ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ಕೊನೆಯ ಸುತ್ತು

3 ರಾಜ್ಯಗಳ 41 ಕ್ಷೇತ್ರಗಳಲ್ಲಿ ಮತದಾನ
Last Updated 12 ಮೇ 2014, 6:36 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರ ಕಂಡ ಅತ್ಯಂತ ದೀರ್ಘಾವಧಿಯ, ನವನವೀನ ಪ್ರಚಾರ ತಂತ್ರಗಳ, ರೂಢಿಗತ ಪ್ರಚಾರ ಸಂಪ್ರ­ದಾಯಗಳನ್ನು ಮುರಿದ 16ನೇ ಲೋಕ­ಸಭಾ ಚುನಾ­ವಣೆಯ ಕಟ್ಟಕಡೆ­ಯ ಹಂತದ (ಒಂಬತ್ತನೇ ) ಮತ ಚಲಾ­ವಣೆ ಪ್ರಕ್ರಿಯೆ ಸೋಮವಾರ ಕೊನೆಯಾಗಲಿದೆ.

ಪ್ರಮುಖ ಪಕ್ಷವಾದ ಬಿಜೆಪಿ ಜೊತೆಗೆ ಪ್ರಾದೇಶಿಕ ಪಕ್ಷಗಳಾದ ತೃಣಮೂಲ ಕಾಂಗ್ರೆಸ್‌, ಎಸ್‌ಪಿ ಮತ್ತು ಬಿಎಸ್‌ಪಿ­ಗಳು ಪ್ರಬಲವಾಗಿರುವ ಪ್ರದೇಶಗಳಲ್ಲಿ ಈ ಕ್ಷೇತ್ರಗಳು ಹರಡಿಕೊಂಡಿವೆ.

ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ, ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿ­ವಾಲ್‌ ಮತ್ತು ಕಾಂಗ್ರೆಸ್‌ನ ಅಜಯ್‌ ರಾಯ್‌ ಅವರು ಪರಸ್ಪರ ಎದು­ರಾಳಿಗಳಾಗಿರುವ ವಾರಾ­ಣಸಿ, ಎಸ್‌ಪಿ ಮುಖ್ಯಸ್ಥ ಮುಲಾಯಂ ಸಿಂಗ್‌ ಯಾದವ್‌ ಕಣಕ್ಕಿ­ಳಿ­ದಿರುವ ಅಜಂಗಡ ಈ ಅಂತಿಮ ಹಂತದ ಗಮನ ಸೆಳೆದಿರುವ ಕ್ಷೇತ್ರಗಳಾಗಿವೆ.

35 ದಿನಗಳ ಸುದೀರ್ಘಾವಧಿಯ ಚುನಾವಣೆಯ ಇದುವರೆಗಿನ 8 ಹಂತ­ಗಳಲ್ಲಿ ಶೇ 66ರಷ್ಟು ಮತ­ದಾರರು ಹಕ್ಕು ಚಲಾಯಿಸಿರುವುದು ಒಂದು ದಾಖಲೆಯಾಗಿದೆ. ಅಲ್ಲದೇ, 13 ರಾಜ್ಯ­ಗಳಲ್ಲಿ ಪುರುಷರಿಗಿಂತ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿ­ರುವುದು ಮತ್ತೊಂದು ಗಮನಾರ್ಹ ಅಂಶವಾಗಿದೆ. ಇದೇ ವೇಳೆ, ಕಡೆಯ ಹಂತದಲ್ಲೂ ಬಿರುಸಿನ ಮತದಾನ­ವಾಗುವ ನಿರೀಕ್ಷೆ ಇದೆ.

ತುರುಸಿನ ಪೈಪೋಟಿ: ರಾಷ್ಟ್ರ ರಾಜ­ಕಾರಣದ ಮುಖ್ಯ ಭೂಮಿಕೆ­­ಯೆಂದೇ ಹೆಸರಾದ ಉತ್ತರ ಪ್ರದೇಶದ 18 ಕ್ಷೇತ್ರಗಳಲ್ಲಿ ಸಮಾಜ­ವಾದಿ ಪಕ್ಷ, ಬಿಎಸ್‌ಪಿ, ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳು ತುರುಸಿನ ಪೈಪೋಟಿಯಲ್ಲಿವೆ.

ಪಶ್ಚಿಮ ಬಂಗಾಳದ 17 ಕ್ಷೇತ್ರಗಳಲ್ಲಿ ಟಿಎಂಸಿ ಪ್ರಾಬಲ್ಯವಿದ್ದು ಮತ್ತೊಮ್ಮೆ ಜನಬೆಂಬಲ ಪ್ರದರ್ಶಿಸುವ ಉತ್ಸಾಹ­ದಲ್ಲಿದೆ. ಬಿಹಾರದ 6 ಕ್ಷೇತ್ರಗಳಲ್ಲಿ ಬಿಜೆಪಿ, ಜೆಡಿಯು ಮತ್ತು ಆರ್‌ಜೆಡಿ ಸೆಣಸುತ್ತಿವೆ.

ಕೇಂದ್ರ ಸಚಿವ ಅಧೀರ್‌ ರಂಜನ್‌ ಚೌಧರಿ (ಪಶ್ಚಿಮ ಬಂಗಾಳದ ಬೆಹ್ರಾಂ­ಪುರ), ಬಿಜೆಪಿಯ ಜಗ­ದಾಂಬಿಕಾ ಪಾಲ್‌ (ದೊಮರಿಯಾ­ಗಂಜ್‌, ಉ.ಪ್ರ), ಕೇಂದ್ರ ಸಚಿವ ಆರ್‌ಪಿಎನ್‌ ಸಿಂಗ್‌ (ಕುಷಿನಗರ್‌ – ಉ.ಪ್ರ), ಆರ್‌ಜೆಡಿ ಮುಖಂಡ ರಘುವಂಶ ಪ್ರಸಾದ್‌ ಸಿಂಗ್‌ (ವೈಶಾಲಿ– ಬಿಹಾರ) ಕಣದಲ್ಲಿರುವ ಪ್ರಮುಖರಾಗಿದ್ದಾರೆ.

ಮತ ಚಲಾವಣೆ ಪ್ರಕ್ರಿಯೆ ಅಂತಿಮಘಟ್ಟಕ್ಕೆ ಬರುವುದರೊಂದಿಗೆ ಈಗ ಎಲ್ಲರ ಕುತೂಹಲ ಮೇ 16ರ ಮತ ಎಣಿಕೆಯತ್ತ ನೆಟ್ಟಿದೆ.

ಮತಗಟ್ಟೆ ಸಮೀಕ್ಷೆ ಸಂಜೆ 6.30ರ ನಂತರ: ಮತಗಟ್ಟೆ ಸಮೀಪ ಸಮೀಕ್ಷೆಯ ಫಲಿತಾಂಶ­ಗಳನ್ನು ಸೋಮ­ವಾರ ಸಂಜೆ 6.30ರ ನಂತರವೇ ಪ್ರಸಾರ ಮಾಡು­­ವುದಕ್ಕೆ ಅವಕಾಶ ಇದೆ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.

ಜನಪ್ರತಿನಿಧಿ ಕಾಯ್ದೆಯ 126 ಎ ವಿಧಿ ಅನ್ವಯ ಸೋಮವಾರ ಸಂಜೆ 6.30ರ ನಂತರವಷ್ಟೇ ಮತಗಟ್ಟೆ ಸಮೀಕ್ಷೆ ಫಲಿತಾಂಶ ಪ್ರಸಾರಕ್ಕೆ ಅನು­ಮತಿ ಇದೆ ಎಂದು ಹೇಳಿರುವ ಆಯೋ­ಗವು ಈ ಬಗೆಗಿನ ಎಲ್ಲ ಗೊಂದಲಗಳಿಗೆ ತೆರೆ ಎಳೆದಿದೆ.

ಬಿಜೆಪಿ ಆತಂಕ: ಉತ್ತರ ಪ್ರದೇಶದಲ್ಲಿ ಆಡಳಿತಾ­ರೂಢ ಸಮಾಜವಾದಿ ಪಕ್ಷವು ಸೋಮವಾರದ ಚುನಾವಣೆಗೆ ಭಂಗ ಉಂಟುಮಾಡುವ ಸಾಧ್ಯತೆಗಳಿವೆ ಎಂದು ಆತಂಕ ವ್ಯಕ್ತಪಡಿಸಿ ಬಿಜೆಪಿಯು ಚುನಾವಣೆ ಆಯೋಗಕ್ಕೆ ದೂರು ಬರೆದಿದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT