ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ ರಾಷ್ಟ್ರೀಯ ಸೀನಿಯರ್ ಅಥ್ಲೆಟಿಕ್ ಚಾಂಪಿಯನ್‌ಷಿಪ್

Last Updated 10 ಜೂನ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕದ ಅಶ್ವಿನಿ ಅಕ್ಕುಂಜಿ ಹಾಗೂ ಕೇರಳದ ಮಯೂಖಾ ಜಾನಿ ಅವರು ಶನಿವಾರ ಇಲ್ಲಿ ಆರಂಭವಾಗಲಿರುವ 51ನೇ ರಾಷ್ಟ್ರೀಯ ಸೀನಿಯರ್ ಅಂತರ ರಾಜ್ಯ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನ ಪ್ರಮುಖ ಆಕರ್ಷಣೆ ಎನಿಸಿದ್ದಾರೆ.

ಕಂಠೀರವ ಕ್ರೀಡಾಂಗಣದಲ್ಲಿ ಜೂನ್ 11ರಿಂದ 14ರವರೆಗೆ ನಡೆಯಲಿರುವ ಈ ಚಾಂಪಿಯನ್‌ಷಿಪ್ ಮುಂಬರುವ ಏಷ್ಯನ್ ಹಾಗೂ ವಿಶ್ವ ಚಾಂಪಿಯನ್‌ಷಿಪ್‌ಗೆ ಅರ್ಹತೆ ಪಡೆಯಲು ಪ್ರಮುಖ ಮಾನದಂಡ ಎನಿಸಿದೆ. ಹಾಗಾಗಿ ಸುಮಾರು 680 ಅಥ್ಲೀಟ್‌ಗಳಿಂದ ಉತ್ತಮ ಪೈಪೋಟಿ ಮೂಡಿ ಬರುವ ನಿರೀಕ್ಷೆ ಇದೆ. ಜೊತೆಗೆ ನೂತನ ರಾಷ್ಟ್ರೀಯ ದಾಖಲೆಗಳನ್ನು ನಿರೀಕ್ಷಿಸಲಾಗುತ್ತಿದೆ.

ಕರ್ನಾಟಕ ಅಥ್ಲೆಟಿಕ್ ಸಂಸ್ಥೆ ಆಶ್ರಯದಲ್ಲಿ ನಡೆಯುತ್ತಿರುವ ನಾಲ್ಕು ದಿನಗಳ ಈ ಚಾಂಪಿಯನ್‌ಷಿಪ್‌ನಲ್ಲಿ 44 ವಿಭಾಗದಲ್ಲಿ ಪೈಪೋಟಿ ನಡೆಯಲಿದೆ.

ಏಷ್ಯನ್ ಕ್ರೀಡಾಕೂಟದ ಚಾಂಪಿಯನ್ ಅಶ್ವಿನಿ ಕೇವಲ 400 ಮೀಟರ್ ಓಟದಲ್ಲಿ ಮಾತ್ರ ಪಾಲ್ಗೊಳ್ಳಲಿದ್ದಾರೆ. ಕೈನೋವಿನಿಂದ ಈಗಷ್ಟೆ ಸುಧಾರಿಸಿಕೊಂಡಿರುವ ಅವರು ಹರ್ಡಲ್ಸ್ ಹಾಗೂ 4x400 ರಿಲೇನಲ್ಲಿ ಪಾಲ್ಗೊಳ್ಳುವುದಿಲ್ಲ.

ಈಗಾಗಲೇ ಹೆಚ್ಚಿನ ಅಥ್ಲೀಟ್‌ಗಳು ಆಗಮಿಸಿದ್ದು ಶುಕ್ರವಾರ ಕಂಠೀರವ ಕ್ರೀಡಾಂಗಣದಲ್ಲಿ ಅಂತಿಮ ತಯಾರಿ ನಡೆಸಿದರು. ಸ್ಥಿರ ಪ್ರದರ್ಶನ ತೋರುತ್ತಿರುವ ಮಯೂಖಾ ಅವರತ್ತ ಕೂಡ ಎಲ್ಲರ ದೃಷ್ಟಿ ಹರಿದಿದೆ. 10 ದಿನಗಳ ಹಿಂದೆ ನಡೆದ ಏಷ್ಯನ್ ಗ್ರ್ಯಾನ್‌ಪ್ರಿ ಅಥ್ಲೆಟಿಕ್ ಕೂಟದಲ್ಲಿ ಅವರು ಟ್ರಿಪಲ್ ಜಂಪ್‌ನಲ್ಲಿ ನೂತನ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದರು.ಆದರೆ ಅವರು ಇಲ್ಲಿ ವಿಶೇಷವಾಗಿ ಲಾಂಗ್ ಜಂಪ್‌ನತ್ತ ತಮ್ಮ ಗಮನ ಹರಿಸಲಿದ್ದಾರೆ. ವಿಶ್ವ ಚಾಂಪಿಯನ್‌ಷಿಪ್‌ಗೆ ಅರ್ಹತೆ ಪಡೆಯುವುದು ಅವರ ಪ್ರಮುಖ ಉದ್ದೇಶ.

ಡಿಸ್ಕಸ್ ಥ್ರೋ ಸ್ಪರ್ಧಿ ಕೃಷ್ಣಾ ಪೂಣಿಯಾ, ಜೋಸೆಫ್ ಅಬ್ರಹಾಂ (400 ಮೀ.), ದೂರದ ಓಟಗಾರ್ತಿಯರಾದ ಪ್ರೀಜಾ ಶ್ರೀಧರನ್ ಹಾಗೂ ಕವಿತಾ ರಾವತ್ ಅವರಿಂದ ಉತ್ತಮ ಪ್ರದರ್ಶನ ನಿರೀಕ್ಷಿಸಲಾಗುತ್ತಿದೆ. ಅಮೆರಿಕದಲ್ಲಿ ಅಭ್ಯಾಸ ನಡೆಸಲು ಅವಕಾಶ ಪಡೆದಿರುವ ಸೀಮಾ ಅಂಟಿಲ್ ಈ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳುತ್ತಿಲ್ಲ.
ಕರ್ನಾಟಕದ ಕಾಶಿನಾಥ್ (ಜಾವೆಲಿನ್ ಥ್ರೋ), ಸಹನಾ ಕುಮಾರಿ (ಹೈಜಂಪ್) ಹಾಗೂ ವೇಗದ ಓಟಗಾರ್ತಿ ರೆಬೆಕ್ಕಾ ಜೋಸ್ ಅವರತ್ತ ಕೂಡ ಎಲ್ಲರ ಚಿತ್ತ ಹರಿದಿದೆ.  

ಈ ಚಾಂಪಿಯನ್‌ಷಿಪ್ ದೂರದರ್ಶನದಲ್ಲಿ ನೇರ ಪ್ರಸಾರವಾಗಲಿದೆ. ಚಾಂಪಿಯನ್‌ಷಿಪ್‌ಗೆ ಶನಿವಾರ ಮಧ್ಯಾಹ್ನ ಮೂರೂವರೆಗೆ ಗೃಹ ಸಚಿವ ಆರ್.ಅಶೋಕ್ ಹಾಗೂ ಕರ್ನಾಟಕ ಅಥ್ಲೆಟಿಕ್ ಸಂಸ್ಥೆ ಮತ್ತು ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಚಾಲನೆ ನೀಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT