ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ `ಸ್ಟಾರ್' ಪ್ರಚಾರ ಶುರು

Last Updated 25 ಏಪ್ರಿಲ್ 2013, 5:42 IST
ಅಕ್ಷರ ಗಾತ್ರ

ಹಾಸನ: ಇಂದಿನಿಂದ ಹಾಸನದ ಚುನಾವಣಾ ಕಣಕ್ಕೆ ಹೊಸ ಬಣ್ಣಗಳು ಸೇರ್ಪಡೆಯಾಗಲಿವೆ. ಹಳ್ಳಿ ಹಳ್ಳಿ- ಮನೆಮನೆಗಳನ್ನು ಸುತ್ತಾಡಿ ಬೆಂಡಾಗಿರುವ ಅಭ್ಯರ್ಥಿಗಳ ಪರವಾಗಿ ಮತ ಯಾಚಿಸಲು ಹಿರಿಯ ಮುಖಂಡರು ಭೇಟಿ ನೀಡುತ್ತಿದ್ದಾರೆ.

ಬ್ಯಾನರ್-ಬಂಟಿಂಗ್, ಧ್ವನಿವರ್ಧಕ ಮುಂತಾದ ವುಗಳನ್ನು ಚುನಾವಣಾ ಆಯೋಗ ನಿಷೇಧಿಸಿರುವುದ ರಿಂದ ಅಭ್ಯರ್ಥಿಗಳು ಮತಯಾಚನೆಗೆ ಪ್ರತಿ ಮೆನೆಗೂ ಹೋಗುವಂತಾಗಿದೆ. ಹಿಂದೆ ಊರಿನ ಜನರೆಲ್ಲ ಸೇರುವ ಸ್ಥಳದಲ್ಲಿ  ನಾಲ್ಕು ಬ್ಯಾನರ್‌ಗಳನ್ನು ಅಂಟಿಸಿದರೆ, ಸಂಜೆವೇಳೆಯಲ್ಲಿ ಇಂಥ ಸ್ಥಳದಲ್ಲಿ ಒಂದು ಭಾಷಣ ಬಿಗಿದರೆ ಮತದಾರರಿಗೆ ಅಭ್ಯರ್ಥಿ ಗಳ ಪರಿಚಯವಾಗಿ ಸರಳವಾಗಿ ಪ್ರಚಾರ ಆಗು ತ್ತಿತ್ತು. ಈಗ ಬ್ಯಾನರ್‌ಗಳಿಗೆ ಅವಕಾಶವಿಲ್ಲ, ಭಾಷಣಕ್ಕೆ ಸಮಯ ಇರುವುದಿಲ್ಲ. ಕೂಲಿಯಾಳು ಗಳು, ರೈತರು ಮುಂಜಾನೆ ಎದ್ದು ಹೊಲ-ಗದ್ದೆಗಳಿಗೆ ಹೋದರೆ ಸಂಜೆ ಮನೆಗೆ ಮರಳುತ್ತಾರೆ. ಗ್ರಾಮೀಣ ಪ್ರದೇಶದ ಜನರಿಗೆ ಅಭ್ಯರ್ಥಿಗಳ ಪರಿಚಯವೇ ಇಲ್ಲದಂತಾಗಿದೆ. ಈ ದೃಷ್ಟಿಯಿಂದ ಮನೆಮನೆಗೆ ಭೇಟಿ ನೀಡುವುದು ಅನಿವಾರ್ಯವಾಗಿದೆ.

ಗುರುವಾರದಿಂದ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸ್ಟಾರ್ ಪ್ರಚಾರಕರ ದಂಡು ಬರಲಿದೆ. ಗ್ರಾಮೀಣ ಭಾಗದ ಅನೇಕ ಮಂದಿ ಇಂಥ ಕಾರ್ಯಕ್ರಮಗಳಿಗೆ ಸಭಿಕರಾಗಿ ಬರುತ್ತಾರೆ, ಅಥವಾ ಕರೆತರಲಾಗುತ್ತದೆ. ಸ್ಟಾರ್ ಪ್ರಚಾರಕರ ಮಾತು, ಆರೋಪ ಪ್ರತ್ಯಾರೋ ಪಗಳು ಚುನಾವಣೆಯ ರಂಗೇರಿಸುವ ಲಕ್ಷಣಗಳು ಗೋಚರಿಸುತ್ತಿವೆ.

ಏಪ್ರಿಲ್ 25ರಂದು ಜಿಲ್ಲೆಯ ಐದು ತಾಲ್ಲೂಕು ಗಳಲ್ಲಿ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಪ್ರವಾಸ ಮಾಡುವರು. ಬೆಳಿಗ್ಗೆ 10.30ಕ್ಕೆ ಅರಸೀಕೆರೆಗೆ ಬರುವ ಸಿದ್ದರಾಮಯ್ಯ, ಅಲ್ಲಿ ಆಯೋಜಿಸಿರುವ ಪ್ರಚಾರ ಸಭೆಯಲ್ಲಿ ಪಕ್ಷದ ಅಭ್ಯರ್ಥಿ, ಮಾಜಿ ಸಚಿವ ಬಿ.ಶಿವರಾಮು ಪರ ಮತ ಯಾಚಿಸಲಿದ್ದಾರೆ. 11.30ಕ್ಕೆ ಹಳೇಬೀಡಿನಲ್ಲಿ, ಮಧ್ಯಾಹ್ನ 1 ಗಂಟೆಗೆ ಅರಕಲಗೂಡಿನಲ್ಲಿ, 3 ಗಂಟೆಗೆ ಹೊಳೆನರಸೀಪುರದಲ್ಲಿ ಹಾಗೂ ಸಂಜೆ 4.30ಕ್ಕೆ ಚನ್ನರಾಯಪಟ್ಟಣದ ಸಾರ್ವಜನಿಕ ಸಭೆಗಳಲ್ಲಿ ಪಾಲ್ಗೊಂಡು ಮಾತನಾಡುವರು.

ಇದಾದ ಬಳಿಕ ಕಾಂಗ್ರೆಸ್ ಯುವ ನಾಯಕ, ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಬರಲಿದ್ದಾರೆ. ಮೇ 1 ರಂದು ಹಾಸನದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಅವರು ಮಾತನಾಡಲಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಮೂಲಗಳು ತಿಳಿಸಿವೆ.

`ರಾಜ್ಯದಲ್ಲಿ ಕಾಂಗ್ರೆಸ್ ಅಲೆ ಇದೆ, ಜಿಲ್ಲೆಯಲ್ಲಿ ಅಚ್ಚರಿಯ ಫಲಿತಾಂಶ ಬರಲಿದೆ' ಎಂದು ಕಾಂಗ್ರೆಸ್ ಮುಖಂಡರು ಹೇಳುತ್ತ ಬಂದಿದ್ದರೂ, ಅನೇಕ ಕ್ಷೇತ್ರಗಳಲ್ಲಿ ಅಂಥ ಚಲನವಲನಗಳು ಕಾಣಿಸಿಕೊಂಡಿಲ್ಲ.

ಅಭ್ಯರ್ಥಿಗಳ ಘೋಷಣೆಯ ಬಳಿಕ ಭಿನ್ನಮತ ಶಮನಗೊಳಿಸುವುದೇ ಪಕ್ಷಕ್ಕೆ ದೊಡ್ಡ ಸವಾಲಾ ಯಿತು. ಈಗ ಅದನ್ನೂ ಸರಿಪಡಿಸಲಾಗಿದೆ. ಪಕ್ಷದ ಮುಖಂಡರು ಬಂದು ಹೋದ ಬಳಿಕ ಕ್ಷೇತ್ರಗಳಲ್ಲಿ ಒಂದಿಷ್ಟು ಸಂಚಲನ ಉಂಟಾಗಬಹುದು ಎಂಬ ನಿರೀಕ್ಷೆ ಅಭ್ಯರ್ಥಿಗಳು ಹಾಗೂ ಮುಖಂಡರಲ್ಲಿದೆ.

ಬಿಜೆಪಿಯೂ ಸಹ ಒಂದು ಸುತ್ತಿನ ರ‌್ಯಾಲಿ, ಪ್ರಚಾರ ಕಾರ್ಯವನ್ನು ಮುಗಿಸಿದೆ. ಮಾಜಿ ಮುಖ್ಯ ಮಂತ್ರಿ ಡಿ.ವಿ. ಸದಾನಂದ ಗೌಡ ಈಚೆಗೆ ಹಾಸನ ಹಾಗೂ ಸಕಲೇಶಪುರಗಳಲ್ಲಿ ಬೈಕ್ ರ‌್ಯಾಲಿ, ಪ್ರಚಾರ ಭಾಷಣ, ಪತ್ರಿಕಾಗೋಷ್ಠಿ ನಡೆಸಿ ಹೋಗಿದ್ದಾರೆ.

ಗುರುವಾರ (ಏ.25) ಮಾಜಿ ಸಚಿವ ವಿಜಯಶಂಕರ್ ಅರಕಲಗೂಡು ಹಾಗೂ ಬೇಲೂರಿ ನಲ್ಲಿ ಅಭ್ಯರ್ಥಿ ಪರ ಪ್ರಚಾರ ಮಾಡುವರು.
26ರಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಹಾಲಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಇಬ್ಬರೂ ಜಿಲ್ಲೆಗೆ ಭೇಟಿ ನೀಡುವ ಕಾರ್ಯಕ್ರಮವಿದೆ.

ಶೆಟ್ಟರ ಅವರು 26ರಂದು ಬೆಳಿಗ್ಗೆ 10 ಗಂಟೆಗೆ ಬೇಲೂರಿಗೆ ಬಂದು ಅಲ್ಲಿ `ರೋಡ್ ಶೋ' ನಡೆಸ ಲಿದ್ದಾರೆ. ಅಲ್ಲಿಂದ ಅವರು ಚಿಕ್ಕಮಗಳೂರು ಜಿಲ್ಲೆಗೆ ಪ್ರಯಾಣ ಬೆಳೆಸುವರು. ಅದೇ ದಿನ ಕೆಜೆಪಿ ಮುಖಂಡ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಕಲೇಶಪುರಕ್ಕೆ ಬಂದು ಪಕ್ಷದ ಅಭ್ಯರ್ಥಿ ಪರ ಮತ ಯಾಚಿಸುವರು.

ಧನಂಜಯ ಕುಮಾರ್ ಹಾಗೂ ನಟಿ ಶ್ರುತಿ ಅವರೂ ಜಿಲ್ಲೆಗೆ ಭೇಟಿ ನೀಡುವ ಕಾರ್ಯಕ್ರಮ ನಿಗದಿ ಆಗಿದ್ದರೂ, ಕಾರಣಾಂತರಗಳಿಂದ ಅವರು ಬಂದಿಲ್ಲ. ಮುಂದಿನ ದಿನಗಳಲ್ಲಿ ಅವರೂ ಜಿಲ್ಲೆಗೆ ಭೇಟಿ ನೀಡ ಬಹುದು ಎಂದು ಕೆಜೆಪಿ ಮುಖಂಡರು ತಿಳಿಸಿದ್ದಾರೆ.

ಜೆಡಿಎಸ್ ಮಟ್ಟಿಗೆ ಜಿಲ್ಲೆಯ ಮುಖಂಡರೇ ಸ್ಟಾರ್ ಪ್ರಚಾರಕರು. `ನಮಗೆ ಮಾಜಿ ಪ್ರಧಾನಿ ದೇವೇಗೌಡ ಅವರು ಸೋನಿಯಾ ಗಾಂಧಿ ಇದ್ದಂತೆ, ಕುಮಾರ ಸ್ವಾಮಿ ರಾಹುಲ್ ಗಾಂಧಿ ಇದ್ದಂತೆ. ಅವರಿಬ್ಬರೂ ಬಂದು ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿದ್ದಾರೆ' ಎಂದು ಜೆಡಿ ಎಸ್  ಮುಖಂಡರು, ಕಾರ್ಯಕರ್ತರು ನುಡಿಯುತ್ತಾರೆ. ಇದೇ ನಾಯಕರು ಚುನಾವಣೆಯ ಹಿಂದಿನ ಒಂದೆರಡು ದಿನ ಜಿಲ್ಲೆಯಲ್ಲಿ ಇನ್ನೊಂದು ಸುತ್ತಿನ ಪ್ರಚಾರ ನಡೆಸುವ ಸಾಧ್ಯತೆಯೂ ಇದೆ.

ಪ್ರಮುಖ ಪಕ್ಷಗಳ ಇತರ ಸ್ಟಾರ್ ಪ್ರಚಾರಕರೂ ನಡುನಡುವೆ ಮಿಂಚಿನಂತೆ ಬಂದು ಹೋಗುವ ಸಾಧ್ಯತೆಯೂ ಇರುವುದರಿಂದ ಬೇಸಿಗೆಯ ಧಗೆ ಯೊಂದಿಗೆ ಇಂದಿನಿಂದ ಚುನಾವಣೆಯ ಶಾಖವೂ ಏರುಮುಖವಾಗುವ ಸೂಚನೆ ಲಭಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT