ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು `ಮಹಾಸಮರ'

ಬೆಂಗಳೂರಲ್ಲಿ ಭಾರತ- ಪಾಕ್ ಟ್ವೆಂಟಿ-20 ಕ್ರಿಕೆಟ್
Last Updated 24 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಬೆಂಗಳೂರು: ಕ್ರಿಕೆಟ್‌ನ ಪ್ರಕಾರ ಯಾವುದೇ ಆಗಿರಲಿ, ಭಾರತ ಮತ್ತು ಪಾಕಿಸ್ತಾನ ನಡುವಿನ ಹೋರಾಟಕ್ಕೆ ವಿಶೇಷ ಮಹತ್ವವಿದೆ. ಟೆಸ್ಟ್, ಏಕದಿನ ಅಥವಾ ಟ್ವೆಂಟಿ-20 ಪಂದ್ಯದಲ್ಲಿ ಇವೆರಡು ತಂಡಗಳು ಪೈಪೋಟಿ ನಡೆಸುವ ಸಂದರ್ಭದಲ್ಲಿ ಅಲ್ಲಿ ಕಾಣುವ ರೋಚಕತೆ, ಕುತೂಹಲ ಅನನ್ಯವಾದುದು.

ಭಾರತ-ಪಾಕ್ ಪಂದ್ಯ ಅಂಗಳದ ಒಳಗೆ ಮಾತ್ರವಲ್ಲ, ಹೊರಗೂ ಕಾವು ಹೆಚ್ಚಿಸಲಿದೆ. ಇಲ್ಲಿ ಎರಡೂ ದೇಶಗಳ ಜನರ ಭಾವನೆಗಳಿಗೆ ಸ್ಥಾನವಿದೆ. ಪಂದ್ಯದ ಎಲ್ಲ ಎಸೆತಗಳೂ ಕೌತುಕ ಸೃಷ್ಟಿಸಲಿವೆ. ಬ್ಯಾಟ್‌ನಿಂದ ಸಿಡಿಯುವ ಪ್ರತಿ ಬೌಂಡರಿ, ಸಿಕ್ಸರ್‌ಗಳು ಎರಡೂ ದೇಶಗಳಲ್ಲಿ ಸಂಭ್ರಮದ ಹೊಳೆ ಹರಿಸಲಿವೆ. ಅದೇ ರೀತಿ ನಿರಾಸೆಗೂ ಕಾರಣವಾಗಲಿವೆ.

ಇವೆರಡು ದೇಶಗಳ ಕ್ರಿಕೆಟ್ ತಂಡಗಳು ಹಲವು ಸ್ಮರಣೀಯ ಕ್ಷಣಗಳನ್ನು ಅಭಿಮಾನಿಗಳಿಗೆ ನೀಡಿವೆ. ಇದೀಗ ಇನ್ನಷ್ಟು ಸುಂದರ ಕ್ಷಣಗಳನ್ನು ನೀಡಲು ತಯಾರಾಗಿ ನಿಂತಿವೆ. `ಸಾಂಪ್ರದಾಯಿಕ ಎದುರಾಳಿ'ಗಳು ಐದು ವರ್ಷಗಳ ಬಿಡುವಿನ ಬಳಿಕ ಕ್ರಿಕೆಟ್ ಕ್ರೀಡಾಂಗಣದಲ್ಲಿ ತಮ್ಮ `ಪೈಪೋಟಿ'ಯನ್ನು ಪುನರಾರಂಭಿಸಲಿವೆ. ಮಹೇಂದ್ರ ಸಿಂಗ್ ದೋನಿ ನೇತೃತ್ವದ ಭಾರತ ಹಾಗೂ ಮೊಹಮ್ಮದ್ ಹಫೀಜ್ ಮುನ್ನಡೆಸುತ್ತಿರುವ ಪಾಕಿಸ್ತಾನ ತಂಡಗಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆಯುವ ಟ್ವೆಂಟಿ-20 ಪಂದ್ಯದಲ್ಲಿ ಎದುರಾಗಲಿವೆ.

ಉಭಯ ದೇಶಗಳ ಅಭಿಮಾನಿಗಳ ಕ್ರಿಕೆಟ್ ಹುಚ್ಚು ಈ ಪಂದ್ಯಕ್ಕೆ ಕಿಚ್ಚು ಹಚ್ಚಲಿದೆ. 2008ರ ಬಳಿಕ ಎರಡೂ ದೇಶಗಳ ನಡುವೆ ಯಾವುದೇ ಸರಣಿಗಳು ನಡೆದಿರಲಿಲ್ಲ. ಆದ್ದರಿಂದ ಪಂದ್ಯ ಅತಿಯಾದ ಮಹತ್ವ ಪಡೆದುಕೊಂಡಿದೆ. ಪಾಕ್ ತಂಡ ತನ್ನ ಕಿರು ಪ್ರವಾಸದಲ್ಲಿ ಎರಡು ಟ್ವೆಂಟಿ-20 ಹಾಗೂ ಮೂರು ಏಕದಿನ ಪಂದ್ಯಗಳನ್ನು ಆಡಲಿದೆ.

ಮಂಗಳವಾರದ ಪಂದ್ಯ ಸುಸೂತ್ರವಾಗಿ ನಡೆಯಲು ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಕ್ರೀಡಾಂಗಣ ಮತ್ತು ಸುತ್ತಲಿನ ಪ್ರದೇಶ ಪೊಲೀಸರ ಕೋಟೆಯಾಗಿ ಬದಲಾಗಿದೆ. ಎಲ್ಲೆಡೆಯೂ ಲಾಠಿ ಹಾಗೂ ಗನ್ ಹಿಡಿದಿರುವ ಸಮವಸ್ತ್ರಧಾರಿಗಳೇ ಕಾಣಿಸುತ್ತಿದ್ದಾರೆ. ಇಂತಹ `ಬಿಗು' ಪರಿಸ್ಥಿತಿಯ ನಡುವೆ ಶಾಂತಿಯ ಸಂದೇಶ ಸಾರುವ ಕೆಲಸವನ್ನು ಆಟಗಾರರು ಮಾಡಲಿದ್ದಾರೆ.  -ವಿವರ ಪುಟ 14

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT