ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿರಾ, ರಾಜೀವ್ ತಪ್ಪುಗಳ ಮೆಲುಕು

Last Updated 29 ಡಿಸೆಂಬರ್ 2010, 10:45 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ರಾಷ್ಟ್ರದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದ ಸಂದರ್ಭದಲ್ಲಿ ಸರ್ಕಾರದ ಹಾಗೂ ಪಕ್ಷದ ಅಪರಿಮಿತ ಅಧಿಕಾರ ಇಂದಿರಾ ಗಾಂಧಿ ಅವರಲ್ಲೇ ಕೇಂದ್ರೀಕೃತವಾಗಿತ್ತು ಎಂದು ಕಾಂಗ್ರೆಸ್ ಕೊನೆಗೂ ಒಪ್ಪಿಕೊಂಡಿದೆ. ಇದೇ ವೇಳೆ, ಈಚೆಗೆ ಉತ್ತರ ಪ್ರದೇಶ ಹಾಗೂ ಇನ್ನಿತರ ಕೆಲವು ರಾಜ್ಯಗಳ ವಿಧಾನಸಭಾ ಚುನಾವಣೆ ವೇಳೆ ತೋರಿದ ಆಸಕ್ತಿಗಾಗಿ ರಾಹುಲ್ ಗಾಂಧಿ ಅವರ ಬೆನ್ನುತಟ್ಟಿದೆ.

ಪಕ್ಷಕ್ಕೆ 125 ವರ್ಷ ತುಂಬಿದ ಪ್ರಯುಕ್ತ ಹಿರಿಯ ನಾಯಕ ಹಾಗೂ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಸಂಪಾದಕತ್ವದಲ್ಲಿ ಹೊರತರಲಾಗಿರುವ ಪುಸ್ತಕದಲ್ಲಿ ಈ ಆತ್ಮಾವಲೋಕನ ನಡೆದಿದೆ.ಸಂಜಯ್ ಗಾಂಧಿ, ರಾಜೀವ್ ಗಾಂಧಿ ಅವರಿಂದಾದ ತಪ್ಪುಗಳ ಬಗ್ಗೆ  ಪ್ರಸ್ತಾಪಿಸಿರುವ ಪಕ್ಷ  ಮಾಜಿ ಪ್ರಧಾನಿ ಪಿ.ವಿ.ನರಸಿಂಹರಾವ್ ಕುರಿತು ಮೆಚ್ಚುಗೆಯ ಮಾತುಗಳನ್ನು ಇದೇ ಸಂದರ್ಭದಲ್ಲಿ ಆಡಿದೆ.

1975ರ ಜೂನ್‌ನಿಂದ 1977ರ ಜನವರಿಯವರೆಗೆ ಹೇರಲಾಗಿದ್ದ ತುರ್ತು ಪರಿಸ್ಥಿತಿ ವೇಳೆ ನ್ಯಾಯಾಂಗದ ಅಧಿಕಾರವನ್ನು ಮೊಟಕು ಮಾಡಲಾಗಿತ್ತು ಎಂದಿರುವ ಪಕ್ಷ ಈ ಅವಧಿಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದ ವಿಷಯವನ್ನು ಪುಸ್ತಕದಲ್ಲಿ ಮೆಲುಕು ಹಾಕಿದೆ.

ತುರ್ತು ಸ್ಥಿತಿ ಸಂದರ್ಭದಲ್ಲಿ ಸಂಜಯ್ ಗಾಂಧಿ ಅವರು ಹಲವು ಕಾರ್ಯಕ್ರಮಗಳನ್ನು ಮನಸೋಇಚ್ಛೆ ನಿರಂಕುಶವಾದಿಯಂತೆ ಜನರ ಮೇಲೆ ಹೇರಿದರು. ಆ ಸನ್ನಿವೇಶದಲ್ಲಿ ಸರ್ಕಾರ ಕುಟುಂಬ ಕಲ್ಯಾಣವನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಿದ್ದಕ್ಕೆ ಸಂಜಯ್ ಗಾಂಧಿ ಅವರು ಅದರ ಪರವಾಗಿದ್ದುದೇ ಮುಖ್ಯ ಕಾರಣ. ಕೊಳೆಗೇರಿ ನಿರ್ಮೂಲನೆ, ವರದಕ್ಷಿಣೆ ವಿರೋಧಿ ನಿಯಮ, ಸಾಕ್ಷರತಾ ಕಾರ್ಯಕ್ರಮಗಳಂತಹ ಉತ್ತ ಮ ಕಾರ್ಯಗಳಿಗೆ ಅವರು ಒತ್ತಾಸೆಯಾಗಿ ನಿಂತಿದ್ದರಾದರೂ ಅವರ ನಿರಂಕುಶ ವೈಖರಿ ಜನಸಾಮಾನ್ಯರ ಅಭಿಪ್ರಾಯಕ್ಕೆ ವ್ಯತಿರಿಕ್ತವಾಗಿತ್ತು ಎಂದು ಪುಸ್ತಕದಲ್ಲಿ ವಿಶ್ಲೇಷಿಸಲಾಗಿದೆ.

ತುರ್ತು ಪರಿಸ್ಥಿತಿ ಹೇರಿಕೆಯಾದ ಆರಂಭದಲ್ಲಿ ಆಡಳಿತ ವೈಖರಿಯಲ್ಲಿ ಕಂಡ ಸುಧಾರಣೆಯಿಂದಾಗಿ ಜನಸಾಮಾನ್ಯರಿಗೇ ಸಂತಸವೇ ಆಗಿತ್ತು. ಆದರೆ ದುರದೃಷ್ಟವಶಾತ್ ಕೆಲವೊಂದು ವಿಷಯಗಳಲ್ಲಿ ಕೆಲವರು ತೋರಿದ ಅತ್ಯುತ್ಸಾಹ ಇದಕ್ಕೆ ಮುಳುವಾಯಿತು.ಸಂತಾನಶಕ್ತಿಹರಣ ಹಾಗೂ ಕೊಳೆಗೇರಿ ನಿರ್ಮೂಲನೆಯನ್ನು ಕಡ್ಡಾಯ ಗೊಳಿಸಲು ಈ ಅತ್ಯುತ್ಸಾಹವೇ ಕಾರಣ ಎಂದು ಪಕ್ಷ ವಿವರಿಸಿದೆ.

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ನಾಯಕರಾಗಿದ್ದಾಗ ಪಕ್ಷ ಹಾಗೂ ಸರ್ಕಾರದಲ್ಲಿನ ಪ್ರಮುಖರ ಸ್ಥಾನಮಾನವನ್ನು ಪದೇ ಪದೇ ಬದಲಿಸಿದರು. ಪಕ್ಷದೊಳಗೇ ಇದ್ದ ಅಧಿಕಾರದಾಹಿ ದಲ್ಲಾಳಿಗಳ ವಿರುದ್ಧ ಗುಡುಗು ಹಾಕಿದ ಅವರು ಸ್ವತಃ ಪಕ್ಷವನ್ನು ಸುಧಾರಣೆಯ ಹಳಿಗೆ ತರುವಲ್ಲಿ ವಿಫಲರಾದರು ಎಂದು ಪುಸ್ತಕದಲ್ಲಿ ಅಭಿಪ್ರಾಯಪಡಲಾಗಿದೆ.

‘ಸಂಪೂರ್ಣ ಕ್ರಾಂತಿ’ಗೆ ಕರೆಕೊಡುವ ಮೂಲಕ ತುರ್ತು ಸ್ಥಿತಿ ಹೇರಲು ಕಾರಣವಾದ ಜಯಪ್ರಕಾಶ್ ನಾರಾಯಣ್ ಅವರ ಪ್ರಾಮಾಣಿಕತೆ ಮತ್ತು ನಿಸ್ವಾರ್ಥತೆಯನ್ನು ಯಾರೂ ಪ್ರಶ್ನಿಸುವಂತಿಲ್ಲ. ಆದರೆ ಅವರ ಸಿದ್ಧಾಂತದಲ್ಲಿ ಸ್ಪಷ್ಟತೆ ಇರಲಿಲ್ಲ ಎಂದಿರುವ ಪಕ್ಷ ಜೆಪಿ ಚಳವಳಿಯನ್ನು ಅಸಾಂವಿಧಾನಿಕ ಹಾಗೂ ಪ್ರಜಾಪ್ರಭುತ್ವ ವಿರೋಧಿ ಎಂದು ಹೇಳಿದೆ.

ಪಿ.ವಿ.ನರಸಿಂಹ ರಾವ್ ಅವರ ಸರ್ಕಾರ ಐದು ವರ್ಷಗಳ ಅವಧಿಯನ್ನು ಮುಗಿಸಿದ್ದು ಪ್ರಶಂಸಾರ್ಹ. ಸತತ ಐದು ವರ್ಷಗಳ ಕಾಲ ಸರ್ಕಾರವನ್ನು ಮುನ್ನಡೆಸಿದ ನೆಹರು ಗಾಂಧಿ ಕುಟುಂಬಕ್ಕೆ ಹೊರತಾದ ಮೊದಲ ಪ್ರಧಾನಮಂತ್ರಿ ರಾವ್ ಎಂದು ಪುಸ್ತಕದಲ್ಲಿ ಗಮನ ಸೆಳೆಯಲಾಗಿದೆ.

ರಾಜೀವ್ ಪಕ್ಷದ ನಾಯಕರಾಗಿದ್ದಾಗ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದಂತೆ ಜಾರಿಗೆ ತಂದ ಆರ್ಥಿಕ ಸುಧಾರಣೆಗಳನ್ನು ಮುಂದುವರಿಸಿಕೊಂಡು ಹೋಗಿದ್ದು ರಾವ್ ಅವರ ಸರ್ಕಾರದ ಮಹತ್ವದ ಸಾಧನೆ ಎಂದು ಬಿಂಬಿಸಲಾಗಿದೆ. ಆರ್ಥಿಕ ಸುಧಾರಣೆಗಳನ್ನು ಅಳವಡಿಸಿದ ರಾವ್ ಅವರ ಬಗ್ಗೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕಳೆದ ವಾರ ನಡೆದ ಪಕ್ಷದ ಮಹಾಧಿವೇಶನದ ಸಂದರ್ಭದಲ್ಲಿ ಕೂಡ ಮೆಚ್ಚುಗೆಯ ಮಾತುಗಳನ್ನು ಆಡಿದ್ದರು.

ಈಚೆಗೆ ಉತ್ತರ ಪ್ರದೇಶ ಹಾಗೂ ಇನ್ನಿತರ ಕೆಲವು ರಾಜ್ಯಗಳ ವಿಧಾನಸಭಾ ಚುನಾವಣೆ ವೇಳೆ ರಾಹುಲ್ ಗಾಂಧಿ ಅವರು ತೋರಿಸಿದ ಆಸಕ್ತಿಯ ಬಗ್ಗೆ ಇದರಲ್ಲಿ ಬೆನ್ನು ತಟ್ಟಲಾಗಿದೆ. ಬಿಹಾರದಲ್ಲಿ ಇತ್ತೀಚೆಗೆ ಮುಗಿದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಸಂಪೂರ್ಣ ನೆಲಕಚ್ಚಿದ್ದರ ಬಗ್ಗೆ ಏನನ್ನೂ ಪ್ರಸ್ತಾಪಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT