ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಟಲಿ ನಾವಿಕರಿಗೆ ಶಿಕ್ಷೆಯಾಗಲಿ

Last Updated 19 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಕೇರಳದ ಕೊಚ್ಚಿ ಸಮೀಪ ಸಮುದ್ರದಲ್ಲಿ ಮೀನು ಹಿಡಿಯಲು ದೋಣಿಯಲ್ಲಿ ತೆರಳಿದ್ದ ಭಾರತೀಯ ಮೀನುಗಾರರ ಮೇಲೆ ಇಟಲಿಯ ತೈಲ ಸಾಗಣೆ ಹಡಗಿನ ಸಿಬ್ಬಂದಿ ಗುಂಡು ಹಾರಿಸಿ ಇಬ್ಬರ ಸಾವಿಗೆ ಕಾರಣರಾದ ಘಟನೆ ದುರದೃಷ್ಟಕರ.
 
ಮೀನುಗಾರರು ಹಡಗಿನ ಸಮೀಪ ಬಂದರೆಂಬ ಒಂದೇ ಕಾರಣಕ್ಕೆ ಅವರ ಮೇಲೆ ಗುಂಡು ಹಾರಿಸಲಾಗಿದೆ. ಗುಂಡು ಹಾರಿಸಿದ ಕ್ರಮ ಅಮಾನವೀಯ ಮಾತ್ರವಲ್ಲ, ಅತ್ಯಂತ ಖಂಡನೀಯ.
 
ಮೀನುಗಾರರ ದೋಣಿಯಲ್ಲಿ ಶಸ್ತ್ರಗಳಿದ್ದವು ಎಂದು ಸುಳ್ಳು ಹೇಳುವ ಮೂಲಕ ಇಟಲಿ ಹಡಗಿನ ಸಿಬ್ಬಂದಿ ತಮ್ಮ ಕೃತ್ಯವನ್ನು ಸಮರ್ಥಿಸಿಕೊಳ್ಳಲು ಯತ್ನಿಸಿದ್ದಾರೆ. ದೋಣಿಯಲ್ಲಿ ಮೀನು ಹಿಡಿಯಲು ಬಳಸುವ ಸಲಕರಣೆಗಳ ಹೊರತಾಗಿ ಬೇರೇನೂ ಇರಲಿಲ್ಲ.

ಇಬ್ಬರು ಮೀನುಗಾರರನ್ನು ಕೊಂದುಹಾಕಿದ ಈ ಘಟನೆಯನ್ನು ಕೇರಳ ಸರ್ಕಾರ ಗಂಭೀರ ಕೃತ್ಯ ಎಂದು  ಪರಿಗಣಿಸಿದೆ. ಮೀನುಗಾರರನ್ನು ಕೊಂದ ಆರೋಪ ಹೊತ್ತ ಇಬ್ಬರು ಹಡಗಿನ ಸಿಬ್ಬಂದಿ ತಕ್ಷಣವೇ ಶರಣಾಗಿ ವಿಚಾರಣೆ ಎದುರಿಸಬೇಕು ಎಂದು ಕೇರಳ ಪೊಲೀಸರು ಸಂದೇಶ ರವಾನಿಸಿದ್ದಾರೆ.
 
ಮೀನುಗಾರರನ್ನು ಕೊಂದವರು ಇಟಲಿ ಪ್ರಜೆಗಳಾಗಿರುವುದರಿಂದ ಅವರನ್ನು ತಕ್ಷಣವೇ ಬಂಧಿಸಲು ಸಾಧ್ಯವಾಗಿಲ್ಲ. ಅದೇನೇ ಇರಲಿ, ಆರೋಪಿಗಳು ವಿದೇಶಿಯರು ಎಂಬ ಕಾರಣಕ್ಕೆ ಅವರ ಕೃತ್ಯಕ್ಕೆ ಕ್ಷಮೆ ಇಲ್ಲ.
 
ಈ ಘಟನೆಯನ್ನು ಎರಡೂ ರಾಷ್ಟ್ರಗಳಿಗೆ ಒಪ್ಪಿಗೆಯಾಗುವ ರೀತಿಯಲ್ಲಿ ವಿಚಾರಣೆ ಮೂಲಕ ಬಗೆಹರಿಸಿಕೊಳ್ಳುವ ಇಟಲಿ ವಿದೇಶಾಂಗ ಸಚಿವರ ಇಂಗಿತವನ್ನು ಭಾರತ ತಳ್ಳಿಹಾಕಿದೆ.
 
ಭಾರತೀಯ ಕಾನೂನು ಪ್ರಕಾರವೇ ತಪ್ಪಿತಸ್ಥರ ವಿರುದ್ಧ ವಿಚಾರಣೆ ನಡೆಸಿ ಕ್ರಮ ತೆಗೆದುಕೊಳ್ಳುವುದಾಗಿ ವಿದೇಶಾಂಗ ಸಚಿವ ಎಸ್.ಎಂ ಕೃಷ್ಣ ಹೇಳಿದ್ದಾರೆ. ಇಬ್ಬರು ಮೀನುಗಾರರನ್ನು ಕೊಂದ ಈ ಘಟನೆಯನ್ನು ಎರಡೂ ದೇಶಗಳ ರಾಜತಾಂತ್ರಿಕ ಸಂಬಂಧಗಳ ಹಿನ್ನೆಲೆಯಲ್ಲಿ ನೋಡುವ ಅಗತ್ಯ ಇಲ್ಲ.

ಸಾಮಾನ್ಯ ದೋಣಿಗಳಲ್ಲಿ ಸಮುದ್ರಕ್ಕೆ ಇಳಿಯುವ ಬಹುತೇಕ ಬೆಸ್ತರಿಗೆ ಮೀನುಗಾರಿಕೆಗೆ ಹೊರತಾದ ಉದ್ದೇಶಗಳಿರುವುದಿಲ್ಲ. ಅವರನ್ನು ಕಡಲುಗಳ್ಳರೆಂದೋ, ಬೇಹುಗಾರರೆಂದೋ ವಿದೇಶಿ ಹಡಗುಗಳ ಸಿಬ್ಬಂದಿ ಭಾವಿಸುವ ಪರಿಪಾಠವಿದೆ.
 
ಭಾರತ ಹಾಗೂ ಪಾಕಿಸ್ತಾನ ನಡುವೆ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳುವ ಭಾರತೀಯ ಬೆಸ್ತರನ್ನು ಅಂತರರಾಷ್ಟ್ರೀಯ ಸಮುದ್ರದ ಗಡಿರೇಖೆ ಉಲ್ಲಂಘಿಸಿದರೆಂದು ಅವರನ್ನು ಬಂಧಿಸಿ ಅವರ ಮೇಲೆ ಬೇಹುಗಾರಿಕೆಯ ಆರೋಪ ಹೊರಿಸಿ ಹಲವಾರು ವರ್ಷಗಳ ಕಾಲ ಪಾಕ್ ಜೈಲುಗಳಲ್ಲಿ ಇರಿಸಿದ ಅನೇಕ ಉದಾಹರಣೆಗಳಿವೆ.
 
ಮೀನುಗಾರಿಕೆಗೆ ತೆರಳಿದ ಬೆಸ್ತರ ಮೇಲೆ ಗುಂಡು ಹಾರಿಸುವಂತಹ ಕ್ರಮ ಯಾವ ಕಾರಣಕ್ಕೂ ಸಮರ್ಥನೀಯ ಅಲ್ಲ. ಇಂತಹ ಅತಿರೇಕದ ಕ್ರಮಗಳನ್ನು ಯಾವುದೇ ರಾಷ್ಟ್ರದ ಹಡಗಿನ ಸಿಬ್ಬಂದಿ ತೆಗೆದುಕೊಳ್ಳಬಾರದು.

ಮೀನುಗಾರರ ಮೇಲೆ ನಿರ್ದಿಷ್ಟ ಆರೋಪಗಳಿದ್ದರೆ ಅವರನ್ನು ಬಂಧಿಸಿ ವಿಚಾರಣೆ ನಡೆಸಿದ ನಂತರ ಕಾನೂನು ಕ್ರಮ ಜರುಗಿಸಬಹುದು. ಸಮುದ್ರ ಮಾರ್ಗದ ಮೂಲಕ ಸರಕು ಸಾಗಣೆ ಮಾಡುವ ದೇಶಗಳ ಹಡಗುಗಳ ಸಿಬ್ಬಂದಿ ತಾಳ್ಮೆ ಹಾಗೂ ವಿವೇಚನೆಯಿಂದ ವರ್ತಿಸಬೇಕು. ಮೀನುಗಾರರ ಮೇಲೆ ಗುಂಡು ಹಾರಿಸುವುದನ್ನು ನಿಷೇಧಿಸಿದರೆ ಅಮಾಯಕ ಮೀನುಗಾರರಿಗೆ ರಕ್ಷಣೆ ಸಿಕ್ಕೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT