ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಟ್ಟಿಗೆ ತಯಾರಿಕೆಗೆ ಹೆಚ್ಚಿದ ಒಲವು

ಕೃಷಿ ಜಾಗದಲ್ಲಿ ತಲೆಎತ್ತಿರುವ ಬೃಹದಾಕಾರದ ಬಟ್ಟಿಗಳು
Last Updated 2 ಫೆಬ್ರುವರಿ 2013, 8:29 IST
ಅಕ್ಷರ ಗಾತ್ರ

ಮುಂಡಗೋಡ: ಲಾಭದಾಯಕ ಉದ್ಯಮವಾಗಿರುವ ಇಟ್ಟಿಗೆ ತಯಾರಿಕೆ ತಾಲ್ಲೂಕಿನಲ್ಲಿ ವ್ಯಾಪಕವಾಗಿದ್ದು, ಕಳೆದ ಐದಾರು ವರ್ಷಗಳಿಂದ ಇಲ್ಲಿನ ಇಟ್ಟಿಗೆಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಗುತ್ತಿದೆ. ಬೇಡಿಕೆ ಹೆಚ್ಚಾದಂತೆ ಅನಧಿಕೃತವಾಗಿ ಇಟ್ಟಿಗೆ ತಯಾರಿಕೆ ಪ್ರಾರಂಭವಾಗಿದೆ. ಇದರಿಂದ ಅಧಿಕೃತ ಇಟ್ಟಿಗೆ ತಯಾರಕರ ಮೇಲೆ ಪರಿಣಾಮ ಬೀರಿದೆ.

ಮೊದಮೊದಲಿಗೆ ಕೆಲವೇ ಕೆಲವು ಮಾಲೀಕರು ಇಟ್ಟಿಗೆ ತಯಾರಿಸಲು ಪ್ರಾರಂಭಿಸಿದ್ದರು. ನಂತರದ ದಿನಗಳಲ್ಲಿ ಅದರಲ್ಲಿನ ಲಾಭವನ್ನು ಕಂಡು ಬಹಳಷ್ಟು ಜನರು ಇಟ್ಟಿಗೆ ತಯಾರಿಕೆಯ ಕಡೆಗೆ ಒಲವು ತೋರಿದರು. ಅದರ ಪರಿಣಾಮ ಕಳೆದ 2-3ವರ್ಷಗಳಲ್ಲಿ ಎಲ್ಲೆಂದರಲ್ಲಿ ಇಟ್ಟಿಗೆ ಬಟ್ಟಿಗಳು ಕಾಣುವಂತಾದವು. ಕಳೆದ ವರ್ಷ ಅನಧಿಕೃತ ಇಟ್ಟಿಗೆ ತಯಾರಕರ ಮೇಲೆ ಸಂಬಂಧಿಸಿದ ಇಲಾಖೆಯವರು ತಕ್ಕ ಮಟ್ಟಿಗೆ ಕಡಿವಾಣ ಹಾಕಲು ಪ್ರಯತ್ನಿಸಿದ್ದರು.

ಆದರೆ ನಂತರದ ದಿನಗಳಲ್ಲಿ ಅನಧಿಕೃತ ಇಟ್ಟಿಗೆ ತಯಾರಿಕೆ ಮುಂದುವರಿದಿದೆ ಎಂಬ ಆರೋಪ ಕೇಳಿಬರುತ್ತಿದೆ. ಕೃಷಿಗಾಗಿ ಬಳಕೆಯಾಗಬೇಕಿದ್ದ ಭೂಮಿಯಲ್ಲಿ ಬೃಹತ್ ಆಕಾರದ ಇಟ್ಟಿಗೆ ಬಟ್ಟಿಗಳು ತಲೆ ಎತ್ತಿವೆ.

ತಾಲ್ಲೂಕಿನಲ್ಲಿ ಸುಮಾರು 50ರಷ್ಟು ಇಟ್ಟಿಗೆ ಮಾಲೀಕರು ಅಧಿಕೃತವಾಗಿ ಈ ಉದ್ಯಮದಲ್ಲಿ ಪಾಲ್ಗೊಂಡಿದ್ದಾರೆ ಎನ್ನಲಾಗಿದೆ. ಇವರು ಕೂಲಿಯವರು ಕೇಳಿದಷ್ಟು ಹಣವನ್ನು ನೀಡಿ ಇಟ್ಟಿಗೆ ತಯಾರಿಸುವದರಲ್ಲಿ ನಿರತರಾಗಿದ್ದಾರೆ.

ಆದರೆ ಇವರಿಗೆ ಪ್ರತಿಸ್ಪರ್ಧಿ ಎನ್ನುವಂತೆ ಅನಧಿಕೃತವಾಗಿ ಇಟ್ಟಿಗೆ ತಯಾರಿಕೆಯಲ್ಲಿ ನಿರತರಾಗಿರುವ ಕೆಲವರು ಅರಣ್ಯ ಪ್ರದೇಶದ ಸನಿಹ ಇಟ್ಟಿಗೆ ತಯಾರಿಸಿ ಕೆರೆಯಲ್ಲಿನ ನೀರು ಹಾಗೂ ಅರಣ್ಯದ ಕಟ್ಟಿಗೆಯನ್ನು  ಬಳಸಿಕೊಂಡು ಇಟ್ಟಿಗೆ ತಯಾರು ಮಾಡಿ ಕಡಿಮೆ ದರದಲ್ಲಿ ಮಾರಾಟ ಮಾಡುತ್ತಾರೆ. ಇದರಿಂದ ಅಧಿಕೃತ ಇಟ್ಟಿಗೆ ತಯಾರಕರ ಇಟ್ಟಿಗೆಗಳು ಯೋಗ್ಯ ದರಕ್ಕೆ ಮಾರಾಟವಾಗದೇ ಹಾಕಿದ ಬಂಡವಾಳ ಮಣ್ಣಲ್ಲೇ ಹೋಗುತ್ತಿದೆ ಎಂದು ಅಧಿಕೃತ ಇಟ್ಟಿಗೆ ತಯಾರಕರು ಹೇಳುತ್ತಾರೆ.

`ಕಳೆದ ವರ್ಷ ಅನಧಿಕೃತ ಇಟ್ಟಿಗೆ ಮಾಲೀಕರಿಗೆ ಅಧಿಕೃತವಾಗಿ ತಯಾರಿಸಲು ಸೂಚನೆ ನೀಡಿದ್ದೇವು. ಅದರಂತೆ ಕೆಲವರು ಅಧಿಕೃತವಾಗಿ ನೋಂದಾಯಿಸಿಕೊಂಡಿದ್ದಾರೆ. ಆದರೂ ಕೆಲವೆಡೆ ಅನಧಿಕೃತ ಇಟ್ಟಿಗೆ ತಯಾರಿಕೆ ನಡೆಯುತ್ತಿರುವ ದೂರು ಕೇಳಿಬರುತ್ತಿದ್ದು ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು' ಎಂದು ಅಧಿಕೃತ ಇಟ್ಟಿಗೆ ತಯಾರಕ ಗುಡ್ಡಪ್ಪ ಕಾತೂರ ಹೇಳಿದರು.

ಕೆರೆಗಳಲ್ಲಿನ ನೀರು ಬಳಕೆ: ಗ್ರಾಮೀಣ ಭಾಗದ ಕೆರೆಗಳ ಅಭಿವೃದ್ಧಿಗಾಗಿ ಸರ್ಕಾರ ಅನುದಾನ ಬಿಡುಗಡೆ  ಮಾಡಿದೆ. ಕೆಲವೆಡೆ ಇಟ್ಟಿಗೆ ತಯಾರಕರು ಟ್ಯಾಂಕರ್ ಮೂಲಕ ಕೆರೆಯ ನೀರನ್ನು ಒಯ್ದು ಇಟ್ಟಿಗೆ ತಯಾರಿಸುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

`ಜಾನುವಾರುಗಳಿಗೆ ಕುಡಿಯಲು ನೀರು ಸಿಗದಿರುವ ಇಂತಹ ಸಂದರ್ಭದಲ್ಲಿ ಅತ್ಯಮೂಲ್ಯ ನೀರನ್ನು ಇತರೆ ಕೆಲಸಕ್ಕೆ ಉಪಯೋಗಿಸುವುದಕ್ಕೆ ಕಡಿವಾಣ ಹಾಕಬೇಕಾದ ಅವಶ್ಯಕತೆಯಿದೆ' ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
`ಅಕ್ರಮವಾಗಿ ಅರಣ್ಯದಲ್ಲಿನ ಕಟ್ಟಿಗೆಯಿಂದ ಇಟ್ಟಿಗೆಯನ್ನು ಸುಡುವುದನ್ನು ತಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ' ಎಂದು ಆರ್‌ಎಫ್‌ಒ ಎಂ.ಎಸ್.ವಾಲಿ ತಿಳಿಸಿದರು.

`ಇಟ್ಟಿಗೆ ಬಟ್ಟಿಯನ್ನು ಸುಡುವ ಪೂರ್ವದಲ್ಲಿ ಅರಣ್ಯ ಸಿಬ್ಬಂದಿ ಸಮ್ಮುಖದಲ್ಲಿ ಕಟ್ಟಿಗೆ ಖರೀದಿಯ ದಾಖಲಾತಿಯನ್ನು ತೋರಿಸಿ ಅವರ ಅನುಮತಿ ಪಡೆದ ನಂತರವಷ್ಟೇ ಸುಡಬೇಕು ಎಂದು ನೋಟಿಸ್ ನೀಡಲಾಗುತ್ತಿದೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT