ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಇಗ್ನೊ' ಪದವಿ ಪಡೆದ ಕಾರಾಗೃಹ ಕೈದಿ

Last Updated 12 ಏಪ್ರಿಲ್ 2013, 19:53 IST
ಅಕ್ಷರ ಗಾತ್ರ

ಬೆಂಗಳೂರು: ಕೊಲೆ ಪ್ರಕರಣದಲ್ಲಿ ಸಿಲುಕಿ ಸಮಾಜದಿಂದ ನಿಂದನೆಗೆ ಒಳಗಾಗಿ ಬದುಕುವ ಆತ್ಮವಿಶ್ವಾಸವನ್ನೇ ಕಳೆದುಕೊಂಡ ಬೆಂಗಳೂರು ಕೇಂದ್ರ ಕಾರಾಗೃಹದ ಕೈದಿಯೊಬ್ಬರು ಪದವಿಯನ್ನು ಪೂರ್ಣಗೊಳಿಸುವಲ್ಲಿ ಯಶಸ್ವಿಯಾದರು. ನಗರದಲ್ಲಿ ಶುಕ್ರವಾರ ನಡೆದ `ಇಗ್ನೊ' ಮುಕ್ತ ವಿಶ್ವವಿದ್ಯಾಲಯದ 26ನೇ ಘಟಿಕೋತ್ಸವದಲ್ಲಿ ಭಾಗವಹಿಸಿದ್ದ ಕೇಂದ್ರ ಕಾರಾಗೃಹದ ಕೈದಿ ಸುಧಾಕರ ರಾಮಪೂಜಾರಿ ಅವರಲ್ಲಿ ಪದವಿ ಪಡೆದುಕೊಂಡ ಸಂಭ್ರಮವಿತ್ತು.

ಸಭಿಕರ ಕಣ್‌ತಪ್ಪಿಸಿ ತಲೆ ತಗ್ಗಿಸಿ ನಿಂತಿದ್ದ ಸುಧಾಕರ ಅವರಿಗೆ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾದ ಕುಲಪತಿ ಡಾ.ಆರ್.ವೆಂಕಟರಾವ್ ಪದಕವನ್ನು ಸಮರ್ಪಿಸುತ್ತಿದ್ದಂತೆ ಸಭೆಯ ತುಂಬಾ ಚಪ್ಪಾಳೆಯ ಸುರಿಮಳೆ. ಅವರ ಕಣ್ಣುಗಳಲ್ಲಿ ಆತ್ಮವಿಶ್ವಾಸದ ಹೊಳಪು.

ದಶಕದಿಂದ ಈಚೆಗೆ `ಇಗ್ನೊ' ವಿಶ್ವವಿದ್ಯಾಲಯದಿಂದ ಪದವಿ ಪಡೆದ ಕೇಂದ್ರ ಕಾರಾಗೃಹ ಕೈದಿಗಳಲ್ಲಿ ಮೊದಲಿಗ ಎಂಬ ಖ್ಯಾತಿಗೆ ಸುಧಾಕರ ಪಾತ್ರರಾಗಿದ್ದಾರೆ. ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರದ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಬಿ.ಎ. ಪದವಿಯನ್ನು ಪೂರ್ಣಗೊಳಿಸಿದ್ದಾರೆ. ಪದವಿಯಲ್ಲಿ ಶೇ 52ರಷ್ಟು ಅಂಕಗಳನ್ನು ಪಡೆದಿರುವ ಸುಧಾಕರ ಸಾರ್ವಜನಿಕ ಆಡಳಿತ ವಿಷಯದಲ್ಲಿ `ಇಗ್ನೊ'ದಿಂದ ಸ್ನಾತಕೋತ್ತರ ಪದವಿ ಪಡೆಯಲು ತಯಾರಿ ನಡೆಸಿದ್ದಾರೆ.

ಈ ಬಗ್ಗೆ `ಪ್ರಜಾವಾಣಿ'ಯೊಂದಿಗೆ ಮಾತನಾಡಿದ ಅವರು, `ಮನೆಯವರ ನಿರಂತರ ಕಾಳಜಿ ಹಾಗೂ ಜೈಲು ಅಧಿಕಾರಿಗಳ ಪ್ರೋತ್ಸಾಹದಿಂದ ಪದವಿ ಪೂರ್ಣಗೊಳಿಸಲು ಸಾಧ್ಯವಾಯಿತು. ಸಾರ್ವಜನಿಕ ಆಡಳಿತದಲ್ಲಿ ಸ್ನಾತಕೋತ್ತರ ಪದವಿ ಪಡೆದು ಬದುಕು ರೂಪಿಸಿಕೊಳ್ಳುವ ಬಯಕೆಯಿದೆ' ಎಂದು ಹೇಳಿದರು.

`ಇನ್ನು ಎರಡು ವರ್ಷಗಳಲ್ಲಿ ಸ್ನಾತಕೋತ್ತರ ಪದವಿ ಪಡೆದು ಜೈಲಿನಿಂದ ಹೊರಬರಬೇಕೆಂಬ ಉದ್ದೇಶವಿದೆ. ಶೈಕ್ಷಣಿಕ ಮಾರ್ಗದರ್ಶನ ಪಡೆಯುವ ಸಲುವಾಗಿ ಇಗ್ನೊ ಸಹಾಯಕ ನಿರ್ದೇಶಕರನ್ನು ಭೇಟಿಯಾಗಲು ಜೈಲು ಅಧಿಕಾರಿಗಳು ಅನುಮತಿ ನೀಡುತ್ತಿದ್ದರು. ಇದರಿಂದ ಪಠ್ಯವಿಷಯವನ್ನು ಚೆನ್ನಾಗಿ ಅರಿತುಕೊಳ್ಳಲು ಸಾಧ್ಯವಾಯಿತು' ಎಂದರು.

ಪ್ರಕರಣದ ಹಿನ್ನೆಲೆ: ಉಡುಪಿ ಮೂಲದ ಸುಧಾಕರ ಅವರು 2001ನೇ ಇಸವಿಯಲ್ಲಿ ಕೊಲೆ ಪ್ರಕರಣವೊಂದರಲ್ಲಿ ಸಿಲುಕಿದ್ದರು. ಆರೋಪ ಸಾಬೀತುಗೊಂಡು 2002ರಲ್ಲಿ ಹೈಕೋರ್ಟ್ ಜೀವಾವಧಿ ಶಿಕ್ಷೆಯನ್ನು ಎತ್ತಿಹಿಡಿದಿತ್ತು. ಓದಿನಲ್ಲಿ ಆಸಕ್ತಿ ಇದ್ದುದ್ದರಿಂದ `ಇಗ್ನೊ'ದಿಂದಲೇ 2004ರಲ್ಲಿ ಬಿಬಿಪಿ (ಡಿಪ್ಲೊಮಾ ಕೋರ್ಸ್)ನಲ್ಲಿ ಉತ್ತೀರ್ಣರಾಗಿ ನಂತರ ಬಿ.ಎ. ಕೋರ್ಸ್‌ಗೆ ಸೇರ್ಪಡೆಗೊಂಡರು. ಇಗ್ನೊ ಪ್ರಾಧ್ಯಾಪಕರ ಸಹಕಾರದೊಂದಿಗೆ 2011ರಲ್ಲಿ ಪದವಿ ಪೂರೈಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT