ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಚಿಂಚು ಕ್ಲ್ಲೊಲುವ ಸಂಚುಕೋರ ಸಂಧಿವಾತ

Last Updated 11 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ವೃದ್ಧಾಪ್ಯದಲ್ಲಿ ಕಾಣಿಸಿಕೊಳ್ಳುತ್ತಿದ್ದ ಹತ್ತು ಹಲವು ಕಾಯಿಲೆಗಳು ಆಧುನಿಕ ಜೀವನಶೈಲಿ ಹಾಗೂ ಅಧಿಕ ಒತ್ತಡದ ಕಾರಣದಿಂದ ತಾರುಣ್ಯದಲ್ಲೇ ಕಾಣಿಸಿಕೊಳ್ಳುತ್ತಿದ್ದು, ಇದಕ್ಕೆ ಸಂಧಿವಾತವೂ ಹೊರತಲ್ಲ. ದೇಹದ ಭಾಗಗಳನ್ನು ಇಂಚಿಂಚು ಕೊಲ್ಲುವ `ಸಂಧಿವಾತ~ ಇತರೆ ಕಾಯಿಲೆಗಳನ್ನು ಆಹ್ವಾನಿಸುವ ಹೆಬ್ಬಾಗಿಲು ಎನಿಸಿದೆ.

ಪ್ರತಿವರ್ಷ ಅ.12ರಂದು `ವಿಶ್ವ ಸಂಧಿವಾತ ದಿನಾಚರಣೆ~ಯನ್ನು ಆಚರಿಸಲಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ ಏಳು ಕೋಟಿ ಭಾರತೀಯರಲ್ಲಿ ಈ ಸಂಧಿವಾತ ಸಮಸ್ಯೆ ಕಾಣಿಸಿಕೊಂಡಿದೆ.
ಇನ್ನು, ವಿಶ್ವದಲ್ಲಿ ಶೇ 10 ರಷ್ಟು ಮಂದಿ ತೀವ್ರ ಸಂಧಿವಾತದಿಂದ ಬಳಲುತ್ತಿದ್ದಾರೆ. ಮನುಷ್ಯನ ದೇಹದಲ್ಲಿ ಸುಮಾರು 65 ಸಂಧಿಗಳಿವೆ. ಈವರೆಗೆ ನೂರು ಬಗೆಯ ಸಂಧಿವಾತಗಳನ್ನು ಪತ್ತೆ ಹಚ್ಚಲಾಗಿದೆ.

ಅದರಲ್ಲಿ ವೃದ್ಧಾಪ್ಯದಲ್ಲಿ ಕಾಣಿಸಿಕೊಳ್ಳುವ ಒಸ್ಟಿಯೋ ಸಂಧಿವಾತ ಮತ್ತು ಆನುವಂಶಿಕವಾಗಿ ಕಾಡುವ ರ‌್ಹುಮಟಾಯ್ಡ ಸಂಧಿವಾತಗಳು ಪ್ರಮುಖವಾಗಿ ಮನುಷ್ಯನ ದೇಹವನ್ನು ಜರ್ಜರಿತಗೊಳಿಸುತ್ತಿವೆ.
ವೃದ್ಧಾಪ್ಯದಲ್ಲಿ ಬರುವ ಒಸ್ಟಿಯೋ ಸಂಧಿವಾತ ಈಚಿನ ದಿನಗಳಲ್ಲಿ ಮೂವತ್ತರ ಹರೆಯದ ಯುವಜನರನ್ನು ಕಾಡುತ್ತಿರುವುದು ಆತಂಕದ ವಿಚಾರ. ಇದರಿಂದ ತಾರುಣ್ಯದಲ್ಲೇ ಮುಪ್ಪು ಆವರಿಸಿಕೊಂಡಂತಾಗಿ ದೈನಂದಿನ ಬದುಕನ್ನು ಅಸಹನೀಯಗೊಳಿಸುತ್ತಿದೆ.

ಏನಿದು ಒಸ್ಟಿಯೋ ಸಂಧಿವಾತ?: ವಯಸ್ಸಾದಂತೆ ಬೆನ್ನು, ಮಂಡಿ, ಸೊಂಟಗಳಲ್ಲಿರುವ ಮೂಳೆಗಳು ಸವೆಯುತ್ತವೆ. ಸಾಮಾನ್ಯವಾಗಿ 50ರ ನಂತರ ಕಾಣಿಸಿಕೊಳ್ಳುವ ಈ ಸಮಸ್ಯೆ ಈಗ ಮೂವತ್ತಕ್ಕೆ ಕಾಣಿಸಿಕೊಳ್ಳುತ್ತಿದೆ. 
 
ಈ ಬಗ್ಗೆ `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಫೋರ್ಟಿಸ್ ಆಸ್ಪತ್ರೆಯ ಮೂಳೆತಜ್ಞ ಡಾ. ಎಬ್ನಿಜರ್, `ಪ್ರಸಕ್ತ ದಿನಗಳಲ್ಲಿ ರಕ್ತದ ಒತ್ತಡದಂತೆ ಬಹುತೇಕ ಮಂದಿ ಒಸ್ಟಿಯೋ ಸಂಧಿವಾತದಿಂದ ನರಳುತ್ತಿದ್ದಾರೆ~ ಎಂದರು.

 `ಸಾಮಾನ್ಯವಾಗಿ ಮಂಡಿ ಹಾಗೂ ಸೊಂಟದ ಮೂಳೆ ಸವೆದು ಶಬ್ದ ಉಂಟಾಗುತ್ತದೆ. ಇದರಿಂದ ರೋಗಿಗೆ ಓಡಾಡಲು ಸಾಧ್ಯವಾಗುವುದಿಲ್ಲ, ಸ್ವಲ್ಪ ನಡೆದರೂ ವಿಪರೀತ ನೋವು ಕಾಣಿಸಿಕೊಳ್ಳುತ್ತದೆ~ ಎಂದು ತಿಳಿಸಿದರು.

`ವ್ಯಕ್ತಿ ದೈನಂದಿನ ಚಟುವಟಿಕೆಗಳನ್ನು ಸಮರ್ಪಕವಾಗಿ ನಿರ್ವಹಿಸಲು ಸಾಧ್ಯವಾಗದೇ ಒಂದೇ ಕಡೆ ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇದರಿಂದ ಬೊಜ್ಜು, ರಕ್ತದ ಒತ್ತಡ, ಹೃದಯ ಕಾಯಿಲೆ, ಮಧುಮೇಹ ಹೆಚ್ಚುತ್ತದೆ~ ಎಂದು ತಿಳಿಸಿದರು.

ಸಂಧಿವಾತಕ್ಕೆ ಕಾರಣವೇನು?: `ದೇಹದಲ್ಲಿ `ಡಿ~ ವಿಟಮಿನ್ ಕೊರತೆ ಉಂಟಾದಾಗ ಮೂಳೆಗಳಿಗೆ ಸಮರ್ಪಕವಾಗಿ ಕ್ಯಾಲ್ಸಿಯಂ ದೊರೆಯುವುದಿಲ್ಲ. ಇದಲ್ಲದೇ ವ್ಯಾಯಾಮರಹಿತ ಜೀವನ ಹಾಗೂ ಕೆಲಸದ ಒತ್ತಡದಿಂದ ಮೂಳೆಗಳಿಗೆ ಬೇಗ ಮುಪ್ಪು ಕಾಣಿಸಿಕೊಳ್ಳುತ್ತದೆ~

 `ಸೂರ್ಯನ ಬೆಳಕಿಗೆ ಹೆಚ್ಚು ಮೈಯೊಡ್ಡದೇ ಇರುವುದರಿಂದ `ಡಿ~ ವಿಟಮಿನ್ ಕೊರತೆ ಉಂಟಾಗಿ ಈ ಕಾಯಿಲೆ ಬರಬಹುದು. ದೇಹಕ್ಕೆ ಸಮರ್ಪಕವಾಗಿ ಶ್ರಮ ನೀಡದೇ ಹೋದರೆ ಮೂಳೆಗಳಲ್ಲಿರುವ ಕ್ಯಾಲ್ಸಿಯಂನ ಅಂಶ ಒಣಗಿ ಟೊಳ್ಳು ಮೂಳೆಯಾಗಿ ಪರಿಣಮಿಸುವ ಸಾಧ್ಯತೆಯಿದೆ~ ಎಂದು ಮಾಹಿತಿ ನೀಡಿದರು.

ಯಾರಲ್ಲಿ ಹೆಚ್ಚು?: `ಸದಾ ಕಂಪ್ಯೂಟರ್ ಮುಂದೆ ಕೂರುವ ಕಾಲ್ ಸೆಂಟರ್, ಬಿಪಿಓ ಮತ್ತು ಐಟಿ ಉದ್ಯೋಗಿಗಳಲ್ಲಿ ಹೆಚ್ಚಾಗಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಇದಲ್ಲದೇ ಕ್ರೀಡಾಪಟುಗಳು, ಸೈನಿಕರು, ಸಿಕ್ಸ್‌ಪ್ಯಾಕ್‌ಗಾಗಿ ದೇಹ ದಂಡಿಸುವವರು, ಅತಿಯಾದ ಡಯೆಟ್‌ಗೆ ಮೊರೆ ಹೋಗುವವರು, ನೃತ್ಯಾಭ್ಯಾಸ ಮತ್ತು ಸಾಹಸ ಕಲಾ ಕ್ಷೇತ್ರದಲ್ಲಿರುವವರು, ನಿರಂತರವಾಗಿ ವ್ಯಾಯಾಮ ಮಾಡುವ ಜಿಮ್ ಮಾಸ್ಟರ್‌ಗಳಲ್ಲಿ ಈ ಕಾಯಿಲೆ ಹೆಚ್ಚಾಗಿ ಬರುವ ಸಾಧ್ಯತೆಯಿದೆ.~ 

 `ಮಾನಸಿಕ ಒತ್ತಡದಿಂದ ಬಳಲುವವರು ಮತ್ತು ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿಯೂ ಸಂಧಿವಾತ ಸಮಸ್ಯೆ ಅಧಿಕವಾಗಿರುತ್ತದೆ~ ಎಂದರು.

ಗುಣಪಡಿಸಲು ಸಾಧ್ಯವೇ?: `ಶೇ 95ರಷ್ಟು ಸಂಧಿವಾತ ಕಾಯಿಲೆಯನ್ನು ಯಾವುದೇ ರೀತಿಯ ಮೂಳೆ ಕಸಿ ಮಾಡದೇ ಗುಣಪಡಿಸಬಹುದು. ಸಂಪೂರ್ಣ ಮೂಳೆ ಸವೆದಿದ್ದರೆ ಮಾತ್ರ ಮೂಳೆ ಕಸಿ ಮಾಡುವ ಅಗತ್ಯವಿರುತ್ತದೆ. ಆದರೆ ಒಮ್ಮೆ ಕಸಿ ಮಾಡಿಸಿಕೊಂಡವರು ಬಿದ್ದರೆ ಮತ್ತೆ ಮೂಳೆಗಳು ಸಡಿಲಗೊಳ್ಳುವ ಸಾಧ್ಯತೆಯಿದೆ~ 

 `ಪ್ರಕೃತಿದತ್ತವಾದ ಮೂಳೆ ಸುಮಾರು ಎಪ್ಪತ್ತು ವರ್ಷ ಬಾಳಿಕೆ ಬರುತ್ತದೆ. ಆದರೆ ಕೃತಕ ಮೂಳೆಯ ಆಯಸ್ಸು ಕೇವಲ 10 ವರ್ಷ. ಇದಲ್ಲದೇ ಮೂಳೆ ಕಸಿ ಕೂಡ ದುಬಾರಿ ವೆಚ್ಚವಾಗಿದ್ದು, 2 ಲಕ್ಷ ರೂಪಾಯಿಗಿಂತ ಹೆಚ್ಚಿನ ಮೊತ್ತ ಬೇಕಾಗುತ್ತದೆ~ ಎಂದು ತಿಳಿಸಿದರು.

`ಉತ್ತಮ ಜೀವನಶೈಲಿ ಅಳವಡಿಸಿಕೊಳ್ಳಿ~:  ಸತತ ವ್ಯಾಯಾಮ, ಯೋಗಾಭ್ಯಾಸ ಮತ್ತು ನಿಯಮಿತ ಆಹಾರ ಸೇವನೆಯಿಂದ ಸಂಧಿವಾತವನ್ನು ದೂರವಿಡಬಹುದು. ಯೋಗದಿಂದ ದೇಹ ಮತ್ತು ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಇನ್ನೂ ಕ್ಯಾಲ್ಸಿಯಂ ಹೇರಳವಾಗಿರುವ ಸೊಪ್ಪು, ತರಕಾರಿ, ಸೀತಾಫಲ ಹಣ್ಣು, ಹಾಲು, ಮೊಸರು, ರಾಗಿಯ ಅಂಶವಿರುವ ಆಹಾರವನ್ನು ಅಧಿಕ ಪ್ರಮಾಣದಲ್ಲಿ ಸೇವಿಸಬೇಕು.~

`ಯೋಗದಲ್ಲಿ ಸಾಧ್ಯವಾದಷ್ಟು ಪಾದಹಸ್ತಾಸನ, ಅರ್ಧಕಟಿ ಚಕ್ರಸಾನ, ಭುಜಂಗಾಸನ, ಧನುರ್ ಆಸನ, ಶವಾಸನವನ್ನು ಮಾಡುವುದು ಒಳಿತು. ಸಂಧಿವಾತವಿರುವವರಿಗೆ ಪದ್ಮಾಸನ ಮತ್ತು ವಜ್ರಾಸನ ನಿಷಿದ್ಧ~ ಎಂಬುದು ತಜ್ಞರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT