ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ದಶಮಾನೋತ್ಸವ ಸಂಭ್ರಮ

ನಾರಾವಿ: ಸೇಂಟ್ ಆಂಟನಿ ಪದವಿಪೂರ್ವ ಕಾಲೇಜು
Last Updated 7 ಡಿಸೆಂಬರ್ 2012, 8:42 IST
ಅಕ್ಷರ ಗಾತ್ರ

ಉಜಿರೆ: ಮಂಗಳೂರಿನ ಕೆಥೋಲಿಕ್ ಶಿಕ್ಷಣ ಮಂಡಳಿಯ ಆಶ್ರಯದಲ್ಲಿ ತೀರಾ ಹಿಂದುಳಿದ ಗ್ರಾಮೀಣ ಪ್ರದೇಶವಾದ ಬೆಳ್ತಂಗಡಿ ತಾಲ್ಲೂಕಿನ ನಾರಾವಿಯಲ್ಲಿ ಸುಂದರ ಪ್ರಾಕೃತಿಕ ವನಸಿರಿಯ ಮಧ್ಯೆ 2003 ರ ಜೂನ್ ತಿಂಗಳ 16 ರಂದು ಪ್ರಾರಂಭವಾದ ಸೈಂಟ್ ಆ್ಯಂಟೋನಿ ಪದವಿಪೂರ್ವ ಕಾಲೇಜು ಹತ್ತು ವರ್ಷಗಳ ಸಾರ್ಥಕ ಸೇವೆಯನ್ನು ಪೂರೈಸಿದ್ದು ಈ ವರ್ಷ ದಶಮಾನೋತ್ಸವ ಸಂಭ್ರಮದಲ್ಲಿದೆ.

ಕಲಾ ಮತ್ತು ವಾಣಿಜ್ಯ ವಿಭಾಗದಲ್ಲಿ ಕೇವಲ 77 ವಿದ್ಯಾರ್ಥಿಗಳೊಂದಿಗೆ ಪ್ರಾರಂಭಗೊಂಡ ಜ್ಞಾನದೇಗುಲದಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳಲ್ಲಿ ಒಟ್ಟು 350 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. 2005 - 06 ನೇ ಶೈಕ್ಷಣಿಕ ವರ್ಷದಲ್ಲಿ ವಿಜ್ಞಾನ ವಿಭಾಗವನ್ನೂ ಪ್ರಾರಂಭಿಸಿದ್ದು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ವರದಾನವಾಗಿದೆ.

ನಾರಾವಿ ಧರ್ಮಕೇಂದ್ರದ ಅಂದಿನ ಧರ್ಮಗುರುಗಳಾದ ಸ್ಟ್ಯಾನಿ ರೋಡ್ರಿಗಸ್ ನೇತೃತ್ವದಲ್ಲಿ ಪ್ರಾರಂಭಗೊಂಡ ಸಂಸ್ಥೆ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಉನ್ನತ ಸಾಧನೆ ಮಾಡಿದೆ. ಬೆಳ್ತಂಗಡಿ ತಾಲ್ಲೂಕಿನ 11 ಪದವಿಪೂರ್ವ ಕಾಲೇಜುಗಳಲ್ಲಿ ಇದು ಪ್ರಥಮ ಸ್ಥಾನದಲ್ಲಿದೆ. ಕೆಥೋಲಿಕ್ ಶಿಕ್ಷಣ ಮಂಡಳಿಯ ಅಧೀನದಲ್ಲಿರುವ 14 ಪದವಿಪೂರ್ವ ಕಾಲೇಜುಗಳ ಪೈಕಿ ಶೈಕ್ಷಣಿಕ ಸಾಧನೆ ಮತ್ತು ಫಲಿತಾಂಶದಲ್ಲಿ ದ್ವಿತೀಯ ಸ್ಥಾನದಲ್ಲಿದೆ. ಕಳೆದ ಶೈಕ್ಷಣಿಕ ವರ್ಷದಲ್ಲಿ ಪಿ.ಯು.ಸಿ ಯಲ್ಲಿ ಶೇ.96 ಫಲಿತಾಂಶ ದಾಖಲಿಸಿದೆ.

ಭವ್ಯ ಕಟ್ಟಡ, ಸುಸಜ್ಜಿತ ಪ್ರಯೋಗಾಲಯ, ಗ್ರಂಥಾಲಯ ಮತ್ತು ವಿಶಾಲ ಕ್ರೀಡಾಂಗಣ ಮೊದಲಾದ ಸೌಕರ್ಯಗಳೊಂದಿಗೆ ಸಂಸ್ಥೆಯು ನೆರೆಕೆರೆಯ ಗ್ರಾಮಗಳ ವಿದ್ಯಾರ್ಥಿಗಳನ್ನು ಆಕರ್ಷಿಸಿ  ಉತ್ತಮ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಯಶಸ್ವಿಯಾಗಿದೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಪದವಿ ತರಗತಿಗಳನ್ನು ಪ್ರಾರಂಭಿಸಲು ಈಗಾಗಲೇ ಸರ್ಕಾರದಿಂದ ಅನುಮತಿ ದೊರಕಿದೆ.

ಸಂಸ್ಥೆಯ ಸಂಚಾಲಕ ಲೂವಿಸ್ ಕುಟಿನ್ಹೊ, ಪ್ರಾಂಶುಪಾಲ ಎಡ್ವಿನ್ ಮಸ್ಕರೇನ್ಹಸ್ ಹಾಗೂ ಅರುಣ್ ಲೋಬೊ ನೇತೃತ್ವದಲ್ಲಿ ಸಂಸ್ಥೆಯು ಪ್ರಗತಿಯ ಹಾದಿಯಲ್ಲಿ ಮುನ್ನಡೆಯುತ್ತಿದೆ. ಶಿಸ್ತು ಹಾಗೂ ಮಾನವೀಯ ಮೌಲ್ಯಗಳ ಉದ್ದೀಪನದೊಂದಿಗೆ ವಿದ್ಯಾರ್ಥಿಗಳನ್ನು ಸಮಾಜದ ಸಭ್ಯ ಹಾಗೂ ಸುಸಂಸ್ಕೃತ ನಾಗರಿಕರನ್ನಾಗಿ ರೂಪಿಸಲಾಗುತ್ತಿದೆ.

ದಶಮಾನೋತ್ಸವ: ಶುಕ್ರವಾರ ದಶಮಾನೋತ್ಸವ ಸಮಾರಂಭ ನಡೆಯಲಿದೆ. ಕಟ್ಟಡಗಳು ಸುಣ್ಣ - ಬಣ್ಣದಿಂದ ಕಂಗೊಳಿಸುತ್ತಿವೆ. ಸಂಸ್ಥೆಯ ಪರಿಸರವನ್ನು ಗ್ರಾಮೀಣ ಪ್ರಾಕೃತಿಕ ಪರಿಕರಗಳಿಂದ ಅಲಂಕರಿಸಲಾಗಿದೆ.

ಮಂಗಳೂರಿನ ಧರ್ಮಾಧ್ಯಕ್ಷ ಅಲೋಶಿಯಸ್ ಪೌಲ್ ಡಿ'ಸೋಜ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಮೂಡುಬಿದಿರೆಯ ಡಾ. ಎಂ. ಮೋಹನ ಆಳ್ವ, ಶಾಸಕ ಕೆ.ವಸಂತ ಬಂಗೇರ ಮತ್ತು ಪದವಿಪೂರ್ವ ಶಿಕ್ಷಣ ಮಂಡಳಿಯ ಉಪನಿರ್ದೇಶಕ ಕೆ.ಆರ್ ತಿಮ್ಮಯ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ತುಳುನಾಡ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT