ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲೆಂಡ್‌ಗೆ ರೋಚಕ ಗೆಲುವು

ಕ್ರಿಕೆಟ್: ಆಸ್ಟ್ರೇಲಿಯಾದ ಜಯಕ್ಕೆ ಜೇಮ್ಸ ಆ್ಯಂಡರ್‌ಸನ್ ಅಡ್ಡಿ, ಹಡಿನ್ ಹೋರಾಟ ವ್ಯರ್ಥ
Last Updated 14 ಜುಲೈ 2013, 19:35 IST
ಅಕ್ಷರ ಗಾತ್ರ

ನಾಟಿಂಗ್ ಹ್ಯಾಂ (ಐಎಎನ್‌ಎಸ್/ಎಎಫ್‌ಪಿ): ಆ್ಯಷಸ್ ಟೆಸ್ಟ್ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ಗೆಲುವಿನ ಸವಿ ಪಡೆಯುವ ಕನಸು ಕಂಡಿದ್ದ ಆಸ್ಟ್ರೇಲಿಯಾ ತಂಡ ನಿರಾಸೆ ಅನುಭವಿಸಿತು. ಜೇಮ್ಸ ಆ್ಯಂಡರಸನ್ ಅವರು ತಮ್ಮ ಮೊನಚಾದ ಬೌಲಿಂಗ್‌ನಿಂದ ಬ್ರಾಡ್ ಹಡಿನ್ ವಿಕೆಟ್ ಉರುಳಿಸಿ ಆತಿಥೇಯ ಇಂಗ್ಲೆಂಡ್‌ಗೆ 14 ರನ್‌ಗಳ ರೋಚಕ ಗೆಲುವು ತಂದುಕೊಟ್ಟರು.

ಟ್ರಿಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ಭಾನುವಾರ ಕೊನೆಗೊಂಡ ಪಂದ್ಯದಲ್ಲಿ ಆಸೀಸ್ ಗೆಲುವು ಪಡೆಯಲು 311 ರನ್ ಗಳಿಸಬೇಕಿತ್ತು. ಆದರೆ, ಮೈಕಲ್ ಕ್ಲಾರ್ಕ್ ಸಾರಥ್ಯದ ತಂಡ 110.5 ಓವರ್‌ಗಳಲ್ಲಿ 296 ರನ್ ಕಲೆ ಹಾಕುವಷ್ಟರಲ್ಲಿ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು ನಿರಾಸೆ ಅನುಭವಿಸಿತು.

ಹಡಿನ್ ಹೋರಾಟ ವ್ಯರ್ಥ: ಶನಿವಾರದ ಅಂತ್ಯಕ್ಕೆ 174 ರನ್‌ಗೆ ಆರು ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿದ್ದ ಆಸೀಸ್ ತಂಡಕ್ಕೆ ಹಡಿನ್ (71, 147ಎ, 9ಬೌಂ) ಜೀವ ತುಂಬುವ ಯತ್ನ ಮಾಡಿದರು. ಅದರೆ, ಇನ್ನುಳಿದ ಬ್ಯಾಟ್ಸ್‌ಮನ್‌ಗಳು ನೆರವಾಗಲಿಲ್ಲ.
ಭೋಜನ ವಿರಾಮದ ವೇಳೆಗೆ ಆಸೀಸ್ 108 ಓವರ್‌ಗಳಲ್ಲಿ ಒಂಬತ್ತು ವಿಕೆಟ್ ಕಳೆದುಕೊಂಡು 291 ರನ್ ಗಳಿಸಿತ್ತು.

ಆದರೆ, ಭೋಜನದ ನಂತರ 17 ಎಸೆತಗಳಾಗುಷ್ಟರದಲ್ಲಿ ತಂಡದ ಹೋರಾಟಕ್ಕೆ ತೆರೆಬಿತ್ತು. ಆ್ಯಂಡರ್‌ಸನ್ ಎಸೆತದಲ್ಲಿ ಹಡಿನ್ ಬ್ಯಾಟಿನ ಅಂಚಿಗೆ ತಗುಲಿದ ಚೆಂಡು ವಿಕೆಟ್ ಕೀಪರ್ ಮ್ಯಾಟ್ ಪ್ರಿಯರ್ ಕೈ ಸೇರಿತು. ಆದರೆ, ಕ್ಯಾಚ್ ಪಡೆದ ರೀತಿ ಅನುಮಾನಕ್ಕೆ ಕಾರಣವಾಗಿತ್ತು. ಆದ್ದರಿಂದ ಆಸೀಸ್ ತಂಡ ಅಂಪೈರ್ ತೀರ್ಪು ಪರಿಶೀಲನಾ ಪದ್ಧತಿ (ಯುಡಿಆರ್‌ಎಸ್) ಮೊರೆ ಹೋಯಿತು. ಅಲ್ಲಿ ಹಡಿನ್ ಔಟಾಗಿರುವುದು ಸ್ಪಷ್ಟವಾಗಿತ್ತು. `ಹಡಿನ್ ಔಟ್' ಎಂದು ತಿಳಿಯುತ್ತಿದ್ದಂತೆ ಆತಿಥೇಯರ ಆಟಗಾರರ ಸಂಭ್ರಮಕ್ಕೆ ಪಾರವೇ ಇರಲಿಲ್ಲ. 

`ಈ ಪಂದ್ಯ ಅಮೋಘವಾಗಿತ್ತು. ಇಂಗ್ಲೆಂಡ್ ಉತ್ತಮ ಪ್ರದರ್ಶನ ತೋರಿತು. ಎರಡೂ ತಂಡಗಳ ಆಟಗಾರರು ಹಾಗೂ ಅಭಿಮಾನಿಗಳು ಮೊದಲ ಪಂದ್ಯವನ್ನು ಖುಷಿಯಿಂದಲೇ ಅನುಭವಿಸಿದರು. ಆದರೆ, ಈ ಪಂದ್ಯದಲ್ಲಿ ಡಿಆರ್‌ಎಸ್ ತೀರ್ಪು ತೃಪ್ತಿ ನೀಡಿಲ್ಲ' ಎಂದು ಆಸೀಸ್ ತಂಡದ ನಾಯಕ ಮೈಕಲ್ ಕ್ಲಾರ್ಕ್ ಪ್ರತಿಕ್ರಿಯಿಸಿದರು.

ಗೆಲುವು ಕಸಿದ ಆ್ಯಂಡರ್‌ಸನ್: ಮೊದಲ ಇನಿಂಗ್ಸ್‌ನಲ್ಲಿ 5 ವಿಕೆಟ್ ಕಬಳಿಸಿದ್ದ ವೇಗಿ ಜೇಮ್ಸ ಆ್ಯಂಡರಸನ್ ಎರಡನೇ ಇನಿಂಗ್ಸ್‌ನಲ್ಲೂ ಇಷ್ಟೇ ವಿಕೆಟ್‌ಗಳನ್ನು ಉರುಳಿಸಿ ಇಂಗ್ಲೆಂಡ್‌ಗೆ ಗೆಲುವು ತಂದುಕೊಟ್ಟರು.

ಆಸೀಸ್ ತಂಡ 20 ರನ್ ಕಲೆ ಹಾಕುವ ಅಂತರದಲ್ಲಿ ಮಿಷೆಲ್ ಸ್ಟ್ರಾಕ್ (1) ಹಾಗೂ ಪೀಟರ್ ಸಿಡ್ಲ್ (11) ವಿಕೆಟ್ ಕಳೆದುಕೊಂಡಿತು. ಇದು ತಂಡದ ಸೋಲಿಗೆ ಮುನ್ನುಡಿಯಾಯಿತು. 215 ನಿಮಿಷ ಕ್ರೀಸ್‌ನಲ್ಲಿ ಗಟ್ಟಿಯಾಗಿ ನಿಂತು ಗೆಲುವು ತಂದುಕೊಡಲು ಹೋರಾಟ ನಡೆಸಿದ್ದ ಹಡಿನ್ ಅಸಹಾಯಕರಾದರು. ಈ ಎರಡೂ ವಿಕೆಟ್ ಉರುಳಿಸಿದ ಆ್ಯಂಡರ್‌ಸನ್ ಪಂದ್ಯವನ್ನು ಆಸೀಸ್ ಕೈಯಿಂದ ಕಿತ್ತುಕೊಂಡರು. ಎರಡನೇ ಪಂದ್ಯ ಜುಲೈ 18ರಂದು ಆರಂಭವಾಗಲಿದೆ.

ಸಂಕ್ಷಿಪ್ತ ಸ್ಕೋರು: ಇಂಗ್ಲೆಂಡ್ 215 ಹಾಗೂ ದ್ವಿತೀಯ ಇನಿಂಗ್ಸ್ 375. ಆಸ್ಟ್ರೇಲಿಯಾ 280 ಹಾಗೂ ಎರಡನೇ ಇನಿಂಗ್ಸ್ 110.5 ಓವರ್‌ಗಳಲ್ಲಿ 296. (ಬ್ರಾಡ್ ಹಡಿನ್ 71, ಜೇಮ್ಸ ಪ್ಯಾಟಿನ್ಸನ್ ಔಟಾಗದೆ 25;  ಆ್ಯಂಡರ್‌ಸನ್ 73ಕ್ಕೆ5,   ಸ್ಟುವರ್ಟ್ ಬ್ರಾಡ್ 54ಕ್ಕೆ2). ಫಲಿತಾಂಶ: ಇಂಗ್ಲೆಂಡ್‌ಗೆ 14 ರನ್ ಗೆಲುವು ಹಾಗೂ ಐದು ಪಂದ್ಯಗಳ ಸರಣಿಯಲ್ಲಿ 1-0ರಲ್ಲಿ ಮುನ್ನಡೆ. ಪಂದ್ಯ ಶ್ರೇಷ್ಠ: ಆ್ಯಂಡರ್‌ಸನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT