ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ವೆಂಕಟೇಶಮೂರ್ತಿ ಅಧಿಕಾರಾವಧಿ ಕೊನೆ

Last Updated 2 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು:  ಕಸ ಸಮಸ್ಯೆ ಸೇರಿದಂತೆ ವಿವಾದದಲ್ಲೇ ಹೆಚ್ಚು ಸುದ್ದಿ ಮಾಡಿರುವ ಮೇಯರ್ ಡಿ.ವೆಂಕಟೇಶಮೂರ್ತಿ ಅವರ ಅಧಿಕಾರಾವಧಿ ಮಂಗಳವಾರ ಕೊನೆಗೊಳ್ಳಲಿದೆ.

ಕಳೆದ ವರ್ಷ ಏಪ್ರಿಲ್ 27ರಂದು ಬಿಬಿಎಂಪಿಯ 46ನೇ ಮೇಯರ್ ಆಗಿ ಅವರು ಅಧಿಕಾರ ಸ್ವೀಕರಿಸಿದ್ದರು. 16 ತಿಂಗಳ ಕಾಲ ಅಧಿಕಾರದ ಸವಿ ಅನುಭವಿಸಿದ್ದ ಅವರು ಹೆಚ್ಚು ಕಾಲ ಆಡಳಿತ ನಡೆಸಿದ ಮೇಯರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಮೇಯರ್ ಒಬ್ಬರು ಮೊದಲ ಬಾರಿಗೆ ಬಜೆಟ್ ಮಂಡಿಸಿದ ವಿದ್ಯಮಾನ ನಡೆದದ್ದು ಈ ಸಲ ಮಾತ್ರ.

2004ರಲ್ಲಿ `ಬಗರ್ ಹುಕುಂ' ಯೋಜನೆಯಡಿ ಜಾಗ ಪಡೆಯುವಾಗ ಸುಳ್ಳು ದಾಖಲೆಗಳನ್ನು ಸಲ್ಲಿಸಿದ್ದಾರೆ ಎಂಬ ಆರೋಪದಲ್ಲಿ ಐಪಿಸಿ ಸೆಕ್ಷನ್ 420ರ ಅಡಿಯಲ್ಲಿ ಬಿಎಂಟಿಎಫ್, ವೆಂಕಟೇಶಮೂರ್ತಿ ಹಾಗೂ ಪತ್ನಿ ಪ್ರಭಾ ವೆಂಕಟೇಶಮೂರ್ತಿ ವಿರುದ್ಧ ಪ್ರಕರಣ ದಾಖಲಿಸಿತ್ತು. ಬಗರ್ ಹುಕುಂ ಅಡಿ ಜಾಗ ಪಡೆಯವ ಸಂದರ್ಭ ವೆಂಕಟೇಶಮೂರ್ತಿ `ಭೂರಹಿತ ಕೃಷಿ ಕಾರ್ಮಿಕ' ಎಂದು ಘೋಷಿಸಿಕೊಂಡಿದ್ದರು.

ವೆಂಕಟೇಶಮೂರ್ತಿ ರಾಜೀನಾಮೆ ನೀಡಬೇಕು ಎಂಬ ಒತ್ತಾಯವೂ ಕೇಳಿಬಂದಿತ್ತು. ರಾಜೀನಾಮೆ ನೀಡಲು ನಿರಾಕರಿಸಿದ್ದರು.
ನಗರದಲ್ಲಿ ಕಸ ಸಮಸ್ಯೆ ಬಿಗಡಾಯಿಸಿದ್ದು ವೆಂಕಟೇಶಮೂರ್ತಿ ಕಾಲದಲ್ಲೇ. ಮೂರು ಲ್ಯಾಂಡ್‌ಫಿಲ್‌ಗಳು ಬಂದ್ ಆದ ಕಾರಣ ತಿಂಗಳುಗಟ್ಟಲೆ ಕಸ ಸಮಸ್ಯೆ ಬಿಗಡಾಯಿಸಿತ್ತು. ಏಳು ತಿಂಗಳ ಕಾಲ ಸಮಸ್ಯೆ ಗಂಭೀರ ಸ್ವರೂಪ ತಾಳಿದ್ದರೂ ಅದಕ್ಕೆ ಸೂಕ್ತ ಪರಿಹಾರ ಕಂಡುಹಿಡಿಯುವಲ್ಲಿ ಮೇಯರ್ ವಿಫಲರಾಗಿದ್ದರು. ಬಿಬಿಎಂಪಿ ಹಾಗೂ ಮೇಯರ್ ಕಾರ್ಯವೈಖರಿಗೆ ತೀವ್ರ ಅಸಮಾಧಾನ ವ್ಯಕ್ತವಾಗಿತ್ತು. ಅಂತರರಾಷ್ಟ್ರೀಯ ಮಾಧ್ಯಮಗಳಲ್ಲೂ ನಗರದ ಕಸದ ಸಮಸ್ಯೆ ಬಗ್ಗೆ ವರದಿ ಪ್ರಕಟವಾಗಿತ್ತು.

ಈ ನಡುವೆ ಮೇಯರ್ ಹಾಗೂ ಉಪಮೇಯರ್ ವಿವಾದ ಹೈಕೋರ್ಟ್ ಮೆಟ್ಟಿಲೇರಿತು. ಇದರಿಂದ ಉಸ್ತುವಾರಿ ಮೇಯರ್ ಆಗಿ ಮುಂದುವರಿಯುವ ಅವಕಾಶ ವೆಂಕಟೇಶಮೂರ್ತಿ ಅವರಿಗೆ ಲಭಿಸಿತು. ಆರ್ಥಿಕ ಸೇರಿದಂತೆ ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಹಕ್ಕು ತನಗೆ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ ಅವರು ರಾಜೀನಾಮೆ ನೀಡಲು ಮುಂದಾಗಿದ್ದರು.

ಬಳಿಕ ರಾಜ್ಯ ಸರ್ಕಾರ ಬಜೆಟ್ ಮಂಡನೆಗೆ ಅವಕಾಶ ಕಲ್ಪಿಸಿತ್ತು. ಮೇಯರ್ ಅವರನ್ನು `ಕಾಂಗ್ರೆಸ್ ಏಜೆಂಟ್' ಎಂದು ಬಿಜೆಪಿ ಸದಸ್ಯರೇ ಟೀಕಿಸಿದ್ದರು. `ಬಿಜೆಪಿ ಸದಸ್ಯರ ಸಲಹೆಗಳನ್ನು ಧಿಕ್ಕರಿಸಿ ಬಜೆಟ್‌ನಲ್ಲಿ ಹಲವು ಬದಲಾವಣೆಗಳನ್ನು ಮಾಡಿದ್ದರು. ಇದು ಕಾಂಗ್ರೆಸ್‌ಗೆ ಅನುಕೂಲ ಕಲ್ಪಿಸುವಂತಿತ್ತು' ಎಂಬ ಆಕ್ರೋಶವೂ ವ್ಯಕ್ತವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT