ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ ಹುಸೇನ್‌ಬಾಷಾ ಉರುಸು

Last Updated 24 ಏಪ್ರಿಲ್ 2013, 10:12 IST
ಅಕ್ಷರ ಗಾತ್ರ

ಕೊಪ್ಪಳ: ಗ್ರಾಮೀಣ ಪ್ರದೇಶದ ಜನ ಯಾವ ಜಾತಿ, ಭೇದಗಳಿಲ್ಲದೆ ಸಂಬಂಧಿಗಳಂತೆ ಜೀವನ ನಡೆಸುತ್ತಾರೆ. ಇದಕ್ಕೆ ಉತ್ತಮ ಉದಾಹರಣೆ ಕೊಪ್ಪಳ ತಾಲೂಕಿನ ದನಕನದೊಡ್ಡಿ ಎಂಬ ಪುಟ್ಟ ಗ್ರಾಮ.

ಈ ಗ್ರಾಮದಲ್ಲಿ ಹುಸೇನ್ ಬಾಷಾ ಶರಣರ ದರ್ಗಾ ಇದೆ. ಪ್ರತಿ ವರ್ಷ ಇಲ್ಲಿ ಉರುಸು ಜರುಗುತ್ತದೆ. ಆದರೆ ಯಾವುದೇ ಜಾತಿ ಮತ್ತು ಧರ್ಮಕ್ಕೆ ಸೀಮಿತವಾಗದೆ ಎಲ್ಲ ಜನಾಂಗ ಮತ್ತು ಧರ್ಮೀಯರು ಒಟ್ಟುಗೂಡಿ ಹಬ್ಬ ಆಚರಿಸುತ್ತಾರೆ. ಇದು ಏಳೆಂಟು ದಶಕಗಳಿಂದ ನಡೆದು ಬಂದ ಸಂಪ್ರದಾಯ. ಈ ಗ್ರಾಮದಲ್ಲಿ ಇದು ಒಂದೇ ವರ್ಷಕ್ಕೊಮ್ಮೆ ನಡೆಯುವ ದೊಡ್ಡ ಹಬ್ಬವಾಗಿದೆ. ಎಲ್ಲರೂ ಹುಸೇನ್‌ಬಾಷಾ ಶರಣರ ದರ್ಗಾದಲ್ಲಿ ಶ್ರದ್ಧೆ ಹಾಗೂ ಭಕ್ತಿಯಿಂದ ಸಕ್ಕರೆ ಪೂಜೆ ಮಾಡಿಸಿ ಕೃತಾರ್ಥರಾಗುತ್ತಾರೆ. ಬೇರೆ ಬೇರೆ ಗ್ರಾಮಗಳಲ್ಲಿರುವ ತಮ್ಮ ಸಂಬಂಧಿಕರನ್ನು ಉರುಸಿಗೆ ಆಹ್ವಾನಿಸುತ್ತಾರೆ.

ಜನಪದ ಕ್ರೀಡೆ: ಇಂದಿನ ಆಧುನಿಕ ತಂತ್ರಜ್ಞಾನದ ಹೊಡೆತಕ್ಕೆ ಸಿಲುಕಿ ಗ್ರಾಮೀಣರ ಅಚ್ಚುಮೆಚ್ಚಿನ ಜನಪದ ಕ್ರೀಡೆಗಳು ನಶಿಸಿ ಹೋಗಿವೆ. ಆದರೆ ದನಕನದೊಡ್ಡಿಯಲ್ಲಿ ಮಾತ್ರ ಇಂಥ ಕ್ರೀಡೆಗಳು ಇನ್ನೂ ಜೀವಂತವಾಗಿವೆ. ಪ್ರತಿ ವರ್ಷದ ಉರುಸಿನಲ್ಲಿ ಜನಪದ ಕ್ರೀಡೆಗಳನ್ನು ಆಯೋಜಿಸಲಾಗುತ್ತದೆ. ಮೂರು ದಿನಗಳ ಕಾಲ ನಡೆಯುವ ಹಬ್ಬದ ಕೊನೆಯ ದಿನ ಹಳ್ಳಿ ಹೈದರ `ಗುಂಡು ಎತ್ತುವ ಸ್ಪರ್ಧೆ' ನಡೆಯುತ್ತದೆ. ನಂತರ `ಮುಂಗೈ ಆಟಗಳು' ಹಾಗೂ ಕೋಲಾಟ ಜರುಗುತ್ತವೆ. ಈ ಕ್ರೀಡೆಗಳಲ್ಲಿ ಭಾಗವಹಿಸಲು ಜಿಲ್ಲೆಯ ಅನೇಕ ಹಳ್ಳಿಗಳಿಂದ ಆಸಕ್ತ ಯುವಕರು ಭಾಗವಹಿಸುತ್ತಾರೆ. ಆಟದಲ್ಲಿ ಗೆದ್ದವರಿಗೆ ಬೆಳ್ಳಿ ಕಡಗ ಹಾಕಿ ಗೌರವಿಸಲಾಗುತ್ತದೆ.

ಎರಡನೇ ದಿನ ರಾತ್ರಿ ಜನಪದ ಭಾಗವಾದ ಗೀಗೀ ಪದ. ಕಲಾವಿದರ ಎರಡು ತಂಡಗಳನ್ನು ಕರೆಸಿ ಆ ತಂಡಗಳ ಮಧ್ಯೆ ತೋಡಿ (ಸವಾಲ್) ಹಾಡುಗಳು ಪ್ರೇಕ್ಷಕರನ್ನು ಖುಷಿಪಡಿಸುವ ಜೊತೆಗೆ ನಗೆಗಡಲಲ್ಲಿ ತೇಲಿಸುತ್ತವೆ. ಕೊನೆಯ ದಿನ ರಾತ್ರಿ ಸ್ಥಳೀಯ ಕಲಾವಿದರಿಂದ ನಾಟಕ ಪ್ರದರ್ಶನ ಇರುತ್ತದೆ.
“
ಗ್ರಾಮದಲ್ಲಿ ಹಿಂದೂ-ಮುಸ್ಲಿಂ ಬಾಂಧವರೆಲ್ಲ ಸೇರಿ ಯಾವುದೇ ಭೇದ-ಭಾವವಿಲ್ಲದೆ ಹಬ್ಬ ಆಚರಿಸುತ್ತೇವೆ. ಇದು ನಮ್ಮ ಹಿರಿಯರಿಂದ ಹೀಗೆ ನಡೆದು ಬಂದಿದೆ” ಎನ್ನುತ್ತಾರೆ, ಗ್ರಾಮದ ಹಿರಿಯರಾದ ಫಕೀರಪ್ಪ ಕತ್ತಿ, ಶಿವಪ್ಪ ಆಗೋಲಿ, ಇಮಾಮಸಾಬ ಹರ್ಲಾಪೂರ, ದುರುಗಪ್ಪ ಕುಷ್ಟಗಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT