ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡಿಯನ್ಸ್ ಬಲಕ್ಕೆ ಸರಿಸಾಟಿಯಿಲ್ಲ...!

Last Updated 23 ಏಪ್ರಿಲ್ 2011, 19:00 IST
ಅಕ್ಷರ ಗಾತ್ರ

ಹೈದರಾಬಾದ್ (ಪಿಟಿಐ): ಸಚಿನ್ ತೆಂಡೂಲ್ಕರ್ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡದ್ದು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಾಲ್ಕನೇ ಅವತರಣಿಕೆಯ ಟ್ವೆಂಟಿ-20 ಟೂರ್ನಿಯಲ್ಲಿ ಯಶಸ್ಸಿನ ಹೆಜ್ಜೆ. ಆಡಿದ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಯಶಸ್ಸು. ಆದ್ದರಿಂದಲೇ ಡೆಕ್ಕನ್ ಚಾರ್ಜರ್ಸ್ ವಿರುದ್ಧವೂ ಅದು ಗೆಲ್ಲುವ ನೆಚ್ಚಿನ ತಂಡ ಎನ್ನುವ ಭಾವನೆ ಮೂಡಿರುವುದು ಸಹಜ.

ಕೊಚ್ಚಿ ಟಸ್ಕರ್ಸ್ ಕೇರಳ ವಿರುದ್ಧ ಮಾತ್ರ ಎಂಟು ವಿಕೆಟ್‌ಗಳ ಅಂತರದಿಂದ ಸೋಲನುಭವಿಸಿದ ಇಂಡಿಯನ್ಸ್ ಮತ್ತೆ ಯಶಸ್ಸಿನ ಹಾದಿ ಹಿಡಿದಿದೆ. ಪುಣೆ ವಾರೀಯರ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಎದುರು ವಿಜಯ ಸಾಧಿಸಿದ ನಂತರ ಮುಂಬೈ ತಂಡದಲ್ಲಿ ಹೊಸ ಚೈತನ್ಯ ಕಾಣಿಸಿದೆ. ಈ ತಂಡದವರ ಮೇಲೆ ಟಸ್ಕರ್ಸ್ ವಿರುದ್ಧದ ಸೋಲು ಅಷ್ಟೇನು ಪರಿಣಾಮ ಮಾಡಿಲ್ಲ.

ಲೀಗ್ ಪಟ್ಟಿಯಲ್ಲಿ ಎಂಟು ಪಾಯಿಂ ಟುಗಳೊಂದಿಗೆ ಉತ್ತಮ ಸ್ಥಿತಿಯನ್ನು ಕಾಯ್ದುಕೊಂಡಿರುವ ಸಚಿನ್ ಪಡೆಯ ಬಲಕ್ಕೆ ಡೆಕ್ಕನ್ ಚಾರ್ಜರ್ಸ್ ಅಂತೂ ಸರಿಸಾಟಿಯಾಗಿ ಕಾಣಿಸುವುದಿಲ್ಲ. ಆದರೂ ಭಾನುವಾರ ಇಲ್ಲಿ ನಡೆಯುವ ಹಣಾಹಣಿಯಲ್ಲಿ ಇಂಡಿಯನ್ಸ್ ತಂಡದವರನ್ನು ಕಾಡಬೇಕು ಎನ್ನುವ ಕಾತರದಲ್ಲಿದ್ದಾರೆ ಕುಮಾರ ಸಂಗಕ್ಕಾರ.
ಆದರೆ ಮುಂಬೈ ಬ್ಯಾಟಿಂಗ್ ಹಾಗೂ ಬೌಲಿಂಗ್ ಬಲವನ್ನು ಕಂಡಾಗ ‘ಸಂಗಾ’ ಆಸೆ ಕೈಗೂಡುವುದು ಅನುಮಾನ ಎಂದೆನಿಸುವುದು ಸಹಜ. ಆದರೂ ಕೊಚ್ಚಿ ತಂಡದಂತೆ ಆಡಿ ಇಂಡಿಯನ್ಸ್‌ಗೆ ಪೆಟ್ಟು ನೀಡಬೇಕು.
 
ಹೀಗೆ ಮಾಡುವುದು ಸುಲಭವಲ್ಲ. ಏಕೆಂದರೆ ಒಂದು ಆಘಾತದಿಂತ ಎಚ್ಚೆತ್ತಿರುವ ಸಚಿನ್ ಬಳಗವು ಮತ್ತೆ ತಪ್ಪು ಹೆಜ್ಜೆ ಇಡುವ ಸಾಧ್ಯತೆಯಂತೂ ಇಲ್ಲ. ಇಂಡಿಯನ್ಸ್ ತನ್ನ ಎದುರಾಳಿಯನ್ನು ಲಘುವಾಗಿ ಪರಿಗಣಿಸುವುದಿಲ್ಲ. ಸವಾಲಿನ ತಂಡವೆಂದೇ ತಿಳಿದುಕೊಂಡು ಹೈದರಾಬಾದ್ ಎದುರು ಹೋರಾಡುವ ಮುಂಬೈ ಸತ್ವಯುತ ಆಟವಾಡುವ ಸಾಮರ್ಥ್ಯವನ್ನಂತೂ ಹೊಂದಿದೆ.

2009ರಲ್ಲಿ ಚಾಂಪಿಯನ್ ಆಗಿ ಮೆರೆದಿದ್ದ ಚಾರ್ಜರ್ಸ್ ಈ ಬಾರಿ ಉತ್ತಮ ಪ್ರದರ್ಶನವನ್ನು ಕಾಯ್ದುಕೊಂಡು ಹೋಗಲು ಸಾಧ್ಯವಾಗಿಲ್ಲ. ಆಡಿದ ಐದು ಪಂದ್ಯಗಳಲ್ಲಿ ಜಯ ಸಿಕ್ಕಿದ್ದು ಎರಡರಲ್ಲಿ ಮಾತ್ರ. ಆದ್ದರಿಂದ ಪಾಯಿಂಟುಗಳ ಪಟ್ಟಿಯಲ್ಲಿ ಅದು ಕೆಳಗಿದೆ. ಸ್ಥಿತಿಯನ್ನು ಉತ್ತಮಪಡಿಸಿಕೊಳ್ಳುವ ನಿಟ್ಟಿನಲ್ಲಿ ದಿಟ್ಟ ಆಟವಾಡಿ ಯಶಸ್ಸಿನ ಓಟ ಸಾಧ್ಯವಾಗುವಂತೆ ಮಾಡಬೇಕು. ದೆಹಲಿ ಡೇರ್‌ಡೆವಿಲ್ಸ್ ಎದುರು ಗೆದ್ದು ಪುಟಿದೇಳುವ ವಿಶ್ವಾಸ ತೋರಿರುವ ಡೆಕ್ಕನ್ ಚಾರ್ಜರ್ಸ್ ತಂಡದವರು ಮುಂಬೈ ವಿರುದ್ಧವೂ ಯಶಸ್ಸು ಪಡೆದಲ್ಲಿ ಹೊಸ ಹುಮ್ಮಸ್ಸು ಕಾಣಿಸಲು ಸಾಧ್ಯ.

ದೆಹಲಿ ಎದುರು 16 ರನ್‌ಗಳ ಅಂತರದ ಜಯವನ್ನು ದೊಡ್ಡದೆಂದು ಭಾವಿಸಲು ಆಗದು. ಏಕೆಂದರೆ ಡೇರ್‌ಡೆವಿಲ್ಸ್ ಸತ್ವ ಕಳೆದುಕೊಂಡಿರುವ ತಂಡದಂತಾಗಿದೆ. ನಾಲ್ಕನೇ ಅವತರಣಿಕೆಯಲ್ಲಿನ ಅದರ ಪ್ರದರ್ಶನ ತೀರ ನೀರಸ. ಇಂಥ ಸ್ಥಿತಿಯಲ್ಲಿ ದೆಹಲಿ ವಿರುದ್ಧ ಗೆದ್ದು ಡೆಕ್ಕನ್ ವಿಶ್ವಾಸದಿಂದ ಬೀಗುತ್ತಿದೆ ಎಂದು ಭಾವಿಸುವುದಕ್ಕೆ ಅವಕಾಶವಿಲ್ಲ. ಇಂಡಿಯನ್ಸ್ ಎದುರು ಭಾನುವಾರ ಜಯಿಸಿದಲ್ಲಿ; ಖಂಡಿತವಾಗಿಯೂ ಅದೊಂದು ವಿಶ್ವಾಸದ ಕಿರಣವಾಗುವಂಥ ಗೆಲುವು. ಸೋಲನುಭವಿಸಿದಲ್ಲಿ ಒತ್ತಡ ಇನ್ನಷ್ಟು ಹೆಚ್ಚುತ್ತದೆ.

ಚಾರ್ಜ್‌ರ್ಸ್‌ಗೆ ಹಲವಾರು ವಿಭಾಗದಲ್ಲಿ ಸಮಸ್ಯೆ ಕಾಡುತ್ತಿದೆ. ನಾಯಕ ಸಂಗಕ್ಕಾರ ಹಾಗೂ ಸ್ವಲ್ಪ ಮಟ್ಟಿಗೆ ಶಿಖರ್ ಧವನ್ ಅವರು ತಂಡಕ್ಕೆ ಬಲ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಉಳಿದಂತೆ ಈ ತಂಡದ ಪ್ರದರ್ಶನವು ಮೆಚ್ಚುವಂಥದೇನು ಆಗಿಲ್ಲ. ತಂಡದಲ್ಲಿರುವ ಯುವ ಬ್ಯಾಟ್ಸ್‌ಮನ್‌ಗಳು ಹಾಗೂ ಬೌಲರ್‌ಗಳು ಮಿಂಚುತ್ತಿಲ್ಲ.

ಆಮದು ಆಟಗಾರರು ಹಾಗೂ ಸ್ವದೇಶಿ ಕ್ರಿಕೆಟಿಗರು ತಂಡದ ಬಲವನ್ನು ಹೆಚ್ಚಿಸಲು ತಕ್ಕ ಪ್ರಯತ್ನ ಮಾಡಿದಲ್ಲಿ ಹೈದರಾಬಾದ್ ತಂಡವೂ ಒಂದರ ಹಿಂದೊಂದು ಗೆಲುವಿನ ಮುತ್ತು ಪೋಣಿಸಿ, ಯಶಸ್ಸಿನ ಮಾಲೆ ಕಟ್ಟಬಹುದು. ಆದರೆ ಈ ನಿರೀಕ್ಷೆ ಮುಂಬೈ ಎದುರು ಹುಸಿಯಾಗುತ್ತದೆನ್ನುವ ಆತಂಕವಂತೂ ಇದೆ.

ಇಶಾಂತ್ ಶರ್ಮ, ಡೇನಿಯಲ್ ಕ್ರಿಸ್ಟಿಯನ್ ಹಾಗೂ ಅಮಿತ್ ಮಿಶ್ರಾ ಅವರು ಭಾನುವಾರದ ಪಂದ್ಯದಲ್ಲಿಯೂ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುವುದು ಖಚಿತ. ಆದರೆ ಅವರು ತಮ್ಮ ನಾಯಕನ ಆಶಯಕ್ಕೆ ತಕ್ಕ ಆಟವಾಡಬೇಕು. ಆಗಲೇ ಸಚಿನ್ ಮುಂದಾಳತ್ವದ ತಂಡವನ್ನು ಕಾಡಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಮತ್ತೊಂದು ಸೋಲಿನ ಆಘಾತ ಎದುರಿಸಬೇಕಾಗುತ್ತದೆ.

ಇಂಡಿಯನ್ಸ್ ತಂಡದಲ್ಲಿ ಕೊರತೆಗಳು ಕಾಣಿಸಿರುವುದು ಅಲ್ಪ. ಅನುಭವಿಗಳು ಹಾಗೂ ಯುವ ಆಟಗಾರರು ವಿಶ್ವಾಸದಿಂದ ಆಡುತ್ತಿದ್ದಾರೆ. ನಾಯಕ ಸಚಿನ್, ಅಂಬಟಿ ರಾಯುಡು, ರೋಹಿತ್ ಶರ್ಮ ಹಾಗೂ ಆ್ಯಂಡ್ರ್ಯೂ ಸೈಮಂಡ್ಸ್ ಆಟವು ಮುಂಬೈ ಗೆಲುವಿನ ಹಾದಿಯಲ್ಲಿ ದಿಟ್ಟ ಹೆಜ್ಜೆ ಇಡುವಂಥ ತಾಕತ್ತು ನೀಡಿದೆ. ಚಾರ್ಜ್‌ರ್ಸ್ ಎದುರು ಕೂಡ ಮುಂಬೈ ಇಂಡಿಯನ್ಸ್ ಕೊರತೆಗಳಿಂದ ಮುಕ್ತವಾಗಿ ಹೋರಾಡುತ್ತದೆಂದು ನಿರೀಕ್ಷಿಸಲಾಗಿದೆ.

ತಂಡಗಳು

ಮುಂಬೈ ಇಂಡಿಯನ್ಸ್

ಸಚಿನ್ ತೆಂಡೂಲ್ಕರ್ (ನಾಯಕ), ಹರಭಜನ್ ಸಿಂಗ್, ರೋಹಿತ್ ಶರ್ಮ, ಮುನಾಫ್ ಪಟೇಲ್, ಕಿರೋನ್ ಪೊಲಾರ್ಡ್, ಲಸಿತ್ ಮಾಲಿಂಗ, ಆ್ಯಂಡ್ರ್ಯೂ ಸೈಮಂಡ್ಸ್, ಡೇವಿ ಜೇಕಬ್ಸ್, ಜೇಮ್ಸ್ ಫ್ರಾಂಕ್ಲಿನ್, ಅಬು ನೆಚಿಮ್ ಅಹ್ಮದ್, ಆದಿತ್ಯ ತಾರೆ, ಅಲಿ ಮುರ್ತಜಾ, ಅಂಬಟಿ ರಾಯುಡು, ಧವಳ್ ಕುಲಕರ್ಣಿ, ಪವನ್ ಸುಯಾಲ್, ಆರ್.ಸತೀಶ್, ಸರುಲ್ ಕನ್ವರ್, ಸೂರ್ಯಕುಮಾರ್ ಯಾದವ್, ಟಿ.ಸುಮನ್ ಮತ್ತು ಯದುವೇಂದರ್ ಸಿಂಗ್ ಚಾಚೈ.

ಡೆಕ್ಕನ್ ಚಾರ್ಜರ್ಸ್
ಕುಮಾರ ಸಂಗಕ್ಕಾರ (ನಾಯಕ), ಆಶೀಶ್ ರೆಡ್ಡಿ, ಆನಂದ್ ರಾಜನ್, ಅಂಕಿತ್ ಶರ್ಮ, ಆಕಾಶ್ ಭಂಡಾರಿ, ಭರತ್ ಚಿಪ್ಲಿ, ಡೇನಿಯಲ್ ಕ್ರಿಸ್ಟಿಯನ್, ಕೇದಾರ್ ದೇವಧರ್, ಶಿಖರ್ ಧವನ್, ಜೆನ್ ಪಾಲ್ ಡುಮಿನಿ, ಮನ್‌ಪ್ರೀತ್ ಗೋಣಿ, ಹರ್ಮಿತ್ ಸಿಂಗ್, ಇಶಾಂಕ್ ಜಗ್ಗಿ, ಮೈಕಲ್ ಲುಂಬ್, ಕ್ರಿಸ್ ಲಿನ್, ಇಶಾನ್ ಮಲ್ಹೋತ್ರಾ, ಅಮಿತ್ ಮಿಶ್ರಾ, ಪ್ರಗ್ಯಾನ್ ಓಜಾ, ರವಿ ತೇಜ, ಜೈದೇವ್ ಷಾ, ಇಶಾಂತ್ ಶರ್ಮ, ಸನ್ನಿ ಸೋಹಲ್, ಡೆಲ್ ಸ್ಟೇನ್, ರಸ್ಟಿ ಥೆರೋನ್, ಕೆಮರೂನ್ ವೈಟ್ ಮತ್ತು ಅರ್ಜುನ್ ಯಾದವ್.
 

ಪಂದ್ಯ ಆರಂಭ: ಸಂಜೆ 4.00 ಗಂಟೆಗೆ. ನೇರ ಪ್ರಸಾರ: ಸೆಟ್ ಮ್ಯಾಕ್ಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT