ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ಸೋದೆ ಶ್ರೀ ಸರ್ವಜ್ಞ ಪೀಠಾರೋಹಣ

Last Updated 17 ಜನವರಿ 2012, 19:30 IST
ಅಕ್ಷರ ಗಾತ್ರ

ಉಡುಪಿ: ಸೋದೆ ವಾದಿರಾಜ ಮಠದ ವಿಶ್ವವಲ್ಲಭತೀರ್ಥರ ಪ್ರಥಮ ಪರ್ಯಾಯ ಪೀಠಾರೋಹಣಕ್ಕಾಗಿ ಇಡೀ ದೇವಳ ನಗರಿ ಉಡುಪಿ ಸಜ್ಜಾಗಿದೆ.
 
ಕೃಷ್ಣಮಠ, ರಥಬೀದಿ, ಉಡುಪಿ ನಗರದಲ್ಲಿ ಜಾತ್ರೆಯ ಸಂಭ್ರಮ. ನಗರದ ಪ್ರಮುಖ ರಸ್ತೆಗಳು, ಅಂಗಡಿಗಳು, ರಥಬೀದಿ, ಅಷ್ಟಮಠಗಳು ವಿದ್ಯುದ್ದೀಪಗಳಿಂದ ಅಲಂಕೃತಗೊಂಡಿದ್ದು ನವವಧುವಿನಂತೆ ಕಂಗೊಳಿಸುತ್ತಿವೆ. ಎಲ್ಲೆಲ್ಲೂ ಅಪಾರ ಜನಸ್ತೋಮ, ಪರ್ಯಾಯಕ್ಕೆ ಶುಭ ಕೋರುವ ಫಲಕಗಳು, ಗೋಪುರಾಕೃತಿಯ ಸ್ವಾಗತ ಮಂಟಪ ಎಲ್ಲೆಡೆ ಕಾಣುತ್ತಿವೆ.

ಬುಧವಾರ ಉಷಃಕಾಲಕ್ಕೂ ಮುನ್ನ ಬೆಳಿಗ್ಗೆ 6.20ರ ಮಂಗಲ ಮುಹೂರ್ತದಲ್ಲಿ ಉಡುಪಿಯ ಶ್ರೀಕೃಷ್ಣ ಮುಖ್ಯಪ್ರಾಣರ ಸನ್ನಿಧಿಯಲ್ಲಿ ಸೋದೆ ವಿಶ್ವವಲ್ಲಭ ತೀರ್ಥರು ಸರ್ವಜ್ಞ ಪೀಠಾರೋಹಣ ಮಾಡಿ ಕೃಷ್ಣನ ಪೂಜಾ ಕೈಂಕರ್ಯದ ಪ್ರಥಮ ದ್ವೈವಾರ್ಷಿಕ ಪರ್ಯಾಯ ಆರಂಭಿಸಲಿದ್ದಾರೆ. ಇದಕ್ಕೆ ಸಾಕ್ಷಿಯಾಗಲು ನಾಡಿನ ಮೂಲೆ ಮೂಲೆಗಳಿಂದ, ದೇಶ-ವಿದೇಶದಿಂದ ಕೃಷ್ಣಭಕ್ತರು ಉಡುಪಿಗೆ ಆಗಮಿಸಿದ್ದಾರೆ.

ನಸುಕಿನಲ್ಲಿ ಪರ್ಯಾಯ ಮೆರವಣಿಗೆ ಭಕ್ತರ ಪಾಲಿಗೆ ಅವಿಸ್ಮರಣೀಯ ಅನುಭವ. ವೈವಿಧ್ಯ ಸ್ತಬ್ಧಚಿತ್ರಗಳ ಮೆರವಣಿಗೆ 2.5 ಕಿ.ಮೀ. ದೂರವನ್ನು 2 ಗಂಟೆಯಲ್ಲಿ ಮೆರವಣಿಗೆ ಕ್ರಮಿಸುತ್ತದೆ.

ಪರ್ಯಾಯ ಪೀಠವೇರುವ ಯತಿ ಕಾಪು ದಂಡತೀರ್ಥ(ಮಧ್ವಾಚಾರ್ಯರು ಸೃಷ್ಟಿಸಿದ ಪುಣ್ಯತೀರ್ಥ)ದಲ್ಲಿ ನಸುಕಿನ 3 ಗಂಟೆಗೆ ಸ್ನಾನ ಸಂಧ್ಯಾವಂದನೆ ಪೂರೈಸಿ ಜೋಡುಕಟ್ಟೆಗೆ ಬರುತ್ತಾರೆ. ಅಲ್ಲಿ ಅಷ್ಟಮಠಾಧೀಶರನ್ನು ಒಳಗೊಂಡಂತೆ ಮೇನೆ ಮೆರವಣಿಗೆಯಲ್ಲಿ ರಥಬೀದಿಗೆ ಬಂದು ಕನಕನ ಕಿಂಡಿಯಲ್ಲಿ ಕೃಷ್ಣನ ದರ್ಶನ ಮಾಡುವರು.

ಪರ್ಯಾಯ ದರ್ಬಾರ್:ಮೆರವಣಿಗೆ ರಥಬೀದಿಗೆ ಬಂದಾಗ ಸೋದೆ ವಿಶ್ವವಲ್ಲಭ ತೀರ್ಥರನ್ನು ಹಾಲಿ ಪರ್ಯಾಯ ಶೀರೂರು ಸ್ವಾಮೀಜಿ ಸ್ವಾಗತಿಸುವರು. ನಂತರ ಕನಕನ ಕಿಂಡಿಯಲ್ಲಿ ಕೃಷ್ಣ ದರ್ಶನ, ಮಧ್ವಸರೋವರದಲ್ಲಿ ಪಾದ ಪ್ರಕ್ಷಾಲನ, ಶ್ರೀಕೃಷ್ಣ ಮುಖ್ಯಪ್ರಾಣನ ದರ್ಶನ, ಗಂಧ ಮಾಲ್ಯಾದಿ ಉಪಚಾರ ಪೂರೈಸಿ, ಸುಮುಹೂರ್ತದಲ್ಲಿ ಶೀರೂರು ಶ್ರೀಗಳಿಂದ ಅಕ್ಷಯ ಪಾತ್ರೆ-ಸಟ್ಟುಗ ಹಸ್ತಾಂತರ. ಬಳಿಕ ಸರ್ವಜ್ಞ ಪೀಠಾರೋಹಣ ಮಾಡುವರು.

ನಂತರ ಬಡಗುಮಾಳಿಗೆಯಲ್ಲಿ ಅಷ್ಟಮಠಾಧೀಶರಿಗೆ ಮಾಲಿಕೆ ಮಂಗಳಾರತಿ ಮಾಡಿ ಬಳಿಕ (ಬೆಳಿಗ್ಗೆ 7 ಗಂಟೆಗೆ) ರಾಜಾಂಗಣದಲ್ಲಿ ವಿಶೇಷ ಆಹ್ವಾನಿತ ಗಣ್ಯರ ಸಮ್ಮುಖದಲ್ಲಿ ~ಪರ್ಯಾಯ ದರ್ಬಾರ್~ ನಡೆಸುವರು. ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಿ ಸ್ವಾಮೀಜಿ ಸಂದೇಶ ನೀಡುವರು.

ಶ್ರೀಕೃಷ್ಣ ಮಠದ ವೈಶಿಷ್ಟ್ಯವೆಂದರೆ ಇಲ್ಲಿ ಅರ್ಚಕರಿಲ್ಲ. ಯತಿಗಳೇ ಪೂಜೆ ನೆರವೇರಿಸುವರು. ಅಷ್ಟಮಠದ ಯತಿಗಳ ಹೊರತಾಗಿ ಅನ್ಯರಿಗೆ ಕೃಷ್ಣ ಪೂಜೆಗೆ ಅನುಮತಿಯಿಲ್ಲ. 2ವರ್ಷ ಕಾಲ ಶ್ರೀಕೃಷ್ಣ ಮಠದ ಪೂರ್ಣ ಆಡಳಿತ ಪರ್ಯಾಯದ ಯತಿಗಳದ್ದಾಗಿರುತ್ತದೆ. 2 ವರ್ಷ ನಂತರ ಜ. 18ಕ್ಕೆ ಇನ್ನೊಬ್ಬ ಯತಿಗೆ (ಮಠಕ್ಕೆ) ಪೂಜಾ ಅಧಿಕಾರ ಹಸ್ತಾಂತರಿಸುವ ಸಂಪ್ರದಾಯ ಶತಮಾನಗಳಿಂದ ನಡೆದುಕೊಂಡು ಬಂದಿದೆ.

 
ಪರ್ಯಾಯ ವೈಖರಿ
ಪರ್ಯಾಯ ಎಂದರೆ ಪ್ರತಿ ಎರಡು ವರ್ಷಕ್ಕೊಮ್ಮೆ ಜ. 18ರಂದೇ ಉಡುಪಿ ಶ್ರೀಕೃಷ್ಣನ ಪೂಜಾ ವಿನಿಯೋಗಗಳ ಹಕ್ಕು ಒಂದು ಮಠದಿಂದ ಇನ್ನೊಂದು ಮಠಕ್ಕೆ ಹಸ್ತಾಂತರವಾಗುವ ಶುಭ ಸಂದರ್ಭ. ಜತೆಗೆ ಮಧ್ವಾಚಾರ್ಯರು ನೀಡಿದ ಮರದ ಅಕ್ಷಯ ಪಾತ್ರೆ ಮತ್ತು ಬೆಳ್ಳಿ ಸಟ್ಟುಗ ಹಸ್ತಾಂತರ. ನೂತನ ಯತಿಗಳ ಸರ್ವಜ್ಞ ಪೀಠಾರೋಹಣ. ಬಳಿಕ ಅಷ್ಟಮಠದ ಸ್ವಾಮೀಜಿಗಳಿಗೆ ಮಾಲಿಕೆ ಮಂಗಳಾರತಿ, ಪರ್ಯಾಯ ದರ್ಬಾರ್. ಮಧ್ಯಾಹ್ನ ಭಕ್ತರಿಗೆಲ್ಲ ಅನ್ನ ಸಂತರ್ಪಣೆ. ಇದೆಲ್ಲವೂ ಈ ಉತ್ಸವದ ವಿಶೇಷ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT