ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲೆಂಡ್- ಹೈದರಾಬಾದ್ ಇಲೆವೆನ್ ಅಭ್ಯಾಸ ಪಂದ್ಯ ಇಂದು

Last Updated 7 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಹೈದರಾಬಾದ್ (ಐಎಎನ್‌ಎಸ್): ಭಾರತ ವಿರುದ್ಧದ ಐದು ಪಂದ್ಯಗಳ ಏಕದಿನ ಕ್ರಿಕೆಟ್‌ಗೆ ಸಜ್ಜಾಗುತ್ತಿರುವ ಇಂಗ್ಲೆಂಡ್ ತಂಡ ಶನಿವಾರ ನಡೆಯುವ ಅಭ್ಯಾಸ ಪಂದ್ಯದಲ್ಲಿ ಹೈದರಾಬಾದ್ ಇಲೆವೆನ್ ತಂಡವನ್ನು ಎದುರಿಸಲಿದೆ. ಈ ಮೂಲಕ ಇಲ್ಲಿನ ಪರಿಸ್ಥಿತಿಗೆ ಹೊಂದಿಕೊಳ್ಳುವ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಡಲಿದೆ.

ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವುದು ಅಲಸ್ಟರ್ ಕುಕ್ ಬಳಗದ ಉದ್ದೇಶ.

ಆ ಮೂಲಕ ಏಕದಿನ ಸರಣಿಗೆ ಮುನ್ನ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವುದು ಪ್ರವಾಸಿ ತಂಡದ ಬಯಕೆ. ಇಂಗ್ಲೆಂಡ್ ತಂಡ ಅಕ್ಟೋಬರ್ 4 ರಂದು ಇಲ್ಲಿಗೆ ಆಗಮಿಸಿತ್ತು.

ಕಳೆದ ಎರಡು ದಿನಗಳ ಕಾಲ ಆಟಗಾರರು ಕಠಿಣ ಅಭ್ಯಾಸ ನಡೆಸಿದ್ದಾರೆ. ಭಾರತದ ವಿರುದ್ಧದ ಮೊದಲ ಏಕದಿನ ಪಂದ್ಯ ಇದೇ ತಾಣದಲ್ಲಿ ಅ. 14 ರಂದು ನಡೆಯಲಿದೆ.

ಎಲ್ಲ ಏಕದಿನ ಪಂದ್ಯಗಳು ಹೊನಲು ಬೆಳಕಿನಲ್ಲಿ ನಡೆಯಲಿವೆ. ಈ ಕಾರಣ ಶನಿವಾರದ ಆಭ್ಯಾಸ ಪಂದ್ಯವೂ ಹೊನಲು ಬೆಳಕಿನಲ್ಲಿ ನಡೆಯಲಿದೆ. `ಹೊನಲು ಬೆಳಕಿನಡಿ ಆಡುವುದರಿಂದ ಹೆಚ್ಚಿನ ನೆರವಾಗಲಿದೆ~ ಎಂದು ಇಂಗ್ಲೆಂಡ್ ತಂಡದ ನಾಯಕ ಕುಕ್ ಹೇಳಿದ್ದಾರೆ. ಭಾರತ ಮತ್ತು ಇಂಗ್ಲೆಂಡ್ ಸರಣಿಯ ವೇಳೆ ಐಸಿಸಿಯ ಹೊಸ ನಿಯಮಗಳನ್ನು ಅಳವಡಿಸಲಾಗುವುದು. ಈ ಕಾರಣ ಅಭ್ಯಾಸ ಪಂದ್ಯದಲ್ಲೂ ಈ ನಿಯಮಗಳನ್ನು ಅನುಸರಿಸಲು ನಿರ್ಧರಿಸಲಾಗಿದೆ.

`ಹೊಸ ನಿಯಮಗಳು ಪಂದ್ಯದ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎಂಬುದು ತಿಳಿದಿಲ್ಲ. ಆದರೆ ಪರಿಸ್ಥಿತಿಗೆ ಬೇಗನೇ ಹೊಂದಿಕೊಳ್ಳುವ ತಂಡ ಮೇಲುಗೈ ಸಾಧಿಸಲಿದೆ~ ಎಂದು ಕುಕ್ ನುಡಿದಿದ್ದಾರೆ.

ಇಂಗ್ಲೆಂಡ್‌ಗೆ ಅಭ್ಯಾಸ ಪಂದ್ಯದಲ್ಲಿ ನಿಜವಾದ ಅಗ್ನಿಪರೀಕ್ಷೆ ಎದುರಾಗದು. ಏಕೆಂದರೆ ಹೈದರಾಬಾದ್ ಇಲೆವೆನ್ ತಂಡದಲ್ಲಿ ಪ್ರಮುಖ ಆಟಗಾರರಿಲ್ಲ. ಭಾರತ ತಂಡದ ಕೆಲವು ಆಟಗಾರರು ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಟೂರ್ನಿಯಲ್ಲಿ ಆಡುತ್ತಿದ್ದರೆ, ಮತ್ತೆ ಕೆಲವರು ಎನ್‌ಕೆಪಿ ಸಾಳ್ವೆ ಟ್ರೋಫಿ ಟೂರ್ನಿಗೆ ಸಿದ್ಧತೆ ನಡೆಸುತ್ತಿದ್ದಾರೆ. ಈ ಕಾರಣ ಅಭ್ಯಾಸ ಪಂದ್ಯದಲ್ಲಿ ಹೈದರಾಬಾದ್ ಇಲೆವೆನ್ ತಂಡವನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ.
ಇತ್ತೀಚೆಗೆ ನಡೆದ ದಕ್ಷಿಣ ವಲಯ ಟ್ವೆಂಟಿ-20 ಟೂರ್ನಿಯಲ್ಲಿ ಪಾಲ್ಗೊಂಡ ಹೈದರಾಬಾದ್ ತಂಡವೇ ಶನಿವಾರ ಕಣಕ್ಕಿಳಿಯಲಿದೆ ಎಂದು ಹೈದರಾಬಾದ್ ಕ್ರಿಕೆಟ್ ಸಂಸ್ಥೆ ಮೂಲಗಳು ತಿಳಿಸಿವೆ.

ತಂಡಗಳು: ಇಂಗ್ಲೆಂಡ್: ಅಲಸ್ಟರ್ ಕುಕ್ (ನಾಯಕ), ಇಯಾನ್ ಬೆಲ್, ಸ್ಕಾಟ್ ಬಾರ್ತ್‌ವಿಕ್, ಜಾಸ್ ಬಟ್ಲರ್, ಸ್ಟೀವನ್ ಫಿನ್, ಕ್ರೆಗ್ ಕೀಸ್‌ವೆಟರ್, ಸಮಿತ್ ಪಟೇಲ್, ಗ್ರೇಮ್ ಸ್ವಾನ್, ಕ್ರಿಸ್ ವೋಕ್ಸ್, ಜಾನಿ ಬೈಸ್ಟೋವ್, ರವಿ ಬೋಪಾರ, ಟಿಮ್ ಬ್ರೆಸ್ನನ್, ಜೇಡ್ ಡೆರ್ನ್‌ಬಾಕ್, ಅಲೆಕ್ಸ್ ಹೇಲ್ಸ್, ಸ್ಟುವರ್ಟ್ ಮೀಕರ್, ಕೆವಿನ್ ಪೀಟರ್‌ಸನ್, ಜೊನಾಥನ್ ಟ್ರಾಟ್

ಹೈದರಾಬಾದ್ ಇಲೆವೆನ್: ಡಿ.ಬಿ. ರವಿ ತೇಜಾ (ನಾಯಕ), ಪಿ. ಆಕಾಶ್ ರೆಡ್ಡಿ, ಟಿ. ಸುಮನ್, ಜಿ.ಎಚ್. ವಿಹಾರಿ, ಬಿ. ಸಂದೀಪ್, ಇಬ್ರಾಹಿಮ್ ಖಲೀಲ್, ಅರ್ಜುನ್ ಯಾದವ್, ಪ್ರಗ್ಯಾನ್ ಓಜಾ, ಅಮೋಲ್ ಶಿಂಧೆ, ಅಹ್ಮದ್ ಖಾದ್ರಿ, ಪರಮ್‌ವೀರ್ ಸಿಂಗ್, ಕಾನಿಷ್ಕ ನಾಯ್ಡು, ಆಶೀಶ್ ರೆಡ್ಡಿ, ಅನ್ವರ್ ಖಾನ್, ನೀರಜ್ ಬಿಷ್ಟ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT