ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಡೀ ಉಪಖಂಡ ನನಗೆ ತವರಿದ್ದಂತೆ: ಶಾಹೀದ್ ಅಫ್ರಿದಿ

Last Updated 22 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ಢಾಕಾ: 1992ರಲ್ಲಿ ಪಾಕಿಸ್ತಾನ ವಿಶ್ವಕಪ್ ಗೆದ್ದಾಗ ನಾಯಕರಾಗಿದ್ದವರು ಆಲ್‌ರೌಂಡರ್ ಇಮ್ರಾನ್ ಖಾನ್. ಈ ಬಾರಿಯ ವಿಶ್ವಕಪ್‌ನಲ್ಲಿ ಪಾಕ್ ತಂಡವನ್ನು ಮುನ್ನಡೆಸುತ್ತಿರುವವರು ಆಲ್‌ರೌಂಡರ್ ಶಾಹೀದ್ ಅಫ್ರಿದಿ. ಇನ್ನು ಮೂರು ಯಶಸ್ವಿ ಹೆಜ್ಜೆ ಇಟ್ಟರೆ ಸಾಕು, ಪಾಕ್ ಚಾಂಪಿಯನ್!

ಅಫ್ರಿದಿ ಈ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಇದುವರೆಗೆ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್. ಅವರು ಒಟ್ಟು 17 ವಿಕೆಟ್ ಕಬಳಿಸಿದ್ದಾರೆ. ಹಾಗಾಗಿ ಪಾಕ್ ‘ಎ’ಗುಂಪಿನಲ್ಲಿ ಆಡಿದ ಆರು ಪಂದ್ಯಗಳಲ್ಲಿ ಐದರಲ್ಲಿ ಜಯಿಸಿದೆ. 10 ಪಾಯಿಂಟ್ ಸಂಗ್ರಹಿಸಿ ಅಗ್ರಸ್ಥಾನ ಪಡೆದಿದೆ.

ಬುಧವಾರ ಶೇರ್ ಎ ಬಾಂಗ್ಲಾ ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆಯುಲಿರುವ ವೆಸ್ಟ್‌ಇಂಡೀಸ್ ಎದುರಿನ ಕ್ವಾರ್ಟರ್ ಫೈನಲ್ ಪಂದ್ಯದಲ್ಲೂ ಯಶಸ್ಸು ಕಾಣುವ ವಿಶ್ವಾಸವನ್ನು ನಾಯಕ ಅಫ್ರಿದಿ ವ್ಯಕ್ತಪಡಿಸಿದ್ದಾರೆ.

ತಂಡದ ಸಿದ್ಧತೆ, ಯೋಜನೆ, ತಮ್ಮ ಬ್ಯಾಟಿಂಗ್ ವೈಫಲ್ಯ, ಉಪಖಂಡದ ೀಕ್ಷಕರು, ಆಸ್ಟ್ರೇಲಿಯಾ ಎದುರು ಸಿಕ್ಕ ಗೆಲುವು ಸೇರಿದಂತೆ ಹಲವು ವಿಷಯಗಳ ಬಗ್ಗೆ ಆಲ್‌ರೌಂಡರ್ ಅಫ್ರಿದಿ ಮಾತನಾಡಿದ್ದಾರೆ.

* ಇದುವರೆಗಿನ ಯಶಸ್ಸಿಗೆ ಪ್ರಮುಖ ಕಾರಣವೇನು?
ಬೌಲರ್‌ಗಳು ಅಮೋಘ ಪ್ರದರ್ಶನ ನೀಡುತ್ತಿದ್ದಾರೆ. ಇದುವರೆಗಿನ ಯಶಸ್ಸಿಗೆ ಬೌಲರ್‌ಗಳು ಕಾರಣ. ಬ್ಯಾಟಿಂಗ್‌ನಲ್ಲಿ ವಿಫಲರಾದರೂ ಬೌಲರ್‌ಗಳು ನಮ್ಮ ನೆರವಿಗೆ ನಿಲ್ಲುತ್ತಿದ್ದಾರೆ. ಹಾಗಾಗಿ ಬೌಲರ್‌ಗಳಿಗೆ ಎಲ್ಲಾ ಕ್ರೆಡಿಟ್ ಸಲ್ಲಬೇಕು. ಉಮರ್ ಗುಲ್, ರೆಹಮಾನ್, ಅಜ್ಮಲ್ ಹಾಗೂ ರಜಾಕ್ ತಮ್ಮಮೇಲೆ ಇಟ್ಟ ವಿಶ್ವಾಸವನ್ನು ಉಳಿಸಿಕೊಂಡಿದ್ದಾರೆ.

* ಆಲ್‌ರೌಂಡರ್ ಎನಿಸಿಕೊಂಡಿರುವ ನೀವು ಬ್ಯಾಟಿಂಗ್‌ನಲ್ಲಿ ಯಶಸ್ವಿಯಾಗಲೇ ಇಲ್ಲವಲ್ಲಾ?
ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ತೋರಲು ಸಾಧ್ಯವಾಗುತ್ತಿಲ್ಲ ಎಂಬ ನಿರಾಸೆ ನನಗೂ ಇದೆ. ಆದರೆ ಈಗ ಪ್ರಮುಖ ಪಂದ್ಯ ಎದುರಿದೆ. ಆ ಬಗ್ಗೆ ನಾನೀಗ ಗಮನ ಹರಿಸುತ್ತಿದ್ದೇನೆ. ತಂಡಕ್ಕೆ ನನ್ನ ಬ್ಯಾಟಿಂಗ್ ಎಷ್ಟು ಉಪಯುಕ್ತ ಎಂಬುದು ನನಗೆ ಗೊತ್ತಿದೆ. ಒಬ್ಬ ಸೀನಿಯರ್ ಆಟಗಾರನಾಗಿ ಉಳಿದವರಿಗೆ ಮಾದರಿಯಾಗಿರಬೇಕು. ಉತ್ತಮ ಪ್ರದರ್ಶನ ತೋರಬೇಕು.

* ಬಾಂಗ್ಲಾ ಪ್ರೇಕ್ಷಕರಿಂದ ಬೆಂಬಲ ಸಿಗಬಹುದು ಎಂಬ ನಿರೀಕ್ಷೆ ಇದೆಯೇ?
ಖಂಡಿತ ಆ ನಿರೀಕ್ಷೆ ಇದೆ. ಉಪಖಂಡದಲ್ಲಿ ಎಲ್ಲಿಯೇ ಆಡಲಿ ಅದು ನನಗೆ ತವರಿದ್ದಂತೆ. ಪಾಕ್‌ನಲ್ಲಿ ಆಡಿದ ಅನುಭವ ಆಗುತ್ತದೆ. ಈ ಟೂರ್ನಿಯ ವೇಳೆ ಕ್ರೀಡಾಂಗಣದಲ್ಲಿ ವ್ಯಕ್ತವಾಗುತ್ತಿರುವ ವಾತಾವರಣದ ಬಗ್ಗೆ ನನಗೆ ಹೆಮ್ಮೆ ಇದೆ. ಹಾಗೇ, ನಮ್ಮ ಮೇಲೆ ಅವರು ಇಟ್ಟಿರುವ ನಿರೀಕ್ಷೆಯನ್ನು ಉಳಿಸಿಕೊಳ್ಳಬೇಕು.

* ವಿಂಡೀಸ್ ಎದುರು ಬಾಂಗ್ಲಾ 58 ರನ್‌ಗಳಿಗೆ ಆಲ್‌ಔಟ್ ಆಗಿತ್ತು. ನಿಮಗೆ ಆ ಭಯ ಇದೆಯೇ?
58 ರನ್‌ಗಳಿಗೆ ಆಲ್‌ಔಟ್ ಆಗಿದ್ದು ಬಾಂಗ್ಲಾ. ಆದರೆ ಇದು ಪಾಕ್ ತಂಡ. ಈ ಪಂದ್ಯವೇ ಬೇರೆ. ನಾವು ಇಲ್ಲಿ ಅಭ್ಯಾಸ ಪಂದ್ಯ ಆಡಿದ್ದೇವೆ. ಇಲ್ಲಿಯ ವಾತಾವರಣ ಯಾವ ರೀತಿ ಇರುತ್ತದೆ ಎಂಬುದು ನಮಗೆ ಗೊತ್ತಿದೆ.

* ಸೆಮಿಫೈನಲ್‌ನಲ್ಲಿ ಭಾರತ ಎದುರಾಳಿಯಾಗಿ ಸಿಗಬಹುದೇ?
ನಾವೀಗ ಕೇವಲ ಬುಧವಾರ ನಡೆಯಲಿರುವ ಕ್ವಾರ್ಟರ್ ಫೈನಲ್‌ನತ್ತ ಮಾತ್ರ ಗಮನ ಹರಿಸುತ್ತಿದ್ದೇವೆ. ಹಾಗಾಗಿ ಯಾರು ಸೆಮಿಫೈನಲ್‌ನಲ್ಲಿ ಸಿಗುತ್ತಾರೆ, ಫಲಿತಾಂಶ ಏನಾಗಬಹುದು ಎಂಬುದರ ಬಗ್ಗೆ ನಾವು ಈಗಲೇ ತಲೆಕೆಡಿಸಿಕೊಂಡಿಲ್ಲ. ಸೆಮಿಫೈನಲ್‌ಗೆ ಭಾರತ-ಪಾಕ್ ಪ್ರವೇಶ ಪಡೆದರೆ ಆ ಬಗ್ಗೆ ಆಮೇಲೆ ಮಾತನಾಡುತ್ತೇನೆ.

* ವಿಂಡೀಸ್ ತಂಡದಲ್ಲಿ ಹೆಚ್ಚು ಮಂದಿ ಎಡಗೈ ಬ್ಯಾಟ್ಸ್‌ಮನ್‌ಗಳಿದ್ದಾರೆ. ಹೆಚ್ಚು ಮಂದಿ ಆಫ್ ಸ್ಪಿನ್ ಬೌಲರ್‌ಗಳೊಂದಿಗೆ ಕಣಕ್ಕಿಳಿಯುತ್ತೀರಾ?
ಯಶಸ್ಸಿಗೆ ಕಾರಣವಾಗಿರುವ ಈಗಿನ ಕ್ರಮಾಂಕದ ಬಗ್ಗೆ ನನಗೆ ಹೆಮ್ಮೆ ಇದೆ. ಅದೇ ತಂಡದೊಂದಿಗೆ ಕಣಕ್ಕಿಳಿಯಬೇಕೆಂಬ ಯೋಜನೆ ಇದೆ. ಇಂತಹ ಸಂದರ್ಭದಲ್ಲಿ ತಂಡದಲ್ಲಿ ಬದಲಾವಣೆ ಮಾಡಿ ಗುಂಡಿಗೆ ಬೀಳುವ ಕೆಲಸ ಬೇಡ. ಮೊಹಮ್ಮದ್ ಹಫೀಜ್ ಕೂಡ ಉತ್ತಮ ಆಫ್ ಸ್ಪಿನ್ನರ್. ಅವರನ್ನು ಸೂಕ್ತವಾಗಿ ಬಳಸಿಕೊಂಡರೆ ಸಾಕು.

* ಶೋಯಬ್ ಅಖ್ತರ್‌ಗೆ ಆಡಲು ಅವಕಾಶ ಸಿಗಬಹುದೇ?
ನಾನು ಮೊದಲೇ ಹೇಳಿದ್ದೇನೆ. ಇದು ಪ್ರಮುಖ ಪಂದ್ಯವಾಗಿರುವುದರಿಂದ ಹೆಚ್ಚು ಬದಲಾವಣೆ ಮಾಡುವುದಿಲ್ಲ. ಗೆಲುವಿನ ಕಾರಣವಾಗಿರುವ ತಂಡದೊಂದಿಗೆ ಆಡುತ್ತೇವೆ. ಇದರ ಬಗ್ಗೆ ನನಗೆ ಹೆಮ್ಮೆ ಇದೆ.

* ಆಸ್ಟ್ರೇಲಿಯಾ ವಿರುದ್ಧದ ಗೆಲುವಿನ ಬಗ್ಗೆ ಹೇಳಿ?
ಖಂಡಿತ ಇದೊಂದು ನಮ್ಮ ತಂಡದ ದೊಡ್ಡ ಸಾಧನೆ. ಇದರಿಂದ ಪ್ರತಿ ಆಟಗಾರರಲ್ಲಿ ಮತ್ತಷ್ಟು ಹುಮ್ಮಸ್ಸು ಬಂದಿದೆ. ಡ್ರೆಸ್ಸಿಂಗ್ ಕೊಠಡಿಯಲ್ಲಿ ಉತ್ತಮ ವಾತಾವರಣ ನಿರ್ಮಾಣವಾಗಿದೆ. ಮುಂದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಲು ವಿಶ್ವಾಸ ತುಂಬಿದೆ.

* ತಂಡದ ಯಶಸ್ಸಿನ ಗುಟ್ಟೇನು?
ಇದರಲ್ಲಿ ಯಾವುದೇ ದೊಡ್ಡ ಗುಟ್ಟು ಇಲ್ಲ. ಬದಲಾಗಿ ವಿಶ್ವಕಪ್‌ಗೆ ಮುನ್ನ ನಡೆದ ಶಿಬಿರ ಅತ್ಯುತ್ತಮವಾಗಿತ್ತು. ನನ್ನ 14 ವರ್ಷಗಳ ಕ್ರಿಕೆಟ್ ಜೀವನದಲ್ಲಿ ಅದೊಂದು ಶ್ರೇಷ್ಠ ಶಿಬಿರ ಎನ್ನಬಹುದು. ಅಭ್ಯಾಸದ ವೇಳೆ ಪ್ರತಿ ಆಟಗಾರರು ಕಠಿಣ ಪ್ರಯತ್ನ ಹಾಕಿದ್ದರು. ಅದರ ಫಲ ಈಗ ಸಿಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT