ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಚ್ಛಾಶಕ್ತಿಯ ಕೊರತೆ

Last Updated 15 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ವಿದೇಶಿ ಬ್ಯಾಂಕುಗಳಲ್ಲಿ ಭಾರತೀಯರು ಇಟ್ಟ ಕಪ್ಪು ಹಣದ ಪ್ರಮಾಣ ಸುಮಾರು 24.5 ಲಕ್ಷ ಕೋಟಿ ರೂಪಾಯಿ ಎಂದು ಸಿಬಿಐ ನಿರ್ದೇಶಕರು ಹೇಳುವ ಮೂಲಕ ಕಪ್ಪುಹಣದ ಪ್ರಮಾಣದ ಬಗ್ಗೆ ಇದ್ದ ಊಹೆಯನ್ನು ದೃಢಪಡಿಸಿದ್ದಾರೆ.

ಇಷ್ಟು ಭಾರಿ ಮೊತ್ತದ ಕಪ್ಪು ಹಣವನ್ನು ದೇಶಕ್ಕೆ ವಾಪಸು ತರುವುದಕ್ಕೆ ಕೇಂದ್ರದ ಯುಪಿಎ ಸರ್ಕಾರ ವಿಫಲವಾಗಿದೆ ಎಂಬ ಪ್ರಮುಖ ಆರೋಪವನ್ನು ಮುಂದಿಟ್ಟುಕೊಂಡು ಪ್ರತಿಪಕ್ಷ ಬಿಜೆಪಿ ಚುನಾವಣಾ ಪ್ರಚಾರ ನಡೆಸುತ್ತಿದೆ.

ವಿದೇಶಿ ಬ್ಯಾಂಕುಗಳಲ್ಲಿ ಇಟ್ಟ ಭಾರತೀಯರ ಕಪ್ಪು ಹಣವನ್ನು ವಾಪಸು ತರುವುದಕ್ಕೆ ಆಯಾ ದೇಶದ ಕಾಯ್ದೆಗಳಿಂದ ಅಡ್ಡಿಯಾಗುತ್ತಿದೆ ಎಂಬ ಸಬೂಬನ್ನು ಕೇಂದ್ರ ಸರ್ಕಾರದ ವತಿಯಿಂದ ನೀಡಲಾಗುತ್ತಿದೆ. ವಿದೇಶಿ ಬ್ಯಾಂಕುಗಳ ಖಾತೆಗಳಿಗೆ ಕಪ್ಪು ಹಣದ ಹರಿವನ್ನು ತಡೆಯುವುದರಲ್ಲಿ ಕೇಂದ್ರ ಸರ್ಕಾರದ ಪ್ರಯತ್ನಗಳ ಬಗ್ಗೆ ದೇಶದ ಸುಪ್ರೀಂ ಕೋರ್ಟ್ ಕೂಡ ಅಸಮಾಧಾನ ವ್ಯಕ್ತಪಡಿಸಿತ್ತು.
 
ತೆರಿಗೆ ವಂಚಕ ಉದ್ಯಮಿಗಳು, ಭ್ರಷ್ಟ ಅಧಿಕಾರಿಗಳು ಮತ್ತು ಅವರಿಗಿಂತಲೂ ಭ್ರಷ್ಟರಾದ ಜನಪ್ರತಿನಿಧಿಗಳು ತಾವು ಅಕ್ರಮವಾಗಿ ಗಳಿಸಿದ ಕೋಟ್ಯಂತರ ರೂಪಾಯಿ ಹಣವನ್ನು ವಿದೇಶಿ ಬ್ಯಾಂಕುಗಳಲ್ಲಿ ಅಡಗಿಸಿ ಇಡುತ್ತಿರುವ ಬಗ್ಗೆ ಸರ್ಕಾರಕ್ಕೆ ಗೊತ್ತಿಲ್ಲವೆಂದಲ್ಲ.

ಆದರೆ, ವಿವಿಧ ದೇಶಗಳಲ್ಲಿ ಇರುವ ಕಾನೂನು, ಬ್ಯಾಂಕುಗಳು ಮಾಡಿಕೊಂಡಿರುವ ಒಪ್ಪಂದಗಳ ತಾಂತ್ರಿಕ ನೆಪವನ್ನು ಮುಂದೆ ಮಾಡಿ ಈ ಸಂಬಂಧದಲ್ಲಿ ಅಸಹಾಯಕತೆಯನ್ನು ಕೇಂದ್ರ ಸರ್ಕಾರ ವ್ಯಕ್ತಪಡಿಸುತ್ತಿದೆ.

ಕಪ್ಪುಹಣದ ಹರಿವನ್ನು ತಡೆಯುವುದಕ್ಕೆ ವಿವಿಧ ದೇಶಗಳಲ್ಲಿನ ರಾಜಕೀಯ ಇಚ್ಛಾಶಕ್ತಿ ಕೊರತೆ ಕಾರಣವಾಗುತ್ತಿದೆ ಎಂಬ ಹೊಸದೊಂದು ಸಬೂಬನ್ನು ಕೇಂದ್ರ ಸಿಬ್ಬಂದಿ ಖಾತೆ ಸಚಿವರು ಹೇಳತೊಡಗಿದ್ದಾರೆ.

ಕೇಂದ್ರದಲ್ಲಿ ಅಧಿಕಾರ ನಡೆಸಿದ ಕಾಂಗ್ರೆಸ್ ಇಲ್ಲವೇ ಬಿಜೆಪಿಗೆ ಸೇರಿದ ನಾಯಕರಷ್ಟೇ ಅಲ್ಲ, ದೇಶದ ನೂರಾರು ಪ್ರಾದೇಶಿಕ ಪಕ್ಷಗಳ ಪ್ರತಿನಿಧಿಗಳ ವಿರುದ್ಧವೂ ಕಪ್ಪುಹಣ ಕೂಡಿಟ್ಟ ಆರೋಪಗಳು ಕೇಳಿ ಬರುತ್ತಿರುವುದರಿಂದ ಅದರ ವಿರುದ್ದ ಯಾವುದೇ ಕ್ರಮ ಕೈಗೊಳ್ಳುವುದಕ್ಕೆ ಇಚ್ಛಾಶಕ್ತಿಯ ಕೊರತೆ ದೇಶದ ಎಲ್ಲ ರಾಜಕೀಯ ಪಕ್ಷಗಳಲ್ಲಿಯೂ ಇದೆ. ಕೇಂದ್ರದ ಯುಪಿಎ ಸರ್ಕಾರವೇನೋ ಈಗಾಗಲೇ ಈ ನಿಟ್ಟಿನಲ್ಲಿ 48 ದೇಶಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಇನ್ನೂ 42 ದೇಶಗಳೊಂದಿಗೆ ಒಪ್ಪಂದ ಮಾಡಿಕೊಂಡರೆ ಕಪ್ಪು ಹಣವನ್ನು ವಾಪಸು ತರುವುದು ಸಾಧ್ಯವಾಗಬಹುದೆಂಬ ಭರವಸೆಯನ್ನು ನೀಡುತ್ತಿದೆ. ಆದರೆ ಅಂತರರಾಷ್ಟ್ರೀಯ ಕಾನೂನುಗಳಲ್ಲಿ ಕಪ್ಪುಹಣದ ಸ್ವರೂಪವನ್ನು ನಿರ್ಧರಿಸುವ ಸವಾಲನ್ನು ಎದುರಿಸುವುದು ಸುಲಭವಲ್ಲ.

ಖಾಸಗಿ ಬ್ಯಾಂಕುಗಳ ರಹಸ್ಯಪಾಲನೆ ನಿಯಮಗಳು, ವಿವಿಧ ಸರ್ಕಾರಗಳ ನಿಬಂಧನೆಗಳ ನಿರ್ಬಂಧಗಳ ನಡುವೆ ನಿರ್ದಿಷ್ಟ ಖಾತೆಗಳಲ್ಲಿ ಜಮೆಯಾದ ಹಣ ಅಕ್ರಮ ಮೂಲದಿಂದ ಬಂದಿದ್ದು ಎಂಬುದನ್ನು ಸಾಬೀತುಪಡಿಸದೆ ಅದನ್ನು ವಾಪಸು ಪಡೆಯುವುದು ಕಷ್ಟ.
 
ಬಡ ಕೂಲಿ ಕಾರ್ಮಿಕರಿಗೆ ಸಲ್ಲಬೇಕಾದ ಉದ್ಯೋಗ ಖಾತರಿಯ ಹಣ ಮಧ್ಯವರ್ತಿಗಳ ಪಾಲಾಗದಂತೆ ತಡೆಯುವುದಕ್ಕೆ  ಬ್ಯಾಂಕ್ ಖಾತೆಯ ಪರ್ಯಾಯ ಮಾರ್ಗ ಹುಡುಕುವಷ್ಟು ನೈತಿಕ ದಿವಾಳಿಯೆದ್ದ ಭ್ರಷ್ಟ ನೌಕರಶಾಹಿಯನ್ನು ಅವಲಂಬಿಸಿ ವಿದೇಶಿ ಬ್ಯಾಂಕುಗಳಲ್ಲಿಟ್ಟ ಠೇವಣಿ ಕಪ್ಪುಹಣವೇ ಎಂಬುದನ್ನು ಸಾಬೀತು ಮಾಡಬಲ್ಲುದೇ ಎಂಬುದೇ ಸಮಸ್ಯೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT