ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ಮೈತ್ರಿ ಒಪ್ಪಂದ ಸಾಧ್ಯತೆ

ಮಹಾರಾಷ್ಟ್ರ: ಸೀಟು ಹಂಚಿಕೆ ಬಿಕ್ಕಟ್ಟು
Last Updated 22 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ: ಮಹಾರಾಷ್ಟ್ರ ವಿಧಾನಸಭೆ ಚುನಾ­ವಣೆ ಸೀಟು ಹಂಚಿಕೆ ಬಿಕ್ಕಟ್ಟು ಸೋಮವಾರವೂ ಮುಂದುವರಿದಿದ್ದು, ಬಿಜೆಪಿ– ಶಿವಸೇನೆ ಹಾಗೂ ಕಾಂಗ್ರೆಸ್‌– ಎನ್‌ಸಿಪಿ ನಡುವೆ ತೆರೆಮರೆಯಲ್ಲಿ ಚರ್ಚೆ ನಡೆಯುತ್ತಿದೆ. ಈ ಚುನಾವಣೆ 4 ರಾಜ­ಕೀಯ ಪಕ್ಷಗಳಿಗೂ ಅತ್ಯಂತ ಮಹ­ತ್ವ­ದಾ­ಗಿದ್ದು, ಮಂಗಳವಾರ­ದೊಳಗೆ ಒಪ್ಪಂದ ಏರ್ಪಡುವ ಸಾಧ್ಯತೆಗಳು ದಟ್ಟವಾಗಿವೆ.

130 ಸ್ಥಾನಗಳನ್ನು ತನಗೆ ಬಿಟ್ಟು­ಕೊಡುವಂತೆ ಬಿಜೆಪಿ ಹೊಸ ಪ್ರಸ್ತಾವನೆ ಕಳುಹಿಸಿದೆ. ಕೆಲವೇ ಗಂಟೆಗಳ ಮೊದಲು 135ಸೀಟುಗಳಿಗಾಗಿ ಅದು ಪಟ್ಟು ಹಿಡಿದಿತ್ತು. ಸಂಜೆ ಹೊತ್ತಿಗೆ ನಿಲುವು ಸಡಿಲಿಸಿ ಐದು ಸ್ಥಾನಗಳನ್ನು ಕಡಿಮೆ ಕೊಟ್ಟರೂ ಪರವಾಗಿಲ್ಲ. ಅದಕ್ಕಿಂತ ಕಡಿ­ಮೆ­ಯಾದರೆ ಒಪ್ಪುವುದಿಲ್ಲ ಎಂಬ ಸಂದೇಶ ರವಾನಿಸಿತು. ಬಿಜೆಪಿ ಅಧ್ಯಕ್ಷ ಅಮಿತ್‌ ಷಾ ಅವರೇ ದೂರವಾಣಿ­ಯಲ್ಲಿ ಶಿವಸೇನೆ ಮುಖ್ಯಸ್ಥ ಉದ್ಧವ್‌ ಠಾಕ್ರೆ ಅವರಿಗೆ ಮಾತನಾಡಿ ಹೊಸ ಪ್ರಸ್ತಾವನೆ ಇಟ್ಟಿದ್ದಾರೆಂದು ಬಿಜೆಪಿ ಮೂಲಗಳು ತಿಳಿಸಿವೆ.

‘ಶಿವಸೇನೆ ಜತೆಗಿನ 25 ವರ್ಷಗಳ ಮೈತ್ರಿ ಮುರಿದು ಬೀಳಬಾರದು ಎನ್ನುವ ಉದ್ದೇಶದಿಂದ ಹೊಸ ಪ್ರಸ್ತಾವನೆ ಕಳುಹಿಸಲಾಗಿದೆ. ನಮಗೆ ಇದೇ ಕ್ಷೇತ್ರ ಬೇಕು, ಅದೇ ಕ್ಷೇತ್ರ ಬೇಕು ಎಂದು ಕೇಳು­ವುದಿಲ್ಲ. ಈ ಪ್ರಸ್ತಾವನೆ ಉದಾರ­ವಾಗಿದೆ.  ಶಿವಸೇನೆ ಯಾವುದೇ ಕ್ಷೇತ್ರಗ­ಳನ್ನು ಕೊಟ್ಟರೂ  ಸ್ಪರ್ಧಿಸಲು ಸಿದ್ಧರಿ­ದ್ದೇವೆ. 25 ವರ್ಷಗಳಿಂದ ಗೆಲುವು ಕಾಣದಿರುವ ಕ್ಷೇತ್ರಗಳನ್ನು ಕೊಟ್ಟರೂ ಅಭ್ಯಂತರವಿಲ್ಲ’ ಎಂದು ಮಹಾರಾಷ್ಟ್ರ ಉಸ್ತು­­ವಾರಿ ಹೊತ್ತಿರುವ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಜೀವ್‌ ಪ್ರತಾಪ್‌ ರೂಡಿ ಪತ್ರಕರ್ತರಿಗೆ ತಿಳಿಸಿದರು.

ಉದ್ಧವ್‌ ಠಾಕ್ರೆ ಬಿಗಿ ನಿಲುವು: ಆದರೆ, ಬಿಜೆಪಿಗೆ 119 ಸ್ಥಾನ­ಗಳಿಗಿಂತ ಹೆಚ್ಚಿಗೆ ಕೊಡುವ ಮಾತೇ ಇಲ್ಲ ಎಂದು ಶಿವಸೇನೆ ಮುಖ್ಯಸ್ಥ ಉದ್ಧವ್‌ ಠಾಕ್ರೆ ಬಿಗಿ ನಿಲುವು ತಳೆದಿದ್ದಾರೆ. ಅವರ ಮನವೊಲಿಸಲು ತೆರೆ ಮರೆಯಲ್ಲಿ ಬಿಜೆಪಿ ಹಿರಿಯ ನಾಯಕರು ಕಸರತ್ತು ಮುಂದು­ವರಿಸಿ­ದ್ದಾರೆ. ಇದು ಮುಖ್ಯಮಂತ್ರಿ ಸ್ಥಾನಕ್ಕಾಗಿ ನಡೆದಿರುವ ಕಿತ್ತಾಟ ಅಲ್ಲ. ಚುನಾವಣೆ ನಂತರ ಈ ವಿಷಯ ಪ್ರಸ್ತಾಪಕ್ಕೆ ಬರಲಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಬಿಜೆಪಿ 130 ಕ್ಷೇತ್ರಗಳ ಪ್ರಸ್ತಾವನೆ ಕಳುಹಿಸುವ ಮೊದಲು ಶಿವಸೇನೆ ಜತೆ ಒಪ್ಪಂದ ಸಾಧ್ಯವಾಗದಿದ್ದರೆ 288 ಕ್ಷೇತ್ರ­ಗಳಲ್ಲೂ ಸ್ಪರ್ಧೆ ಮಾಡುವುದಾಗಿ ಹೇಳಿತ್ತು. ಸೀಟು ಹಂಚಿಕೆ ಹೊಂದಾ­ಣಿಕೆಗೆ ಮಿತ್ರ ಪಕ್ಷ ಯಾವುದೇ ರಚನಾ­ತ್ಮಕ ಮಾತುಕತೆ ನಡೆಸದೆ ಟಿ.ವಿ ಚಾನಲ್‌­ಗಳಲ್ಲಿ ಚರ್ಚೆ ಮಾಡುತ್ತಿದೆ ಎಂದು ಬಿಜೆಪಿ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದರು. ‘ನಾವು ಹೆಚ್ಚುಕಡಿಮೆ ಎಲ್ಲ ಕ್ಷೇತ್ರಗ­ಳಿಗೂ ಅಭ್ಯರ್ಥಿಗಳ ಹೆಸರನ್ನು ಅಂತಿಮ­ಗೊ­ಳಿ­ಸಿದ್ದೇವೆ. ಕೇವಲ 20–30 ಸ್ಥಾನ­ಗ­ಳನ್ನು ಖಾಲಿ ಇಡಲಾಗಿದೆ. ಬೇರೆ ಪಕ್ಷಗ­ಳಿಂದ ಬರುವ ಮುಖಂಡರಿಗಾಗಿ ಅವುಗ­ಳ­ನ್ನು ಉಳಿಸಿಕೊಳ್ಳಲಾಗಿದೆ’ ಎಂದು ಮೂಲ­ಗಳು ಸ್ಪಷ್ಟಪಡಿಸಿವೆ.

ಎನ್‌ಸಿಪಿ– ಕಾಂಗ್ರೆಸ್‌ ಮಾತುಕತೆ: ಮಹಾ­ರಾಷ್ಟ್ರದಲ್ಲಿ ಕಾಂಗ್ರೆಸ್‌ ಮತ್ತು ಎನ್‌ಸಿಪಿ ನಡುವೆ ಸೀಟು ಹೊಂದಾಣಿಕೆ ಮಾತುಕತೆ ಮುಂದುವರಿದಿದೆ. ಮಂಗಳ­ವಾರ ಬೆಳಿಗ್ಗೆ ಎಂಪಿಸಿಸಿ ಮುಖಂಡರ ಸಭೆ ನಡೆಯಲಿದೆ. ಅನಂತರ ಕಾಂಗ್ರೆಸ್‌ ಮತ್ತು ಎನ್‌ಸಿಪಿ ನಾಯಕರು ಸಮಾ­ಲೋಚನೆ ನಡೆಸಲಿದ್ದಾರೆ. ಎನ್‌ಸಿಪಿ 144 ಸ್ಥಾನಗಳಿಗಾಗಿ ಬೇಡಿಕೆ ಇಟ್ಟಿದೆ. ಮಿತ್ರ ಪಕ್ಷ ಕಾಂಗ್ರೆಸ್‌ 124 ಸ್ಥಾನಗಳನ್ನು ಕೊಡುವುದಾಗಿ ಹೇಳುತ್ತಿದೆ. ಅಂತಿಮ­ವಾಗಿ 130 ಸ್ಥಾನಗಳಿಗೆ ಒಪ್ಪಂದ ಏರ್ಪ­ಡುವ ಸಾಧ್ಯತೆಯಿದೆ ಎಂದು ಕಾಂಗ್ರೆಸ್‌ ಮೂಲಗಳು ವಿವರಿಸಿವೆ.

‘ಕಳೆದ ವಿಧಾನಸಭೆ ಚುನಾವಣೆ­ಯಲ್ಲಿ ಎನ್‌ಸಿಪಿ 114 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿತ್ತು. 2009ರ ಲೋಕಸಭೆ ಚುನಾವಣೆಯಲ್ಲಿ ನಮ್ಮ ಸಾಧನೆ ಕಳಪೆ­ಯಾ­ಗಿದ್ದರಿಂದಾಗಿ ಕಡಿಮೆ ಸ್ಥಾನಕ್ಕೆ ಒಪ್ಪಿಕೊಳ್ಳಲಾಗಿತ್ತು. ಆದರೆ, ಈ ಸಲದ ಲೋಕಸಭೆ ಚುನಾವಣೆಯಲ್ಲಿ ಮಹಾ­ರಾಷ್ಟ್ರ­ದಲ್ಲಿ ಎನ್‌ಸಿಪಿ ನಾಲ್ಕು ಸ್ಥಾನಗ­ಳನ್ನು ಗೆದ್ದಿದೆ. ಕಾಂಗ್ರೆಸ್‌ಗೆ ಎರಡು ಸ್ಥಾನ ಸಿಕ್ಕಿದೆ. ನಾವು ಉತ್ತಮ ಸ್ಥಿತಿಯಲ್ಲಿ­ದ್ದೇವೆ. ಹೀಗಾಗಿ 144 ಸ್ಥಾನಗಳನ್ನು ಕೇಳು­ತ್ತಿ­ದ್ದೇವೆ’ ಎಂದು ಎನ್‌ಸಿಪಿ ಮೂಲ­ಗಳು ಸ್ಪಷ್ಟಪಡಿಸಿವೆ.

‘ಎನ್‌ಸಿಪಿ ಮತ್ತು ಕಾಂಗ್ರೆಸ್‌ ನಡುವೆ ಹೊಂದಾಣಿಕೆ ಏರ್ಪಡಲಿದೆ. ನಮ್ಮದು 14 ವರ್ಷಗಳ ಸಂಬಂಧ. 1999ರಲ್ಲಿ  ಎರಡೂ ಪಕ್ಷಗಳು ಪ್ರತ್ಯೇಕವಾಗಿ ಚುನಾ­ವಣೆ ಎದುರಿಸಿದ್ದರೂ ಅನಂತರ ಒಗ್ಗೂಡಿ ಸರ್ಕಾರ ಮಾಡಿದ್ದೆವು. ಜಾತ್ಯತೀತ ಶಕ್ತಿಗಳನ್ನು ಬಲಪಡಿಸುವ ಉದ್ದೇಶ­ದಿಂದ ಈ ತೀರ್ಮಾನ ಮಾಡಲಾಗಿತ್ತು. 2004ರಲ್ಲಿ ನಮಗೆ ಕಾಂಗ್ರೆಸ್‌ಗಿಂತಲೂ ಹೆಚ್ಚು ಸ್ಥಾನ ಸಿಕ್ಕರೂ ಮುಖ್ಯಮಂತ್ರಿ ಸ್ಥಾನ ಅವರಿಗೆ ಬಿಟ್ಟುಕೊಡಲಾಗಿತ್ತು’ ಎಂದು ಎನ್‌ಸಿಪಿ ನಾಯಕ ಪ್ರಫುಲ್‌ ಪಟೇಲ್‌ ನುಡಿದರು. ಮುಂದಿನ ಮುಖ್ಯ­ಮಂತ್ರಿ ಯಾರೆಂದು ಚುನಾವಣೆ ಬಳಿಕ ತೀರ್ಮಾನ­ವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT