾದರೆ ಮೊದಲಿನ ಹಾಗೆ ಶಾಲೆ ಮುಂದುವರಿಯಲಿದೆ. ಮಕ್ಕಳ ಸಂಖ್ಯೆ ಹೆಚ್ಚಿರುವ ಕಡೆ ಶಾಲೆ ನಡೆಸಲು ಸರ್ಕಾರ ಸದಾ ಸಿದ್ಧವಿದೆ.

* ಶಿಶು ವಿಹಾರಗಳನ್ನು ನಡೆಸಲು ಆರ್‌ಎಸ್‌ಎಸ್‌ನವರಿಗೆ ಕಟ್ಟಡಗಳನ್ನು ಕೊಡಲಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದು ನಿಜವೇ?
- ಇದು ರಾಜಕೀಯ ಪ್ರೇರಿತವಾದ ಆರೋಪ ಅಷ್ಟೇ. ಪಂಚಾಯಿತಿಗಳಿಗೆ ವಹಿಸುವುದರಿಂದ ಮುಂದೆ ಏನು ಮಾಡಬೇಕು ಎಂದು ಅವರೇ ನಿರ್ಣಯ ತೆಗೆದುಕೊಳ್ಳುತ್ತಾರೆ. ಬೇರೆ ಏನು ಮಾಡಬಹುದು, ಯಾವ ಉದ್ದೇಶಕ್ಕೆ ಬಳಸಬಹುದು ಎಂಬ ಸಲಹೆ-ಸೂಚನೆಗಳು ಬಂದರೆ ಸ್ವಾಗತಿಸುತ್ತೇವೆ.

* ಒಂದು ಕಡೆ ಸಾಕ್ಷರತೆ ಪ್ರಮಾಣ ಹೆಚ್ಚಾಗಬೇಕು ಎನ್ನುತ್ತೀರಿ, ಮತ್ತೊಂದೆಡೆ ಶಾಲೆಗಳನ್ನು ವಿಲೀನಗೊಳಿಸುವ ಮೂಲಕ ಪರೋಕ್ಷವಾಗಿ ಮುಚ್ಚುತ್ತಿದ್ದೀರಿ, ಇದು ದ್ವಂದ್ವ ನೀತಿಯಲ್ಲವೇ?
- ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಲಾಗುವುದು ಎಂದು ಸರ್ಕಾರ ಸ್ಪಷ್ಟವಾಗಿ ಹೇಳಿದೆ. ಸಾಕ್ಷರತೆಗೂ ಶಾಲೆ ವಿಲೀನಕ್ಕೂ ಹೋಲಿಕೆ ಮಾಡುವುದು ಸರಿಯಲ್ಲ. ಎಲ್ಲರೂ ಅಕ್ಷರಸ್ಥರಾಗಬೇಕು ಎಂಬುದು ಸರ್ಕಾರದ ಅಪೇಕ್ಷೆಯಾಗಿದ್ದು, ಅದಕ್ಕೆ ಬದ್ಧರಾಗಿದ್ದೇವೆ. ಯಾರನ್ನೂ ಶಿಕ್ಷಣದಿಂದ ವಂಚಿತರನ್ನಾಗಿ ಮಾಡುವ ಪ್ರಶ್ನೆಯೇ ಇಲ್ಲ.

* ಶಾಲೆ ಮುಚ್ಚುವುದರಿಂದ ಬೊಕ್ಕಸಕ್ಕೆ ಆಗುವ ನಷ್ಟ ಎಷ್ಟು?
- ಇಲ್ಲಿ ಲಾಭ-ನಷ್ಟದ ಪ್ರಶ್ನೆ ಬರುವುದಿಲ್ಲ. ನಷ್ಟವಂತೂ ಆಗುವುದಿಲ್ಲ. ಮಕ್ಕಳಿಗೆ ಸಮೀಪದ ಶಾಲೆಗೆ ಹೋಗಿ ಬರಲು ಸಾರಿಗೆ ವೆಚ್ಚ ನೀಡಲು ಶುರು ಮಾಡಿದರೆ ಸರ್ಕಾರಕ್ಕೆ ಹೊರೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT