ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ಎಣಿಕೆ: ಮಧ್ಯಾಹ್ನದ ವೇಳೆಗೆ ಫಲಿತಾಂಶ

Last Updated 4 ಜನವರಿ 2011, 7:30 IST
ಅಕ್ಷರ ಗಾತ್ರ

ತುಮಕೂರು: ಪ್ರತಿಯೊಬ್ಬರು ಕೂತೂಹಲದಿಂದ ಕಾಯುತ್ತಿದ್ದ ‘ಎಣಿಕೆ ದಿನ’ ಕೊನೆಗೂ ಬಂದೇ ಬಿಟ್ಟಿದೆ. ರಾಜಕೀಯ ಪಕ್ಷಗಳ ಭವಿಷ್ಯದ ಜತೆಗೆ ಅಭ್ಯರ್ಥಿಗಳ ಹಣೆಬರಹ ನಿರ್ಧರಿಸಿರುವ ಮತದಾರರ ‘ತೀರ್ಪು’ ಏನಿದೆ ಎನ್ನುವ ನಿಗೂಢ ಪ್ರಕಟವಾಗಲು ಕ್ಷಣಗಣನೆ ಶುರುವಾಗಿದೆ. ಬಹುತೇಕ ಮಧ್ಯಾಹ್ನದೊಳಗೆ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣಾ ಫಲಿತಾಂಶ ಹೊರಬೀಳುವ ನಿರೀಕ್ಷೆ ಇದೆ. ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಯ ಚುನಾವಣೆ ಮತದಾನವನ್ನು ಯಶಸ್ವಿಯಾಗಿ ನಡೆಸಿರುವ ಜಿಲ್ಲಾಡಳಿತ ಮತ ಎಣಿಕೆಗೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಮಂಗಳವಾರ ಬೆಳಿಗ್ಗೆ ಆಯಾ ತಾಲ್ಲೂಕು ಕೇಂದ್ರದಲ್ಲಿ ಮತ ಎಣಿಕೆ ಆರಂಭವಾಗಲಿದೆ.

ಮಾಜಿ ಶಾಸಕ ಬಿ.ಲಕ್ಕಪ್ಪ, ಜಿ.ಪಂ. ಮಾಜಿ ಅಧ್ಯಕ್ಷರಾದ ಕುಸುಮ ಜಗನ್ನಾಥ್, ಶಾಂತಲಾ ರಾಜಣ್ಣ, ಮಾಜಿ ಸದಸ್ಯರಾದ ಕೆ.ಎಚ್.ಕೃಷ್ಣಾರೆಡ್ಡಿ, ಸುಧಾಕರ್‌ಲಾಲ್, ನಾರಾಯಣಮೂರ್ತಿ, ಅರ್ಜುನ್ ಸರ್ಜಾ ತಾಯಿ ಲಕ್ಷ್ಮಿದೇವಮ್ಮ, ಮಾಜಿ ಶಾಸಕ ಎಚ್.ನಿಂಗಪ್ಪ ಪತ್ನಿ ಲಲಿತಾ, ಸಾಫ್ಟ್‌ವೇರ್ ಉದ್ಯಮಿ ಎನ್.ಸಿ.ಕಲಾ, ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಹೆಬ್ಬಾಕ ರವಿ, ಮಾಜಿ ಶಾಸಕ ಗಂಗಹನುಮಯ್ಯ ಪುತ್ರ ಮಾರುತಿ ಸೇರಿದಂತೆ ಜಿಲ್ಲಾ ಪಂಚಾಯಿತಿಗೆ ಸ್ಪರ್ಧಿಸಿರುವ 255 ಅಭ್ಯರ್ಥಿಗಳು ಮತ್ತು ತಾಲ್ಲೂಕು ಪಂಚಾಯಿತಿ 211 ಕ್ಷೇತ್ರಗಳ 784 ಅಭ್ಯರ್ಥಿಗಳ ರಾಜಕೀಯ ಭವಿಷ್ಯವೂ ಇಂದು ನಿರ್ಧಾರವಾಗಲಿದೆ.

ಜಮೀನು, ಹಣ, ವಾಹನ, ಆಭರಣ, ಕುರಿ, ಕೋಳಿ, ಮದ್ಯ..... ಇತ್ಯಾದಿ ರೂಪದಲ್ಲೂ ಇಂತಹವರೇ ಗೆಲ್ಲುತ್ತಾರೆ ಎಂದು ಅವರವರ ನೆಚ್ಚಿನ ಅಭ್ಯರ್ಥಿಗಳ ಪರ ಭಾರಿ ಬೆಟ್ಟಿಂಗ್ ಕೂಡ ಜಿಲ್ಲೆಯ ಎಲ್ಲೆಡೆ ಗುಪ್ತವಾಗಿ ನಡೆದಿರುವುದನ್ನು ಯಾರೂ ಸಹ ಅಲ್ಲಗಳೆಯುತ್ತಿಲ್ಲ. ಇಷ್ಟೇ ಅಲ್ಲ; ಇಂತಿಂಥ ರಾಜಕೀಯ ಪಕ್ಷಗಳು ಇಷ್ಟೇ ಸ್ಥಾನಗಳನ್ನು ಗೆಲ್ಲುತ್ತವೆ ಎನ್ನುವ ಭರವಸೆಯ ಮೇಲೂ ಬೆಟ್ಟಿಂಗ್ ನಡೆದಿದೆ. ಅದರಲ್ಲೂ ಜೆಡಿಎಸ್ ಪರ ಹೆಚ್ಚು ಬೆಟ್ಟಿಂಗ್ ನಡೆದಿದೆ ಎನ್ನುತ್ತಾರೆ ಹೆಸರು ಬಯಸದ ರಾಜಕೀಯ ಮುಖಂಡರೊಬ್ಬರು.

ಸಿ.ಎಸ್.ಪುರ ಜಿ.ಪಂ. ಕ್ಷೇತ್ರದ ಅಧಿಕೃತ ಅಭ್ಯರ್ಥಿ ಸಕಾವುದ್ದಿನ್ ಜೆಡಿಎಸ್‌ಗೆ ‘ಪಲಾಯನ’ ಮಾಡಿದ ಹೊರತಾಗಿ ಕಾಂಗ್ರೆಸ್‌ನಿಂದ 56 ಅಭ್ಯರ್ಥಿಗಳು, ಬಿಜೆಪಿ, ಜೆಡಿಎಸ್‌ನ ತಲಾ 57 ಅಭ್ಯರ್ಥಿಗಳು, ಬಿಎಸ್‌ಪಿ 6, ಸಿಪಿಐ 2, ಸಿಪಿಎಂ 1 ಹಾಗೂ 75 ಸ್ವತಂತ್ರ ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಇಂದು ಹೊರ ಬೀಳಲಿದೆ.

ಗುಬ್ಬಿ ತಾಲ್ಲೂಕಿನ ಕಲ್ಲೂರು ತಾ.ಪಂ. ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಅವಿರೋಧ ಆಯ್ಕೆಯಾಗಿದ್ದಾರೆ. ಉಳಿದ 211 ಕ್ಷೇತ್ರಗಳಲ್ಲಿ ಬಿಜೆಪಿ 209 ಕ್ಷೇತ್ರಗಳಲ್ಲಿ, ಜೆಡಿಎಸ್ 207 ಕ್ಷೇತ್ರಗಳಲ್ಲಿ ಹಾಗೂ ಕಾಂಗ್ರೆಸ್ 194 ಕ್ಷೇತ್ರಗಳಲ್ಲಿ , ಬಿಎಸ್‌ಪಿ 7, ಸಿಪಿಐ 2 ಹಾಗೂ 164 ಮಂದಿ ಸ್ವತಂತ್ರರು ತಮ್ಮ ‘ಅದೃಷ್ಟ’ ತಿಳಿಯಲು ಫಲಿತಾಂಶ ಎದುರು ನೋಡುತ್ತಿದ್ದಾರೆ.

ಜಿಲ್ಲಾ ಪಂಚಾಯಿತಿಯಲ್ಲಿ ಕಳೆದ ಬಾರಿ ಕಾಂಗ್ರೆಸ್ 28, ಜೆಡಿಎಸ್ 26 ಹಾಗೂ ಬಿಜೆಪಿ 3 ಸ್ಥಾನ ಗೆದ್ದುಕೊಂಡಿದ್ದವು. ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಕ್ಕಿರಲಿಲ್ಲ. ಕಾಂಗ್ರೆಸ್. ಜೆಡಿಎಸ್ ಒಂದೊಂದು ಅವಧಿಗೆ ಅಧಿಕಾರ ಹಂಚಿಕೊಂಡು ಆಡಳಿತ ನಡೆಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT