ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ರಾಜ್ಯ ಬಂದ್

Last Updated 5 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುಗಡೆಯನ್ನು ವಿರೋಧಿಸಿ ಕನ್ನಡ ಒಕ್ಕೂಟವು ಶನಿವಾರ (ಅ.6) ಕರೆ ನೀಡಿರುವ ಕರ್ನಾಟಕ ಬಂದ್‌ಗೆ ರಾಜ್ಯದ ಬಹಳಷ್ಟು ಕನ್ನಡಪರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ಹೀಗಾಗಿ ಜನಜೀವನ ಅಸ್ತವ್ಯಸ್ತಗೊಳ್ಳುವ ಸಾಧ್ಯತೆ ಇದೆ.

ಹಾಲು ಹಾಗೂ ಪತ್ರಿಕೆಗಳ ವಿತರಣೆ, ಔಷಧ ಅಂಗಡಿಗಳು ಮತ್ತು ವೈದ್ಯಕೀಯ ಸೇವೆಗಳಿಗೆ ಬಂದ್‌ನಿಂದ ಯಾವುದೇ ತೊಂದರೆಯಾಗುವುದಿಲ್ಲ ಎಂದು ಕನ್ನಡ ಒಕ್ಕೂಟ ತಿಳಿಸಿದೆ. ಆದರೆ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೆ ಮಹಾಸಂಸ್ಥೆ ಹಾಗೂ ವಿವಿಧ ವರ್ತಕರ ಸಂಘಗಳು ಬಂದ್‌ಗೆ ಬೆಂಬಲ ನೀಡಿರುವುದರಿಂದ ಬಹುತೇಕ ಅಂಗಡಿ ಮುಂಗಟ್ಟುಗಳು ಮುಚ್ಚಲಿದ್ದು, ವ್ಯಾಪಾರ ವಹಿವಾಟು ಸ್ಥಗಿತಗೊಳ್ಳುವ ಸೂಚನೆಗಳಿವೆ.

ಪೆಟ್ರೋಲ್ ಬಂಕ್‌ಗಳು ಹಾಗೂ ಎಲ್‌ಪಿಜಿ ವಿತರಣಾ ಕೇಂದ್ರಗಳು ಕಾರ್ಯ ನಿರ್ವಹಿಸುವ ಸಾಧ್ಯತೆ ಕಡಿಮೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕಾರ್ಮಿಕರ ಕೇಂದ್ರ ಕನ್ನಡ ಕ್ರಿಯಾ ಸಮಿತಿ, ರಾಜ್ಯ ಲಾರಿ ಮಾಲೀಕರ ಸಂಘ, ರಾಜ್ಯ ವಾಹನ ಚಾಲಕರ ಸಂಘಗಳ ಒಕ್ಕೂಟ ಹಾಗೂ ಆಟೊ ಚಾಲಕರ ಸಂಘಗಳು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿವೆ. ಇದರಿಂದ ವಾಹನಗಳ ಸಂಚಾರಕ್ಕೆ ಅಡಚಣೆಯಾಗಲಿದೆ.

ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳ ಸುಗಮ ಸಂಚಾರಕ್ಕೂ ಬಂದ್ ಧಕ್ಕೆ ತರುವ ಸಂಭವ ಇದೆ. `ಶನಿವಾರ ಪರಿಸ್ಥಿತಿ ಹೇಗಿರುತ್ತದೆ ಎಂಬುದನ್ನು ಗಮನಿಸಿ ಬಸ್ಸುಗಳನ್ನು ಓಡಿಸುವ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುವುದು~ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಎನ್. ಮಂಜುನಾಥ ಪ್ರಸಾದ್ ತಿಳಿಸಿದರು.


`ಬೆಂಗಳೂರು ನಗರದಲ್ಲಿ ಬಿಎಂಟಿಸಿ ಬಸ್‌ಗಳನ್ನು ಎಂದಿನಂತೆ ಓಡಿಸಲು ವ್ಯವಸ್ಥೆ ಮಾಡಲಾಗಿದೆ. ಆದರೆ ಪರಿಸ್ಥಿತಿ ಕೈಮೀರಿದರೆ ಬಸ್ ಸಂಚಾರ ಸ್ಥಗಿತಗೊಳಿಸಲಾಗುವುದು~ ಎಂದು ಬಿಎಂಟಿಸಿ ಸಂಚಾರ ವ್ಯವಸ್ಥಾಪಕ ನಾಗರಾಜ್ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.

`ಬಂದ್ ಕಾರಣದಿಂದ ಶಾಲಾ - ಕಾಲೇಜುಗಳಿಗೆ ರಜೆ ಘೋಷಿಸುವ ವಿಚಾರವನ್ನು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ವಿವೇಚನೆಗೆ ಬಿಡಲಾಗಿದೆ~ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.  ಆದರೆ ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ನಗರದ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ.

ಬಂದ್‌ಗೆ ಬೆಂಗಳೂರು ವಕೀಲರ ಸಂಘವು ಬೆಂಬಲ ನೀಡಿರುವುದರಿಂದ ನ್ಯಾಯಾಲಯ ಕಲಾಪಗಳು ನಡೆಯುವ ಸಾಧ್ಯತೆ ಕಡಿಮೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಚಿತ್ರರಂಗದ ಕಲಾವಿದರು ಬಂದ್ ಬೆಂಬಲಿಸಿರುವುದರಿಂದ ಚಿತ್ರಮಂದಿರಗಳು ಮುಚ್ಚುವ ಸಾಧ್ಯತೆ ಇದೆ.

ರಾಜ್ಯ ಕೇಬಲ್ ಆಪರೇಟರ್‌ಗಳ ಸಂಘ ಬಂದ್‌ಗೆ ಬೆಂಬಲ ನೀಡಿದ್ದು, ಸುದ್ದಿ ವಾಹಿನಿಗಳನ್ನು ಹೊರತು ಪಡಿಸಿ ಉಳಿದ ಚಾನೆಲ್‌ಗಳ ಪ್ರಸಾರವನ್ನು ಸ್ಥಗಿತಗೊಳಿಸಲಿದೆ. 

ಬಿಗಿ ಬಂದೋಬಸ್ತ್
`ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ರಾಜ್ಯ ಮೀಸಲು ಪಡೆಯ 142 ತುಕಡಿಗಳು, ಕ್ಷಿಪ್ರ ಕಾರ್ಯಾಚರಣೆ ಪಡೆಯ (ಆರ್‌ಎಎಫ್) ಮೂರು ಕಂಪೆನಿಗಳನ್ನು ನಿಯೋಜಿಸಲಾಗಿದೆ.

ಜತೆಗೆ 65 ಸಾವಿರ ಪೊಲೀಸರು ಬಂದೋಬಸ್ತ್ ಕರ್ತವ್ಯದಲ್ಲಿರುತ್ತಾರೆ. ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದ್ದು, ಫೋಟೊ ಮತ್ತು ವಿಡಿಯೊ ಚಿತ್ರೀಕರಣ ಮಾಡಲಾಗುವುದು~ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಬಿಪಿನ್ ಗೋಪಾಲಕೃಷ್ಣ `ಪ್ರಜಾವಾಣಿ~ಗೆ ತಿಳಿಸಿದರು.

`ಬಂದ್ ಸಂದರ್ಭದಲ್ಲಿ ನಗರದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಸಂಚಾರ ವಿಭಾಗಗಳ ಸುಮಾರು 15 ಸಾವಿರ ಪೊಲೀಸರ ಜತೆಗೆ 35 ಕೆಎಸ್‌ಆರ್‌ಪಿ ತುಕಡಿಗಳನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿದೆ. ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡುವವರನ್ನು ಬಂಧಿಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ~ ಎಂದು ನಗರ ಪೊಲೀಸ್ ಕಮೀಷನರ್ ಜ್ಯೋತಿಪ್ರಕಾಶ್ ಮಿರ್ಜಿ ತಿಳಿಸಿದ್ದಾರೆ.

`ಕಾವೇರಿ ನೀರಿನ ಅಸಮರ್ಪಕ ಹಂಚಿಕೆ ವಿರೋಧಿಸಿ ಹಾಗೂ ರಾಜ್ಯದ ರೈತರ ಹಿತದೃಷ್ಟಿಯಿಂದ ಕರೆ ನೀಡಿರುವ ಬಂದ್‌ಗೆ ರಾಜ್ಯದ ಎಲ್ಲ ಕೈಗಾರಿಕೆಗಳು, ವ್ಯಾಪಾರ ಕೇಂದ್ರಗಳು ಹಾಗೂ ವರ್ತಕರು ಬೆಂಬಲ ನೀಡಬೇಕು~ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೆ ಮಹಾಸಂಸ್ಥೆಯ ಅಧ್ಯಕ್ಷ ಕೆ.ಶಿವಷಣ್ಮುಗಂ ಮನವಿ ಮಾಡಿದ್ದಾರೆ.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ಬಂದ್‌ಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ. ವಿದ್ಯಾರ್ಥಿ ಪರಿಷತ್‌ನ ಕಾರ್ಯಕರ್ತರು ನಾಳೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿದ್ದಾರೆ ಎಂದು ಎಬಿವಿಪಿ ತಿಳಿಸಿದೆ.

ಚಿತ್ರೋದ್ಯಮದ ಮೌನ ಮೆರವಣಿಗೆ
ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ಶನಿವಾರ (ಅ. 6) ಚಿತ್ರೀಕರಣ, ಪ್ರದರ್ಶನ ಮತ್ತು ಚಿತ್ರೋದ್ಯಮಕ್ಕೆ ಸಂಬಂಧಿಸಿದ ಎಲ್ಲ ಕಾರ್ಯಚಟುವಟಿಕೆ ಸ್ಥಗಿತಗೊಳಿಸಲಾಗುವುದು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಿ.ವಿಜಯ್‌ಕುಮಾರ್ ತಿಳಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಕಲಾವಿದರ ಸಂಘದ ಅಧ್ಯಕ್ಷ ಅಂಬರೀಷ್ ನೇತೃತ್ವದಲ್ಲಿ ಚಿತ್ರೋದ್ಯಮದವರೆಲ್ಲ ಶನಿವಾರ ಬೆಳಿಗ್ಗೆ 11ಕ್ಕೆ ಮಂಡಳಿ ಕಚೇರಿಯಿಂದ ರಾಜಭವನದವರೆಗೆ ಮೌನ ಮೆರವಣಿಗೆ ನಡೆಸುವರು. ನಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು~ ಎಂದರು.

ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ. ಗೋವಿಂದು, ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ, ನಿರ್ದೇಶಕರ ಸಂಘದ ಅಧ್ಯಕ್ಷ ಎಂ.ಎಸ್.ರಮೇಶ್, ಕಲಾವಿದರ ಸಂಘದ ಕಾರ್ಯದರ್ಶಿ ರಾಕ್‌ಲೈನ್ ವೆಂಕಟೇಶ್, ಕಾರ್ಮಿಕರ, ಕಲಾವಿದರ, ತಂತ್ರಜ್ಞರ ಒಕ್ಕೂಟದ ಅಧ್ಯಕ್ಷ ಅಶೋಕ್ ಈ ಸಂದರ್ಭದಲ್ಲಿ ಮಾತನಾಡಿ `ರಾಜ್ಯದ ಜನರ ಹೋರಾಟಕ್ಕೆ ನಮ್ಮ ಬೆಂಬಲ ಸದಾ ಇದೆ~ ಎಂದರು.

ಶಾಂತಿ ಕಾಪಾಡಿ
`ಬಂದ್ ಕಾರಣದಿಂದ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಿದರೆ ಅದರ ನಷ್ಟದ ಹೊರೆ ಸಾರ್ವಜನಿಕರ ಮೇಲೇ ಬೀಳಲಿದೆ. ಹೀಗಾಗಿ ಯಾವುದೇ ಗಲಭೆ, ಹಿಂಸಾಚಾರ ಹಾಗೂ ಶಾಂತಿಭಂಗಕ್ಕೆ ಪ್ರತಿಭಟನಾಕಾರರು ಮುಂದಾಗಬಾರದು~
-ಜ್ಯೋತಿಪ್ರಕಾಶ್ ಮಿರ್ಜಿ
ಪೊಲೀಸ್ ಕಮೀಷನರ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT