ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ಎಐಸಿಸಿ ಸಮನ್ವಯ ಸಮಿತಿ ಸಭೆ

ಅಭ್ಯರ್ಥಿಗಳ ಆಯ್ಕೆ ಚರ್ಚೆ: ಸಿದ್ದರಾಮಯ್ಯ, ಪರಮೇಶ್ವರ್‌ ದೆಹಲಿಗೆ
Last Updated 15 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಲೋಕಸಭಾ ಚುನಾವಣಾ ಸಿದ್ಧತೆ ಮತ್ತು ಅಭ್ಯರ್ಥಿ­ಗಳ ಆಯ್ಕೆ ಕುರಿತು ಸೋಮವಾರ ದೆಹಲಿ­ಯಲ್ಲಿ ಎಐಸಿಸಿ ಚುನಾವಣಾ ಸಮನ್ವಯ ಸಮಿತಿ ಸಭೆ ನಡೆಯಲಿದೆ. ಈ ಸಭೆಯ ಬಳಿಕ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಗೆ ಚಾಲನೆ ದೊರೆಯುವ ಸಾಧ್ಯತೆ ಇದೆ.

ಲೋಕಸಭಾ ಚುನಾವಣೆಯ ಸಿದ್ಧತೆ­ಗಾಗಿ ಎಐಸಿಸಿ ರಚಿಸಿರುವ ಸಮನ್ವಯ ಸಮಿತಿಯ ಸದಸ್ಯರಾಗಿರುವ ಮಧು­ಸೂದನ ಮಿಸ್ತ್ರಿ, ಜನಾರ್ದನ ದ್ವಿವೇದಿ ಮತ್ತು ದಿಗ್ವಿಜಯ್‌ ಸಿಂಗ್‌ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಅವರು ಸಭೆಯಲ್ಲಿ ಭಾಗವಹಿಸುವರು. ಸಭೆಯಲ್ಲಿ ಪಾಲ್ಗೊಳ್ಳುವುದಕ್ಕಾಗಿಯೇ ಸಿದ್ದರಾಮಯ್ಯ ಮತ್ತು ಪರಮೇಶ್ವರ್ ಭಾನುವಾರ ಸಂಜೆಯೇ ದೆಹಲಿಗೆ ತೆರಳಿದ್ದಾರೆ.

ರಾಜ್ಯದ ಎಲ್ಲ ಲೋಕಸಭಾ ಕ್ಷೇತ್ರಗಳ ಸಂಭವನೀಯ ಅಭ್ಯರ್ಥಿಗಳ ಕುರಿತು ಎಐಸಿಸಿ ವರಿಷ್ಠರು ವಿವಿಧ ಮೂಲ­ಗಳಿಂದ ವರದಿ ತರಿಸಿಕೊಂಡಿದ್ದಾರೆ. ಎಐಸಿಸಿ ವೀಕ್ಷಕರು, ಪಕ್ಷದ ಪರವಾಗಿ ರಹಸ್ಯ ಸಮೀಕ್ಷೆ ನಡೆಸಿರುವ ಸಂಸ್ಥೆಗಳು ಮತ್ತು ಗುಪ್ತದಳ ನೀಡಿರುವ ಮಾಹಿತಿ ಕುರಿತು ಸೋಮವಾರದ ಸಭೆಯಲ್ಲಿ ಸಮಾಲೋಚನೆ ನಡೆಯಲಿದೆ. ಈ ವರದಿಗಳಲ್ಲಿ ಉಲ್ಲೇಖಿಸಿರುವ ಸಂಭವ­ನೀಯ ಅಭ್ಯರ್ಥಿಗಳ ಪಟ್ಟಿ ಕುರಿತು ಚುನಾವಣಾ ಸಮಿತಿಯ ಸದಸ್ಯರು ಸಿದ್ದರಾಮಯ್ಯ ಮತ್ತು ಪರಮೇಶ್ವರ್‌ ಅವರಿಂದ ಅಭಿಪ್ರಾಯ ಸಂಗ್ರಹಿಸುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಲೋಕಸಭಾ ಚುನಾವಣೆಗೆ ಅಭ್ಯರ್ಥಿ­ಗಳ ಆಯ್ಕೆಯಲ್ಲಿ ಅನುಸರಿಸಬೇಕಾದ ಮಾನದಂಡಗಳು, ಟಿಕೆಟ್‌ ಹಂಚಿಕೆ­ಯಲ್ಲಿ ಜಾತಿವಾರು ಪ್ರಾತಿನಿಧ್ಯ, ಯುವ­ಕರು ಮತ್ತು ಮಹಿಳೆಯರಿಗೆ ಆದ್ಯತೆ ಮತ್ತಿತರ ವಿಚಾರಗಳ ಬಗ್ಗೆಯೂ ಸಮಾಲೋಚನೆ ನಡೆಯಲಿದೆ. ಚುನಾ­ವಣೆ ಎದುರಿಸಲು ಸರ್ಕಾರ ಮತ್ತು ಪಕ್ಷದ ಕಡೆಗಳಿಂದ ಆಗಬೇಕಾದ ತಯಾರಿ ಬಗ್ಗೆಯೂ ಚರ್ಚೆ ಆಗಲಿದೆ ಎಂದು ಗೊತ್ತಾಗಿದೆ.

ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ತೀವ್ರ ಹಿನ್ನಡೆ ಆಗಿರುವುದರಿಂದ ಪಕ್ಷವು ಲೋಕಸಭಾ ಚುನಾವಣೆಗೆ ಹೊಸ ಕಾರ್ಯತಂತ್ರ ರೂಪಿಸಲು ಮುಂದಾ­ಗಿದೆ. ಈ ಕುರಿತು ಹೈಕಮಾಂಡ್‌ ಮಟ್ಟದಲ್ಲಿ ಈಗಾಗಲೇ ಚರ್ಚೆಗಳು ಆರಂಭವಾಗಿವೆ. ಈ ಕುರಿತು ಮುಖ್ಯ­ಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರಿಗೆ ಮಾಹಿತಿ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಮತ್ತೆ ಇಲ್ಲಿ ಸಭೆ: ಶನಿವಾರ ನಡೆದ ಕೆಪಿಸಿಸಿ ಚುನಾವಣಾ ಸಮಿತಿ ಸಭೆಯಲ್ಲಿ ಹೆಚ್ಚು ಚರ್ಚೆ ಆಗಿಲ್ಲ. ಪ್ರಾಥಮಿಕ ಹಂತದ ಸಮಾಲೋಚನೆಗೆ ಸಭೆ ಸೀಮಿ-­ತ­­ವಾಗಿತ್ತು. ಸೋಮವಾರ ನಡೆ­ಯುವ ಎಐಸಿಸಿ ಚುನಾವಣಾ ಸಮ­ನ್ವಯ ಸಮಿತಿ ಸಭೆಯ ಬಳಿಕ  ಮತ್ತೊಮ್ಮೆ ಕೆಪಿಸಿಸಿ ಚುನಾವಣಾ ಸಮಿತಿ ಸಭೆ ನಡೆಯಲಿದೆ. ಹದಿನೈದು ದಿನಗಳ ಒಳಗೆ ಸಭೆ ನಡೆಯುವ ಸಂಭವವಿದೆ.

ಸಂಭವನೀಯ ಅಭ್ಯರ್ಥಿಗಳ ಪಟ್ಟಿ­ಯನ್ನು ಅಂತಿಮಗೊಳಿಸುವುದು, ಜಾತಿ­ವಾರು ಪ್ರಾತಿನಿಧ್ಯ ಮತ್ತಿತರ ವಿಷಯ­ಗಳ ಕುರಿತು ಸಭೆ­ಯಲ್ಲಿ ಸಿದ್ದರಾಮಯ್ಯ, ಪರ­ಮೇಶ್ವರ್‌ ಅವರಿಗೆ ಖಚಿತವಾದ ಸೂಚನೆಗಳು ದೊರೆಯಲಿವೆ. ಅದರ ಆಧಾರದಲ್ಲೇ ಕೆಪಿಸಿಸಿ ಚುನಾವಣಾ ಸಮಿತಿಯ ಮುಂದಿನ ಸಭೆ ನಡೆಯುತ್ತದೆ. ಚುನಾ­ವಣಾ ರಣತಂತ್ರ ರೂಪಿಸುವ ವಿಚಾ­ರವೂ ಮುಂದಿನ ಸಭೆಯಲ್ಲಿ ಚರ್ಚೆಗೆ ಬರಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಸೋನಿಯಾ, ರಾಹುಲ್‌ ಭೇಟಿ?
ಸಿದ್ದರಾಮಯ್ಯ ಮತ್ತು ಪರಮೇಶ್ವರ್‌ ಇಬ್ಬರೂ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಭೇಟಿಯಾಗುವ ಯೋಚನೆಯಲ್ಲಿ ಇದ್ದಾರೆ. ಆದರೆ, ಈವರೆಗೂ ಭೇಟಿಗೆ ಸಮಯ  ನಿಗದಿಯಾಗಿಲ್ಲ.

ನಿಗಮ ಮತ್ತು ಮಂಡಳಿಗಳಿಗೆ ನೇಮಕ ಪ್ರಕ್ರಿಯೆ ಆರಂಭಿಸುವುದು ಸೇರಿದಂತೆ ಕೆಲವು ಪ್ರಮುಖ ವಿಷಯಗಳ ಕುರಿತು ಸೋನಿಯಾ ಮತ್ತು ರಾಹುಲ್‌ ಜೊತೆ ಚರ್ಚಿಸುವ ಇರಾದೆಯನ್ನು ಇಬ್ಬರೂ ಹೊಂದಿದ್ದಾರೆ. ಪ್ರತ್ಯೇಕವಾಗಿಯೇ ಎಐಸಿಸಿ ಅಧ್ಯಕ್ಷೆ ಮತ್ತು ಉಪಾಧ್ಯಕ್ಷರನ್ನು ಭೇಟಿ ಮಾಡಲು ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರು ಪ್ರಯತ್ನಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT