ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ಬಿಜೆಪಿ ಸಮಾವೇಶ: ಸರ್ವ ಸಜ್ಜು

Last Updated 19 ಫೆಬ್ರುವರಿ 2011, 20:10 IST
ಅಕ್ಷರ ಗಾತ್ರ

ಬೆಂಗಳೂರು: ಸಿದ್ಧಾಂತದ ಆಧಾರದಲ್ಲಿ ಪಕ್ಷ ಕಟ್ಟುವ ಕಾರ್ಯಕರ್ತರನ್ನು ಬೆಳೆಸಲು ಭಾನುವಾರದ ಸಮಾವೇಶ ಆಯೋಜಿಸಲಾಗಿದೆ ಎಂದು ಪುನರುಚ್ಛರಿಸಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ, ‘ಈ ಸಮಾವೇಶ ಚುನಾವಣೆಯ ಸಿದ್ಧತೆಗಾಗಿ ಅಲ್ಲ’ ಎಂದರು.

ಭಾನುವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಬೂತ್ ಮಟ್ಟದ ಬಿಜೆಪಿ ಕಾರ್ಯಕರ್ತರ ಸಮಾವೇಶಕ್ಕೆ ಪೂರ್ವಭಾವಿಯಾಗಿ ‘ಪಕ್ಷದ ಸಾಧನೆಗಳನ್ನು ಬಿಂಬಿಸುವ’ ವಸ್ತು ಪ್ರದರ್ಶನ ‘ಕಮಲದ ಮನೆ’ಯನ್ನು ಶನಿವಾರ ಉದ್ಘಾಟಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಅಧಿಕಾರಕ್ಕೆ ಬರಬೇಕು ಎಂಬ ಕಾರಣದಿಂದ ಹಿಂದಿನ ಚುನಾವಣೆಯಲ್ಲಿ ಜಾತಿ ಮತ್ತಿತರ ಮಾನದಂಡಗಳ ಆಧಾರದಲ್ಲಿ ಅನೇಕರಿಗೆ ಟಿಕೆಟ್ ನೀಡಲಾಗಿತ್ತು’ ಎಂದ ಈಶ್ವರಪ್ಪ ಅವರು ‘ಪಕ್ಷದ ಸಿದ್ಧಾಂತಕ್ಕೆ ಒತ್ತು ನೀಡುವ ಮತ್ತು ಸಿದ್ಧಾಂತದ ಆಧಾರದಲ್ಲಿ ಪಕ್ಷದ ಕೆಲಸ ಮಾಡುವ ಕಾರ್ಯಕರ್ತರನ್ನು ಬೆಳೆಸಲು ಈ ಸಮಾವೇಶ ಆಯೋಜಿಸಲಾಗಿದೆ’ ಎಂದರು.

‘ಸಂಕುಚಿತ ಭಾವನೆ ಬೇಡ’: ಹೊರ ರಾಜ್ಯದವರಾದ ಹೇಮಾಮಾಲಿನಿ ಅವರನ್ನು ರಾಜ್ಯಸಭಾ ಸದಸ್ಯತ್ವಕ್ಕೆ ಬಿಜೆಪಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿರುವ ಕುರಿತು ಕೇಳಲಾದ ಪ್ರಶ್ನೆಗೆ, ‘ಕಲಾವಿದರನ್ನು ಹೊರ ರಾಜ್ಯದವರು, ನಮ್ಮ ರಾಜ್ಯದವರು ಎಂಬ ಸಂಕುಚಿತ ಭಾವನೆಯಿಂದ ನೋಡಬಾರದು. ಹಿಂದೆ ಗಾಯಕಿ ಲತಾ ಮಂಗೇಶ್ಕರ್ ಅವರನ್ನೂ ಬಿಜೆಪಿಯಿಂದ ರಾಜ್ಯಸಭೆಗೆ ಆಯ್ಕೆ ಮಾಡಿದ್ದೆವು’ ಎಂದು ಉತ್ತರಿಸಿದರು.

ಬಿಜೆಪಿಯಿಂದ ರಾಜೀವ್ ಚಂದ್ರಶೇಖರ್, ವೆಂಕಯ್ಯ ನಾಯ್ಡು ಅವರಂತಹ ಹೊರ ರಾಜ್ಯದವರೇ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗುತ್ತಿದ್ದಾರೆ ಎಂದು ಪ್ರಶ್ನಿಸಿದಾಗ, ‘ನಮ್ಮ ರಾಜ್ಯದವರೇ ಆದ ನ್ಯಾ.ಎಂ. ರಾಮಾಜೋಯಿಸ್, ಆಯನೂರು ಮಂಜುನಾಥ್ ಅವರನ್ನೂ ರಾಜ್ಯ ಸಭೆಗೆ ಆಯ್ಕೆ ಮಾಡಲಾಗಿದೆ’ ಎಂದರು.

ಇದೇ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ಅವರು, ‘ಬೂತ್ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸಲು, ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ, ಬೆಲೆ ಏರಿಕೆ, ಕಪ್ಪು ಹಣ ಮತ್ತು ಭಯೋತ್ಪಾದನೆಯ ವಿರುದ್ಧ ಹೋರಾಡಲು ಈ ಸಮಾವೇಶ ಆಯೋಜಿಸಲಾಗಿದೆ’ ಎಂದರು. 2014ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುವುದು ‘ಗೋಡೆಯ ಮೇಲಿನ ಬರಹದಂತಿದೆ’ ಎಂದು ಹೇಳಿದರು.

ವಸ್ತುಪ್ರದರ್ಶನ: ಸುಮಾರು 60 ಸಾವಿರ ಚದರ ಅಡಿ ವಿಸ್ತಾರದಲ್ಲಿ ‘ಕಮಲದ ಮನೆ’ ವಸ್ತು ಪ್ರದರ್ಶನ ಆಯೋಜಿಸಲಾಗಿದೆ.ಇದರಲ್ಲಿ ಭಾರತೀಯ ಜನ ಸಂಘ ಮತ್ತು ಭಾರತೀಯ ಜನತಾ ಪಕ್ಷದ ಹಳೆಯ ಛಾಯಾಚಿತ್ರಗಳು, ಯುಪಿಎ ಸರ್ಕಾರದ ಹಗರಣಗಳ ಬಗ್ಗೆ ಬಂದಿರುವ ವ್ಯಂಗ್ಯ ಚಿತ್ರಗಳ ಸಂಗ್ರಹ, ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಮಳಿಗೆಗಳು ವಸ್ತು ಪ್ರದರ್ಶನದಲ್ಲಿವೆ. ಕಲಾವಿದ ಅರುಣ್ ಸಾಗರ್ ಅವರು ನಿರ್ಮಿಸಿರುವ ಹಂಪಿಯ ಕಲ್ಲಿನ ರಥದ ಪ್ರತಿಕೃತಿ  ಕೂಡ ಇಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT