ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಧನದ ಕೊರತೆ ಕಾಲ...

Last Updated 5 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಎದುರಿಗೆ ಬಡಿಸಿರುವ ಪುಷ್ಕಳ ಊಟ ಹಬೆಯಾಡುತ್ತಿದೆ. ವೈವಿಧ್ಯದಿಂದ ಕೂಡಿದೆ. ನೋಡಲಿಕ್ಕೂ ಆಸೆ ಹುಟ್ಟಿಸುವಂತಿದೆ. ನಾಲಿಗೆಯ ಮೇಲಿಟ್ಟಾಗ ಮಾತ್ರ ಊಟಕ್ಕೇನೋ ಸಾಲದು ಎನ್ನಿಸುವ ಭಾವ. ಅಂಥದ್ದೇ ಅನುಭವವನ್ನು `ಬಾಡಿಗಾರ್ಡ್~ ಚಿತ್ರವೂ ನೀಡುತ್ತದೆ.

`ಬಾಡಿಗಾರ್ಡ್~ ಜಗ್ಗೇಶ್ ನಟನೆ, ನಿರ್ಮಾಣದ ಚಿತ್ರ. ಈಗಾಗಲೇ ಮಲಯಾಳಂ ಹಾಗೂ ಹಿಂದಿಯಲ್ಲಿ ಬಂದುಹೋಗಿರುವ ಯಶಸ್ವೀ ಚಿತ್ರವನ್ನು ಅವರೀಗ ಕನ್ನಡದಲ್ಲಿ ತಮ್ಮದಾಗಿಸಿಕೊಂಡಿದ್ದಾರೆ. ಕಥೆಯನ್ನು ತಮ್ಮ ಜಾಯಮಾನಕ್ಕೆ ತಕ್ಕಂತೆ ಒಗ್ಗಿಸಿಕೊಂಡಿದ್ದಾರೆ. ಅವರು ಆರಿಸಿಕೊಂಡಿರುವ ಈ ಚಿತ್ರದಲ್ಲಿ- ಒಂದು ಸಿನಿಮಾಕ್ಕೆ ಅಗತ್ಯವಾದ ಕಥನದ ನಾಟಕೀಯತೆ, ಕುತೂಹಲ, ಹಿತಮಿತ ಹಾಡು ಹೊಡೆದಾಟ ಎಲ್ಲವೂ ಇದೆ. ಆದರೂ ಅಪೂರ್ಣತೆಯ ಭಾವ, ಊಟದಲ್ಲಿ ಉಪ್ಪಿನ ಕೊರತೆ ಕಾಡಿದಂತೆ. ಆ ಕೊರತೆಯೆಂದರೆ, ಜಗ್ಗೇಶ್‌ರಲ್ಲಿ ಮುಗಿದುಹೋಗಿರುವ ಯೌವನದ ಸರಕು.

ಬಯಸಿ ಬಯಸಿ `ಸದಭಿರುಚಿಯ ಡಾನ್~ ಬಳಿ ನಾಯಕ ಅಂಗರಕ್ಷಕನಾಗಿ ಸೇರಿಕೊಳ್ಳುತ್ತಾನೆ. ಅಲ್ಲಿಂದ, ನಗರದಲ್ಲಿ ಕಾಲೇಜು ಓದುವ ಡಾನ್ ಪುತ್ರಿಯ ಬಾಡಿಗಾರ್ಡ್ ಆಗಿ ಅವನ ಕೆಲಸ ಬದಲಾಗುತ್ತದೆ. ಮನೆ, ಕಾಲೇಜು, ಕ್ಯಾಂಟೀನು, ಶೌಚಾಲಯ ಸೇರಿದಂತೆ ಎಲ್ಲೆಡೆಯೂ ನಾಯಕಿಯನ್ನು ನಾಯಕ ಹಿಂಬಾಲಿಸುತ್ತಾನೆ. ಈ ನೆರಳು ಬೆಳಕಿನ ರಾಸಾಯಿನಿಕ ಕ್ರಿಯೆಯಲ್ಲಿ ನಾಯಕಿಗೆ ನಾಯಕನ ಮೇಲೆ ಪ್ರೇಮಾಂಕುರವಾಗುತ್ತದೆ. ಮದುವೆ ನಿಶ್ಚಯವಾಗಿದೆ ಎನ್ನುವುದನ್ನು ಮರೆತು, ಬೆಳದಿಂಗಳ ಬಾಲೆಯಂತೆ ಆಕೆ ಫೋನಿನಲ್ಲೇ ಕಾಡುತ್ತಾಳೆ. ಆತ ಚಕೋರನಂತೆ ಕರಗುತ್ತಾನೆ... ಇದು `ಬಾಡಿಗಾರ್ಡ್~ನ ಕಥೆ. ಕೊನೆಯ ಕೆಲವು ನಿಮಿಷಗಳಲ್ಲಂತೂ ವಿಪರೀತ ನಾಟಕೀಯತೆಯಿಂದ ಚಿತ್ರ ಪ್ರೇಕ್ಷಕನನ್ನು ಹಿಡಿದಿಡುತ್ತದೆ.

ನಿರ್ದೇಶಕ ಟಿ.ಎ.ಆನಂದ್ `ಕನ್ನಡೀಕರಣ~ದ ಸಿನಿಮಾವನ್ನು ಚೆನ್ನಾಗಿಯೇ ನಿರೂಪಿಸಿದ್ದಾರೆ. ಅಶೋಕ್ ವಿ. ರಾಮನ್ ಛಾಯಾಗ್ರಹಣ, ರಾಜೇಂದ್ರ ಕಾರಂತ್‌ರ ಸಂಭಾಷಣೆ, ವಿನಯ್‌ಚಂದ್ರರ ಸಂಗೀತ ಎಲ್ಲವೂ ಹದದಲ್ಲಿವೆ. ಜಗ್ಗೇಶ್‌ರ ಬೀಸು ಪ್ರತಿಭೆಯ ಎದುರೂ ನಾಯಕಿ ಡೈಸಿ ಶಾ ತಮ್ಮ ಲಾಲಿತ್ಯದಲ್ಲಿ ನಿಲ್ಲುತ್ತಾರೆ. ಸಾಧು ಕೋಕಿಲಾ ಹಾಗೂ ಗುರುದತ್ ಪುಟ್ಟ ಪಾತ್ರಗಳಲ್ಲಿ ನೆನಪಿನಲ್ಲುಳಿಯುತ್ತಾರೆ. ಕಥೆಯ ಸಾಕಷ್ಟು ಭಾಗ ಕಾಲೇಜು ಕ್ಯಾಂಪಸ್‌ನಲ್ಲಿ ಸುತ್ತುತ್ತದೆ. ಜಗ್ಗೇಶ್‌ಗೆ ಸಮಸ್ಯೆಯಾಗಿರುವುದೇ ಅದು. ಅವರ ವಯಸ್ಸು, ಅಂಗಸೌಷ್ಟವ ಕ್ಯಾಂಪಸ್‌ನಿಂದ ಹೊರಗೇ ಉಳಿದುಬಿಡುತ್ತದೆ.

ಎಂಥ ಪಾತ್ರವನ್ನಾದರೂ ತೂಗಿಸಿಕೊಂಡು ಹೋಗುವ ಜಗ್ಗೇಶ್, ಬಾಡಿಗಾರ್ಡ್ ಆಗಿಯೂ ತಮ್ಮ ಛಾಪು ಮೂಡಿಸಲು ಪ್ರಯತ್ನಿಸಿದ್ದಾರೆ. ಆ `ಪ್ರಯತ್ನ~ ನೋಡುಗರಿಗೆ ಸ್ಪಷ್ಟವಾಗಿ ಗೋಚರಿಸುತ್ತದೆ ಎನ್ನುವುದೇ ಚಿತ್ರದ ಸಮಸ್ಯೆ.

ಜಗ್ಗೇಶ್ ಕನ್ನಡ ಚಿತ್ರರಂಗದ ಪ್ರತಿಭಾವಂತ ನಟರಲ್ಲೊಬ್ಬರು. ನಟನೆಯ ಬಗ್ಗೆ ಬದ್ಧತೆಯುಳ್ಳವರು. ತಮ್ಮನ್ನು ತಾವೇ ಲೇವಡಿ ಮಾಡಿಕೊಳ್ಳಬಲ್ಲ ಆರೋಗ್ಯಕರ ಮನಸ್ಥಿತಿ ಕಾಪಾಡಿಕೊಳ್ಳುವುದರ ಜೊತೆಗೆ, ರಾಜಕಾರಣದಲ್ಲೂ ಒಂದು `ಪಾರ್ಟು~ ಮಾಡಿದವರು. ಇಂಥ ಬಹುರೂಪಿ ನಟನಿಗೆ `ಬಾಡಿಗಾರ್ಡ್~ನಂಥ ಚಿತ್ರಗಳು ಸವಾಲಿನಂತೆ ಕಾಣಿಸುವುದು ಅಚ್ಚರಿ ಹುಟ್ಟಿಸುತ್ತದೆ. ಡಾನ್ ಒಬ್ಬನ ಬಾಡಿಗಾರ್ಡ್ ಆಗಬೇಕೆಂದು ಹಂಬಲಿಸುವ, ಸಣ್ಣ ಡಾನ್‌ನಿಂದ ದೊಡ್ಡ ಡಾನ್‌ಗೆ ನಿಷ್ಠೆ ಬದಲಿಸುವ ತರುಣನ ಕಥೆಯ ಚಿತ್ರ  ಪ್ರೇಕ್ಷಕರಿಗೆ ಏನನ್ನು ದಾಟಿಸಲು ಪ್ರಯತ್ನಿಸುತ್ತದೆ ಎನ್ನುವುದು ನಿರ್ಮಾಪಕರೂ ಆದ ಜಗ್ಗೇಶರಿಗೆ ಅರ್ಥವಾಗದ್ದೇನೂ ಅಲ್ಲ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT