ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದ್ರಾವತಿ ತಟದಲ್ಲಿ...

Last Updated 23 ಜೂನ್ 2012, 19:30 IST
ಅಕ್ಷರ ಗಾತ್ರ

ಇಂದ್ರಾವತಿ ರಾಷ್ಟ್ರೀಯ ಉದ್ಯಾನವನಕ್ಕೆ `ಇಂದ್ರಾವತಿ ಹುಲಿ ಸಂರಕ್ಷಣಾ ವಲಯ~ ಎಂದೂ ಕರೆಯಲಾಗುತ್ತದೆ. ಚತ್ತೀಸ್‌ಗಡ ರಾಜ್ಯಕ್ಕೆ ಸೇರಿದ ಈ ಪ್ರದೇಶದಲ್ಲಿ ಇಂದ್ರಾವತಿ ನದಿ ಹರಿದು ಸಾಗುತ್ತದೆ. ಅದಕ್ಕೇ ಇಂದ್ರಾವತಿ ಎನ್ನುವ ಮೋಹಕ ಹೆಸರು.

2799 ಚದರ ಕಿಲೋ ಮೀಟರ್ ವಿಸ್ತಾರದಲ್ಲಿ ಹರಡಿರುವ ಈ ಸುಂದರ ಪ್ರದೇಶವನ್ನು 1981ರಲ್ಲಿ ರಾಷ್ಟ್ರೀಯ ಉದ್ಯಾನವನ ಎಂದು ಘೋಷಿಸಲಾಯಿತು. ಇಲ್ಲಿ ಪ್ರಮುಖವಾಗಿ ಹುಲಿಗಳ ಸಂತತಿಯನ್ನು ರಕ್ಷಿಸುವ ಕೆಲಸ ಸಾಗುತ್ತಿದೆ.

ಅಳಿವಿನ ಅಂಚಿನಲ್ಲಿ ಇರುವ ಏಷ್ಯಾದ ಕಾಡೆಮ್ಮೆಗಳನ್ನು ಕೂಡ `ಇಂದ್ರಾವತಿ~ಯಲ್ಲಿ ಸಂರಕ್ಷಿಸಲಾಗುತ್ತಿದೆ. ಕಾಡಿನಾದ್ಯಂತ ಇಂದ್ರಾವತಿ ನದಿ ಹರಿದು ಸಾಗುವುದರಿಂದ ಪ್ರವಾಸಿಗರು ಈ ನದಿಯ ಬಳುಕಿಗೂ ಮನ ಸೋಲುತ್ತಾರೆ.

ಚತ್ತೀಸ್‌ಗಢ ರಾಜ್ಯದಲ್ಲಿ ಇರುವ ಏಕೈಕ ಹುಲಿ ರಕ್ಷಣಾ ವಲಯ ಇದಾಗಿದೆ. ಕಡಿದಾದ ಹಸಿರು ತುಂಬಿದ ಬೆಟ್ಟಗಳಿಂದ ಕೂಡಿದ ಜಾಗದಲ್ಲಿ ಉದ್ಯಾನವನ್ನು ಗುರುತಿಸಲಾಗಿದೆ. ಆದಕಾರಣ ಅರಣ್ಯ ಇಲಾಖೆಯ ಸಿಬ್ಬಂದಿ ನೆರವು ಪಡೆದು ಕಾಡಿನಲ್ಲಿ ಸುತ್ತಾಡಬೇಕು. ಹಲವು ಜಾತಿಯ ಮರಗಳು, ಅಸಂಖ್ಯ ಪಕ್ಷಿಗಳು, ಪ್ರಾಣಿಗಳು ಇಲ್ಲಿ ನೆಲೆ ಕಂಡುಕೊಂಡಿವೆ.

ಸಾಲ್, ತೇಗ, ಬಿದಿರಿನ ಮರಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಚಿರತೆ, ಬೊಗಳುವ ಜಿಂಕೆ ಸೇರಿದಂತೆ ಹಲವು ಜಾತಿಯ ಜಿಂಕೆಗಳು ಇಲ್ಲಿವೆ. ಕೃಷ್ಣಮೃಗ, ನಾಲ್ಕು ಕೊಂಬಿನ ಸಾರಂಗ, ಚುಕ್ಕೆ ಜಿಂಕೆ, ಎರಡು ಕೊಂಬಿನ ಹುಲ್ಲೆಗಳು ಹೆಚ್ಚಾಗಿವೆ. ಮೊಸಳೆ, ಕಾಳಿಂಗ ಸರ್ಪ, ಪಂಗೋಲಿಯನ್, ಕರಡಿಗಳು ಮುಂತಾದ ಪ್ರಾಣಿಗಳೂ ಇಲ್ಲಿ ನೆಲೆಸಿವೆ.

ಮಳೆಗಾಲದಲ್ಲಿ ಇಲ್ಲಿ ಸಂಚರಿಸುವುದು ಅಸಾಧ್ಯ. ಬೇಸಿಗೆಯ ಬಿಸಿ ಈ ಕಾಡಿಗೆ ಅಷ್ಟಾಗಿ ತಟ್ಟದ ಕಾರಣ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಪ್ರವಾಸಿಗರ ಸಂಖ್ಯೆ ಜಾಸ್ತಿ.ಇಂದ್ರಾವತಿ ರಾಷ್ಟ್ರೀಯ ಉದ್ಯಾನ ಜಗದಾಲಪುರದಿಂದ 23 ಕಿಮೀ ಹಾಗೂ ರಾಯ್‌ಪುರ ವಿಮಾನ ನಿಲ್ದಾಣದಿಂದ 486 ಕಿಮೀ ದೂರ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT