ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ ಕಾಮಗಾರಿ ಆರಂಭ: ಭರವಸೆ

ಸುಬ್ರಹ್ಮಣ್ಯ -ಮಂಜೇಶ್ವರ, ಸುಬ್ರಹ್ಮಣ್ಯ-ಉಡುಪಿ ರಸ್ತೆ
Last Updated 6 ಡಿಸೆಂಬರ್ 2012, 6:54 IST
ಅಕ್ಷರ ಗಾತ್ರ

ಪುತ್ತೂರು: ಸುಬ್ರಹ್ಮಣ್ಯ- ಮಂಜೇಶ್ವರ ಮತ್ತು ಸುಬ್ರಹ್ಮಣ್ಯ -ಉಡುಪಿ ಸಂಪರ್ಕ ರಸ್ತೆ ಪೂರ್ಣ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಈ ರಸ್ತೆಗಳ ದುರಸ್ತಿಗಾಗಿ ಸರ್ಕಾರ ತಾಂತ್ರಿಕ ಮಂಜೂರಾತಿ ನೀಡಿದೆ. ಆರ್ಥಿಕ ಅನುದಾನ ಬಿಡುಗಡೆಯಾಗಬೇಕಾಗಿದ್ದು, ಕಾಮಗಾರಿಗೆ ಏಕ ಗುತ್ತಿಗೆದಾರರು ಇರುವ ಕಾರಣ ಗುರುವಾರದಿಂದಲೇ ಕಾಮಗಾರಿ ಆರಂಭಿಸಲಾಗುವುದು ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಭರವಸೆ ನೀಡಿದರು.

ಬುಧವಾರ ತಾ.ಪಂ. ಸಭಾಂಗಣದಲ್ಲಿ ನಡೆದ ಪುತ್ತೂರು ತಾಲ್ಲೂಕು ಮಾಸಿಕ ಕೆಡಿಪಿ ಸಭೆಯಲ್ಲಿ ಈ ಭರವಸೆ ನೀಡಲಾಯಿತು. ತಾ.ಪಂ. ಅಧ್ಯಕ್ಷೆ ಶಶಿಪ್ರಭಾ  ಸಂಪ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ ವಿವಿಧ ಇಲಾಖೆಗಳ ಅಧಿಕಾರಿಗಳು ಹಿಂದಿನ ಸಭೆಯಲ್ಲಿ ನಿರ್ಣಯಿಸಿದ ವಿಷಯಗಳ ಪಾಲನಾ ವರದಿಯನ್ನು ಮಂಡಿಸಿದರು.

ಬಸ್ ಪಾಸ್ ಹೊಂದಿರುವ ವಿದ್ಯಾರ್ಥಿಗಳಿಗೆ ಬಸ್ ನಿಲ್ಲಿಸದೇ ಸತಾಯಿಸುತ್ತಿರುವ ಚಾಲಕರ ವಿರುದ್ಧ ಕೈಗೊಂಡಿರುವ ಕ್ರಮದ ಬಗ್ಗೆ ಕೆಎಸ್‌ಆರ್‌ಟಿಸಿ ಅಧಿಕಾರಿ ಬಳಿ ಅಧ್ಯಕ್ಷೆ ಮಾಹಿತಿ ಕೇಳಿದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು ಈ ಬಗ್ಗೆ ಎಲ್ಲಾ ಚಾಲಕರಿಗೆ ಮತ್ತು ನಿರ್ವಾಹಕರಿಗೆ ಮಾಹಿತಿ ನೀಡಲಾಗಿದೆ. ಮುಂದೆ ಸಮಸ್ಯೆಯಾದಲ್ಲಿ ಸಾರ್ವಜನಿಕರು ಬಸ್ ನಂಬರ್, ದಿನಾಂಕ ಒದಗಿಸಿದರೆ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಆರ್ಥಿಕವಾಗಿ ಸಬಲರಾಗಿದ್ದವರಿಗೆ ಮಾತ್ರ ತೋಟಗಾರಿಕಾ ಇಲಾಖೆಯ ಯೋಜನೆಯ ಲಾಭ ಸಿಗುತ್ತದೆ ಎಂಬ ದೂರುಗಳು ಕೇಳಿ ಬರುತ್ತಿವೆ. ಇಂತಹ ತಪ್ಪುಗಳು ನಡೆಯಬಾರದು ಎಂದ ಬಾಬು ಮಾದೋಡಿ ತೋಟಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ತಿಳಿಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿ ತಪ್ಪು ನಡೆಯದಂತೆ ಎಚ್ಚರ ವಹಿಸುತ್ತಿದ್ದೇನೆ. ಯೋಜನೆಗೆ ಸಾಕಷ್ಟು ಅರ್ಜಿಗಳು ಬರುತ್ತಿದ್ದು ಅವುಗಳನ್ನು ಆದ್ಯತೆ ಆಧಾರದಲ್ಲಿ  ವಿತರಿಸಲಾಗುತ್ತಿದೆ ಎಂದು ಹೇಳಿದರು.

ಶಿಕ್ಷಕರ ಹುದ್ದೆ: ಕ್ಷೇತ್ರ ಶಿಕ್ಷಣಾಧಿಕಾರಿ ಶೇಷಶಯನ  ಅವರು ತಾಲ್ಲೂಕಿನಲ್ಲಿ ಮುಂದಿನ ಮಾರ್ಚ್ ಅಂತ್ಯದವರೆಗೆ 25 ಅತಿಥಿ ಶಿಕ್ಷಕರನ್ನು ನೇಮಕಗೊಳಿಸಲು ಆದೇಶವಿದೆ. ತಾಲ್ಲೂಕಿನಲ್ಲಿ ಒಟ್ಟು 151 ಶಿಕ್ಷಕರ ಹುದ್ದೆ ಖಾಲಿಯಾಗಿದ್ದು,  ಅತಿಥಿ ಶಿಕ್ಷಕರನ್ನು ಗ್ರಾಮೀಣ ಪ್ರದೇಶದ ಶಾಲೆಗಳಿಗೆ ನೇಮಕಗೊಳಿಸಲಾಗುವುದು ಎಂದು ತಿಳಿಸಿದರು.

ಕಂದಾಯ ಇಲಾಖೆಯ ಕುರಿತು ಮಾಹಿತಿ ನೀಡಿದ ತಹಾಶಿಲ್ದಾರ್ ಕುಳ್ಳೇಗೌಡ ಅವರು ಈಗಾಗಲೇ 11,500 ಪಡಿತರ ಚೀಟಿ ವಿತರಿಸಲಾಗಿದ್ದು, ಪ್ರಸ್ತುತ 1676 ಬಿಪಿಎಲ್ ಮತ್ತು 2291 ಬಿಪಿಎಲ್ ಸೇರಿದಂತೆ ಒಟ್ಟು 3967 ಪಡಿತರ ಚೀಟಿ ಮುದ್ರಿಸಲಾಗಿದೆ. 1866 ಪಡಿತರ ಚೀಟಿಯನ್ನು ಅನರ್ಹಗೊಳಿಸಲಾಗಿದೆ ಎಂದರು.  ಎಪಿಎಲ್ ಪಡಿತರ ಚೀಟಿಯನ್ನು ಬಿಪಿಎಲ್‌ಗೆ ಬದಲಾವಣೆಗೊಳಿಸವ ಬಗ್ಗೆ ಅಧ್ಯಕ್ಷೆ ಶಶಿಪ್ರಭಾ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ತಹಾಶಿಲ್ದಾರರು ಬದಲಾವಣೆ ಈಗ ಸಾಧ್ಯವಿಲ್ಲ. ಈ ಬಗ್ಗೆ ಸರ್ಕಾರಿ ಆದೇಶ ಬಂದಲ್ಲಿ  ಬದಲಾವಣೆ ಮಾಡಬಹುದು ಎಂದು ಉತ್ತರಿಸಿದರು.

ಮೂಡಬಿದರೆಯಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಆಗಿರುವ ಅವ್ಯವಸ್ಥೆ ಬಗ್ಗೆ ದೂರು ಬಂದಿರುವ ಹಿನ್ನೆಲೆಯಕ್ಕು ಶಶಿಪ್ರಭಾ ಅವರು ತಾಲ್ಲೂಕು ಕ್ರೀಡಾಧಿಕಾರಿಯವರಲ್ಲಿ ಮಾಹಿತಿ ಕೇಳಿದರು. ಇದಕ್ಕೆ ಉತ್ತರಿಸಿದ ಅಧಿಕಾರಿ ಬಿ.ಕೆ. ಮಾಧವ ಅವರು ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಕ್ರೀಡೋತ್ಸವ ನಡೆಯಬೇಕಿತ್ತು. ಆದರೆ ಸಿಂಥೆಟಿಕ್ ಟ್ರ್ಯಾಕ್ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮೂಡಬಿದಿರೆಗೆ ಸ್ಥಳಾಂತರಿಸಲಾಗಿತ್ತು. ಅಲ್ಲಿ ಆದ ಸಮಸ್ಯೆ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ತರಲಾಗಿದೆ. ತಾಲ್ಲೂಕು ಮಟ್ಟದಲ್ಲಿ ನಡೆದ ಕ್ರೀಡಾಕೂಟದಷ್ಟು ಉತ್ತಮ ರೀತಿ ಅಲ್ಲಿ ನಡೆದಿಲ್ಲ. ಕ್ರೀಡಾಪಟುಗಳಿಗೆ ಅಸಮಾಧಾನವಾಗಿದೆ ಎಂದು ಒಪ್ಪಿಕೊಂಡರು.

ಕಾರ್ಮಿಕ ಇಲಾಖೆಯ ಕಾರ್ಯಗಳ ಕುರಿತು ಮಾಹಿತಿ ನೀಡಿದ ಅಧಿಕಾರಿ ಕೃಷ್ಣಮ್ಮ ಮಾತನಾಡಿ, ಕಟ್ಟಡ ಕಾರ್ಮಿಕರ ನೋಂದಣಿ ಕಾರ್ಯ ನಡೆಯುತ್ತಿದ್ದು ಈಗಾಗಲೇ 350 ಕಾರ್ಮಿಕರನ್ನು ನೋಂದಣಿ ಮಾಡಲಾಗಿದೆ. ಗ್ರಾಮಸಭೆಗಳಲ್ಲಿ ಕಟ್ಟಡ ಕಾರ್ಮಿಕರ ನೋಂದಣಿ ಬಗ್ಗೆ ಮಾಹಿತಿ ನೀಡಲಾಗುತ್ತಿದೆ ಎಂದು ತಿಳಿಸಿದರು. ಸಾಮಾಜಿಕ ನ್ಯಾಯ ಸಮಿತಿಯ ದಯಾನಂದ ಆಲಡ್ಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT