ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ

`ಹಬ್ಬ ನಮ್ಮದೆಂಬ ಭಾವ ಚಿತ್ರರಂಗದಲ್ಲಿ ಮೂಡಬೇಕು'
Last Updated 19 ಡಿಸೆಂಬರ್ 2012, 19:56 IST
ಅಕ್ಷರ ಗಾತ್ರ

ಬೆಂಗಳೂರು: ಈ ಬಾರಿಯ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಗುರುವಾರ ಚಾಲನೆ ದೊರೆಯಲಿದೆ. ರಾಜ್ಯದಲ್ಲಿ ನಡೆಯುತ್ತಿರುವ ಐದನೇ ಚಲನಚಿತ್ರೋತ್ಸವವಾದರೂ ಸರ್ಕಾರವೇ ಸಂಪೂರ್ಣವಾಗಿ ಸಂಘಟನೆಯ ಹೊಣೆ ಹೊತ್ತ ಮೊದಲನೇ ಚಿತ್ರಹಬ್ಬ ಇದು.

ಕಳೆದ ಚಿತ್ರೋತ್ಸವಕ್ಕೆ ಹೋಲಿಸಿದರೆ ಈ ಬಾರಿ ಅನೇಕ ಬದಲಾವಣೆಗಳಾಗಿವೆ. ಭಾರತೀಯ ಚಿತ್ರರಂಗಕ್ಕೆ ನೂರನೇ ವರ್ಷ ತುಂಬುತ್ತಿರುವ ಈ ಸಂದರ್ಭದಲ್ಲಿ ಚಿತ್ರೋತ್ಸವಕ್ಕೆ ಇನ್ನಿಲ್ಲದ ಮಹತ್ವ ಬಂದಿದೆ. ಹಾಗೆಯೇ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಅನೇಕ ಬದಲಾವಣೆಗಳಾಗಿವೆ. ಈ ಹೊತ್ತಿನಲ್ಲಿ ಉತ್ಸವದ ಅಂತರಂಗ- ಬಹಿರಂಗ ಕುರಿತು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷೆ ತಾರಾ ಅನೂರಾಧಾ `ಪ್ರಜಾವಾಣಿ'ಯೊಂದಿಗೆ ಮಾತನಾಡಿದರು.

ಈ ಬಾರಿಯ ಚಿತ್ರೋತ್ಸವ ಹೇಗೆ ಭಿನ್ನ?
ಸಾಮಾನ್ಯ ಪ್ರೇಕ್ಷಕರಿಗೆ ಸಿನಿಮಾ ದಕ್ಕುವಂತಾಗಬೇಕು ಎಂಬ ಕಾರಣಕ್ಕೆ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ವಿಶೇಷ ಪ್ರದರ್ಶನ ಏರ್ಪಡಿಸಲಾಗಿದೆ. ಇದಕ್ಕೆ ಯಾವ ಗುರುತಿನ ಚೀಟಿಯೂ ಅಗತ್ಯ ಇಲ್ಲ. ಇದೇ ಮೊದಲ ಬಾರಿಗೆ ಇಡೀ ಉತ್ಸವದಲ್ಲಿ ಗಣ್ಯ- ಅತಿಗಣ್ಯ ಎಂಬ ಗುರುತಿನ ಚೀಟಿಗಳನ್ನು ತೆಗೆದು ಹಾಕಲಾಗಿದೆ. ಉಳಿದ ಚಿತ್ರೋತ್ಸವಕ್ಕಿಂತ ಹೆಚ್ಚು ಚಲನಚಿತ್ರಗಳು ಈ ಬಾರಿ ಪ್ರದರ್ಶನಗೊಳ್ಳುತ್ತಿವೆ.

ಭಾರತೀಯ ಚಿತ್ರರಂಗಕ್ಕೆ ನೂರು ವರ್ಷ ತುಂಬುತ್ತಿರುವ ಸಂದರ್ಭದಲ್ಲಿ ಉತ್ಸವಕ್ಕೆ ವಿಶೇಷ ರಂಗು ಬಂದಂತಿದೆ...
ಖಂಡಿತ. ಸುವರ್ಣ ಮಹೋತ್ಸವದ ನಿಮಿತ್ತ ಹೆಸರಘಟ್ಟದ ಸರ್ಕಾರಿ ಚಲನಚಿತ್ರ ಮತ್ತು ಟೆಲಿವಿಷನ್ ಸಂಸ್ಥೆ ನೇತೃತ್ವದಲ್ಲಿ ಹಳೆಯ ಕಾಲದ ಚಲನಚಿತ್ರ ಉಪಕರಣಗಳ ಪ್ರದರ್ಶನ ನಡೆಯಲಿದೆ. ಇಡೀ ನೂರು ವರ್ಷಗಳಲ್ಲಿ ದೇಶದಲ್ಲಿ ತೆರೆಕಂಡ ಪ್ರಮುಖ ಚಲನಚಿತ್ರಗಳನ್ನು ಪ್ರದರ್ಶಿಸಲಾಗುವುದು. ಉತ್ಸವದ ಎರಡನೇ ದಿನ (ಶುಕ್ರವಾರ)ಇವುಗಳಿಗೆ ಚಾಲನೆ ನೀಡಲಾಗುವುದು. 

ನೂರರ ಸಂಭ್ರಮಕ್ಕೆ ಕನ್ನಡ ಚಿತ್ರರಂಗ ನೀಡಿದ ಕೊಡುಗೆಯನ್ನು ಸ್ಮರಿಸುತ್ತಿಲ್ಲ ಎಂಬ ಅಪವಾದ ಕೇಳಿ ಬರುತ್ತಿದೆ?
ಅದರಲ್ಲಿ ಹುರುಳಿಲ್ಲ. ಭಾರತೀಯ ಚಿತ್ರರಂಗಕ್ಕೆ ಕೊಡುಗೆ ನೀಡಿದ ಎಂಟು ಮಂದಿಗೆ ವಿಶೇಷ ಸನ್ಮಾನ ಮಾಡಲಾಗುತ್ತಿದೆ. ಇದರಲ್ಲಿ ಅನೇಕರು ಕನ್ನಡಿಗರು ಎಂಬುದು ನೆನಪಿಡಬೇಕಾದ ಅಂಶ. ಅಲ್ಲದೆ ನೂರು ವರ್ಷದ ಛಾಯಾಚಿತ್ರಗಳು, ಕನ್ನಡ ಚಿತ್ರರಂಗದ ಪ್ರಮುಖ ಘಟ್ಟಗಳನ್ನು ತಿಳಿಸುವ ಛಾಯಾಚಿತ್ರಗಳನ್ನು ಕೂಡ ಪ್ರದರ್ಶಿಸಲಾಗುತ್ತದೆ.

ಹಿಂದೆ ಚಲನಚಿತ್ರ ಸಂಘಟನೆಗಳು ಚಿತ್ರೋತ್ಸವದ ಬೆನ್ನಿಗೆ ನಿಂತಿದ್ದವು. ಈ ಬಾರಿ ಏಕಾಂಗಿಯಾಗಿ ಅಕಾಡೆಮಿಯೇ ಚಿತ್ರೋತ್ಸವ ನಡೆಸುತ್ತಿದೆ. ಕಷ್ಟ ಅನ್ನಿಸಲಿಲ್ಲವೆ?
ತುಂಬಾ ಕಷ್ಟ ಆಯಿತು. ಚಿತ್ರೋತ್ಸವ ನಡೆಸುವಂತೆ ಸೆಪ್ಟೆಂಬರ್ ಕಡೆಯ ವಾರದ ಹೊತ್ತಿಗೆ ಸರ್ಕಾರದಿಂದ ಆದೇಶ ಬಂತು. ಬರದ ಹಿನ್ನೆಲೆಯಲ್ಲಿ ಸಿನಿಮೋತ್ಸವ ನಡೆಯುವುದೇ ಅನುಮಾನ ಎಂಬಂತಾಗಿತ್ತು. ತರಾತುರಿಯಲ್ಲಿ ಕೆಲಸ ಮಾಡಿದೆವು. ಚಿತ್ರರಂಗದ ಹಿರಿಯರ ಮಾರ್ಗದರ್ಶನದಲ್ಲಿ ಎಲ್ಲವನ್ನೂ ನಿಭಾಯಿಸಲಾಯಿತು. ವಿವಿಧ ಸಂಘಟನೆಗಳ ಸಲಹೆ ಸಹಕಾರವನ್ನೂ ಈ ಸಂದರ್ಭದಲ್ಲಿ ಪಡೆಯಲಾಯಿತು.

ಆದರೂ ಚಿತ್ರೋತ್ಸವ ಸಮಸ್ಯೆಗಳಿಂದ ಮುಕ್ತವಾಗಿಲ್ಲವಂತೆ?
ಯಾವ ಸಮಸ್ಯೆಯೂ ಉಂಟಾಗಿಲ್ಲ. ಚಿತ್ರದ ಸಿನಾಪ್ಸಿಸ್ ಕೂಡ ಅಂದುಕೊಂಡ ಸಮಯಕ್ಕೆ ಬಿಡುಗಡೆಯಾಗಿದೆ. ಯಾವುದೇ ಚಿತ್ರೋತ್ಸಗಳಲ್ಲಿ ಮೂರು ದಿನಗಳಿಗಿಂತ ಹೆಚ್ಚಿನ ವೇಳಾಪಟ್ಟಿ ಬಿಡುಗಡೆ ಮಾಡುವುದಿಲ್ಲ. ಏಕೆಂದರೆ ಇಂತಿಂಥ ಚಿತ್ರಗಳನ್ನು ಪ್ರದರ್ಶಿಸಿ ಎಂಬ ಒತ್ತಾಯ ಚಿತ್ರಾಸಕ್ತರಿಂದ ಬರಬಹುದು. ಹಾಗಾಗಿ ಮೂರು ದಿನಗಳ ವೇಳಾಪಟ್ಟಿಯನ್ನಷ್ಟೇ ಬಿಡುಗಡೆ ಮಾಡಲಾಗಿದೆ. ಉಳಿದದ್ದನ್ನು ನಂತರ ವಿತರಿಸಲಾಗುವುದು.

ಬೆಂಗಳೂರು ಚಲನಚಿತ್ರೋತ್ಸವದ ಹೆಗ್ಗುರುತು, ಅಂತರರಾಷ್ಟ್ರೀಯ ಪ್ರಶಸ್ತಿ. ಈ ಬಾರಿ ಅದನ್ನು ನೀಡುತ್ತಿಲ್ಲ. ಏಕೆ?
ಸರ್ಕಾರದ ಆದೇಶ ತಡವಾಗಿ ಬಂದದ್ದರಿಂದ ಈ ವ್ಯತ್ಯಾಸವಾಯಿತು. ಚಲನಚಿತ್ರೋತ್ಸವಗಳ ಆಯೊಜನೆಗೆ ಕನಿಷ್ಠ ಆರು ತಿಂಗಳ ಸಮಯಾವಕಾಶ ಬೇಕು. ಈ ಬಾರಿ ಅದರರ್ಧ ಅವಧಿಯೂ ಸಿಗಲಿಲ್ಲ. ಅದರಲ್ಲಿಯೂ ಅಂತರರಾಷ್ಟ್ರೀಯ ಮಟ್ಟದ ಪ್ರಶಸ್ತಿ ನೀಡುವಾಗ ಹೆಚ್ಚಿನ ಮುತುವರ್ಜಿ ತೆಗೆದುಕೊಳ್ಳಬೇಕು. ಸಮಯಾಭಾವದಿಂದ ಹೀಗಾಗಿದೆಯಷ್ಟೇ. ಎಂದಿನಂತೆ ಭಾರತೀಯ ಮತ್ತು ಕನ್ನಡ ವಿಭಾಗದಲ್ಲಿ ಪ್ರಶಸ್ತಿಗಳನ್ನು ವಿತರಿಸಲಾಗುವುದು. 

ಕಳೆದ ಚಿತ್ರೋತ್ಸವಕ್ಕೆ ಹೋಲಿಸಿದರೆ ಸರ್ಕಾರದಿಂದ ಚಿತ್ರೋತ್ಸವಕ್ಕೆ ದೊರೆತ ಅನುದಾನವೂ ಕಡಿಮೆ ಇದ್ದಂತಿದೆ...
ಕಳೆದ ಬಾರಿ ಎರಡೂವರೆ ಕೋಟಿ ರೂಪಾಯಿ ಬಿಡುಗಡೆಯಾಗಿತ್ತು. ಈ ಬಾರಿ ಎರಡು ಕೋಟಿ ಬಿಡುಗಡೆಯಾಗಿದೆ. ಅದರಿಂದೇನೂ ಹೆಚ್ಚು ವ್ಯತ್ಯಾಸವಾಗಿಲ್ಲ. ಸದ್ಯಕ್ಕೆ ಹಣದ ತೊಂದರೆ ಎದುರಾಗಿಲ್ಲ.

ಚಿತ್ರೋತ್ಸವದ ವೆಬ್‌ಸೈಟ್‌ನಲ್ಲಿ ಕನ್ನಡಕ್ಕೆ ಹೆಚ್ಚು ಆದ್ಯತೆ ನೀಡಿಲ್ಲ?
ಈ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ. ಆದರೂ ಒಂದು ಮಾತು ಹೇಳಬಯಸುತ್ತೇನೆ. ವೆಬ್‌ಸೈಟ್‌ನಲ್ಲಿ ಇಂಗ್ಲಿಷ್ ಬಳಸದಿದ್ದರೆ ದೇಶ- ವಿದೇಶಗಳ ಚಿತ್ರರಸಿಕರನ್ನು ತಲುಪುವುದು ಕಷ್ಟದ ಸಂಗತಿಯಾಗುತ್ತದೆ ಎಂಬ ಕಾರಣಕ್ಕೆ ಇಂಥ ಬದಲಾವಣೆಗಳಾಗಿರಬಹುದು. ಕನ್ನಡಿಗರಿಗೆ ಬೇರೆ ಮಾಧ್ಯಮಗಳಲ್ಲಿ ಖಂಡಿತಾ ಮಾಹಿತಿ ದೊರೆಯುತ್ತದೆ.

ಚಿತ್ರರಂಗಕ್ಕೆ ಸಂಬಂಧಿಸಿದವರು ಈ ಬಾರಿಯಾದರೂ ಹಬ್ಬದಲ್ಲಿ ಪಾಲ್ಗೊಳ್ಳುವ ವಿಶ್ವಾಸ ಇದೆಯೇ?
ಪ್ರತಿಯೊಬ್ಬ ಕಲಾವಿದರ ಮನೆಗೂ ಆಹ್ವಾನ ಪತ್ರಿಕೆ ತಲುಪಿಸಲಾಗಿದೆ. ಚಿತ್ರೋತ್ಸವಗಳಿಂದ ನೇರ ಪ್ರಯೋಜನವಿರುವುದು ಚಿತ್ರರಂಗದವರಿಗೇ. ಇದು ಸರ್ಕಾರ ಚಿತ್ರರಂಗಕ್ಕೆ ನೀಡಿರುವ ಉಡುಗೊರೆ.  ಚಿತ್ರರಂಗದ ಪ್ರತಿಯೊಬ್ಬರಲ್ಲೂ ಇದು ನಮ್ಮ ಹಬ್ಬ ಎಂಬ ಭಾವ ಮೂಡಬೇಕು. ಬೇರೆ ಬೇರೆ ದೇಶಗಳಿಗೆ ತೆರಳಿ ಚಿತ್ರೋತ್ಸದಲ್ಲಿ ಪಾಲ್ಗೊಳ್ಳುವ ಮಂದಿ ಇಲ್ಲಿಯೇ ನಡೆಯುವ ಹಬ್ಬದಿಂದ ದೂರ ಉಳಿಯುವ ಅಗತ್ಯವಿಲ್ಲ.

ಮುಂದಿನ ಅಧಿಕಾರಾವಧಿಯಲ್ಲಿ ಚಿತ್ರೋತ್ಸವನ್ನು ಸಂಘಟಿಸುವ ಕುರಿತಂತೆ ನಿಮ್ಮ ಕನಸು?
ಇನ್ನೂ ಹೆಚ್ಚು ಜನರಿಗೆ ಚಿತ್ರೋತ್ಸವಗಳು ಹತ್ತಿರವಾಗುವಂತೆ ನೋಡಿಕೊಳ್ಳುವುದು ನನ್ನ ಮುಖ್ಯ ಗುರಿ. ಜೂನ್‌ನಿಂದಲೇ ಪೂರ್ವ ತಯಾರಿ ಆರಂಭಿಸಿದರೆ ಗಡಿಬಿಡಿ ಇರುವುದಿಲ್ಲ. ಇನ್ನು ಮುಂದೆ ಪ್ರಶಸ್ತಿ ಪ್ರದಾನಕ್ಕೆ ಅಡಚಣೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT