ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಟರ್‌ನೆಟ್ ಒಳಗೊಂದು ಇಣುಕುನೋಟ

Last Updated 14 ಜನವರಿ 2012, 19:30 IST
ಅಕ್ಷರ ಗಾತ್ರ

ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಕನ್ನಡದಲ್ಲಿ ಬರವಣಿಗೆ ಕಬ್ಬಿಣದ ಕಡಲೆಯಾದದ್ದೇ ಹೆಚ್ಚು. ಬಹುತೇಕ ಇಂಗ್ಲಿಷ್ ಭೂಯಿಷ್ಟವಾದ ತಂತ್ರಜ್ಞಾನದ `ಆಡುಮಾತನ್ನು~ ಕನ್ನಡದ್ದಾಗಿಸುವುದು ಎಂದೆಂದಿಗೂ ಸವಾಲು. ಹಾಗೆ ನೋಡಿದರೆ ಅದೊಂದು ಪ್ರಕ್ರಿಯೆ.

ತಂತ್ರಜ್ಞಾನವನ್ನು ತಮ್ಮದಾಗಿಸಿಕೊಂಡು, ಅದನ್ನು ಸರಳವಾಗಿ ಬೇರೆಯವರಿಗೆ ದಾಟಿಸುವ ಉಮೇದು ಇರುವವರಿಗಷ್ಟೇ ಅದು ಸಾಧ್ಯ. ಅಂಥವರು ವಿರಳ. ಲೇಖಕ ಟಿ.ಜಿ.ಶ್ರೀನಿಧಿ ಅವರಲ್ಲಿ ಒಬ್ಬರು. ಅದಕ್ಕೆ `ತಿನ್ನಲಾಗದ ಬಿಸ್ಕತ್ತು ನುಂಗಲಾಗದ ಟ್ಯಾಬ್ಲೆಟ್ಟು~ ಪುಸ್ತಕದ ತಿರುಳೇ ಸಾಕ್ಷಿ.

ಇಂಟರ್‌ನೆಟ್ ಬಳಕೆ ದಿನದಿಂದ ದಿನಕ್ಕೆ ವ್ಯಾಪಕವಾಗುತ್ತಿದೆ. ನಗರದ ಚೌಕಟ್ಟನ್ನು ದಾಟಿ ತಾಲ್ಲೂಕು ಕೇಂದ್ರಗಳಲ್ಲೂ ಇಂಟರ್‌ನೆಟ್ ಬಳಕೆದಾರರ ಸಂಖ್ಯೆ ಗಣನೀಯವಾಗಿ ಏರುತ್ತಿದೆ. ಆದರೆ, ಅದರ ಒಳಸುಳಿಗಳು ಹಾಗೂ ಅದು ನಿರಂತರವಾಗಿ ಒಡ್ಡುವ ಸವಾಲುಗಳ ಅರಿವು ಅನೇಕರಿಗೆ ಇರುವುದಿಲ್ಲ. ಟಿ.ಜಿ. ಶ್ರೀನಿಧಿ ಬರೆದಿರುವ ಪುಸ್ತಕ ಈ ಹಿನ್ನೆಲೆಯಲ್ಲಿ ತುಂಬಾ ಮುಖ್ಯವಾದದ್ದು. ಇಂಟರ್‌ನೆಟ್ ಉಪಯೋಗಿಸುವ ಕನ್ನಡಿಗರೆಲ್ಲಾ ಓದಲೇಬೇಕಾದ ಪುಸ್ತಕ ಎಂಬ ಗುಣವನ್ನು ಅವರು ಇಡೀ ಪುಸ್ತಕಕ್ಕೆ ತುಂಬಿದ್ದಾರೆ.

ಇಂಟರ್‌ನೆಟ್‌ಗೆ ಸಂಬಂಧಿಸಿದ ಬಹುತೇಕ ವಿಷಯಗಳ ಕುರಿತ ಅರಿವನ್ನು ಚಕ್ಕಳ ಮಕ್ಕಳ ಹಾಕಿ ಹೇಳುವ ರೀತಿಯಲ್ಲಿ ಶ್ರೀನಿಧಿ ಬರೆದಿದ್ದಾರೆ. ಬರವಣಿಗೆ ಸರಳವಾಗಿದ್ದೂ ಲವಲವಿಕೆ ಮುಕ್ಕಾಗಿಲ್ಲ. ಇಂಗ್ಲಿಷ್ ಪದಗಳಿಗೆ ಕನ್ನಡದ ಪರ್ಯಾಯ ಪದಗಳನ್ನು ಹುಡುಕುವ ಹಾಗೂ ಜಾಣತನದ ನುಡಿಗಟ್ಟುಗಳನ್ನು ಹುಟ್ಟುಹಾಕುವ ಆಟವನ್ನೂ ಆಡಿದ್ದಾರೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಶ್ರೀನಿಧಿ ಬರೆದಿರುವ ಈ ಪುಸ್ತಕದಲ್ಲಿ ವಿವಿಧ ವಿಷಯಗಳನ್ನೇ ಅಧ್ಯಾಯಗಳಾಗಿ ವಿಂಗಡಿಸಿರುವುದು ಕೂಡ ಅರ್ಥಪೂರ್ಣ.

ಕ್ಲೌಡ್ ಕಂಪ್ಯೂಟಿಂಗ್, ಆಪರೇಟಿಂಗ್ ಸಿಸ್ಟಂ, ಬ್ರೌಸರ್, ಕುಕಿ, ಸರ್ಚ್, ಚಾಟಿಂಗ್‌ನಂಥ ಆನ್‌ಲೈನ್ ಸಂಬಂಧಿ ಮೂಲ ಸಂಗತಿಗಳ ಕುರಿತು ನವಿರಾಗಿ ಬರೆದಿರುವ ಶ್ರೀನಿಧಿ; ಗುಂಪುಗುತ್ತಿಗೆ, ಕ್ಯಾಪ್ಚಾ, ಹ್ಯಾಕಿಂಗ್, ಫಿಶಿಂಗ್, ಸ್ಕೇರ್‌ವೇರ್‌ನಂಥ ಸಂಕೀರ್ಣ ವಿಷಯಗಳನ್ನೂ ಅರ್ಥವಾಗುವ ಹಾಗೆ ದಾಟಿಸಿದ್ದಾರೆ. ಪುಸ್ತಕದಲ್ಲಿ ಬಳಕೆಯಾಗಿರುವ ಇಂಗ್ಲಿಷ್ ಶಬ್ದಗಳ ಕುರಿತು ವಿವರಣೆ ನೀಡುವ ಪದಬಳಕೆ ಎಂಬ ಪ್ರತ್ಯೇಕ ಅಧ್ಯಾಯವೂ ಇದೆ. ಓದುಗರಿಗೆ ಪುಸ್ತಕದಲ್ಲಿರುವ ಮಾಹಿತಿ ತಲಸ್ಪರ್ಶಿಯಾಗಿ ದಕ್ಕಬೇಕು ಎಂಬ ಲೇಖಕರ ಉದ್ದೇಶಕ್ಕೆ ಇದು ಪುಷ್ಟಿ.

ಪಾಂಡಿತ್ಯ ಪ್ರದರ್ಶನವಿಲ್ಲದೆ, ಭಾಷೆಯ ಭಾರವನ್ನು ಹೇರದೆ ಸರಳವಾಗಿ ಸಂಕೀರ್ಣ ವಿಷಯಗಳನ್ನು ಶ್ರೀನಿಧಿ ದಾಟಿಸಿದ್ದಾರೆ. ಅವರಿಂದ ತಂತ್ರಜ್ಞಾನಕ್ಕೆ ಸಂಬಂಧಿಸಿದ ಇನ್ನಷ್ಟು ಗಟ್ಟಿ ಕೃತಿಗಳನ್ನು ನಿರೀಕ್ಷಿಸಬಹುದು. 
 

ತಿನ್ನಲಾಗದ ಬಿಸ್ಕತ್ತು
ನುಂಗಲಾಗದ ಟ್ಯಾಬ್ಲೆಟ್ಟು
ಲೇ: ಟಿ.ಜಿ. ಶ್ರೀನಿಧಿ
ಪು: 120; ಬೆ: ರೂ. 85
ಪ್ರ: ಆಕೃತಿ ಪುಸ್ತಕ, ನಂ.31/1, 12ನೇ ಮುಖ್ಯರಸ್ತೆ, 3ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು- 560 010 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT