ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಧನ ಸಚಿವೆ ಶೋಭಾ ಕರಂದ್ಲಾಜೆ:ರೈತರಿಗೆ ಉಚಿತ ವಿದ್ಯುತ್ ಪೂರೈಕೆ ಕಷ್ಟ

Last Updated 20 ಜುಲೈ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿರುವುದರಿಂದ ಇದು ನಮಗೆ ಸವಾಲಿನ ವರ್ಷ. ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗಿ ಜಲಾಶಯಗಳು ಭರ್ತಿಯಾಗದಿದ್ದರೆ 7.70 ರೂಪಾಯಿ ದುಬಾರಿ ದರದಲ್ಲಿ ಯೂನಿಟ್ ವಿದ್ಯುತ್ ಖರೀದಿ ಮಾಡಿ ರೈತರಿಗೆ ಉಚಿತ ಹಾಗೂ ಗ್ರಾಹಕರಿಗೆ ಕಡಿಮೆ ದರದಲ್ಲಿ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡುವುದು ಕಷ್ಟವಾಗಬಹುದು~ ಎಂದು ಇಂಧನ ಸಚಿವೆ ಶೋಭಾ ಕರಂದ್ಲಾಜೆ ಶುಕ್ರವಾರ ಇಲ್ಲಿ ಆತಂಕ ವ್ಯಕ್ತಪಡಿಸಿದರು.

ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಕರ್ನಾಟಕ ವಿದ್ಯುತ್ ನಿಗಮದ 43ನೇ ಸಂಸ್ಥಾಪನಾ ದಿನಾಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
`ವಿದ್ಯುತ್ ಖರೀದಿ ಅತ್ಯಂತ ದುಬಾರಿಯಾಗುತ್ತಿದೆ. ಕಳೆದ ವರ್ಷ 4.26ರಿಂದ 4.40 ರೂಪಾಯಿ ದರದಲ್ಲಿ ಯೂನಿಟ್ ವಿದ್ಯುತ್ ಖರೀದಿ ಮಾಡಿದರೆ, ಈ ವರ್ಷ ಯೂನಿಟ್ ವಿದ್ಯುತ್ ದರ 7.70 ರೂಪಾಯಿಗಳಿಗೇರಿದೆ.

ಇಂತಹ ಸನ್ನಿವೇಶದಲ್ಲಿ ಬಹುಶಃ ದೇಶದ ಯಾವುದೇ ರಾಜ್ಯ ಸರ್ಕಾರಗಳಿಗೂ ಖಾಸಗಿ ಸಂಸ್ಥೆಗಳಿಂದ ಇಷ್ಟೊಂದು ದುಬಾರಿ ವೆಚ್ಚದಲ್ಲಿ ವಿದ್ಯುತ್ ಖರೀದಿ ಮಾಡಿ ಗ್ರಾಹಕರಿಗೆ ಕಡಿಮೆ ದರದಲ್ಲಿ ಪೂರೈಸುವಂತಹ ಶಕ್ತಿ ಇಲ್ಲ~ ಎಂದು ಅವರು ಹೇಳಿದರು.

`ರಾಜ್ಯದ ಜಲಾಶಯಗಳಲ್ಲಿ ನೀರಿನ ಸಂಗ್ರಹ ಪ್ರಮಾಣ ಕಡಿಮೆಯಾಗಿ ಜಲ ವಿದ್ಯುತ್ ಉತ್ಪಾದನೆ ಕುಸಿಯುತ್ತಿರುವುದರಿಂದ ಉಷ್ಣ ವಿದ್ಯುತ್ ಉತ್ಪಾದನೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಅದಕ್ಕೂ ನೀರು ಅಗತ್ಯವಾಗಿದ್ದು, ಮಳೆಯನ್ನು ನಿರೀಕ್ಷಿಸುತ್ತಿದ್ದೇವೆ~ ಎಂದು ಸಚಿವೆ ಶೋಭಾ ತಿಳಿಸಿದರು.

`ಕರ್ನಾಟಕ ವಿದ್ಯುತ್ ನಿಗಮ ಪ್ರಾರಂಭವಾದಾಗ ಕೇವಲ 746 ಮೆಗಾವಾಟ್ ವಿದ್ಯುತ್ ಉತ್ಪಾದಿಸುತ್ತಿತ್ತು. ಪ್ರಸ್ತುತ 5246 ಕೋಟಿ ರೂಪಾಯಿ ವ್ಯವಹಾರ ನಡೆಸುವ ಮೂಲಕ 6,494 ಮೆಗಾವಾಟ್ ವಿದ್ಯುತ್ ಮಾಡುತ್ತಿರುವುದು ಅದ್ಭುತ ಸಾಧನೆ~ ಎಂದು ಬಣ್ಣಿಸಿದ ಅವರು, `102 ವರ್ಷಗಳ ಹಿಂದೆ ಶಿವನಸಮುದ್ರದಲ್ಲಿ ವಿದ್ಯುತ್ ಉತ್ಪಾದನೆ ಮಾಡಿದ ವೇಗದಲ್ಲಿಯೇ ನಾವು ಇತರ ವಿದ್ಯುತ್ ಉತ್ಪಾದನಾ ಘಟಕಗಳಿಗೆ ಚಾಲನೆ ನೀಡಿದ್ದರೆ ಕರ್ನಾಟಕದಿಂದಲೇ ಇಡೀ ದೇಶಕ್ಕೆ ವಿದ್ಯುತ್ ಪೂರೈಸಬಹುದಾಗಿತ್ತು. ಪರಿಸರ, ನಿರ್ಲಕ್ಷ್ಯತೆ ಹಾಗೂ ದೂರದೃಷ್ಟಿಯ ಕೊರತೆಯಿಂದ ಇದು ಸಾಧ್ಯವಾಗಲಿಲ್ಲ~ ಎಂದು ವಿಷಾದಿಸಿದರು.

ನೆರೆ ರಾಜ್ಯಗಳಲ್ಲಿ 16 ಗಂಟೆ ಲೋಡ್ ಶೆಡ್ಡಿಂಗ್: `ಪ್ರಸ್ತುತ 6 ಗಂಟೆ ಮೂರು ಫೇಸ್ ಹಾಗೂ ಸಂಜೆ 6ರಿಂದ ಬೆಳಿಗ್ಗೆ 6 ಗಂಟೆವರೆಗೆ ಸಿಂಗಲ್ ಫೇಸ್ ವಿದ್ಯುತ್ ಪೂರೈಸಲು 1200 ಮೆಗಾವಾಟ್ ವಿದ್ಯುತ್ ಖರೀದಿಸಲಾಗುತ್ತಿದೆ. ಬಹುಶಃ ಕರ್ನಾಟಕ ವಿದ್ಯುತ್ ನಿಗಮದ ಯೋಜನೆಗಳು ಸಾಕಾರಗೊಳ್ಳದಿದ್ದರೆ ನಾಡಿನ ಜನತೆಗೆ ಇಷ್ಟರ ಮಟ್ಟಿಗೆ ಬೆಳಕು ನೀಡಲು ಸಾಧ್ಯವಾಗುತ್ತಿರಲಿಲ್ಲ. ಅದೇ ನೆರೆ ರಾಜ್ಯಗಳಾದ ಆಂಧ್ರ ಹಾಗೂ ತಮಿಳುನಾಡಿನಲ್ಲಿ 16 ಗಂಟೆವರೆಗೆ ಲೋಡ್‌ಶೆಡ್ಡಿಂಗ್ ಮಾಡಲಾಗುತ್ತಿದೆ~ ಎಂದರು.

2014ರ ಆಗಸ್ಟ್‌ಗೆ ಬಳ್ಳಾರಿ 3ನೇ ಘಟಕ ಶುರು: `ಯಡಮರಸ್ ಹಾಗೂ ಬಳ್ಳಾರಿ 3ನೇ ಶಾಖೋತ್ಪನ್ನ ಘಟಕ 2014ರ ಆಗಸ್ಟ್‌ಗೆ ಕಾರ್ಯಾರಂಭ ಮಾಡಲಿವೆ. ಬಳ್ಳಾರಿ 2ನೇ ಘಟಕದಿಂದ ಪ್ರಸ್ತುತ 200ರಿಂದ 250 ಮೆಗಾವಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದ್ದು, ಆಗಸ್ಟ್ ಮೊದಲನೇ ವಾರದ ವೇಳೆಗೆ 500 ಮೆಗಾವಾಟ್‌ನಷ್ಟು ವಿದ್ಯುತ್ ಜಾಲಕ್ಕೆ ಸೇರ್ಪಡೆಯಾಗಲಿದೆ~ ಎಂದು ಅವರು ತಿಳಿಸಿದರು.

`ಕರ್ನಾಟಕವು ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ಮುಂದಿನ 10 ವರ್ಷಗಳಲ್ಲಿ 10 ಸಾವಿರ ಮೆಗಾವಾಟ್ ಉತ್ಪಾದಿಸುವಂತಹ ಯೋಜನೆಗಳಿಗೆ ಅಡಿಗಲ್ಲನ್ನಿಡಲು ನಿರ್ಧರಿಸಲಾಗಿದೆ. ಅಧಿಕಾರ ಯಾರಿಗೂ ಶಾಶ್ವತವಲ್ಲ. ಮುಂದೆ ಬರುವಂಥವರು ಕೂಡ ಇಂತಹ ಯೋಜನೆಗಳನ್ನು ಮುಂದುವರಿಸಿದರೆ ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಬಹುದು~ ಎಂದರು.

ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಂ.ಆರ್. ಕಾಂಬಳೆ ಸ್ವಾಗತಿಸಿದರು. `ಬೆಸ್ಕಾಂ~ನ ವ್ಯವಸ್ಥಾಪಕ ನಿರ್ದೇಶಕ ಪಿ. ಮಣಿವಣ್ಣನ್ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತ್ಯಧಿಕ ಅಂಕ ಪಡೆದ ನಿಗಮದ ಸಿಬ್ಬಂದಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT