ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ಕಾಂಗ್ರೆಸ್, ಬಿಜೆಪಿ ಪಟ್ಟಿ?

Last Updated 4 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಮುಂದಿನ ತಿಂಗಳ 5ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಹಾಗೂ ಆಡಳಿತಾರೂಢ ಬಿಜೆಪಿ ಉಮೇದುವಾರರ ಪಟ್ಟಿ ಶುಕ್ರವಾರ ಹೊರಬೀಳುವ ಸಂಭವ ಇದೆ.

ಸುಮಾರು 200 ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಯಾದಿ ಸಿದ್ಧವಾಗಿದೆ. ಹತ್ತು ಮಹಿಳೆಯರು ಮತ್ತು ಯುವ ಕಾಂಗ್ರೆಸ್‌ನ ನಾಲ್ವರಿಗೆ ಅವಕಾಶ ದೊರೆತಿದೆ ಎಂದು ಮೂಲಗಳು ತಿಳಿಸಿವೆ.

ಬೆಂಗಳೂರು ದಕ್ಷಿಣದಿಂದ ತೇಜಸ್ವಿನಿ ಗೌಡ, ಪುತ್ತೂರಿನಿಂದ ಶಕುಂತಲಾ ಶೆಟ್ಟಿ, ರಾಜಾಜಿನಗರದಿಂದ ಮಂಜುಳಾ ನಾಯ್ಡು, ತೇರದಾಳದಿಂದ ಉಮಾಶ್ರೀ, ಬೆಳಗಾವಿ ಗ್ರಾಮಾಂತರ ಕ್ಷೇತ್ರದಿಂದ ಲಕ್ಷ್ಮಿ ಹೆಬ್ಬಾಳಕರ ಅವರಿಗೆ ಟಿಕೆಟ್ ಸಿಗಲಿದೆ ಎಂದು ಗೊತ್ತಾಗಿದೆ.

ಪಕ್ಷೇತರ ಶಾಸಕರಾದ ಪಿ.ಎಂ. ನರೇಂದ್ರಸ್ವಾಮಿ, ಶಿವರಾಜ  ತಂಗಡಗಿ, ಡಿ.ಸುಧಾಕರ್ ಹಾಗೂ ವೆಂಟಕರಮಣಪ್ಪ ಹಾಗೂ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿರುವ ಶ್ರವಣಬೆಳಗೊಳದ ಮಾಜಿ ಶಾಸಕ ಸಿ.ಎಸ್. ಪುಟ್ಟೇಗೌಡ ಅವರಿಗೂ ಟಿಕೆಟ್ ನೀಡಲು ಹೈಕಮಾಂಡ್ ಸಮ್ಮತಿಸಿದೆ ಎಂದು ತಿಳಿದುಬಂದಿದೆ.

ಆದರೆ, ಚನ್ನಪಟ್ಟಣದಿಂದ ಕಣಕ್ಕೆ ಇಳಿಯಲು ಬಯಸಿರುವ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಅವರಿಗೆ ಟಿಕೆಟ್ ದೊರೆಯುವುದು ಅನುಮಾನ. ಜೆಡಿಎಸ್ ತೊರೆದು ಕಾಂಗ್ರೆಸ್ ಕಡೆ ವಾಲಿರುವ ಮದ್ದೂರು ಕ್ಷೇತ್ರದ ಮಾಜಿ ಶಾಸಕಿ ಕಲ್ಪನಾ ಸಿದ್ಧರಾಜು ಅವರಿಗೆ ಟಿಕೆಟ್ ನೀಡುವ ವಿಚಾರ ಎಸ್.ಎಂ. ಕೃಷ್ಣ ನಿಲುವನ್ನು ಅವಲಂಬಿಸಿದೆ ಎಂದು ಕಾಂಗ್ರೆಸ್‌ನ ಮುಖಂಡರೊಬ್ಬರು ತಿಳಿಸಿದರು.

ನೆನೆಗುದಿಗೆ: ಕೇಂದ್ರದ ಮೂವರು ಸಚಿವರ ಮಕ್ಕಳಿಗೆ ಟಿಕೆಟ್ ನೀಡುವ ಪ್ರಸ್ತಾವ ನೆನೆಗುದಿಗೆ ಬಿದ್ದಿದೆ. ಜತೆಗೆ, ದಾವಣಗೆರೆ ಉತ್ತರ ಮತ್ತು ದಕ್ಷಿಣ, ಭದ್ರಾವತಿ, ಮುಳಬಾಗಲು ಸೇರಿದಂತೆ ಸುಮಾರು 25 ಕಡೆ ಅಭ್ಯರ್ಥಿಗಳ ಆಯ್ಕೆಯಲ್ಲಿ ತೊಡಕು ನಿವಾರಣೆ ಆಗಿಲ್ಲ.

ಪಕ್ಷದ ಹಾಲಿ ಶಾಸಕರಲ್ಲಿ ಚಿಂತಾಮಣಿ ಕ್ಷೇತ್ರ ಪ್ರತಿನಿಧಿಸಿರುವ ಡಾ.ಎಂ.ಸಿ.ಸುಧಾಕರ್ ಅವರು ಟಿಕೆಟ್‌ಗೆ ಅರ್ಜಿ ಸಲ್ಲಿಸಿಲ್ಲ. ಹೀಗಾಗಿ ಅವರ ಹೆಸರನ್ನು ಪರಿಗಣಿಸಿಲ್ಲ. ಇತ್ತೀಚೆಗೆ ಕಾಂಗ್ರೆಸ್ ಸೇರಿರುವ ವಾಣಿ ಕೃಷ್ಣಾರೆಡ್ಡಿ ಅವರನ್ನು ಈ ಕ್ಷೇತ್ರದಿಂದ ಕಣಕ್ಕೆ ಇಳಿಸುವ ಕುರಿತು ಚಿಂತನೆ ನಡೆದಿದೆಯಾದರೂ ಅಂತಿಮ ತೀರ್ಮಾನ ಆಗಿಲ್ಲ ಎಂದು ಗೊತ್ತಾಗಿದೆ.

ಇಬ್ರಾಹಿಂ ಪಟ್ಟು: ಭದ್ರಾವತಿಯಿಂದ ಕಣಕ್ಕೆ ಇಳಿಯಲು ಸಿ.ಎಂ.ಇಬ್ರಾಹಿಂ ಪಟ್ಟು ಹಿಡಿದಿದ್ದಾರೆ. ಆದರೆ, ಅವರಿಗೆ ಟಿಕೆಟ್ ನೀಡುವ ಕುರಿತು ಅಭ್ಯರ್ಥಿ ಆಯ್ಕೆ ಪರಿಶೀಲನಾ ಸಮಿತಿಯಲ್ಲಿ ಒಮ್ಮತ ಮೂಡಿಲ್ಲ. ಈ ಕ್ಷೇತ್ರವನ್ನು ಪ್ರತಿನಿಧಿಸಿರುವ ಬಿ.ಕೆ.ಸಂಗಮೇಶ್ವರ ಅವರೂ ಟಿಕೆಟ್ ಆಕಾಂಕ್ಷಿ. ಹೀಗಾಗಿ ನಿರ್ಧಾರ ಆಗಿಲ್ಲ. ಮುಳಬಾಗಲು ಕ್ಷೇತ್ರದ ಶಾಸಕ ಅಮರೇಶ್ ಅವರಿಗೆ ಕೋರ್ಟ್ ಆದೇಶವೊಂದು ತೊಡರುಗಾಲು ಆಗಿದೆ. ಈ ಕುರಿತು ಮರುಪರಿಶೀಲನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಮಹಿಳೆಯರಿಗೆ 10 ಸ್ಥಾನ ಮಾತ್ರ: ಮಹಿಳೆಯರಿಗೆ ಹಾಗೂ ಯುವಕರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡುವುದಾಗಿ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಭರವಸೆ ನೀಡಿದ್ದರು. ಆದರೆ, ಮಹಿಳೆಯರಿಗೆ 10 ಕ್ಷೇತ್ರಗಳಲ್ಲಿ ಮಾತ್ರ ಅವಕಾಶ ನೀಡಲಾಗಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

2008ರ ಚುನಾವಣೆಯಲ್ಲಿ ಪಕ್ಷ 11 ಮಂದಿ ಮಹಿಳೆಯರನ್ನು ಕಣಕ್ಕೆ ಇಳಿಸಿತ್ತು. ಮುಸ್ಲಿಂ ಸಮುದಾಯದ ಮುಖಂಡರು ಒಟ್ಟು 28 ಕ್ಷೇತ್ರಗಳಲ್ಲಿ ಟಿಕೆಟ್ ನೀಡುವಂತೆ ಆಗ್ರಹಿಸಿದ್ದಾರೆ. ಕಳೆದ ಸಲ 16 ಮಂದಿಗೆ ಅವಕಾಶ ನೀಡಲಾಗಿತ್ತು. ಈ ಸಲ 19ರಿಂದ 20 ಮಂದಿಗೆ ಟಿಕೆಟ್ ದೊರೆಯಬಹುದು ಎಂದು ಮೂಲಗಳು ಹೇಳಿವೆ.

ಅಡ್ಡ ಮತಕ್ಕೆ `ಕ್ಷಮೆ': ಬಿಜೆಪಿಯ `ಆಪರೇಷನ್ ಕಮಲ'ದ ಆಮಿಷಕ್ಕೆ ಒಳಗಾದ ಯಾರೊಬ್ಬರಿಗೂ ಟಿಕೆಟ್ ನೀಡಬಾರದು ಎಂದು ಕಾಂಗ್ರೆಸ್ ನಿರ್ಧರಿಸಿದೆ. ಆದರೆ, ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದ ಶಾಸಕರಿಗೆ `ಕ್ಷಮೆ' ತೋರುವ ಯೋಚನೆಯಲ್ಲಿದೆ. ಸಾಂದರ್ಭಿಕ ಸಾಕ್ಷ್ಯಗಳನ್ನು ಆಧರಿಸಿ ಟಿಕೆಟ್ ನಿರಾಕರಣೆಯಂಥ ದೊಡ್ಡ `ಶಿಕ್ಷೆ' ಬೇಡ ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎಂದು ಮೂಲಗಳು ದೃಢಪಡಿಸಿವೆ.

ದೆಹಲಿಗೆ ಬಿಜೆಪಿ ನಾಯಕರು: ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಶಿ, ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಡಿ.ವಿ.ಸದಾನಂದಗೌಡ, ಸಂಸದ ಅನಂತಕುಮಾರ್ ಶುಕ್ರವಾರ ಬೆಳಿಗ್ಗೆ ದೆಹಲಿಗೆ ತೆರಳುವರು. ಬಿಜೆಪಿ ರಾಜ್ಯ ಘಟಕ ಸಿದ್ಧಪಡಿಸಿರುವ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನೂ ಕೊಂಡೊಯ್ಯುವರು. ಮಧ್ಯಾಹ್ನದ ವೇಳೆಗೆ ಬಿಜೆಪಿ ಸಂಸದೀಯ ಮಂಡಳಿ ಸಭೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಶೆಟ್ಟರ್ ಮತ್ತು ಜೋಶಿ ತೆಗೆದುಕೊಂಡು ಹೋಗುವ ಪಟ್ಟಿಗೆ ಬಿಜೆಪಿ ಸಂಸದೀಯ ಮಂಡಳಿ ಔಪಚಾರಿಕವಾಗಿ ಅನುಮೋದನೆ ನೀಡಲಿದೆ.ಬಳಿಕ 140 ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ ಎಂದು ಗೊತ್ತಾಗಿದೆ.

ಘೋಷ ವಾಕ್ಯ
`ಸ್ವಚ್ಛ ಆಡಳಿತ - ಸಮರ್ಥ ನಾಯಕತ್ವ' ಎಂಬ ಘೋಷವಾಕ್ಯ ಮುಂದಿಟ್ಟುಕೊಂಡು ಈ ಬಾರಿಯ ವಿಧಾನಸಭಾ ಚುನಾವಣೆ ಪ್ರಚಾರ ಕಾರ್ಯ ಕೈಗೊಳ್ಳಲು ಕಾಂಗ್ರೆಸ್ ನಿರ್ಧರಿಸಿದೆ. ಅಲ್ಲದೆ, ಪ್ರಚಾರದ ವೇಳೆ ಸ್ವಚ್ಛ ಆಡಳಿತಕ್ಕೆ ಹೆಚ್ಚಿನ ಆದ್ಯತೆ ನೀಡಲು ಪಕ್ಷ ತೀರ್ಮಾನಿಸಿದೆ.

ಚುನಾವಣಾ ಪ್ರಚಾರ ಸಕಾರಾತ್ಮಕವಾಗಿರಬೇಕು. ಈ ಬಗ್ಗೆ ನಿಗಾ ವಹಿಸಬೇಕು ಎಂದು ರಾಜ್ಯ ಮುಖಂಡರಿಗೆ ಸೂಚನೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT