ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ `ಧಾರವಾಡ ಸಾಹಿತ್ಯ ಸಂಭ್ರಮ'

ಸಾಹಿತ್ಯಾಸಕ್ತರು ಸಾಹಿತ್ಯಾಸಕ್ತರಿಗಾಗಿ ನಡೆಸುತ್ತಿರುವ ಶಿಬಿರ: ಡಾ. ಗಿರಡ್ಡಿ
Last Updated 24 ಜನವರಿ 2013, 19:59 IST
ಅಕ್ಷರ ಗಾತ್ರ

ಧಾರವಾಡ:  ಅನನ್ಯತೆಯಿಂದಾಗಿ ನಾಡಿನ ಗಮನ ಸೆಳೆದ ಹಾಗೂ ವಿವಾದಾತ್ಮಕ ಕಾರಣಗಳಿಂದಾಗಿ ಸಾಕಷ್ಟು ಚರ್ಚೆಗೆ ಗ್ರಾಸವಾದ `ಧಾರವಾಡ ಸಾಹಿತ್ಯ ಸಂಭ್ರಮ' ಶುಕ್ರವಾರದಿಂದ ಆರಂಭಆಗಲಿದೆ.

ನಗರದ ಕರ್ನಾಟಕ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಭವನದಲ್ಲಿ `ಸಂಭ್ರಮ' ಗರಿಗೆದರಲಿದೆ. ಹಿರಿಯ ವಿಮರ್ಶಕ ಜಿ.ಎಸ್. ಆಮೂರ ಮತ್ತು ಖ್ಯಾತ ಸಾಹಿತಿ ಯು.ಆರ್. ಅನಂತಮೂರ್ತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಧಾರವಾಡ ಸಾಹಿತ್ಯ ಸಂಭ್ರಮ ಟ್ರಸ್ಟ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ವಿಶ್ವವಿದ್ಯಾಲಯ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದೊಂದಿಗೆ ಆಯೋಜಿಸುತ್ತಿರುವ ಕಾರ್ಯಕ್ರಮ ಇದು. ಮೂರು ದಿನಗಳ ಕಾಲ ನಡೆಯಲಿರುವ ಸಮಾರಂಭದಲ್ಲಿ ಸುಮಾರು 60 ಮಂದಿ ಸಂಪನ್ಮೂಲ ವ್ಯಕ್ತಿಗಳು ವಿವಿಧ ಗೋಷ್ಠಿಗಳನ್ನು ನಡೆಸಿಕೊಡಲಿದ್ದಾರೆ.

ನೂರಕ್ಕೂ ಹೆಚ್ಚು ವಿಶೇಷ ಆಹ್ವಾನಿತರು ಸೇರಿದಂತೆ 300 ಗಣ್ಯರು ಭಾಗವಹಿಸುವ ನಿರೀಕ್ಷೆ ಇದೆ. ಅಲ್ಲದೆ ಆಸಕ್ತರಿಗೆ ಗೋಷ್ಠಿಗಳನ್ನು ಆಸ್ವಾದಿಸಲು ಉಚಿತ ಪ್ರವೇಶಾವಕಾಶ ಕಲ್ಪಿಸಲಾಗಿದೆ. ಪುಸ್ತಕ ಮಾರಾಟಕ್ಕೂ ವ್ಯವಸ್ಥೆ ಕಲ್ಪಿಸಲಾಗಿದ್ದು, 18 ಮಳಿಗೆಗಳನ್ನು ತೆರೆಯಲಾಗಿದೆ. ಮಾರಾಟವಾಗುವ ಪ್ರತಿ ಪುಸ್ತಕಕ್ಕೆ ಶೇ 15ರಷ್ಟು ರಿಯಾಯಿತಿ ನೀಡಲಾಗುತ್ತದೆ.

`ಪ್ರಜಾವಾಣಿ'ಯೊಂದಿಗೆ ಮಾತನಾಡಿದ ಟ್ರಸ್ಟ್ ಅಧ್ಯಕ್ಷ ಡಾ. ಗಿರಡ್ಡಿ ಗೋವಿಂದರಾಜ, `ಬಹುತೇಕರು ತಿಳಿದಿರುವಂತೆ ಇದು ಸಮಾವೇಶವಲ್ಲ. ಬದಲಿಗೆ ಸಾಹಿತ್ಯಾಸಕ್ತರು ಸಾಹಿತ್ಯಾಸಕ್ತರಿಗಾಗಿ ನಡೆಸುತ್ತಿರುವ ಶಿಬಿರದ ಮಾದರಿಯ ಕಾರ್ಯಕ್ರಮ. ಕನ್ನಡದ ಮಟ್ಟಿಗೆ ಇದು ಹೊಸ ಪ್ರಯೋಗ. ಚಳವಳಿಗಳು ಇಲ್ಲದ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ನಡೆಯುತ್ತಿರುವ ಹೊಸ ಬೆಳವಣಿಗೆಗಳನ್ನು ಚರ್ಚಿಸಲು ಕಾರ್ಯಕ್ರಮ ಸಹಕಾರಿಯಾಗಲಿದೆ. ಪ್ರಸ್ತುತ ಸನ್ನಿವೇಶಕ್ಕೆ ಹೊಂದುವಂತಹ ವಿವಿಧ ಗೋಷ್ಠಿಗಳು ಇವೆ. ಕನ್ನಡದಲ್ಲಿ ಯೂನಿಕೋಡ್ ಶಿಷ್ಟತೆ ಜಾರಿ ಕುರಿತಂತೆ ಚರ್ಚೆ ನಡೆಯಲಿದೆ' ಎಂದು ಮಾಹಿತಿ ನೀಡಿದರು.

`ರಾಜ್ಯ, ಹೊರ ರಾಜ್ಯಗಳಿಂದ ಲೇಖಕರು, ಸಾಹಿತ್ಯಾಸಕ್ತರು ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ರಾಜ್ಯದ ವಿವಿಧ ಭಾಗಗಳಿಂದ ನೂರಕ್ಕೂ ಹೆಚ್ಚು ವಿದ್ಯಾರ್ಥಿ ಪ್ರತಿನಿಧಿಗಳು ಬರುತ್ತಿದ್ದಾರೆ. ಸಂಪನ್ಮೂಲ ವ್ಯಕ್ತಿಗಳು ಹಾಗೂ ವಿಶೇಷ ಆಹ್ವಾನಿತರಿಗೆ ವಸತಿ, ಊಟದ ವ್ಯವಸ್ಥೆ ಕಲ್ಪಿಸಲಾಗಿದೆ' ಎಂದರು.

ಸುಮಾರು ಐನೂರು ಆಸನಗಳ ವ್ಯವಸ್ಥೆ ಇರುವ ಭವನದ ಸಭಾಂಗಣದಲ್ಲಿ ಮೊದಲ ದಿನ (ಜ. 25) `ಕತೆ ಹೇಳುವ ಕಲೆ', `ಆತ್ಮಕಥೆಯ ಓದು', `ಪ್ರಶಸ್ತಿಗಳ ಹಾವಳಿ ಹೆಚ್ಚಾಗಿದೆಯೇ?', `ನಾನು ನನ್ನ ವಿಮರ್ಶಕರು ಮತ್ತು ಓದುಗರು' ಹಾಗೂ `ಲೇಖಕರೊಂದಿಗೆ ಸಂವಾದ' ಗೋಷ್ಠಿಗಳು ನಡೆಯಲಿವೆ. ಗಿರೀಶ ಕಾಸರವಳ್ಳಿ ನಿರ್ದೇಶನದ `ಕೂರ್ಮಾವತಾರ' ಚಲನಚಿತ್ರ ಸಂಜೆ ಪ್ರದರ್ಶನ ಕಾಣಲಿದೆ.

ಶನಿವಾರ `ಸಾಹಿತ್ಯ ಕೃತಿಯಿಂದ ಸಿನಿಮಾಕ್ಕೆ', `ಕವಿಗೋಷ್ಠಿ', `ಪ್ರಾಚೀನ ಕಾವ್ಯ ವಾಚನ, `ಅಂತರಜಾಲ ಕನ್ನಡ', ಜ್ಞಾನಪೀಠ ಸಾಹಿತಿಗಳು ಹಾಗೂ ಲೇಖಕಿಯರೊಂದಿಗೆ ಸಂವಾದ ಏರ್ಪಡಿಸಲಾಗಿದೆ. ಸಂಜೆ ಶಶಿಧರ ನರೇಂದ್ರ ಮತ್ತು ತಂಡದವರಿಂದ `ಬೆಂದ ಕಾಳು ಆನ್ ಟೋಸ್ಟ್' ಕೇಳು ನಾಟಕ ಆಯೋಜಿಸಲಾಗಿದೆ.

ಭಾನುವಾರ `ಕನ್ನಡ ಸಾಹಿತ್ಯ ಮತ್ತು ಕಾರ್ಪೊರೇಟ್ ಜಗತ್ತು', `ಕನ್ನಡ ವಿಮರ್ಶೆಯ ಸಂಕೀರ್ಣತೆ- ಜಟಿಲತೆ', `ಕಥೆ ಹುಟ್ಟುವ ರೀತಿ' `ಕವಿಯೊಂದಿಗೆ ಕವಿ' ಗೋಷ್ಠಿಗಳು ನಡೆಯಲಿವೆ. ಸಮಾರೋಪ ಸಮಾರಂಭದಲ್ಲಿ ಎಚ್.ಬಿ. ವಾಲೀಕಾರ, `ಮುಖ್ಯಮಂತ್ರಿ' ಚಂದ್ರು, ಕೆ.ಆರ್. ರಾಮಕೃಷ್ಣ, ಟಿ.ಪಿ. ಅಶೋಕ ಹಾಗೂ ಜಿ.ಎಚ್. ನಾಯಕ ಭಾಗವಹಿಸುತ್ತಾರೆ.

ಹಿರಿಯ ಸಂಶೋಧಕ ಹಾಗೂ ಟ್ರಸ್ಟ್ ಗೌರವಾಧ್ಯಕ್ಷ ಡಾ. ಎಂ.ಎಂ. ಕಲಬುರ್ಗಿ, `ಇದು ಸಾಹಿತ್ಯ ಕುರಿತಂತೆ ಗಂಭೀರ ಚರ್ಚೆ ನಡೆಸಲು ಉದ್ದೇಶಿಸಿರುವ ಸಮಾರಂಭ. ಸಾಹಿತ್ಯಕ ವಾತಾವರಣ ಕಾಣೆಯಾಗುತ್ತಿರುವ ಸಂದರ್ಭದಲ್ಲಿ ಇಂತಹ ಯತ್ನ ನಡೆಯುತ್ತಿದೆ. ಸಾಹಿತ್ಯದ ಎಲ್ಲಾ ವಿಷಯಗಳನ್ನು ಚರ್ಚಿಸಲು ಸಾಧ್ಯವಿಲ್ಲದೇ ಇರಬಹುದು. ಆದರೆ ಪ್ರಮುಖ ವಿಷಯಗಳಿಗೆ ಆದ್ಯತೆ ನೀಡಲಾಗಿದೆ' ಎಂದು ಹೇಳಿದರು.

ಟ್ರಸ್ಟ್ ಕಾರ್ಯದರ್ಶಿ ಲೋಹಿತ ನಾಯ್ಕರ, `ಪ್ರವೇಶಾವಕಾಶ ಕುರಿತಂತೆ ಇದ್ದ ಗೊಂದಲಗಳು ನಿವಾರಣೆಯಾಗಿರುವುದರಿಂದ ಹೆಚ್ಚು ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಭಿನ್ನ ರೀತಿಯಲ್ಲಿ ಗೋಷ್ಠಿಗಳು ನಡೆಯುತ್ತವೆ. ಭಾಷಣಗಳಿಲ್ಲದೆ ಚರ್ಚೆ, ಸಂವಾದ ಇರುವುದರಿಂದ ಗೋಷ್ಠಿಗಳು ಆಸಕ್ತಿ ಮೂಡಿಸಲಿವೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಭಾಗವಹಿಸುವ ಸಂಪನ್ಮೂಲ ವ್ಯಕ್ತಿಗಳು, ಆಹ್ವಾನಿತರು ಹಾಗೂ ಪ್ರತಿನಿಧಿಗಳಿಗೆ ಸಾಹಿತ್ಯದ ಕೃತಿಗಳು, ಮಾಹಿತಿ ಹಾಗೂ ಸ್ಮರಣ ಸಂಚಿಕೆ ಒಳಗೊಂಡ ಕಿಟ್ ನೀಡಲಾಗುವುದು. `ಧಾರವಾಡ ಸಾಹಿತ್ಯ ಸಂಭ್ರಮ' ಹೆಸರಿನಲ್ಲೇ ಸ್ಮರಣ ಸಂಚಿಕೆ ಹೊರತರಲಾಗಿದೆ. 66 ಪುಟಗಳ ಈ ಸಂಚಿಕೆಯಲ್ಲಿ ಗೋಷ್ಠಿಗಳ ಆಶಯ, ಭಾಗವಹಿಸುವವರು ಹಾಗೂ ಗೋಷ್ಠಿಯ ನಿರ್ದೇಶಕರ ಭಾವಚಿತ್ರಗಳೊಂದಿಗೆ ಅವರ ವೈಯಕ್ತಿಕ ವಿವರಗಳನ್ನು ದಾಖಲಿಸಲಾಗಿದೆ.

ಹೆಚ್ಚುವರಿ ಹಣ ವಾಪಸ್
ಸಮಾವೇಶ ಪ್ರವೇಶಕ್ಕೆಂದು ಮೊದಲು ನಿಗದಿಪಡಿಸಿದ್ದ ್ಙ 1500 ಗಳಲ್ಲಿ ್ಙ 1000 ಗಳನ್ನು ಪ್ರತಿನಿಧಿಗಳಿಗೆ ಹಿಂತಿರುಗಿಸಲು ಸಂಘಟಕರು ನಿರ್ಧರಿಸಿದ್ದಾರೆ. `ಸಮಾರಂಭದ ಗೋಷ್ಠಿಗಳನ್ನು ಕೆಲವು ಟ್ರಸ್ಟ್‌ಗಳು ಭರಿಸುತ್ತಿರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ.

ಹೆಚ್ಚುವರಿಯಾಗಿ ಹಣ ಸಂದಾಯ ಮಾಡಿದ್ದವರು ರಸೀತಿ ತೋರಿಸಿ ಹಣ  ಮರಳಿ ಪಡೆಯಬಹುದು' ಎಂದು ಟ್ರಸ್ಟ್ ಕೋಶಾಧ್ಯಕ್ಷ ಸಮೀರ್ ಜೋಶಿ ಸ್ಪಷ್ಟಪಡಿಸಿದರು.


ಬುದ್ಧಿಗೆ ಕೆಲಸ, ಸವಿಯೂಟ
ಧಾರವಾಡ: ಸಾಕಷ್ಟು ಚರ್ಚೆ-ವಾಗ್ವಾದಗಳಿಗೆ ಕಾರಣವಾಗಿರುವ `ಧಾರವಾಡ ಸಾಹಿತ್ಯ ಸಂಭ್ರಮ' ಕಾರ್ಯಕ್ರಮದಲ್ಲಿ ಪ್ರತಿನಿಧಿಗಳಾಗಿ ಪಾಲ್ಗೊಳ್ಳುವವರಿಗೆ ರುಚಿಕಟ್ಟಾದ ಭೋಜನ ಮತ್ತು ಸ್ವಾದಿಷ್ಟ ತಿನಿಸುಗಳು ಕಾದಿವೆ. ಸಂಪನ್ಮೂಲ ವ್ಯಕ್ತಿಗಳ ಮಾತು ಹಾಗೂ ಚರ್ಚೆ-ಸಂವಾದಗಳು ಬುದ್ಧಿಗೆ ಕೆಲಸ ಕೊಟ್ಟರೆ, ಊಟ-ತಿಂಡಿ ನಾಲಗೆಗೆ ಮುದ ನೀಡಲಿವೆ!

ಕಾರ್ಯಕ್ರಮದ ಮೊದಲನೆಯ ದಿನವಾದ ಶುಕ್ರವಾರ ಬೆಳಗಿನ ಉಪಾಹಾರಕ್ಕೆ ಇಡ್ಲಿ, ವಡೆ ಮತ್ತು ಅನಾನಸ್ ಹಣ್ಣಿನ ಶಿರಾ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನದ ಊಟಕ್ಕೆ ವಾಂಗಿ ಭಾತ್, ಹೂರಣದ ಹೋಳಿಗೆ, ಮೊಸರನ್ನ ಮತ್ತು ಮಜ್ಜಿಗೆ ಸಿದ್ಧಪಡಿಸಲಾಗುತ್ತದೆ. ಸಂಜೆಯ ಚಹಾ ಜೊತೆಗೆ ಆಲೂಗಡ್ಡೆ ಬೋಂಡಾ ಹಾಗೂ ಚಟ್ನಿ ಇರುತ್ತದೆ ಎಂದು ಊಟೋಪಚಾರದ ಉಸ್ತುವಾರಿ ವಹಿಸಿಕೊಂಡಿರುವ ಸಮೀರ ಜೋಶಿ ತಿಳಿಸಿದರು.

ಕಾರ್ಯಕ್ರಮದ ಎರಡನೆಯ ದಿನವಾದ ಶನಿವಾರ ಬೆಳಗಿನ ತಿಂಡಿ ಸೆಟ್ ದೋಸೆ, ಸಾಗು ಮತ್ತು ಕ್ಯಾರೆಟ್ ಹಲ್ವಾ. ಮಧ್ಯಾಹ್ನದ ಊಟಕ್ಕೆ ಬಿಸಿಬೇಳೆ ಭಾತ್, ಕೊಬ್ಬರಿ ಹೋಳಿಗೆ, ಮೊಸರನ್ನ ಮತ್ತು ಮಜ್ಜಿಗೆ ಇರಲಿದೆ. ಸಂಜೆಯ ಚಹಾದ ಜೊತೆ ಸಮೋಸ ಇರುತ್ತದೆ.

ಮೂರನೆಯ ದಿನ ಬೆಳಿಗ್ಗೆ ವೆಜ್ ಉಪ್ಮಾ, ಮೂಂಗ್ ದಾಲ್ ಹಲ್ವಾ. ಮಧ್ಯಾಹ್ನದ ಊಟಕ್ಕೆ ವೆಜ್ ಪಲಾವ್, ಚಟ್ನಿ, ಕರಿಗಡುಬು ಮತ್ತು ಮೊಸರನ್ನದ ವ್ಯವಸ್ಥೆ ಇದೆ ಎಂದರು. ಪ್ರತಿದಿನ ಬೆಳಿಗ್ಗೆ 8.30ರಿಂದ 10 ಗಂಟೆಯವರೆಗೆ ತಿಂಡಿಯ ವ್ಯವಸ್ಥೆ ಇರಲಿದೆ.

ಸಾಹಿತ್ಯ ಸಂಭ್ರಮದಲ್ಲಿ ಇಂದು
ಸುವರ್ಣ ಮಹೋತ್ಸವ ಭವನ, ಕರ್ನಾಟಕ ವಿಶ್ವವಿದ್ಯಾಲಯದ ಆವರಣ:  ಉದ್ಘಾಟನೆ- ಡಾ.ಜಿ.ಎಸ್.ಆಮೂರ, ಆಶಯ ಭಾಷಣ- ಡಾ.ಯು.ಆರ್.ಅನಂತಮೂರ್ತಿ. ಬೆಳಿಗ್ಗೆ 10; ಗೋಷ್ಠಿ-ಕಥೆ ಹೇಳುವ ಕಲೆ. ಭಾಗವಹಿಸುವವರು- ಶ್ರೀನಿವಾಸ ವೈದ್ಯ, ಮಿತ್ರಾ ವೆಂಕಟ್ರಾಜ್, ಶ್ರೀಧರ ಬಳಗಾರ, ನಿರ್ದೇಶಕರು- ಜೋಗಿ. ಬೆಳಿಗ್ಗೆ 11.15; ಆತ್ಮಕಥೆಯ ಓದು. ಭಾಗವಹಿಸುವವರು- ಗಿರೀಶ ಕಾರ್ನಾಡ, ಪ್ರತಿಭಾ ನಂದಕುಮಾರ ಹಾಗೂ ಕುಂ.ವೀರಭದ್ರಪ್ಪ. ನಿರ್ದೇಶಕರು- ಎಸ್.ದಿವಾಕರ. ಮಧ್ಯಾಹ್ನ 12.30; `ಪ್ರಶಸ್ತಿಗಳ ಹಾವಳಿ ಹೆಚ್ಚಾಗಿದೆಯೇ' ಕುರಿತ ಗೋಷ್ಠಿ. ಭಾಗವಹಿಸುವವರು- ವಿಜಯಾ, ಮನು ಬಳಿಗಾರ, ಸರಜೂ ಕಾಟ್ಕರ್, ನಿರ್ದೇಶಕರು- ನಾ.ದಾಮೋದರ ಶೆಟ್ಟಿ. ಮಧ್ಯಾಹ 3; ನಾನು, ನನ್ನ ವಿಮರ್ಶಕರು ಮತ್ತು ಓದುಗರು. ಭಾಗವಹಿಸುವವರು- ನಾ.ಡಿಸೋಜ, ರಾಘವೇಂದ್ರ ಪಾಟೀಲ ಹಾಗೂ ಬಿ.ಆರ್.ಲಕ್ಷ್ಮಣರಾವ್. ನಿರ್ದೇಶಕರು- ಓ.ಎಲ್.ನಾಗಭೂಷಣಸ್ವಾಮಿ. ಸಂಜೆ 4.15; ಲೇಖಕರೊಂದಿಗೆ ಸಂವಾದ. ಭಾಗವಹಿಸುವವರು- ಚಂದ್ರಶೇಖರ ಪಾಟೀಲ. ನಿರ್ದೇಶಕರು- ಸಿದ್ಧಲಿಂಗ ಪಟ್ಟಣಶೆಟ್ಟಿ. ಸಂಜೆ 5.30; ಗಿರೀಶ ಕಾಸರವಳ್ಳಿ ನಿರ್ದೇಶನದ ಕೂರ್ಮಾವತಾರ ಚಲನಚಿತ್ರ ಪ್ರದರ್ಶನ. ಸಂಜೆ 6.45.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT