ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ ಜಿಲ್ಲೆಯ ಮಕ್ಕಳಿಗೂ `ಕ್ಷೀರಭಾಗ್ಯ'

ಜಿಲ್ಲೆಗೆ 28 ಟನ್ ಹಾಲಿನ ಪುಡಿ ಪೂರೈಕೆ
Last Updated 1 ಆಗಸ್ಟ್ 2013, 10:57 IST
ಅಕ್ಷರ ಗಾತ್ರ

ದಾವಣಗೆರೆ: ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಮಕ್ಕಳಿಗೆ ಹಾಲು ವಿತರಣೆ ಮಾಡುವ `ಕ್ಷೀರಭಾಗ್ಯ' ಯೋಜನೆಗೆ ಜಿಲ್ಲೆಯಲ್ಲಿ ಆ.1ರಿಂದ ಚಾಲನೆ ದೊರೆಯಲಿದೆ.

ಯೋಜನೆಯ ವಿಧ್ಯುಕ್ತ ಉದ್ಘಾಟನೆ ಕಾರ್ಯಕ್ರಮವನ್ನು ಗುರುವಾರ ಬೆಳಿಗ್ಗೆ 10ಕ್ಕೆ ಶಾಮನೂರು ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಜಿಲ್ಲಾಧಿಕಾರಿ ಎಸ್.ಎಸ್.ಪಟ್ಟಣಶೆಟ್ಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಪ್ರಕಾಶ್, ಜಿಲ್ಲಾ ಪಂಚಾಯ್ತಿ ಸಿಇಒ ಎ.ಬಿ.ಹೇಮಚಂದ್ರ ಮೊದಲಾದ ಅಧಿಕಾರಿಗಳು ಪಾಲ್ಗೊಳ್ಳುವರು. ವಿಧಾನ ಪರಿಷತ್ ಚುನಾವಣೆಯ ನೀತಿಸಂಹಿತೆ ಜಾರಿಯಲ್ಲಿರುವುದರಿಂದ ಜಿಲ್ಲಾ ಉಸ್ತುವಾರಿ ಸಚಿವ ಶಾಮನೂರು ಶಿವಶಂಕರಪ್ಪ ಮೊದಲುಗೊಂಡ ಇತರ ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.

`ಸರ್ಕಾರದ ಆದೇಶದ ಪ್ರಕಾರ, ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ 1ರಿಂದ 10ನೇ ತರಗತಿಯ ಮಕ್ಕಳಿಗೆ ವಾರಕ್ಕೆ ಮೂರು ದಿನ ಹಾಲು ನೀಡಲಾಗುತ್ತಿದೆ. ಸೋಮವಾರ, ಬುಧವಾರ ಹಾಗೂ ಶುಕ್ರವಾರ (ಉರ್ದು ಶಾಲೆಗಳಲ್ಲಿ ಶನಿವಾರ) ಹಾಲನ್ನು ವಿತರಣೆ ಮಾಡಲಾಗುವುದು. ಪ್ರತಿ ಮಗುವಿಗೆ 18 ಗ್ರಾಂ. ಹಾಲಿನ ಪುಡಿ, 10 ಗ್ರಾಂ ಸಕ್ಕರೆ ನೀಡಲಾಗುವುದು. ಯೋಜನೆಯಿಂದ ಜಿಲ್ಲೆಯ 2,08,820 ಮಕ್ಕಳಿಗೆ ಅನುಕೂಲ ಆಗಲಿದೆ. ಆರೋಗ್ಯ ವೃದ್ಧಿಸುವ ಉದ್ದೇಶದಿಂದ ಕೆನೆಭರಿತ ಹಾಲು ನೀಡುವ ಯೋಜನೆ ಜಾರಿಗೊಳಿಸಲಾಗಿದೆ' ಎಂದು ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ಬಸವಲಿಂಗಪ್ಪ `ಪ್ರಜಾವಾಣಿ'ಗೆ ಮಾಹಿತಿ ನೀಡಿದರು.

`ಯೋಜನೆಗೆ ಸರ್ಕಾರ `ಕ್ಷೀರಭಾಗ್ಯ' ಎಂದು ಹೆಸರಿಟ್ಟಿದೆ. ಅನುಷ್ಠಾನಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಶಾಲೆಗಳ ಮುಖ್ಯೋಪಾಧ್ಯಾಯರ ಸಭೆ ನಡೆಸಿ ಮಾಹಿತಿ ನೀಡಲಾಗಿದೆ. ಹಾಲಿನ ಪುಡಿಯನ್ನು ಹಾಲಾಗಿ ಮಾಡುವುದು ಹೇಗೆ ಎಂದು ತಾಲ್ಲೂಕು ಹಂತಗಳಲ್ಲಿ ಪ್ರಾತ್ಯಕ್ಷಿಕೆ ನೀಡಲಾಗಿದೆ. ಗುಣಮಟ್ಟ ಪರಿಶೀಲನೆ ಮೇಲೆ ನಿಗಾ ವಹಿಸುವಂತೆ ಸೂಚಿಸಲಾಗಿದೆ. ಶಾಲೆಗಳಲ್ಲಿರುವ ಲಭ್ಯ ಅನುದಾನದಲ್ಲಿ `ಲ್ಯಾಕ್ಟೋಮೀಟರ್', ಫಿಲ್ಟರ್, ಪಾತ್ರೆ ಮೊದಲಾದ ಪರಿಕರ ಖರೀದಿಸುವಂತೆ ಸೂಚಿಸಲಾಗಿದೆ' ಎಂದು ವಿವರಿಸಿದರು.

ಜಿಲ್ಲೆಗೆ ಈಗಾಗಲೇ 28 ಟನ್ ಹಾಲಿನ ಪುಡಿಯನ್ನು ಕರ್ನಾಟಕ ಹಾಲು ಮಹಾಮಂಡಳದ ವತಿಯಿಂದ ಸರಬರಾಜು ಮಾಡಲಾಗಿದ್ದು, ಎಲ್ಲ ಶಾಲೆಗಳಿಗೆ ತಲುಪಿಸಲಾಗಿದೆ. ಯೋಜನೆಯಿಂದ ಜಿಲ್ಲೆಗೆ ಮಾಸಿಕ 1.16 ಕೋಟಿ ವೆಚ್ಚ ತಗುಲುತ್ತದೆ ಎಂದು ಅಂದಾಜಿಸಲಾಗಿದೆ ಎಂದು ಮಾಹಿತಿ ನೀಡಿದರು.

ಹರಪನಹಳ್ಳಿ ವರದಿ: ಮಕ್ಕಳಿಗೆ ಹಾಲು ವಿತರಿಸುವ `ಕ್ಷೀರಭಾಗ್ಯ' ಯೋಜನೆ ಆ.1ರಿಂದ ತಾಲ್ಲೂಕಿನಾದ್ಯಂತ ಆರಂಭವಾಗಲಿದೆ ಎಂದು ಬಿಇಒ ವೀರಣ್ಣ ಎಸ್. ಜತ್ತಿ ತಿಳಿಸಿದರು.

ಪಟ್ಟಣದ ಅಪ್ಪರ್ ಮೇಗಳಪೇಟೆ ಪ್ರಾಥಮಿಕ ಶಾಲಾ ಆವರಣದಲ್ಲಿ ಕೆಎಂಎಫ್, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಗುರುವಾರ ಬೆಳಿಗ್ಗೆ 10.30ಕ್ಕೆ ಯೋಜನೆಗೆ ಉಪ ವಿಭಾಗಾಧಿಕಾರಿ ಇಬ್ರಾಹಿಂ ಮೈಗೂರು ಚಾಲನೆ ನೀಡುವರು. ತಹಶೀಲ್ದಾರ್ ಎನ್. ಚನ್ನಬಸಪ್ಪ, ತಾಲ್ಲೂಕು ಪಂಚಾಯ್ತಿ ಇಒ ಟಿ. ಪಾಂಡ್ಯಪ್ಪ, ಸಿಡಿಪಿಒ ಸಿದ್ದೇಶಪ್ಪ ಪಾಲ್ಗೊಳ್ಳುವರು.

ಅನುದಾನಿತ ಶಾಲೆಗಳು ಸೇರಿದಂತೆ ತಾಲ್ಲೂಕಿನ 132 ಕಿರಿಯ, 134 ಸರ್ಕಾರಿ ಹಿ.ಪ್ರಾ. ಶಾಲೆ ಹಾಗೂ 43 ಪ್ರೌಢಶಾಲೆಗಳಲ್ಲಿ 1ರಿಂದ 10ನೇ ತರಗತಿಯ 41,350 ವಿದ್ಯಾರ್ಥಿಗಳು ಹಾಗೂ 381ಅಂಗನವಾಡಿಗಳ 27,982 ಮಕ್ಕಳು ಯೋಜನೆಯ ಸೌಲಭ್ಯ ಪಡೆಯುವರು. ಶಾಲೆಯ ಮಕ್ಕಳಿಗೆ 150 ಮಿ.ಲೀ. ಕೆನೆಭರಿತ ಹಾಲು (18 ಗ್ರಾಂ. ಪೌಡರ್) ಹಾಗೂ ಅಂಗನವಾಡಿ ಮಕ್ಕಳಿಗೆ 180 ಎಂ.ಎಲ್. ಕೆನೆರಹಿತ ಹಾಲನ್ನು ವಾರದ ಮೂರು ದಿನ ವಿತರಿಸಲಾಗುವುದು ಎಂದು ವೀರಣ್ಣ ಎಸ್. ಜತ್ತಿ ಹಾಗೂ `ಶಿಮೂಲ್' ಉಪ ವ್ಯವಸ್ಥಾಪಕ ಡಾ.ಎಂ.ತಿಪ್ಪೇಸ್ವಾಮಿ ಎಂದು ತಿಳಿಸಿದರು.

ಹಾಲಿನ ಪೌಡರ್ ಅನ್ನು ಬುಧವಾರ ಶಾಲೆಗಳಿಗೆ ರವಾನಿಸುವ ಕಾರ್ಯ ನಡೆಯಿತು.

ಕ್ಷೇತ್ರ ಸಮನ್ವಯಾಧಿಕಾರಿ ಮಹೇಶ್ ವಿ. ಪೂಜಾರ್, `ಶಿಮೂಲ್' ವಿಸ್ತರಣಾಧಿಕಾರಿ ವಿಜಯಕುಮಾರ್, ಶಿಕ್ಷಣ ಸಂಯೋಜಕ ಇಸ್ಮಾಯಿಲ್ ಎಲಿಗಾರ್, ಶಿವಾನಂದಪ್ಪ, ಅಕ್ಕಿ ಬಸವರಾಜ, ವೀರಪ್ಪ, ಹಾಲೇಶನಾಯ್ಕ ಹಾಜರಿದ್ದರು.

ಹರಿಹರ ವರದಿ: ಸರ್ಕಾರಿ ಹಾಗೂ ಅನುದಾನಿತ ಶಾಲೆಯ 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಆ.1ರಿಂದ ಹಾಲು ವಿತರಣೆ ಆರಂಭವಾಗಲಿದ್ದು, ಬುಧವಾರ ಈಶ್ವರಿ ಪ್ರಾಥಮಿಕ ಶಾಲೆಯಲ್ಲಿ ಹಾಲಿನ ಪುಡಿ ದಾಸ್ತಾನು ಸಂಗ್ರಹಿಸಲಾಯಿತು.

ಹಾಲಿನ ಪುಡಿ ದಾಸ್ತಾನು ಪರಿಶೀಲನೆ ನಡೆಸಿದ ಬಿಇಒ, ಬಿ.ಆರ್.ಬಸವರಾಜಪ್ಪ ಮಾತನಾಡಿ, ತಾಲ್ಲೂಕಿನ 200 ಶಾಲೆಗಳಲ್ಲಿ 30,181 ವಿದ್ಯಾರ್ಥಿಗಳು ಈ ಯೋಜನೆಯ ಉಪಯೋಗ ಪಡೆಯಲಿದ್ದಾರೆ. ವಾರದಲ್ಲಿ ಮೂರು ದಿನ ಹಾಲು ನೀಡಲಾಗುವುದು ಎಂದರು.
ಶಾಲೆಗಳಿಗೆ ಕೆಎಂಎಫ್‌ನಿಂದ 25 ಕೆ.ಜಿ. ಚೀಲಗಳಲ್ಲಿ ಹಾಲಿನಪುಡಿ ಸರಬರಾಜಾಗುತ್ತದೆ. 15 ದಿನಗಳಿಗೆ ಆಗುವಷ್ಟು 30 ಕ್ವಿಂಟಲ್ 75 ಕೆ.ಜಿ ಹಾಲಿನ ಪುಡಿ ದಾಸ್ತಾನಿದೆ. ಗುರುವಾರ ಬೆಳಿಗ್ಗೆ 9.30ಕ್ಕೆ ಹೊಸಪೇಟೆ ಬೀದಿಯ ಪ್ರಾಥಮಿಕ ಶಾಲೆಯ್ಲ್ಲಲಿ ಕಾರ್ಯಕ್ರಮ ಉದ್ಘಾಟಿಸಲಾಗುವುದು ಎಂದರು.

ಅಕ್ಷರ ದಾಸೋಹ ಯೋಜನೆ ಉಪ ನಿರ್ದೇಶಕ ಸಂಜೀವಮೂರ್ತಿ. ತಾಲೂಕು ನೋಡಲ್ ಅಧಿಕಾರಿ ಕೆಎಂಎಫ್‌ನ ವಿಸ್ತರಣಾಧಿಕಾರಿ ಎಂ.ಎನ್. ತುಳಜಾರಾಮ್, ಈಶ್ವರ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಎಸ್.ಜೆ. ಹನಗವಾಡಿಮಠ ಹಾಗೂ ವಿವಿಧ ಶಾಲೆಗಳ ಶಿಕ್ಷಕರು ಇದ್ದರು.

ಅಂಗನವಾಡಿ ಮಕ್ಕಳಿಗೆ `ಕೆನೆರಹಿತ' ಹಾಲು
ಅಂಗನವಾಡಿ ಮಕ್ಕಳಿಗೂ ವಾರದಲ್ಲಿ 3 ದಿನ `ಕ್ಷೀರ ಭಾಗ್ಯ' ದೊರೆಯಲಿದೆ.

`ಅಂಗನವಾಡಿಗಳಿಗೆ ಕೆನೆರಹಿತ ಹಾಲು ನೀಡಲಾಗುವುದು. ಇದಕ್ಕಾಗಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ' ಎಂದು  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ವಾಸುದೇವ `ಪ್ರಜಾವಾಣಿ'ಗೆ ತಿಳಿಸಿದರು.

`ಜಿಲ್ಲೆಗೆ ತಿಂಗಳಿಗೆ 22,326 ಕೆ.ಜಿ. ಹಾಲಿನ ಪುಡಿ ಬೇಡಿಕೆ ಇದೆ. ಜಿಲ್ಲೆಯಲ್ಲಿ ವಿವಿಧೆಡೆ 70 ಪಾಯಿಂಟ್‌ಗಳನ್ನು ಮಾಡಿಕೊಳ್ಳಲಾಗಿದೆ.
ಅಲ್ಲಿಗೆ, ಹಾಲಿನ ಪುಡಿ ಪೂರೈಕೆ ಮಾಡಲಾಗುತ್ತಿದೆ. ಗುರುವಾರ ಬೆಳಿಗ್ಗೆ ವೇಳೆಗೆ ಎಲ್ಲ ಅಂಗನವಾಡಿಗಳಿಗೂ ಹಾಲಿನ ಪುಡಿ ಸರಬರಾಜಾಗಲಿದೆ. ಜಿಲ್ಲೆಯ ಕಿರು ಅಂಗನವಾಡಿಗಳು ಸೇರಿ 2,045 ಅಂಗನವಾಡಿಗಳ 1,23,478 ಮಕ್ಕಳಿಗೆ ಇದರಿಂದ ಪ್ರಯೋಜನ ಆಗಲಿದೆ' ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT