ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ಕಾಂಗ್ರೆಸ್ ಪಟ್ಟಿ?

Last Updated 14 ಏಪ್ರಿಲ್ 2013, 11:21 IST
ಅಕ್ಷರ ಗಾತ್ರ

ನವದೆಹಲಿ: ಕಗ್ಗಂಟಾಗಿರುವ 47 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಕಾಂಗ್ರೆಸ್ ಭಾನುವಾರ ಪ್ರಕಟಿಸುವ ನಿರೀಕ್ಷೆ ಇದೆ.

ಬಹುತೇಕ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಹೆಚ್ಚು ಕಡಿಮೆ ಮುಗಿದಿದೆ. ಬಿಕ್ಕಟ್ಟು ಬಗೆಹರಿಯದ ಬೆರಳೆಣಿಕೆ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಜವಾಬ್ದಾರಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಹೆಗಲಿಗೆ ವರ್ಗಾವಣೆಗೊಂಡಿದೆ.

ಕೇಂದ್ರ ಚುನಾವಣಾ ಸಮಿತಿಯ ಸದಸ್ಯ ಆಸ್ಕರ್ ಫರ್ನಾಂಡಿಸ್,  ಸೋನಿಯಾ ಅವರ ಜತೆ ಸಮಾಲೋಚಿಸಿದ ಬಳಿಕ ಅಂತಿಮ ಪಟ್ಟಿ ಬಿಡುಗಡೆ ಮಾಡಲಿದ್ದಾರೆಂದು ಗೊತ್ತಾಗಿದೆ.

ಹಿರಿಯ ಮುಖಂಡರ ಮಕ್ಕಳ ಟಿಕೆಟ್ ಪ್ರಶ್ನೆಯೂ ಸೋನಿಯಾ ಅವರ ಮುಂದೆ ಶುಕ್ರವಾರ ಚರ್ಚೆಯಾಯಿತು. ಪಕ್ಷ ಸಂಘಟನೆಯಲ್ಲಿ ತೊಡಗಿರುವ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ, ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರ ಪುತ್ರ ಅಜಯ್‌ಸಿಂಗ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ. ಹರಿಪ್ರಸಾದ್ ಅವರ ಸೋದರ, ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ. ಶಿವರಾಂ ಅವರ ಸ್ಪರ್ಧೆಗೆ ಕಾಂಗ್ರೆಸ್ ಅಧ್ಯಕ್ಷರು ಒಪ್ಪಿಗೆ ನೀಡಿದ್ದಾರೆ.

ಪ್ರಿಯಾಂಕ ಖರ್ಗೆ ಗುಲ್ಬರ್ಗ ಜಿಲ್ಲೆಯ ಚಿತ್ತಾಪುರದಿಂದ, ಅಜಯ್‌ಸಿಂಗ್ ಇದೇ ಜಿಲ್ಲೆಯ ಜೇವರ್ಗಿಯಿಂದ, ಶಿವರಾಂ ಬೆಂಗಳೂರಿನ ಮಲ್ಲೇಶ್ವರದಿಂದ ಕಣಕ್ಕಿಳಿಯಲಿದ್ದಾರೆ. ಮತ್ತೊಬ್ಬ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಅವರ ಪುತ್ರಿ ರೂಪಾ ಶಶಿಧರ್ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ. ಕೆಜಿಎಫ್‌ನಿಂದ ರೂಪಾ ಟಿಕೆಟ್ ಕೇಳಿದ್ದರು. ಹೈಕಮಾಂಡ್ ನಿರ್ಧಾರದಿಂದ ಹತಾಶರಾಗಿರುವ ಮುನಿಯಪ್ಪ ಶನಿವಾರ ಸೋನಿಯಾ ಅವರ ಭೇಟಿಗೆ ಸಮಯ ಕೇಳಿದರು. ಆದರೆ, ಸಿಗಲಿಲ್ಲ. ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷರು ಯಾರನ್ನೂ ಭೇಟಿ ಮಾಡುತ್ತಿಲ್ಲ.

ಆದರೆ, ಬಳ್ಳಾರಿ ಸಾಮಾನ್ಯ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳು ಮತ್ತು ನಗರಸಭೆ ಚುನಾವಣೆಯಲ್ಲಿ ಗೆದ್ದಿರುವ ಪ್ರತಿನಿಧಿಗಳ ನಿಯೋಗವನ್ನು ಕಾಂಗ್ರೆಸ್ ಅಧ್ಯಕ್ಷರು ಶನಿವಾರ ಭೇಟಿ ಮಾಡಿದರು. ಇವರಿಗೆ ಸೋನಿಯಾ ಅವರ ಮುಂದೆ ಪಕ್ಷದ ಟಿಕೆಟ್ ಕುರಿತು ಪ್ರಸ್ತಾಪ ಮಾಡಬಾರದು ಎಂದು ಪೂರ್ವ ಷರತ್ತು ಹಾಕಲಾಗಿತ್ತು. ಕೆ.ಸಿ.ಕೊಂಡಯ್ಯ, ಅಲ್ಲಂ ವೀರಭದ್ರಪ್ಪ ಮತ್ತು ದಿವಾಕರ ಬಾಬು, ಪಂಪಾಪತಿ, ಆಂಜನೇಯಲು, `ಬೀಡಿ ಕಾರ್ಮಿಕರ ಕಲ್ಯಾಣ ನಿಧಿ' ಉಪಾಧ್ಯಕ್ಷ ಡಾ. ಸಯ್ಯದ್ ನಾಸಿರ್ ಹುಸೇನ್ ಒಳಗೊಂಡಂತೆ ಅನೇಕರು ನಿಯೋಗದಲ್ಲಿದ್ದರು.

ದಾವಣಗೆರೆ ಉತ್ತರ, ದಾವಣಗೆರೆ ದಕ್ಷಿಣ, ಬಳ್ಳಾರಿ ಸಾಮಾನ್ಯ, ಕಾರವಾರ, ಕಾಪು, ಸುರತ್ಕಲ್ ಹಾಗೂ ಬೆಂಗಳೂರಿನ ಕೆಲವು ಒಳಗೊಂಡಂತೆ ಒಟ್ಟು 47ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿತ್ತು. ಶುಕ್ರವಾರ ಕೆಲವು ಕ್ಷೇತ್ರಗಳ ಬಿಕ್ಕಟ್ಟು ಬಗೆಹರಿದಿದೆ. ಬೆರಳೆಣಿಕೆಯಷ್ಟು ಕ್ಷೇತ್ರಗಳು ಮಾತ್ರ ಉಳಿದುಕೊಂಡಿವೆ. ಭಾನುವಾರ ಸಂಪೂರ್ಣ ಪಟ್ಟಿ ಬಿಡುಗಡೆ ಆಗಬಹುದು ಎಂದು ಮೂಲಗಳು ತಿಳಿಸಿವೆ. ಚನ್ನಪಟ್ಟಣದ ಟಿಕೆಟ್‌ಗೆ ಸಿ.ಪಿ. ಯೋಗೇಶ್ವರ್ ಅವರು ಪ್ರಯತ್ನ ಮುಂದುವರಿಸಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಗೆ ಗೋವಾ ಮಾಜಿ ಮುಖ್ಯಮಂತ್ರಿ ಲುಸಿಯಾನ್ಹೊ ಫೆಲೆರೊ ನೇತೃತ್ವದಲ್ಲಿ ರಚಿಸಲಾಗಿರುವ ಸಮಿತಿ ಮೊದಲ ಸಭೆ ನಡೆದಿದ್ದು ಮಾರ್ಚ್ 25, 26 ಮತ್ತು 27ರಂದು. ಸೋನಿಯಾ ಗಾಂಧಿ ಅಧ್ಯಕ್ಷತೆಯ `ಕೇಂದ್ರ ಚುನಾವಣಾ ಸಮಿತಿ' 28 ರಂದು ಸೇರಿ ಟಿಕೆಟ್ ಹಂಚಿಕೆಗೆ ಮಾನದಂಡ ನಿಗದಿಪಡಿಸಿತು.177 ಅಭ್ಯರ್ಥಿಗಳ ಮೊದಲ ಪಟ್ಟಿ ಏ.5ರಂದು ಪ್ರಕಟವಾಯಿತು.ಎರಡನೇ ಪಟ್ಟಿ ಇನ್ನೂ ಬಿಡುಗಡೆ ಆಗಬೇಕಿದೆ. ನಾಮಪತ್ರಗಳ ಸಲ್ಲಿಕೆಗೆ ಏ.17 ಕೊನೆಯ ದಿನ.

ಇನ್ನೊಂದೆಡೆ ಬಿಜೆಪಿ 176 ಅಭ್ಯರ್ಥಿಗಳ ಎರಡು ಪಟ್ಟಿ ಬಿಡುಗಡೆ ಮಾಡಿದೆ. ಇನ್ನೂ 48 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಪ್ರಕಟಿಸಬೇಕಿದೆ. ಕಾಂಗ್ರೆಸ್ ನಡೆ ನೋಡಿ ಮುಂದಿನ ಹೆಜ್ಜೆ ಇಡುವ ಉದ್ದೇಶವನ್ನು ಬಿಜೆಪಿ ಹೊಂದಿದೆ. ಕಾಂಗ್ರೆಸ್ ಟಿಕೆಟ್ ತಪ್ಪಿದವರಿಗೆ ಕೆಲವೆಡೆ ಕಣಕ್ಕಿಳಿಸುವ ಆಲೋಚನೆಯನ್ನು ಕಮಲ ಪಾಳೆಯ ಹೊಂದಿದೆ ಎಂದು ಹೇಳಲಾಗುತ್ತಿದೆ.

ಗೆಲುವಿನ ಪರಂಪರೆ ಮುಂದುವರಿಸಿ: ಈ ಮಧ್ಯೆ, ಬಳ್ಳಾರಿ ನಗರಸಭೆ ಚುನಾವಣೆಯಲ್ಲಿ ಪಕ್ಷ ಭರ್ಜರಿ ಗೆಲುವು ಸಾಧಿಸಿರುವ ಬಗ್ಗೆ ಸೋನಿಯಾ ಗಾಂಧಿ ಹರ್ಷ ವ್ಯಕ್ತಪಡಿಸಿದರು. ಈ ಗೆಲುವಿನ ಪರಂಪರೆ ಮುಂದುವರಿಸಿ ಎಂದು ಜಿಲ್ಲೆಯ ಮುಖಂಡರಿಗೆ ಹೇಳಿದರು.

ವಿಧಾನಸಭೆ ಚುನಾವಣೆಯಲ್ಲಿ ಎಲ್ಲರೂ ಒಗ್ಗೂಡಿ ಶ್ರಮಿಸಿ ರಾಜಕಾರಣದಲ್ಲಿ ಹಣ- ತೋಳ್ಬಲ ಪ್ರದರ್ಶನ ಮಾಡುತ್ತಿರುವ ಶಕ್ತಿಗಳನ್ನು ಬಗ್ಗುಬಡಿಯಿರಿ ಎಂದು ಸೋನಿಯಾ ಸಲಹೆ ಮಾಡಿದರು.

ಬೆಳಿಗ್ಗೆ ಬಳ್ಳಾರಿ ನಿಯೋಗವನ್ನು ಉದ್ದೇಶಿಸಿ ಸೋನಿಯಾ ಮಾತನಾಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT