ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ಕೀನ್ಯಾ- ಕೆನಡಾ ಪೈಪೋಟಿ

Last Updated 6 ಮಾರ್ಚ್ 2011, 18:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕೀನ್ಯಾ ಮತ್ತು ಕೆನಡಾ ತಂಡಗಳು ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಇದುವರೆಗೆ ಆಡಿದ ಎಲ್ಲ ಮೂರು ಪಂದ್ಯಗಳಲ್ಲೂ ಸೋಲು ಅನುಭವಿಸಿವೆ. ಮಾತ್ರವಲ್ಲ ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಎರಡು ಸ್ಥಾನಗಳಲ್ಲಿವೆ.ಈ ತಂಡಗಳು ಯಾವುದೇ ಪವಾಡ ನಡೆದರೂ ಕ್ವಾರ್ಟರ್ ಫೈನಲ್ ಪ್ರವೇಶಿಸುವ ಸಾಧ್ಯತೆಯಿಲ್ಲ. ಮೊದಲ ಸುತ್ತಿನ ಬಳಿಕ ತವರಿಗೆ ಮರಳುವುದು ಖಚಿತ. ಆದರೆ ಟೂರ್ನಿಯಲ್ಲಿ ಯಾವುದೇ ಗೆಲುವು ಸಾಧಿಸದೆ ತವರಿಗೆ ಮರಳುವುದನ್ನು ಈ ತಂಡಗಳು ಎದುರುನೋಡುತ್ತಿಲ್ಲ.

ಕನಿಷ್ಠ ಒಂದು ಗೆಲುವು ಪಡೆದು ಅಲ್ಪ ಘನತೆ ಕಾಪಾಡಿಕೊಳ್ಳುವ ಕನಸಿನಲ್ಲಿ ಈ ತಂಡಗಳು ಇವೆ. ಇಂತಹ ಕನಸನ್ನು ಈಡೇರಿಸಿಕೊಳ್ಳುವ ಅವಕಾಶ ಉಭಯ ತಂಡಗಳಿಗೂ ಲಭಿಸಿದೆ. ಸೋಮವಾರ ನವದೆಹಲಿಯ ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ನಡೆಯುವ ‘ಎ’ ಗುಂಪಿನ ಪಂದ್ಯದಲ್ಲಿ ಕೀನ್ಯಾ- ಕೆನಡಾ ಪರಸ್ಪರ ಪೈಪೋಟಿ ನಡೆಸಲಿವೆ.

ಈ ಪಂದ್ಯದ ಫಲಿತಾಂಶವು ಗುಂಪಿನ ಇತರ ತಂಡಗಳ ಮೇಲೆ ಯಾವುದೇ ಪರಿಣಾಮ ಬೀರದು. ಆದರೆ ಕೀನ್ಯಾ ಮತ್ತು ಕೆನಡಾ ಪಾಲಿಗೆ ಇದು ಮಹತ್ವದ ಪಂದ್ಯ. ಏಕೆಂದರೆ ಗೆಲುವು ಪಡೆಯುವ ತಂಡಕ್ಕೆ ಪಾಯಿಂಟ್‌ಗಳ ಖಾತೆ ತೆರೆಯಬಹುದು. ಪ್ರಸಕ್ತ ಟೂರ್ನಿಯಲ್ಲಿ ದುರ್ಬಲ ಎನಿಸಿರುವ ಐರ್ಲೆಂಡ್ ತಂಡ ಇಂಗ್ಲೆಂಡ್‌ಗೆ ಶಾಕ್ ನೀಡಿತ್ತು. ಆದರೆ ಕೆನಡಾ ಮತ್ತು ಕೀನ್ಯಾ ಅಂತಹ ಯಾವುದೇ ಅಚ್ಚರಿಯ ಫಲಿತಾಂಶ ನೀಡಿಲ್ಲ. ಕಳೆದ ಪಂದ್ಯದಲ್ಲಿ ಕೆನಡಾ ಪಾಕಿಸ್ತಾನಕ್ಕೆ ಅಲ್ಪ ನಡುಕ ಹುಟ್ಟಿಸಿತ್ತು. ಪಾಕ್ ತಂಡವನ್ನು 184 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಕೆನಡಾ ಯಶ ಕಂಡಿತ್ತು. ಆದರೆ ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿದ ಕಾರಣ ತಂಡಕ್ಕೆ ಅಚ್ಚರಿ ಉಂಟುಮಾಡಲು ಆಗಲಿಲ್ಲ.

185 ರನ್‌ಗಳ ಗುರಿ ಬೆನ್ನಟ್ಟಿದ್ದ ತಂಡ ಒಂದು ಹಂತದಲ್ಲಿ ಮೂರು ವಿಕೆಟ್‌ಗೆ 104 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿತ್ತು. ಬಳಿಕ ಹಠಾತ್ ಕುಸಿತ ಕಂಡು 138 ರನ್‌ಗಳಿಗೆ ಆಲೌಟಾಗಿತ್ತು.
ಮತ್ತೊಂದೆಡೆ ಕೀನ್ಯಾ ತಂಡದ ಆಡಿದ ಮೂರೂ ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದೆ. ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ಶ್ರೀಲಂಕಾ ವಿರುದ್ಧದ ಪಂದ್ಯಗಳಲ್ಲಿ ಜಿಮ್ಮಿ ಕಮಾಂಡೆ ನೇತೃತ್ವದ ತಂಡ ಕ್ರಮವಾಗಿ 69, 112 ಹಾಗೂ 142 ರನ್‌ಗಳಿಗೆ ಆಲೌಟಾಗಿತ್ತು.

ಬ್ಯಾಟಿಂಗ್‌ನಲ್ಲಿ ಸುಧಾರಣೆ ಕಂಡುಕೊಂಡರೆ ಮಾತ್ರ ಗೆಲುವು ಪಡೆಯಲು ಸಾಧ್ಯ ಎಂದು ಕಮಾಂಡೆ ಹೇಳಿದ್ದಾರೆ. ‘ಪೂರ್ಣ 50 ಓವರ್‌ಗಳನ್ನು ಆಡಲು ಸಾಧ್ಯವಾಗದೇ ಇರುವುದು ಕಳವಳ ಉಂಟುಮಾಡುವ ವಿಚಾರ. ಈ ವಿಭಾಗದಲ್ಲಿ ಸುಧಾರಣೆ ಕಂಡುಕೊಳ್ಳಬೇಕಿದೆ. ಪೂರ್ಣ 50 ಓವರ್‌ಗಳ ಕಾಲ ಬ್ಯಾಟಿಂಗ್ ಸಾಧ್ಯವಾಗದಿದ್ದರೆ, ಪಂದ್ಯದಲ್ಲಿ ಗೆಲುವು ಪಡೆಯುವುದು ಕಷ್ಟ’ ಎಂದು ಅವರು ಭಾನುವಾರ ಸುದ್ದಿಗಾರರಿಗೆ ತಿಳಿಸಿದರು.

ಕೀನ್ಯಾದಂತೆ ಕೆನಡಾ ತಂಡದ ಬ್ಯಾಟಿಂಗ್ ಕೂಡಾ ಉತ್ತಮವಾಗಿಲ್ಲ. ಪ್ರಮುಖ ಬ್ಯಾಟ್ಸ್‌ಮನ್‌ಗಳು ಇನ್ನೂ ಲಯ ಕಂಡುಕೊಂಡಿಲ್ಲ. ‘ಬ್ಯಾಟಿಂಗ್ ನಮ್ಮ ಚಿಂತೆಗೆ ಕಾರಣವಾಗಿದೆ’ ಎಂದು ತಂಡದ ನಾಯಕ ಆಶೀಶ್ ಬಾಗೈ ಹೇಳಿದ್ದಾರೆ. ಒಟ್ಟಿನಲ್ಲಿ ಎರಡೂ ತಂಡಗಳು ಸಮಬಲ ಹೊಂದಿವೆ. ಸತತ ಮೂರು ಸೋಲುಗಳನ್ನು ಅನುಭವಿಸಿ ಆತ್ಮವಿಶ್ವಾಸ ಕಳೆದುಕೊಂಡಿದೆ. ಒಂದು ತಂಡ ಸೋಮವಾರ ಸೋಲಿನ ಸುಳಿಯಿಂದ ಹೊರಬರುವುದು ಖಚಿತ. ಆ ತಂಡ ಯಾವುದು ಎಂಬ ಕುತೂಹಲ ಅಭಿಮಾನಿಗಳದ್ದು.

ಕೆನಡಾ
ಆಶಿಶ್ ಬಾಗೈ (ನಾಯಕ), ರಿಜ್ವಾನ್ ಚೀಮಾ, ಹರ್ವಿರ್ ಬೈಡ್ವಾನ್, ನಿತೀಶ್ ಕುಮಾರ್, ಹೀರಲ್ ಪಟೇಲ್, ಟೈಸನ್ ಗೊರ್ಡಾನ್, ಹೆನ್ರಿ ಒಸಿಂಡೆ, ಜಾನ್ ಡೇವಿಸನ್, ರವಿಂದು ಗುಣಶೇಕರ, ಪಾರ್ಥ್ ದೇಸಾಯಿ, ಖುರ್ರಮ್ ಚೋಹಾನ್, ಜಿಮ್ಮಿ ಹಂಸ್ರಾ, ಜುಬಿನ್ ಸುರ್ಕರಿ ಮತ್ತು ಬಾಲಾಜಿ ರಾವ್.

ಕೀನ್ಯಾ
 ಜಿಮ್ಮಿ ಕಮಾಂಡೆ (ನಾಯಕ), ಸೆರೆನ್ ವಾಟರ್ಸ್‌, ಅಲೆಕ್ಸ್ ಒಬಾಂಡ, ಡೇವಿಡ್ ಒಬುಯಾ, ಕಾಲಿನ್ಸ್ ಒಬುಯಾ, ಸ್ಟೀವ್ ಟಿಕೋಲೊ, ತನ್ಮಯ್ ಮಿಶ್ರಾ, ರಾಕೆಪ್ ಪಟೇಲ್, ಮೌರಿಸ್ ಔಮಾ, ಥಾಮಸ್ ಒಡೊಯೊ, ನೆಹೆಮಿಯಾ ಒದಿಯಾಂಬೊ, ಎಲಿಜಾ ಒಟೀನೊ, ಪೀಟರ್ ಒಂಗೊಂಡೊ, ಶೆಮ್ ನೋಚೆ, ಜೇಮ್ಸ್ ನೋಚೆ.

ಅಂಪೈರ್: ಅಸಾದ್ ರವೂಫ್ ಮತ್ತು ಬಿಲಿ ಡಾಕ್ಟ್ರೋವ್
ಮೂರನೇ ಅಂಪೈರ್: ಬ್ರೂಸ್ ಆಕ್ಸೆನ್‌ಫೋರ್ಡ್;
ಮ್ಯಾಚ್ ರೆಫರಿ: ರಂಜನ್ ಮದುಗಲೆ
ಪಂದ್ಯದ ಆರಂಭ: ಮಧ್ಯಾಹ್ನ 2.30ಕ್ಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT