ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ನಾಲ್ಕು ಪ್ರತ್ಯೇಕ ಅರ್ಜಿಗಳ ವಿಚಾರಣೆ

Last Updated 19 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಭೂಹಗರಣ ಆರೋಪದಲ್ಲಿ ಸಿಲುಕಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಅವರ ಪುತ್ರರು, ಮಾಜಿ ಸಚಿವ ಎಸ್.ಎನ್.ಕೃಷ್ಣಯ್ಯ ಶೆಟ್ಟಿ, ಶಾಸಕ ಹೇಮಚಂದ್ರ ಸಾಗರ್ ಹಾಗೂ ದೂರುದಾರ ವಕೀಲ ಸಿರಾಜಿನ್ ಬಾಷಾ ನಡುವಿನ ಕಾನೂನು ಸಮರಕ್ಕೆ ವೇದಿಕೆಯಾಗಿರುವ ಹೈಕೋರ್ಟ್ ಗುರುವಾರ ಕುತೂಹಲದ ತಾಣವಾಗಲಿದೆ.

ಕಾರಣ, ಆರೋಪಿಗಳ ವಿರುದ್ಧ ದೂರುದಾರ ಹಾಗೂ ದೂರುದಾರರ ವಿರುದ್ಧ ಆರೋಪಿಗಳು ಸಲ್ಲಿಸಿರುವ ನಾಲ್ಕು ಪ್ರತ್ಯೇಕ ಅರ್ಜಿಗಳ ವಿಚಾರಣೆಯನ್ನು ಕೋರ್ಟ್ ಒಟ್ಟೊಟ್ಟಿಗೆ ನಡೆಸಲಿದೆ.

ಈ ಪೈಕಿ, ಯಡಿಯೂರಪ್ಪ ಹಾಗೂ ಕೃಷ್ಣಯ್ಯ ಶೆಟ್ಟಿ ಅವರು ಜಾಮೀನು ಕೋರಿ ಸಲ್ಲಿಸಿರುವ ಅರ್ಜಿ ಒಂದು. ಲೋಕಾಯುಕ್ತ ವಿಶೇಷ ಕೋರ್ಟ್ ಹೇಮಚಂದ್ರ ಸಾಗರ್ ಹಾಗೂ ಯಡಿಯೂರಪ್ಪನವರ ಪುತ್ರರಾದ ಬಿ.ವೈ.ರಾಘವೇಂದ್ರ, ಬಿ.ವೈ. ವಿಜಯೇಂದ್ರ ಅವರಿಗೆ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಬಾಷಾ ಸಲ್ಲಿಸಿರುವ ಅರ್ಜಿ ಇನ್ನೊಂದು. ಲೋಕಾಯುಕ್ತ ಕೋರ್ಟ್ ತಮಗೆ ಜಾಮೀನು ನೀಡುವಾಗ ವಿಧಿಸಿರುವ ಷರತ್ತುಗಳ ಸಡಲಿಕೆಗೆ ಕೋರಿ ಈ ಆರೋಪಿಗಳು ಸಲ್ಲಿಸಿರುವ ಅರ್ಜಿ ಮತ್ತೊಂದು. ಈ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಬಿ.ವಿ.ಪಿಂಟೊ ಅವರು ನಡೆಸಲಿದ್ದಾರೆ.

ಸಣ್ಣ ಮೀನು:  ಲೋಕಾಯುಕ್ತ  ಕೋರ್ಟ್ ಜಾಮೀನು ನೀಡದ ಆದೇಶ ಪ್ರಶ್ನಿಸಿ ಕೃಷ್ಣಯ್ಯ ಶೆಟ್ಟಿ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳು ಬುಧವಾರ ಕೈಗೆತ್ತಿಗೊಂಡರು. `ನಾನು ಈ ಪ್ರಕರಣದಲ್ಲಿ `ಸಣ್ಣ ಮೀನು~ ಮಾತ್ರ. ಜಾಮೀನು ನಿರಾಕರಿಸುವಂತಹ ಯಾವುದೇ ಗಂಭೀರ ಆರೋಪಗಳು ನನ್ನ ಮೇಲಿಲ್ಲ. ಹಾಗಿದ್ದರೂ ಜಾಮೀನು ನೀಡದೆ ಇರುವುದು ಸರಿಯಲ್ಲ~ ಎಂದು ಶೆಟ್ಟಿ ಅರ್ಜಿಯಲ್ಲಿ ತಿಳಿಸಿದ್ದಾರೆ.
ಈ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಕೊನೆಯ ಪಕ್ಷ ಸೋಮವಾರದವರೆಗಾದರೂ ತಮಗೆ ಕಾಲಾವಕಾಶ ನೀಡುವಂತೆ ಬಾಷಾ ಪರ ವಕೀಲ ಸಿ.ಎಚ್.ಹನುಮಂತರಾಯ ಅವರು ಕೋರಿದರು.

ಆದರೆ ಇದಕ್ಕೆ ಶೆಟ್ಟಿ ಪರ ವಕೀಲ ಟಾಮಿ ಸಬಾಸ್ಟಿನ್ ಆಕ್ಷೇಪಿಸಿದರು. `ಯಡಿಯೂರಪ್ಪನವರ ಅರ್ಜಿಯ ವಿಚಾರಣೆ ಗುರುವಾರ ಇರುವ ಹಿನ್ನೆಲೆಯಲ್ಲಿ, ಶೆಟ್ಟಿ ಅವರು ಮಧ್ಯಂತರ ಜಾಮೀನು ಕೋರಿರುವ ಅರ್ಜಿಯ ವಿಚಾರಣೆಯನ್ನೂ ಒಟ್ಟಿಗೆ ನಡೆಸಬೇಕು. ಇಬ್ಬರ ಮೇಲಿರುವ ಆರೋಪಗಳೂ ಒಂದೇ ತೆರನಾಗಿ ಇರುವ ಕಾರಣ, ಆ ಅರ್ಜಿಯಲ್ಲಿನ ಆದೇಶವು ಶೆಟ್ಟಿ ಅವರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಅಷ್ಟೇ ಅಲ್ಲದೇ ಈ ಅರ್ಜಿಯಲ್ಲಿ ಸರ್ಕಾರ ಪ್ರತಿವಾದಿಯಲ್ಲ~ ಎಂದರು. ಈ ವಾದವನ್ನು ನ್ಯಾಯಮೂರ್ತಿಗಳು ಮಾನ್ಯ ಮಾಡಿದರು.

ಪುತ್ರರ ದೂರೇನು?: ತಮ್ಮ ವಿರುದ್ಧ ಇರುವ ಆರೋಪಗಳಂತಹ ಪ್ರಕರಣಗಳಲ್ಲಿ ಪಾಸ್‌ಪೋರ್ಟ್ ಮುಟ್ಟುಗೋಲು ಹಾಕಿಕೊಳ್ಳುವಂತಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಆದರೆ ಇದಕ್ಕೆ ವಿರುದ್ಧವಾಗಿ ಲೋಕಾಯುಕ್ತ ಕೋರ್ಟ್‌ನಿಂದ ಆದೇಶ ಹೊರಬಿದ್ದಿದೆ ಎಂದು ಯಡಿಯೂರಪ್ಪನವರ ಪುತ್ರರು ಹಾಗೂ ಹೇಮಚಂದ್ರ ಸಾಗರ್ ಅವರು ದೂರಿದ್ದಾರೆ.

`ನಮಗೆ ಜಾಮೀನು ನೀಡುವಾಗ, ಹಿಂದಿನ ಮೂರು ವರ್ಷಗಳ ಬ್ಯಾಂಕ್ ವಹಿವಾಟು ಮತ್ತು ಸಂಪೂರ್ಣ ವ್ಯವಹಾರದ ದಾಖಲೆ ಸಲ್ಲಿಸುವಂತೆ ವಿಶೇಷ ಕೋರ್ಟ್ ಆದೇಶಿಸಿರುವುದು ಕಾನೂನು ಬಾಹಿರ. ಒಂದು ವೇಳೆ ಈಗಲೇ ಈ ದಾಖಲೆಗಳನ್ನು ನೀಡಿದರೆ, ಮುಂದಿನ ವಿಚಾರಣೆ ವೇಳೆ ಅದನ್ನು ತಮ್ಮ ವಿರುದ್ಧ ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಪಟ್ಟಭದ್ರ ಹಿತಾಸಕ್ತಿಗಳು ಅದರ ದುರುಪಯೋಗ ಪಡಿಸಿಕೊಳ್ಳಲೂಬಹುದಾಗಿದೆ. ಇವು ಸಾರ್ವಜನಿಕ ದಾಖಲೆಗಳು. ಈ ಹಿನ್ನೆಲೆಯಲ್ಲಿ ನಮ್ಮ ವಿರುದ್ಧ ಯಾರು ದೂರು ದಾಖಲು ಮಾಡಿದ್ದಾರೋ ಅವರೇ ಖುದ್ದಾಗಿ ದಾಖಲೆಗಳನ್ನು ಕಲೆ ಹಾಕಬೇಕೆ ವಿನಾ ಆರೋಪಿಗಳಿಂದ ಅದನ್ನು ಕೋರ್ಟ್ ಬಯಸಿರುವುದು ಸರಿಯಲ್ಲ~ ಎಂದು ಅವರು ವಾದಿಸಿದ್ದಾರೆ.

ಆದರೆ ಇದಕ್ಕೆ ವಿರುದ್ಧವಾಗಿ ಬಾಷಾ ಅವರು ಸಲ್ಲಿಸಿರುವ ಅರ್ಜಿಯಲ್ಲಿ, ಯಡಿಯೂರಪ್ಪ ಹಾಗೂ ಶೆಟ್ಟಿ ಅವರ ಮೇಲಿರುವ ಆರೋಪಗಳು ಹಾಗೂ ಇವರ ವಿರುದ್ಧದ ಆರೋಪಗಳಲ್ಲಿ ಸಾಮ್ಯವಿದೆ. ಆದರೆ ಇವರಿಗಷ್ಟೇ ಜಾಮೀನು ನೀಡಲಾಗಿದೆ. ಇದರಿಂದ ಅವರು ತಮ್ಮ ರಾಜಕೀಯ ಪ್ರಭಾವ ಬಳಸಿ ಸಾಕ್ಷ್ಯಗಳನ್ನು ನಾಶಪಡಿಸುವ ಸಾಧ್ಯತೆ ಇದೆ~ ಎಂದು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT