ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ತೆಲಂಗಾಣ ಚುನಾವಣೆ: ಮತದಾರನಿಗೂ ಪರೀಕ್ಷೆ

Last Updated 29 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಖಮ್ಮಂ (ಆಂಧ್ರಪ್ರದೇಶ): ‘ಉದಯಿಸ­ಲಿ­ರುವ ತೆಲಂಗಾಣಕ್ಕೆ ನಡೆಯುತ್ತಿರುವ ಈ ಚುನಾವಣೆ ರಾಜಕೀಯ ಪಕ್ಷಗಳಿಗೆ, ಕಣದಲ್ಲಿರುವ ಅಭ್ಯರ್ಥಿಗಳಿಗಷ್ಟೇ ಪರೀ­ಕ್ಷೆ­ಯಲ್ಲ; ಮತದಾರರಿಗೂ ಪರೀಕ್ಷೆ...’ ಎಂದರು ಖಮ್ಮಂ ನಿವಾಸಿ, ಶಿಕ್ಷಕ ಜಿ. ಸುಧಾಕರ್‌.

‘ಏಕೆ’ ಎಂದು ಪ್ರಶ್ನಿಸಿದ್ದಕ್ಕೆ, ‘ತೆಲಂ­ಗಾಣ ಜನರ ಬದುಕನ್ನು ಬಂಗಾರ­ವಾಗಿ­ಸುತ್ತೇವೆ ಅಂತ ಎಲ್ಲ ಪಕ್ಷಗಳೂ ಭರವಸೆ­ಗಳನ್ನು ಸುರಿಯುತ್ತಿವೆ. ಆದರೆ, ಸರ್ವಾಂ­ಗೀಣ, ಸಮತೋಲನ ಅಭಿ­ವೃದ್ಧಿಗೆ ಸಂಬಂಧಿಸಿದಂತೆ ಯಾವ ಪಕ್ಷದಲ್ಲೂ ಸ್ಪಷ್ಟ ನೀಲನಕ್ಷೆ ಇಲ್ಲ. ಮತದಾರರು ಭಾವದ ಬೆನ್ನೇರಿದ್ದಾರೆ. ನಾಯಕರು ಗಿಲೀಟು ತಂತ್ರಗಳ ಮೊರೆ ಹೋಗಿದ್ದಾರೆ. ಆಯ್ಕೆಗೆ ಗೊಂದಲ ಎದುರಾಗಿದೆ’ ಎಂದು ಪಕ್ಷಗಳ ನಡೆ ಕುರಿತು ಅಸಮಾ­ಧಾನ ವ್ಯಕ್ತಪಡಿಸಿದರು.

‘ನವತೆಲಂಗಾಣವನ್ನು ಮುನ್ನಡೆಸಲು ನಾಯಕತ್ವದ ಕೊರತೆ ಇದೆಯೇ’ ಎಂದು  ಕೇಳಿದಾಗ, ‘ಹಾಗೇನಿಲ್ಲ. ಟಿಆರ್‌ಎಸ್‌ ಅಧ್ಯಕ್ಷ ಕೆ.ಚಂದ್ರಶೇಖರ ರಾವ್‌ ನಿಭಾ­ಯಿ­ಸಬಲ್ಲರು. ಆದರೆ, ಆ ಪಕ್ಷ ತೆಲಂಗಾಣದ ಶಿವಸೇನೆಯಾಗಿ ರೂಪಾಂತ­ರ­­ಗೊಳ್ಳುವ ಲಕ್ಷಣಗಳು ಕಾಣಿಸುತ್ತಿವೆ. ಮುಖಂಡರ ಮಾತಿನ ವರಸೆ, ನಡೆಯಲ್ಲಿ ಆ ಲಕ್ಷಣಗಳು ಢಾಳಾಗಿ ಗೋಚರಿಸುತ್ತವೆ’ ಎಂದು ಆಕ್ಷೇಪದ ದನಿಯಲ್ಲಿ ಹೇಳಿದರು.

‘ಕಾಂಗ್ರೆಸ್‌ ಮುಖಂಡರು ಹೈಕ­ಮಾಂಡ್‌ನ ಕೈಗೊಂಬೆಗಳು. ಸ್ವಂತ ಸಾಮರ್ಥ್ಯ, ದೂರದೃಷ್ಟಿ ಇಲ್ಲ. ಟಿಡಿಪಿ–ಬಿಜೆಪಿ ಹಾಗೂ ಎಡಪಂಥೀಯ ಪಕ್ಷ­ಗಳಿಗೆ ಅವಕಾಶ ಇದ್ದಂತಿಲ್ಲ’ ಎಂದರು. ಈ ಕೊರಗಿನ ಹಿಂದೆ, ಸ್ಥಿರ ಸರ್ಕಾರ ಬರಲಿ ಎಂಬ ಆಶಯ ಹಾಗೂ ತೆಲಂಗಾಣ ಜನರ ಕನಸು ಸಾಕಾರಗೊಳ್ಳಲಿ ಎಂಬ ಬಯಕೆಯೂ ಇತ್ತು. ಇದು ಅವ­ರೊ­ಬ್ಬರ ಆಶಯ ಮಾತ್ರವಲ್ಲ, ತೆಲಂಗಾಣದ ಭಾಗದ ಅನೇಕರ ಹಂಬಲ.

ಪಾಲೇರು ಗ್ರಾಮದ ಬಳಿ ಮರದಡಿ ಕುಳಿತು ದಿನಪತ್ರಿಕೆ ಓದುತ್ತಿದ್ದ ವೆಂಕಟೇಶ್ವ­ರಲು ಅವರನ್ನು ಮಾತಿಗೆ ಎಳೆದರೆ ಅವರು, ಸಾಲ ಮನ್ನಾ ವಿಷಯದಲ್ಲಿ ವಿವಿಧ ಪಕ್ಷಗಳ ನಡುವೆ ನಡೆದಿರುವ ಪೈಪೋಟಿಯನ್ನು ಪ್ರಸ್ತಾಪಿ­ಸಿದರು. ‘ಸಾಲ ಮನ್ನಾ ರೈತರ ಮತ ಸೆಳೆ­ಯುವ ಅಗ್ಗದ ಗಿಮಿಕ್ ಆಗಿ ಪರಿವರ್ತನೆ ಆಗಿದೆ. ಹಿಂದಿದ್ದ ಸರ್ಕಾರಗಳೂ ಇದನ್ನೇ ಮಾಡಿವೆ. ಆದರೆ 1998ರಿಂದ ಈಚೆಗೆ ಆಂಧ್ರಪ್ರದೇಶದಲ್ಲಿ 5,724 ಮಂದಿ ರೈತರು ಆತ್ಮಹತ್ಮೆ ಮಾಡಿಕೊಂಡಿದ್ದಾರೆ. ಸರ್ಕಾರ ಬಿಡುಗಡೆ ಮಾಡಿರುವ ಅಧಿಕೃತ ಲೆಕ್ಕ ಇದು. ಈ ಸಾವು ತಡೆ­ಯಲು ಸಾಲ ಮನ್ನಾ ಒಂದೇ ಪರಿ­ಹಾರವೇ. ಈ ಮತಿಗೆಟ್ಟ ರಾಜಕಾರಣ ಎಲ್ಲಿಗೆ ಒಯ್ಯುವುದೋ’ ಎಂದು ಅವರು ಆತಂಕಪಟ್ಟರು.

ಇವರು ಪದವೀಧರರು. ಹಳ್ಳಿಯಲ್ಲೇ ಇದ್ದು ವ್ಯವಸಾಯ ಮಾಡಿಸುತ್ತಿದ್ದಾರೆ. ಪಾಲೇರು ಕ್ಷೇತ್ರ­ದಿಂದ ಕಾಂಗ್ರೆಸ್ಸಿನ ರಾಮ್‌ರೆಡ್ಡಿ ವೆಂಕಟರೆಡ್ಡಿ ಪುನರಾಯ್ಕೆ ಬಯಸಿದ್ದಾರೆ. ಇವರು ಸಚಿವರೂ ಆಗಿದ್ದರು. ಕ್ಷೇತ್ರದಲ್ಲಿ ಬಹುಮುಖ ಸ್ಪರ್ಧೆ ಇದೆ. ಗೆಲುವು ಸುಲಭ ತುತ್ತಲ್ಲ.
ಹೈದರಾಬಾದ್‌ಗೆ ಸನಿಹದಲ್ಲಿರುವ ಮೆದಕ್‌ ಸ್ಥಿತಿಗೆ ಹೋಲಿಸಿದರೆ ರಾಜ­ಧಾನಿ­ಯಿಂದ 200 ಕಿ.ಮೀ. ದೂರ­ದಲ್ಲಿರುವ ಖಮ್ಮಂ ಅಭಿವೃದ್ಧಿಯಲ್ಲಿ ಬಹಳಷ್ಟು ಮುಂದಿದೆ. ನಗರದ ರಸ್ತೆಗಳು ವಿಶಾಲವಾಗಿವೆ. ಅದಕ್ಕಿಂತ ಹೆಚ್ಚಿಗೆ ಸುಸ್ಥಿತಿಯಲ್ಲಿವೆ. ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆ, ರೈಲು ನಿಲ್ದಾಣ ಮೊದಲಾದ ಸೌಲಭ್ಯಗಳನ್ನು ಹೊಂದಿದೆ. ಮೂಲ ಸೌಕರ್ಯ ಒದಗಿಸಿಕೊಡುವಲ್ಲಿ ಖಮ್ಮಂ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿರುವ ತೆಲುಗುದೇಶಂ ಪಕ್ಷದ ಹಿರಿಯ ಮುಖಂಡ ತುಮ್ಮಲ ನಾಗೇಶ್ವರ ರಾವ್‌ ಕೊಡುಗೆ ದೊಡ್ಡದು ಎಂದು ಜನರು ನೆನೆಯುತ್ತಾರೆ.

ಆದರೆ, ಈ ಚುನಾವಣೆಯಲ್ಲಿ ತುಮ್ಮಲ, ಕಾಂಗ್ರೆಸ್‌ ಅಭ್ಯರ್ಥಿ ಪುವ್ವಾಡ ಅಜಯಕುಮಾರ್ ಅವರಿಂದ ತೀವ್ರ ಸ್ಪರ್ಧೆ ಎದುರಿಸುತ್ತಿದ್ದಾರೆ. ಇವರಿಗೆ ಸಿಪಿಐ ಬೆಂಬಲವೂ ಇದೆ. ಆರ್.ಜೆ.ಸಿ.ಕೃಷ್ಣ ಅವರು ಟಿಆರ್‌­ಎಸ್‌ನಿಂದ, ಕೂರಾಕುಲ ನಾಗಭೂಷಣಂ ಅವರು ವೈಎಸ್‌ಆರ್‌ ಕಾಂಗ್ರೆಸ್‌ನಿಂದ ಕಣಕ್ಕೆ ಇಳಿದಿದ್ದಾರೆ.

ಸಂಘಟನೆ ಹಾಗೂ ನಾಯಕತ್ವ ದೃಷ್ಟಿಯಿಂದ ಪಕ್ಷ ದುರ್ಬಲವಾಗಿದೆ ಎಂದು ಟಿಆರ್‌ಎಸ್‌ ಮುಖಂಡರೇ ಗುರುತಿಸಿರುವ ಜಿಲ್ಲೆಗಳಲ್ಲಿ ಖಮ್ಮಂ ಒಂದು. ಜಿಲ್ಲೆಯ 10 ವಿಧಾನಸಭಾ ಕ್ಷೇತ್ರಗಳಲ್ಲಿ ಎರಡು–ಮೂರು ಕ್ಷೇತ್ರಗಳ ಬಗ್ಗೆ ಮಾತ್ರ ಗೆಲುವಿನ ನಿರೀಕ್ಷೆ ಹೊಂದಿದೆ. ಅದರಲ್ಲೂ ಕೊತ್ತಗೂಡೆಂ ಕ್ಷೇತ್ರದ ಬಗ್ಗೆ ಪಕ್ಷ ನೂರಕ್ಕೆ ನೂರರಷ್ಟು ಭರವಸೆ ಹೊಂದಿದೆ. ಮಾಜಿ ಮುಖ್ಯಮಂತ್ರಿ ಜಲಗಂ ವೆಂಗಳರಾವ್‌ ಪುತ್ರ ಜಲಗಂ ವೆಂಕಟರಾವ್‌ ಸ್ಪರ್ಧೆ­ಯಿಂದ ಇಲ್ಲಿ ಗೆಲುವಿನ ವಿಶ್ವಾಸ ಚಿಗು­ರಿದೆ. ಪಕ್ಷದ ಬಲಕ್ಕಿಂತ ವ್ಯಕ್ತಿ ಪ್ರಭಾವವೇ ಇಲ್ಲಿ ಅವರನ್ನು ದಡಕ್ಕೆ ದೂಡಬಹುದು ಎಂಬುದು ಜನರ ಅನಿಸಿಕೆ. ಬಹುಮುಖ ಸ್ಪರ್ಧೆ ಇದೆ.

ಜಿಲ್ಲೆಯ ಹಲವು ಕ್ಷೇತ್ರಗಳಲ್ಲಿ ಸಿಪಿಐ ಹಾಗೂ ಸಿಪಿಎಂಗೆ ಸಂಘಟನೆಯ ಬಲ ಇದೆ. ಕಳೆದ ಚುನಾವಣೆಯಲ್ಲಿ ಐದು ಕ್ಷೇತ್ರಗಳಲ್ಲಿ ಗೆದ್ದಿದ್ದ ಕಾಂಗ್ರೆಸ್‌ ಜತೆ ಸಿಪಿಐ ಕೈಜೋಡಿಸಿದೆ. ವೈಎಸ್‌ಆರ್ ಕಾಂಗ್ರೆಸ್ ಜತೆ ಸಿಪಿಎಂ ಮೈತ್ರಿ ಕುದುರಿಸಿ­ಕೊಂಡಿದೆ. ಮೂರು ಕ್ಷೇತ್ರಗಳನ್ನು ಪ್ರತಿ­ನಿಧಿಸಿದ್ದ ಟಿಡಿಪಿಗೆ ಬಿಜೆಪಿ ಬೆಂಬಲ ಇದೆ. ನೆಲೆಯೂರಿರುವ ಈ ಪಕ್ಷಗಳ ನಡುವೆ ಟಿಆರ್‌ಎಸ್‌ ಒಳನುಸುಳಲು ಪ್ರಯತ್ನಿ­ಸಿದೆ. ಆದರೆ, ತೆಲಂಗಾಣ ಸಂಬಂಧದ ಭಾವಸಂಭ್ರಮ, ಕರೀಂನಗರ ಭಾಗದಲ್ಲಿ ಇರುವಂತೆ ಖಮ್ಮಂ ಜಿಲ್ಲೆಯಲ್ಲಿ ಕಾಣಸಿಗದು. ಟಿಆರ್‌ಎಸ್‌, ಹೆಚ್ಚಿಗೆ ‘ವಲಸೆ ಪಕ್ಷಿ’ಗಳನ್ನೇ ನೆಚ್ಚಿಕೊಂಡಿದೆ.

ಖಮ್ಮಂ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದ ಟಿಡಿಪಿಯ ನಾಮ ನಾಗೇಶ್ವರ ರಾವ್‌, ವೈಎಸ್ಆರ್ ಕಾಂಗ್ರೆಸ್‌ನ ಪೊಂಗುಲೇಟಿ ಶ್ರೀನಿವಾಸ ರೆಡ್ಡಿ, ಸಿಪಿಐ ಹಿರಿಯ ಮುಖಂಡ ಕೆ.ನಾರಾಯಣ ಹಾಗೂ ಟಿಆರ್‌ಎಸ್‌ನ ಎಸ್.ಬಿ.ಬೇಗ್‌ ನಡುವೆ ಸ್ಪರ್ಧೆ ಏರ್ಪ­ಟ್ಟಿದೆ. ಪೊಂಗುಲೇಟಿ ಅವರು ಸೇವಾ ಕಾರ್ಯಗಳಿಂದ  ಹೆಸರುವಾಸಿ­ಯಾಗಿ­ದ್ದಾರೆ. ಟಿಡಿಪಿಯಲ್ಲಿ ನಾಮ ಮತ್ತು ತುಮ್ಮಲ ವರ್ಗದ ನಡುವಣ ಭಿನ್ನಾ­ಭಿಪ್ರಾಯ ಪೊಂಗುಲೇಟಿ ಅವರ ಮತ ಗಳಿಕೆಯ ಗ್ರಾಫ್‌ ಏರಿಸಬಹುದು ಎಂಬ ಲೆಕ್ಕಾಚಾರ ಹಾದಿಬೀದಿ ಮಾತಾಗಿದೆ.

‘ಭಾರತ ದೇಶವಷ್ಟೇ ಅಲ್ಲ, ಇಡೀ ಪ್ರಪಂಚ ನರೇಂದ್ರ ಮೋದಿ ಅವರತ್ತ ನೋಡುತ್ತಿದೆ’ ಎಂದು ಬಿಜೆಪಿ ತೆಲಂ­ಗಾಣ ಘಟಕದ ಅಧ್ಯಕ್ಷ ಕಿಷನ್‌ ರೆಡ್ಡಿ ಹೈದರಾಬಾದ್‌ನಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಜೋರು ದನಿಯಲ್ಲಿ ಹೇಳಿ­ದ್ದರು. ಆದರೆ ದೇಶ ಬೇಡ, ತೆಲಂಗಾಣದ ಪ್ರಮುಖ ಜಿಲ್ಲೆಯಾದ ಖಮ್ಮಂನಲ್ಲಿ ಮೋದಿ ಕುರಿತು ಮಾತೇ ಇಲ್ಲ. ‘ತೆಲಂಗಾಣದ ಸೆಂಟಿಮೆಂಟ್‌’ ಅಭ್ಯರ್ಥಿ­ಗಳ ನೆರವಿಗೆ ದೊಡ್ಡ ಮಟ್ಟ­ದಲ್ಲಿ ಬರುವ ಸಾಧ್ಯತೆಗಳು ಗೋಚರಿಸುತ್ತಿಲ್ಲ. ‘ಮೋದಿ ಅಲೆ’ಯೂ ಕಾಣಸಿಗುತ್ತಿಲ್ಲ. ಅಷ್ಟರ­ಮಟ್ಟಿಗೆ ಭಿನ್ನವಾಗಿದೆ ಖಮ್ಮಂ ಜಿಲ್ಲೆಯ ಜನರ ನಡೆ.
ತೆಲಂಗಾಣ ಪ್ರತ್ಯೇಕ ರಾಜ್ಯ ಆಗುತ್ತಿರುವುದಕ್ಕೆ ಜನರಲ್ಲಿ ತುಂಬು ಖುಷಿ ಇದೆ. ಆದರೆ, ಅವರ ಮಾತಿನಲ್ಲಿ ಅತಿಯಾದ ನಿರೀಕ್ಷೆಗಳು ವ್ಯಕ್ತವಾಗು­ವುದಿಲ್ಲ. ಆ ಮಟ್ಟಿಗೆ ಇಲ್ಲಿನ ಜನ ವಾಸ್ತವವಾದಿಗಳು. ರಾಜಧಾನಿಯಿಂದ ದೂರ ಇರುವುದು ಮತ್ತು ಸೀಮಾಂಧ್ರಕ್ಕೆ ಹೊಂದಿಕೊಂಡಿರುವುದು ಇದಕ್ಕೆ ಕಾರಣ ಇರಬಹುದೆ?

ಇದು ಏನೇ ಇರಲಿ, ತೆಲಂಗಾಣ ಜನರಿಗೆ ಇಂದು ಪರ್ವ ದಿನ. ತಾವು ಕನಸಿದ ಹೊಸ ಅರುಣೋದಯಕ್ಕೆ ಮತ ಮುದ್ರೆ ಒತ್ತುವ ಶುಭ ಗಳಿಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT