ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಧನ ಉಳಿಸುವುದು ಹೇಗೆ?

Last Updated 4 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

‘ಇಂಧನ ಬೆಲೆ ಇಳಿಯಬೇಕೆಂದರೆ ಭಾರತೀಯರೆಲ್ಲರೂ ಕನಿಷ್ಠ ಒಂದು ವಾರ ತಮ್ಮ ಕಾರುಗಳನ್ನು ಹೊರ ತೆಗೆಯಬಾರದು’ ಎಂಬ ಸಂದೇಶವೊಂದು ಫೇಸ್‌ಬುಕ್‌ನಲ್ಲಿ ಹರಿದಾಡುತ್ತಿತ್ತು. ಆದರೆ ಇದು ಸಾಧ್ಯವೇ? ವಾಹನಗಳು ಅತ್ಯಗತ್ಯ ಎಂಬ ಕಾಲಘಟ್ಟದಲ್ಲಿರುವ ನಮಗೆ ಅವುಗಳು ಇಲ್ಲದ ಬದುಕು ಊಹಿಸುವುದೂ ಅಸಾಧ್ಯ.

ಆದರೂ ಅತಿ ಹೆಚ್ಚು ವೃದ್ಧಿ ಹೊಂದುತ್ತಿರುವ ಕ್ಷೇತ್ರ ಎಂದು ಎದೆಯುಬ್ಬಿಸಿಕೊಂಡಿದ್ದ ಆಟೊಮೊಬೈಲ್‌ ಕ್ಷೇತ್ರ ಇದೀಗ ಗಾಳಿ ಇಲ್ಲದ ಬಲೂನಿನಂತಾಗಿದೆ. ಡೀಸೆಲ್‌ಗಳ ಭರಾಟೆಯಲ್ಲಿ ಪೆಟ್ರೋಲ್‌ ಕಾರುಗಳು ಮೂಲೆಗುಂಪಾದವು. ಕಾರುಗಳ ಕುರಿತು ಸಂಶೋಧನೆಗಳು ನಿರಂತರವಾಗಿ ನಡೆಯುತ್ತಲೇ ಇವೆ. ಆದರೆ ಅವುಗಳು ಕಾರುಗಳ ವೇಗ ಹಾಗೂ ಐಶಾರಾಮಕ್ಕಷ್ಟೇ ಸೀಮಿತವಾಗಿದ್ದವು. ಇಷ್ಟೆಲ್ಲದರ ನಡುವೆಯೂ ಪೆಟ್ರೋಲ್‌ ಕಾರುಗಳ ಎಂಜಿನ್‌ನಲ್ಲಿ ಸಾಕಷ್ಟು ಸಂಶೋಧನೆ ಹಾಗೂ ಅಭಿವೃದ್ಧಿಗಳತ್ತ ಇದೀಗ ವಾಹನ ಪ್ರಪಂಚ ಮುಖ ಮಾಡಿದೆ. ಅವುಗಳತ್ತ ಇಣುಕಿ ನೋಡಿದಾಗ ಐದು ಪ್ರಮುಖ ಸಂಗತಿಗಳು ಗಮನ ಸೆಳೆಯುತ್ತವೆ.

ಭಾರತದಲ್ಲಿ ಡೀಸೆಲ್‌ ಕಾರುಗಳತ್ತ ಒಲವು ಹೆಚ್ಚಿರಬಹುದು. ಆದರೆ ಅಮೆರಿಕದಂತಹ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಇಂದಿಗೂ ಪೆಟ್ರೋಲ್‌ ಕಾರುಗಳೇ ಅಗ್ರಸ್ಥಾನದಲ್ಲಿವೆ. ಭಾರತದಲ್ಲೂ ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್‌ ಕಾರಿನ ಮಾರಾಟ ಕೊಂಚ ಏರಿಕೆ ಕಂಡಿದೆ. ಪೆಟ್ರೋಲ್‌ ಕಾರುಗಳ ಮೇಲಿನ ಅತಿಯಾದ ಅವಲಂಬನೆಯೇ ಇಂದಿನ ಇಂಧನ ಬೆಲೆ ಏರಿಕೆಗೆ ಕಾರಣ ಎನ್ನುವುದು ಆರ್ಥಿಕ ಪಂಡಿತರ ಲೆಕ್ಕಾಚಾರ.

ಆದರೂ ಪೆಟ್ರೋಲ್‌ ಎಂಜಿನ್‌ಗಳ ಕಾರ್ಯಕ್ಷಮತೆ ಹೆಚ್ಚಿಸುವಲ್ಲಿ ಎಂಜಿನ್‌ಗಳ ಸಾಮರ್ಥ್ಯ, ಇಂಧನ ಕ್ಷಮತೆ ಹಾಗೂ ವಾಯು ಮಾಲಿನ್ಯ ಕುರಿತು ಸಾಕಷ್ಟು ಬದಲಾವಣೆ ಅಗತ್ಯವಿದೆ. ಈ ನಿಟ್ಟಿನಲ್ಲಿ ಹೈಬ್ರಿಡ್‌ ಕಾರುಗಳು ಸದ್ಯದ ಪರಿಸ್ಥಿತಿಯ ಬಹುದೊಡ್ಡ ಬದಲಾವಣೆ. ಆದರೂ ಇವುಗಳ ಪಾಲು
ಶೇ 2 ಮಾತ್ರ.

ವೇರಿಯಬಲ್‌ ವಾಲ್ವ್‌ ಮತ್ತು ಟೈಮಿಂಗ್‌

ಪೆಟ್ರೋಲ್‌ ಎಂಜಿನ್‌ಗಳ ಅಭಿವೃದ್ಧಿಯಲ್ಲಿ ಕಾರು ತಯಾರಕರು ಅವುಗಳ ವೇರಿಯಬಲ್‌ ವಾಲ್ವ್‌, ಟೈಮಿಂಗ್‌ ಹಾಗೂ ಲಿಫ್ಟ್‌ ಕುರಿತು ಸಾಕಷ್ಟು ಬದಲಾವಣೆ ಮಾಡುತ್ತಲೇ ಇರುತ್ತಾರೆ. ಆದರೆ ಇವುಗಳನ್ನು ಅರ್ಥ ಮಾಡಿಕೊಳ್ಳುವ ಮುನ್ನ ಕಾರಿನ ಎಂಜಿನ್‌ ಹೇಗೆ ಕೆಲಸ ಮಾಡಲಿದೆ ಎಂಬುದನ್ನು ತಿಳಿದುಕೊಳ್ಳುವುದು ಅತಿಮುಖ್ಯ.

ಉದಾಹರಣೆಗೆ ನಾವು ಬಹಳ ಕೆಲಸ ಮಾಡಬೇಕಾಗಿರುತ್ತದೆ. ಅದಕ್ಕೆ ಅಗತ್ಯ ಶಕ್ತಿ ಉತ್ಪಾದಿಸಿಕೊಳ್ಳಲು ಹೆಚ್ಚು ಕ್ಯಾಲೊರಿ ಇರುವ ಆಹಾರ ಸೇವನೆ ಹಾಗೂ ಶುದ್ಧ ಗಾಳಿಯ ಸೇವನೆ ಬಹಳ ಮುಖ್ಯ. ಅದರಂತೆಯೇ ನಿಧಾನ ನಡೆಯುವಾಗ ಹೆಚ್ಚು ಇಂಧನ ಬೇಕಾಗುವುದಿಲ್ಲ.

ಎಂಜಿನ್‌ಗಳಲ್ಲಿ ಇಂಧನ ಉರಿದು ಶಕ್ತಿ ನೀಡಲು ವಾಲ್ವ್‌ಗಳೆಂಬ ಮುಚ್ಚಳವಿರುತ್ತದೆ. ಗಾಳಿ ಹಾಗೂ ಇಂಧನವನ್ನು ಸರಿಯಾದ ಪ್ರಮಾಣದಲ್ಲಿ ಬೆರೆಸಿ ಶಕ್ತಿ ಉತ್ಪಾದಿಸುವುದು ಇದರ ಕೆಲಸ. ಗಾಳಿ ಹಾಗೂ ಇಂಧನ ಮಿಶ್ರಣದ ಪ್ರವೇಶ ಹಾಗೂ ಕಂಬಶ್ಶನ್‌ ಚೇಂಬರ್‌ ಮೂಲಕ ನಿರ್ಗಮನವನ್ನು ಈ ವಾಲ್ವ್‌ಗಳೇ ನಿಯಂತ್ರಿಸುತ್ತವೆ. ಕಾರಿನ ವೇಗಕ್ಕೆ ತಕ್ಕಂತೆ ಈ ವಾಲ್ವ್‌ಗಳು ತೆರೆದುಕೊಳ್ಳುವುದು ಹಾಗೂ ಮುಚ್ಚಿಕೊಳ್ಳುವ ಕೆಲಸ ಮಾಡುತ್ತವೆ.

ಹೀಗೆ ತೆರೆದುಕೊಳ್ಳುವ ವಾಲ್ವ್‌ನ ಒಟ್ಟು ಸಮಯ ಹಾಗೂ ಕ್ರಮಿಸುವ ದೂರವನ್ನು ನಿಯಂತ್ರಿಸಿದಲ್ಲಿ ಇಂಧನ ಉಳಿತಾಯವೂ ಹೆಚ್ಚಾಗಲಿದೆ. ಮುಚ್ಚಳ ತೆರೆದುಕೊಳ್ಳುವ ಸಮಯ, ತೆರೆಯುವ ಪ್ರಮಾಣಗಳನ್ನು ನಿಯಂತ್ರಿಸುವ ತಂತ್ರಜ್ಞಾನವನ್ನು ಅಮೆರಿಕದ ಎಂಜಿನಿಯರ್‌ಗಳು ಅಭಿವೃದ್ಧಿಪಡಿಸಿದ್ದಾರೆ. ಇದರಿಂದ ಶೇ 5ರಷ್ಟು ಇಂಧನ ಉಳಿತಾಯವಾಗಲಿದೆ.

ಸಿಲಿಂಡರ್‌ ಡಿ ಆ್ಯಕ್ಟಿವೇಷನ್‌

ವೇರಿಯಬಲ್‌ ವಾಲ್ವ್‌ನಂತೆಯೇ ಸಿಲಿಂಡರ್‌ ಡಿ ಆ್ಯಕ್ಟಿವೇಷನ್‌ ಕೂಡಾ ಕೆಲಸ ಮಾಡಲಿದೆ. ಹಲವು ಕೆಲಸಗಳಿಗೆ ಹಲವು ಬಗೆಯ ಇಂಧನಗಳ ಅಗತ್ಯವಿರುತ್ತದೆ. ಉದಾಹರಣೆಗೆ ವಿ–8 ಎಂಜಿನ್‌ ಕಾರುಗಳನ್ನು ನಾವು ಬಹಳಷ್ಟು ಕಂಡಿದ್ದೇವೆ. ಅಂದರೆ ಎಂಟು ಸಿಲಿಂಡರ್‌ಗಳ ಎಂಜಿನ್‌ ಹೊಂದಿರುವ ಕಾರು ಚಾಲು ಆಗುತ್ತಿದ್ದಂತೆ ಎಂಟು ಸಿಲಿಂಡರ್‌ಗಳೂ ಕೂಡಾ ಏಕಕಾಲಕ್ಕೆ ಕೆಲಸ ಆರಂಭಿಸುತ್ತವೆ.]

ಮೇಲೆ ಕೆಳಗೆ ರಭಸದಿಂದ ಹರಿದಾಡುವ ಈ ಸಿಲಿಂಡರ್‌ಗಳು ಇಂಧನ ಹಾಗೂ ಗಾಳಿಯನ್ನು ಉರಿಸಿ ಶಕ್ತಿ ಉತ್ಪಾದಿಸುವುದರಲ್ಲಿ ನಿರತವಾಗಿರುತ್ತವೆ. ಬಹುತೇಕ ಕಾರುಗಳು, ಟ್ರಕ್‌ ಹಾಗೂ ಎಸ್‌ಯುವಿಗಳು ವಿ–8 ಎಂಜಿನ್‌ಗಳನ್ನು ಹೊಂದಿರುತ್ತವೆ. ಹೆಚ್ಚು ಸಿಲಿಂಡರ್‌ಗಳು ಎಂದರೆ ಅಧಿಕ ಶಕ್ತಿಶಾಲಿ ಎಂದರ್ಥ. ಹೀಗಾಗಿಯೇ ಸ್ಪೋರ್ಟ್ಸ್‌ ಕಾರುಗಳು, ಬೃಹತ್‌ ಟ್ರಕ್‌ಗಳು ಹೆಚ್ಚು ಸಿಲಿಂಡರ್‌ ಹೊಂದಿರುವ ಎಂಜಿನ್‌ ಹೊಂದಿರುತ್ತವೆ.

ಈ ಹಂತದಲ್ಲಿ ಸಿಲಿಂಡರ್‌ ಡಿ ಆ್ಯಕ್ಟಿವೇಷನ್‌ ಎಂಬ ತಂತ್ರಗಾರಿಕೆ ಕೆಲಸ ಮಾಡುತ್ತದೆ. ಎಲ್ಲಾ ಸಮಯದಲ್ಲೂ ಎಂಟು ಸಿಲಿಂಡರ್‌ಗಳು ಕೆಲಸ ಮಾಡುವ ಬದಲು, ಹೆಚ್ಚು ಭಾರ ಎಳೆಯುವಾಗ ಮಾತ್ರ ಎಂಟು ಸಿಲಿಂಡರ್‌ಗಳು ಚಾಲೂ ಆಗುವಂತೆ ಹಾಗೂ ಆಯಾಯ ಕೆಲಸಕ್ಕೆ ಅನುಗುಣವಾಗಿ ಸಿಲಿಂಡರ್‌ಗಳು ಕೆಲಸ ಮಾಡುವಂತೆ ನಿಯಂತ್ರಿಸಲಾಗುತ್ತದೆ. ಉದಾಹರಣೆಗೆ: ಆಕ್ಸಲರೇಟರ್‌ ನೀಡದಿದ್ದಾಗ, ಹೆಚ್ಚು ಭಾರ ಎಳೆಯದಿದ್ದಾಗ, ತಗ್ಗಿನ ಪ್ರದೇಶಗಳಲ್ಲಿ ಕೆಲವು ಸಿಲೆಂಡರ್‌ಗಳು ಸ್ತಬ್ಧವಾಗಿರುವಂತೆ ಮಾಡುವುದೇ ಸಿಲಿಂಡರ್‌ ಡಿ ಆ್ಯಕ್ಟಿವೇಷನ್‌ನ್ನಿನ ಮುಖ್ಯ ಉದ್ದೇಶ. ಈ ಕ್ರಿಯೆಯಿಂದಾಗಿ ಶೇ 7.5ರಷ್ಟು ಇಂಧನ ಉಳಿಸಬಹುದಾಗಿದೆ.

ಡೈರೆಕ್ಟ್‌ ಫ್ಯೂಯಲ್‌ ಇಂಜೆಕ್ಷನ್‌
ಈ ತಂತ್ರಜ್ಞಾನ ಈಗಾಗಲೇ ಡೀಸಲ್‌ ಎಂಜಿನ್‌ಗಳಲ್ಲಿ ಪ್ರಚಲಿತ. ಅಂದರೆ ಇಂಧನ ಹಾಗೂ ಗಾಳಿ ಸೇರಿ ಉರಿಯುವ ಕೋಣೆ (ಕಂಬಶ್ಶನ್‌ ಚೇಂಬರ್‌) ಸೇರುವ ಮಾರ್ಗವನ್ನು ಸರಿಪಡಿಸುವುದು. ಪೆಟ್ರೋಲ್‌ ಎಂಜಿನ್‌ಗಳಲ್ಲಿ ಇಂಧನ ಹಾಗೂ ಗಾಳಿ ಸೇರುವ ಸಂದರ್ಭದಲ್ಲಿ ಅಲ್ಲೊಂದು ಬೆಂಕಿ ಕಿಡಿ ಹೊತ್ತಿಕೊಳ್ಳುತ್ತದೆ. ಇದಕ್ಕಾಗಿಯೇ ಸ್ಪಾರ್ಕ್‌ ಪ್ಲಗ್‌ ಬಳಸಲಾಗುತ್ತದೆ. ಆದರೆ ಸಂಶೋಧಕರು ಇದನ್ನು ಮಾರ್ಪಡಿಸಿ ಕಂಬಶ್ಶನ್‌ ಚೇಂಬರ್‌ ಹೋಗುವ ಮುನ್ನ ಯಾವುದೇ ಬೆಂಕಿಯ ಕಿಡಿ ಹೊತ್ತಿಕೊಳ್ಳದೇ ಕೇವಲ ಇಂಧನಕ್ಕೆ ಶಾಖ ನೀಡಿ ಅದನ್ನು ಒತ್ತಡದಲ್ಲಿ ನುಗ್ಗಿಸಲಾಗುತ್ತದೆ. ಇದರಿಂದ ಇಂಧನ ಉಳಿತಾಯವಾಗಲಿದೆ.

ಸಾಮಾನ್ಯ ಪೆಟ್ರೋಲ್‌ ಎಂಜಿನ್‌ಗಳ ಅಡಕ ಅನುಪಾತ 10:1 ಅಥವಾ ಸ್ವಲ್ಪ ಕಡಿಮೆ ಇರಬಹುದು. ಆದರೆ ಜಪಾನ್‌ನಲ್ಲಿ ಇತ್ತೀಚೆಗೆ ಪರಿಚಯ­ಗೊಂಡ ಮಾಜ್ದಾ ಎಂಜಿನ್‌ನ ಅಡಕ ಅನುಪಾತ 14: 1 ಇದೆ. ಇದರ ಇಂಧನ ಕ್ಷಮತೆ ಪ್ರತಿ ಲೀಟರ್‌ ಪೆಟ್ರೋಲ್‌ಗೆ 29.8 ಕಿ.ಮೀಗಳಷ್ಟು ಎಂದರೆ ನಿಜಕ್ಕೂ ಆಶ್ಚರ್ಯ. ಆದರೆ ಇದು ಅಷ್ಟು ಸುಲಭದ ಮಾತೂ ಅಲ್ಲ. ಏಕೆಂದರೆ ಈ ರೀತಿ ಅಡಕದ ಅನುಪಾತ ಹೆಚ್ಚಿಸಿದಲ್ಲಿ ಅಗತ್ಯಕ್ಕೂ ಮುನ್ನ ಇಂಧನ ಉರಿದು ಹೋಗುವ ಸಾಧ್ಯತೆ ಇದೆ. ಇದನ್ನು ತಡೆಯಲು ಡೈರೆಕ್ಟ್‌ ಇಂಜೆಕ್ಷನ್‌ ಸಿಸ್ಟಂ ಜಾರಿಗೆ ತರಬೇಕಾದ ಅಗತ್ಯವಿದೆ.

ಇದರಿಂದ ಮಂಜಿನ ರೂಪದಲ್ಲಿ ಇಂಧನವು ನೇರವಾಗಿ ಸಿಲೆಂಡರ್‌ಗೆ ಸಿಂಪಡಿಸುವುದರಿಂದ ಇಂಧನ ಕ್ಷಮತೆ ಹೆಚ್ಚಿಸಿಕೊಳ್ಳಬಹುದು. ಕೇವಲ ಇಂಧನ ಕ್ಷಮತೆ ಮಾತ್ರವಲ್ಲ, ಎಂಜಿನ್‌ನ ತಾಪಮಾನ ಹೆಚ್ಚಾಗದಂತೆ ನಿಗಾವಹಿಸಬಹುದು. ಡೈರೆಕ್ಟ್‌ ಫ್ಯೂಯಲ್‌ ಇಂಜೆಕ್ಷನ್‌ನಿಂದಾಗಿ ಶೇ 12ರಷ್ಟು ಇಂಧನ ಉಳಿತಾಯವಾಗಲಿದೆ.

ಟರ್ಬೋಚಾರ್ಜರ್‌
ಇದರಿಂದ ಇಂಧನ ಉಳಿತಾಯಕ್ಕೆ ಹೆಚ್ಚಿನ ಅನುಕೂಲಗಳಿಲ್ಲ. ಏಕೆಂದರೆ ಅಧಿಕ ಶಕ್ತಿ ಉತ್ಪಾದನೆಗಾಗಿ ಮಾತ್ರ ಟರ್ಬೋಚಾರ್ಜರ್‌ ಬಳಕೆಯಾಗುತ್ತಿದೆ. ಕಾರಿನ ಎಕ್ಸಾಸ್ಟ್‌ ಸಿಸ್ಟಂನಿಂದ ಹೊರಬರುವ ಶಕ್ತಿಯನ್ನು ಮತ್ತೊಮ್ಮೆ ಅದೇ ವ್ಯವಸ್ಥೆ ಮೂಲಕ ಹಾಯಿಸಿ ಹೆಚ್ಚಿನ ಶಕ್ತಿ ಪಡೆಯುವುದಾಗಿದೆ. ಹೀಗೆ ಮಾಡುವುದರಿಂದ ಡೈರೆಕ್ಟ್‌ ಫ್ಯೂಯಲ್‌ ಇಂಜೆಕ್ಷನ್‌ನಂತೆ ಅಡಕ ಅನುಪಾತ ಹೆಚ್ಚಾಗಲಿದೆ.

ಸಣ್ಣ ಎಂಜಿನ್‌ಗಳಲ್ಲಿ ಟರ್ಬೋಚಾರ್ಜರ್‌ಗಳನ್ನು ಅಳವಡಿಸುವುದರಿಂದ ದೊಡ್ಡ ಎಂಜಿನ್‌ಗಳು ಉತ್ಪಾದಿಸುವ ಶಕ್ತಿಯನ್ನು ಪಡೆಯಬಹುದು. ಇದೇ ರೀತಿಯ ಪ್ರಯತ್ನಕ್ಕೆ ಎರಡು ವರ್ಷದ ಹಿಂದೆ ಫೋರ್ಡ್‌ ಕೈಹಾಕಿತ್ತು. ತನ್ನ ಎಫ್‌–150 ಟ್ರಕ್‌ಗಳಲ್ಲಿ ವಿ–6 ಎಕೋಬೂಸ್ಟ್‌ ಎಂಜಿನ್‌ ಅಳವಡಿಸಿತು. ಇದರಿಂದ ಅಧಿಕ ಪಿಕಪ್‌ಗೆ ಕೇವಲ ವಿ–8 ಎಂಜಿನ್‌ ಬೇಕು ಎಂದೇನೂ ಅಲ್ಲ ಎಂಬುದನ್ನು ಅದು ಸಾಬೀತುಪಡಿಸಿತು. 365 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯವಿದ್ದ ಈ ಟ್ರಕ್‌ 420 ಪೌಂಡ್‌ಗಳಷ್ಟು ಟಾರ್ಕ್‌ ಉತ್ಪತ್ತಿ ಮಾಡುತ್ತಿತ್ತು. ಐದು ಟನ್‌ಗಳಷ್ಟು ಭಾರವನ್ನು ಅನಾಯಾಸವಾಗಿ ಎಳೆಯುತ್ತಿತ್ತು. ಹೀಗಿದ್ದೂ ಸಹ ಪ್ರತಿ ಲೀಟರ್‌ಗೆ 9 ಕಿ.ಮೀ. ಇಂಧನ ಕ್ಷಮತೆ ನೀಡಿದ್ದು ಇದರ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿ.

ಮೃದು ಚಾಲನೆ
ಒಂದು ಎಂಜಿನ್‌ ಎಷ್ಟು ಇಂಧನ ಬಳಸಬೇಕು ಎಂಬುದು ಸಂಪೂರ್ಣವಾಗಿ ತಂತ್ರಜ್ಞಾನಗಳ ಮೇಲೆ ಅವಲಂಬಿತವಾಗಿಲ್ಲ. ಬದಲಿಗೆ ವಾಹನವನ್ನು ಚಲಾಯಿಸುವ ಚಾಲಕನ ಮೇಲೂ ಅದು ಅವಲಂಬಿಸಿರುತ್ತದೆ. ಸದಾ ಆಕ್ಸಲರೇಟರ್‌ ಮೇಲೆ ಕಾಲಿಟ್ಟುಕೊಳ್ಳುವುದರಿಂದ ಹೆಚ್ಚು ಇಂಧನ ವ್ಯಯವಾಗುತ್ತದೆ. ಹೀಗಾಗಿಯೇ ಇಂಧನ ಕ್ಷಮತೆ ಒಂದೊಂದು ಬಾರಿ ಒಂದೊಂದು ರೀತಿಯಲ್ಲಿ ತೋರಿಸುತ್ತಿರುತ್ತದೆ. ಹೀಗಾಗಿಯೇ ಅಮೆರಿಕದಂಥ ಮುಂದುವರಿದ ರಾಷ್ಟ್ರಗಳಲ್ಲಿ ಕಾರು ಚಾಲನೆ ಕುರಿತು ತರಬೇತಿ ನೀಡುವ ಕುರಿತು ಕಾರು ಕಂಪೆನಿಗಳು ಚಿಂತನೆ ನಡೆಸಿವೆ.

ಉತ್ತಮ ಚಾಲನೆಗೆ ಹಲವು ಮಾರ್ಗೋಪಾಯಗಳನ್ನು ಹೊಂಡಾ, ಫಿಯೆಟ್‌ ಸೇರಿದಂತೆ ಮುಂತಾದ ಕಾರುಗಳು ಕ್ರಮ ಕೈಗೊಂಡಿವೆ. ಉದಾಹರಣೆಗೆ ಚಾಲನೆ ಸಂದರ್ಭದಲ್ಲಿ ಕಡಿಮೆ ಇಂಧನ ಬಳಸುವಂತೆ ಕಾರು ಚಾಲನೆ ಮಾಡುತ್ತಿದ್ದರೆ ಹಸಿರು ದೀಪ ಹೊತ್ತಿಕೊಳ್ಳುವಂತೆ ಹಾಗೂ ಸದ್ಯದ ಇಂಧನ ಕ್ಷಮತೆ ಕುರಿತ ಮಾಹಿತಿಯನ್ನು ನೀಡುವ ಸೌಲಭ್ಯ ಹೊಂದಿವೆ. ಇದನ್ನು ಅನುಸರಿಸಿದರೂ ಕಾರಿನ ಇಂಧನ ಕ್ಷಮತೆ ಹೆಚ್ಚಿಸಿಕೊಳ್ಳಬಹುದು.

ಇತ್ತೀಚಿನ ದಿನಗಳಲ್ಲಿ ಎಕೊ ಮೋಡ್‌ ಎಂಬ ಸೌಲಭ್ಯವು ಹೈಬ್ರಿಡ್‌ ಕಾರುಗಳಲ್ಲಿ ಲಭ್ಯ. ಎಕೊ ಮೋಡ್‌ನ ಸ್ವಿಚ್‌ ಹಾಕುತ್ತಿದ್ದಂತೆ ಕಾರು ಮೃದುವಾಗಿ ಸಾಗುತ್ತದೆ. ಇದರಲ್ಲಿ ಇಂಧನ ಮಿತವ್ಯಯವಾಗುತ್ತದೆ. ಆದರೆ ಇದು ಎಲ್ಲಾ ಸಂದರ್ಭಗಳಲ್ಲೂ ಬಳಸಲು ಅಸಾಧ್ಯ. ಸ್ಕಾರ್ಪಿಯೋ, ಮರ್ಸಿಡೀಸ್‌ ಬೆಂಜ್‌, ಟೊಯೊಟಾ ಕ್ಯಾಮ್ರಿ ಮುಂತಾದ ಕಾರುಗಳು ಮೈಕ್ರೊ ಹೈಬ್ರಿಡ್‌ಗಳನ್ನು ಹೊಂದಿರುವುದರಿಂದ ಸಿಗ್ನಲ್‌ಗಳಲ್ಲಿ ಕಾರು ಇಂಧನ ಬದಲು ಬ್ಯಾಟರಿಯಿಂದ ಚಾಲನೆಯಾಗುವಂತೆ ಮಾಡಲಾಗಿದೆ.

ಇದೂ ಕೂಡಾ ಇಂಧನ ಉಳಿತಾಯದ ಹೊಸ ಮಾರ್ಗೋಪಾಯವಾಗಿದೆ. ಒಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ಇಂಧನ ಬರ ಎದುರಿಸಬೇಕಾದ ಪರಿಸ್ಥಿತಿ ಎದುರಾಗುವ ನಿರೀಕ್ಷೆಯಲ್ಲೇ ವಾಹನಗಳ ಖರೀದಿ ಹಾಗೂ ಚಾಲನೆ ಮಾಡಬೇಕಾದ ಗುರುತರ ಜವಾಬ್ದಾರಿ ಚಾಲಕರ ಮೇಲಿದೆ. ಅದರಂತೆಯೇ ಇಂಧನ ಮಿತ್ಯವ್ಯಯದ ವಾಹನಗಳ ಅಭಿವೃದ್ಧಿಯೂ ವಾಹನ ತಯಾರಕರ ಮೇಲಿವೆ. ಜೊತೆಗೆ ಪರ್ಯಾಯ ಇಂಧನಗಳ ವಾಹನಗಳ ಅಗತ್ಯ ಹಿಂದೆಂದಿಗಿಂತ ಹೆಚ್ಚಿದೆ.
– ಇ.ಎಸ್‌. ಸುಧೀಂದ್ರ ಪ್ರಸಾದ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT