ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ 9ದಿನ ಹುಳಿಮಾವು ಜಾತ್ರೆ

Last Updated 9 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ಬನ್ನೇರುಘಟ್ಟ ರಸ್ತೆ ಹುಳಿಮಾವಿನ ಸ್ಫೂರ್ತಿ ವಿನಾಯಕ ದೇವಸ್ಥಾನ ಹಾಗೂ ಸತ್ಯನಾರಾಯಣ ಸ್ವಾಮಿ ಜೋಡಿ ದೇವಾಲಯದಲ್ಲಿ ಗುರುವಾರದಿಂದ ಮಾರ್ಚ್ 18ರ ವರೆಗೆ ಜಾತ್ರೆಯ ಸಡಗರ. ದೇವಸ್ಥಾನದ ಐದನೇ ವರ್ಷದ ಬ್ರಹ್ಮ ರಥೋತ್ಸವ. ಈ ಹಿನ್ನೆಲೆಯಲ್ಲಿ ಅಭಿಷೇಕ, ಹೋಮ ಹವನ, ಪಲ್ಲಕ್ಕಿ ಉತ್ಸವ, ರಥೋತ್ಸವ, ಹಾಸ್ಯೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮಗಳ ಸುಗ್ಗಿ..!

ಗುರುವಾರ ಬೆಳಿಗ್ಗೆ ಏಳು ಗಂಟೆಗೆ ಅಂಕುರಾರ್ಪಣ ಸೇವೆಯೊಂದಿಗೆ ಜಾತ್ರಾ ಮಹೋತ್ಸವಕ್ಕೆ ಚಾಲನೆ. ನಂತರ ಗರುಡ ಧ್ವಜಾರೋಹಣ, ದೇವತಾಹ್ವಾನ ಸೇವೆ. ಅಲ್ಲದೆ ನಿತ್ಯ ವಿವಿಧ ಸೇವೆಗಳು ನಡೆಯಲಿವೆ. ಮಾ.16 ರಂದು ಬ್ರಹ್ಮರಥೋತ್ಸವ.ಬೆಳಿಗ್ಗೆ ಮೂಲ ದೇವರಿಗೆ ಪಂಚಾಮೃತಾಭಿಷೇಕ, ಪೂಜೆ. ನಂತರ ಕೃಷ್ಣ ಗಂಧೋತ್ಸವ ಸೇವೆ. ಈ ಸಂದರ್ಭದಲ್ಲಿ ಹೆಲಿಕಾಪ್ಟರ್‌ನಿಂದ ಪುಷ್ಪವೃಷ್ಟಿ, ತೇರಿನ ಮುಂದೆ ಗಜರಾಜನ ಮೇಲೆ ವಿನಾಯಕ ಉತ್ಸವ, ಉಯ್ಯಾಲೆ ಉತ್ಸವ, ಡೋಲೋತ್ಸವವೂ ನಡೆಯಲಿದೆ.

ಮಧ್ಯಾಹ್ನ ಮಹಾಮಂಗಳಾರತಿ ಬಳಿಕ ಅನ್ನಸಂತರ್ಪಣೆ ಇದೆ. ಸಂಜೆ 7 ಗಂಟೆಗೆ ಹಾಸ್ಯ ಸಾಹಿತಿ ಪ್ರೊ.ಎಂ. ಕೃಷ್ಣೇಗೌಡ ಅವರಿಂದ ನಗೆಹಬ್ಬ. ಇವರೊಂದಿಗೆ ರಿಚರ್ಡ್ ಲೂಯಿಸ್, ಮೈಸೂರು ಆನಂದ್ ಅವರೂ ನಗೆಹಬ್ಬದಲ್ಲಿ ಭಾಗವಹಿಸುವರು. ರಾತ್ರಿ ಬಾಣ ಬಿರುಸುಗಳ ಪ್ರದರ್ಶನ, ವಾದ್ಯಮೇಳ, ನೃತ್ಯ, ಪಲ್ಲಕ್ಕಿ ಉತ್ಸವ ನಡೆಯುವುದು.

ಕುತೂಹಲಕರ ಹಿನ್ನೆಲೆ: ಪ್ರತಿಯೊಂದು ದೇವಸ್ಥಾನಕ್ಕೂ ಅದರದ್ದೇ ಆದ ಹಿನ್ನೆಲೆಯಿದೆ. ಈ ದೇವಸ್ಥಾನದ ರೂವಾರಿ ಎಚ್.ಎಂ. ವೇಣುಗೋಪಾಲ್. ಅದು 2004ರ ದಸರಾ ಸಮಯದಲ್ಲಿ ದೇವರ ಪ್ರಾರ್ಥನೆಯಲ್ಲಿ ತೊಡಗಿದ್ದಾಗ ಇಲ್ಲಿ ದೇವಸ್ಥಾನ ನಿರ್ಮಾಣದ ಪ್ರೇರಣೆಯಾಯಿತು.

ಇದಕ್ಕೆ ಅನುಗುಣವಾಗಿ ಅವರು ಕೇವಲ 108 ದಿನಗಳಲ್ಲಿ ದೇವಸ್ಥಾನ ಪ್ರತಿಷ್ಠಾಪನೆ ಮಾಡಿಸಿದರು. ಹಾಗೆ 2005ರಲ್ಲಿ ಇಲ್ಲಿ ಸತ್ಯನಾರಾಯಣ ಸ್ವಾಮಿ ಪ್ರತಿಷ್ಠಾಪನೆಯಾಯಿತು. ಒಟ್ಟು 60 ಶಿಲ್ಪಿಗಳು ಹಗಲು ರಾತ್ರಿಯೆನ್ನದೆ ಅವಿರತ ಶ್ರಮದಿಂದ ದೇವಸ್ಥಾನ ನಿರ್ಮಾಣಕ್ಕೆ ಶ್ರಮಿಸಿದ್ದು, ತಂಜಾವೂರಿನ ಪೆರಿಸ್ವಾಮಿ ಎಂಬ 24ರ ಯುವಕ ಇಡೀ ದೇವಾಲಯ ಕಟ್ಟಲು ನೀಡಿದ ಕೊಡುಗೆ ಮರೆಯುವಂಥದ್ದೇ ಅಲ್ಲ ಎನ್ನುತ್ತಾರೆ.

ಇಲ್ಲಿ ಗಣೇಶನ ವಿಗ್ರಹ ಪ್ರತಿಷ್ಠಾಪನೆಯಾದದ್ದು 1990ರಲ್ಲಿ. ಆಗ ಸಣ್ಣ ಗುಡಿಯಂತಿದ್ದ ಈ ದೇವಸ್ಥಾನ ಈಗ ವಿಶಾಲವಾಗಿದ್ದು, ಆಧುನಿಕತೆಯ ಸ್ಪರ್ಶವೂ ಸೇರಿದೆ. ದೇಗುಲದ ಪ್ರಾಂಗಣ, ಗೋಪುರ, ಏಕಶಿಲೆಯಲ್ಲಿ ಕೆತ್ತಿದ ಕೃಷ್ಣವರ್ಣದ ದೇವರ ವಿಗ್ರಹ, ಗರ್ಭಗುಡಿ ಎಲ್ಲವೂ ಭಕ್ತರನ್ನು ಪುನೀತರನ್ನಾಗಿಸುತ್ತದೆ.

ಉತ್ಸವ: ಬ್ರಹ್ಮರಥೋತ್ಸವದ ದಿನ ಸುಮಾರು 25 ಸಾವಿರಕ್ಕೂ ಅಧಿಕ ಭಕ್ತಾದಿಗಳು ಭಾಗವಹಿಸುವರು. ಮಧ್ಯಾಹ್ನ ಪ್ರಸಾದ ವಿತರಣೆ ಅನ್ನದಾನದಲ್ಲಿ ಸುಮಾರು 10 ಸಾವಿರ ಮಂದಿ ಪಾಲ್ಗೊಳ್ಳುತ್ತಾರೆ. ರಥೋತ್ಸವದಂದು ಎಳೆಯುವ ಬೃಹತ್ ಗಾತ್ರದ ರಥವನ್ನು ಸುಮಾರು 35 ಲಕ್ಷ ರೂಪಾಯಿ ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ರಥದಲ್ಲಿ ಅದ್ಭುತ ಕೆತ್ತನೆಗಳಿವೆ.

ಮಹಾಭಾರತದ ಎಲ್ಲ ಅಂಶಗಳು ಹಾಗೂ ದಶಾವತಾರವನ್ನು ಯಥಾವತ್ ಇಲ್ಲಿ ಪಡಿಮೂಡಿಸಲಾಗಿದೆ. ಇಲ್ಲಿ ಪ್ರತಿ ಪೌರ್ಣಮಿಗೆ ಸತ್ಯನಾರಾಯಣ ಪೂಜೆ, ಉತ್ಸವ, ಸಂಕಷ್ಟಿ ದಿನ ವಿಶೇಷ ಪೂಜೆ, ಪ್ರತೀ ಶನಿವಾರ ವಿಶೇಷ ಪೂಜೆ, ವೈಕುಂಠ ಏಕಾದಶಿ ದಿನ ವಿಶೇಷ ಪೂಜೆ ನಡೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT